ಪಂಚರಂಗಿ ಲೈಫು ಇಷ್ಟೇನೆ ತೆರೆಕಾಣುವ ಶುಭಯೋಗ!
ಈ ವಾರ ಯೋಗರಾಜ್ ಭಟ್ಟರ ಮಹತ್ವಾಕಾಂಕ್ಷಿ ಚಿತ್ರ 'ಪಂಚರಂಗಿ' ತೆರೆಕಾಣುವ ಶುಭಯೋಗ ಕೂಡಿಬಂದಿದೆ. ಲೈಫು ಇಷ್ಟೇನೆ ಎಂದು ಯೋಗರಾಜ ಭಟ್ ಈಗಾಗಲೆ ಭಾರಿ ಗದ್ದಲ ಎಬ್ಬಿಸಿದ್ದಾರೆ.ಚಿತ್ರದ ಬಗ್ಗೆ ನಿರೀಕ್ಷೆಗಳು ಮುಗಿಲು ಮುಟ್ಟಿವೆ. ಭಟ್ಟರು ಈ ಬಾರಿ ಏನು ಮ್ಯಾಜಿಕ್ ಮಾಡಿದ್ದಾರೋ ಎಂಬ ಕುತೂಹಲ ಈಗಾಗಲೆ ಹಲವರ ನಿದ್ದೆ ಕೆಡಿಸಿದೆ.
ಯೋಗರಾಜ್ ಮೂವೀಸ್ ಸಂಸ್ಥೆಯ ಮೂಲಕ ಯೋಗರಾಜ್‌ಭಟ್ ಹಾಗೂ ಎಂ.ಕೆ.ಸುಬ್ರಹ್ಮಣ್ಯ ನಿರ್ಮಿಸಿರುವ 'ಪಂಚರಂಗಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಭಿನ್ನ ಕಥಾಹಂದರವುಳ್ಳ ಈ ಚಿತ್ರದ ಚಿತ್ರೀಕರಣ ಕರ್ನಾಟಕದ ರಮಣೀಯ ಸ್ಥಳಗಳಲ್ಲಿ ನಡೆದಿದೆ. ಈಗಾಗಲ್ಲೇ ಬಿಡುಗಡೆಗೊಂಡಿರುವ ಚಿತ್ರದ ಧ್ವನಿಸುರುಳಿಗಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಂಚರಂಗಿ ಎಂದರೆ ಐದು ಬಣ್ಣಗಳು ಎಂದು ಅರ್ಥ ಬರುತ್ತದೆ. ಈ ಐದು ಬಣ್ಣಗಳು ಭಟ್ಟರ ದೃಷ್ಟಿಕೋನದಲ್ಲಿ ಭಿನ್ನವಾಗಿವೆ. ವಿದ್ಯೆ, ಉದ್ಯೋಗ , ಪ್ರೀತಿ, ಪಾಲಕರು ಹಾಗೂ ಮದುವೆ...ಇವು ಭಟ್ಟರ ಕಲ್ಪನೆಯ ಪಂಚರಂಗುಗಳು. ಪವನ್‌ಕುಮಾರ್ ಅವರೊಂದಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಯೋಗರಾಜಭಟ್ ಸ್ವತಃ ಸಂಭಾಷಣೆ ಬರೆದಿದ್ದಾರೆ.
ಮನೋಮೂರ್ತಿ ಸಂಗೀತ, ತ್ಯಾಗರಾಜನ್ ಛಾಯಾಗ್ರಹಣ, ಜೋನಿಹರ್ಷ ಸಂಕಲನ, ಶಶಿಧರ್ ಅಡಪ ಕಲಾನಿರ್ದೇಶನ ಮತ್ತು ಹರ್ಷ ನೃತ್ಯನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ದಿಗಂತ್, ನಿಧಿಸುಬ್ಬಯ್ಯ, ಅನಂತನಾಗ್, ರಾಜುತಾಳಿಕೋಟೆ, ಪವನ್‌ಕುಮಾರ್, ಸುಂದರ್‌ರಾಜ್, ಪದ್ಮಜಾರಾವ್, ಸುಧಾಬೆಳವಾಡಿ, ರಮ್ಯಾಬಾರ್ನಾ, ನಾಗೇಂದ್ರ ಶಾ, ಸತೀಶ್, ಸೌಮ್ಯ, ನಾಗರಾಜ್ ಅರಸು, ಸುಧಾಕರ್(ರಾಕ್‌ಲೈನ್ ಪ್ರೊಡಕ್ಷನ್ಸ್) ಮುಂತಾದವರಿದ್ದಾರೆ.


Click it and Unblock the Notifications











