ತೆಲುಗಿಗೆ ಜಿಗಿದ ಬೆಂಗಳೂರು ಬೆಡಗಿ ಪ್ರಣೀತಾ
ಪರಭಾಷಾ ನಟಿಯರು ಕನ್ನಡ ಚಿತ್ರರಂಗಕ್ಕೆ ಜಿಗಿಯುತ್ತಿದ್ದರೆ ಬೆಂಗಳೂರು ಬೆಡಗಿ ಪ್ರಣೀತಾ ತೆಲುಗು ಚಿತ್ರರಂಗದ ಬಾಗಿಲು ತಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಪ್ರಣೀತಾ 'ಪೊರ್ಕಿ' ಚಿತ್ರದಲ್ಲಿ ನಟಿಸಿರುವುದು ಗೊತ್ತೆ ಇದೆ. ಇದೀಗ ತೆಲುಗಿನ ಬೇಡಿಕೆಯ ನಟ ಸಿದ್ಧಾರ್ಥ್ ಜೊತೆ ಪ್ರಣೀತಾ ನಟಿಸಲಿದ್ದಾರೆ.
ಕಿಚ್ಚ ಸುದೀಪ್ ಚಿತ್ರದಲ್ಲಿ ನಟಿಸುವ ಅವಕಾಶ ಪ್ರಣೀತಾಗೆ ಮಿಸ್ ಆಗಿತ್ತು. ಬಳಿಕ ಬಂದ 'ರಾಜಧಾನಿ' ಚಿತ್ರವನ್ನು ಸ್ವತಃ ಪ್ರಣೀತಾ ಅವರೆ ನಿರಾಕರಿಸಿದ್ದರು. ಇದೀಗ ಸಿದ್ಧಾರ್ಥ್ ಜೊತೆ ತೆಲುಗಿನ 'ಬಾವಾ' ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹಳ್ಳಿ ಹುಡುಗಿಯ ಪಾತ್ರಕ್ಕೆ ಪ್ರಣೀತಾ ಒಪ್ಪ್ಪುತ್ತಾರೆ ಅನ್ನಿಸಿದ ಕಾರಣ ಅವರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿದ್ದಾಗಿ ಚಿತ್ರದ ನಿರ್ದೇಶಕ ರಾಮ್ ಬಾಬು ತಿಳಿಸಿದ್ದಾರೆ.
ಚಿತ್ರದ ನಿರ್ಮಾಪಕರು ಎಂ ಎಲ್ ಪದ್ಮಕುಮಾರ್ ಚೌದರಿ. 'ಗಂಡೆದೆ' ಮತ್ತು 'ಕಂಠೀರವ' ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಚಕ್ರಿ ಸಂಗೀತ 'ಬಾವಾ' ಚಿತ್ರಕ್ಕಿದೆ. ಈಗಾಗಲೆ ಚಿತ್ರೀಕರಣ ಆರಂಭಿಸಿರುವ ಬಾವಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.


Click it and Unblock the Notifications











