ಶ್ರೀನಾಗಶಕ್ತಿಯ ನಾಗಿಣಿ ಅವತಾರದಲ್ಲಿ ಶ್ರುತಿ
ಓಂ ಸಾಯಿ ಪ್ರಕಾಶ್ ಮತ್ತೆ ದೇವರ ಚಿತ್ರಕ್ಕೆ ಮೊರೆ ಹೋಗಿದ್ದಾರೆ! ಇಲ್ಲಿ ತಪ್ಪಾಗಿ ಅರ್ಥೈಸುವಂತದ್ದೇನು ಇಲ್ಲ. ಗ್ರಾಮ ದೇವತೆ, ನಾಗದೇವತೆ ಎಂದು ಚಿತ್ರ ತೆಗೆದ ಸಾಯಿ ಪ್ರಕಾಶ್ ಈಗ 'ಶ್ರೀನಾಗಶಕ್ತಿ' ಎಂಬ ಚಿತ್ರವನ್ನು ತೆಗೆಯಲು ಮುಂದಾಗಿದ್ದಾರೆ. ಸೋಲೆ ಗೆಲುವಿನ ಸೋಪಾನ ಎಂಬಂತೆ ಸಾಯಿ ಪ್ರಾಕಾಶ್ ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ.
ಈಗಾಗಲೆ 'ನಾಗ'ರಾಜ ಹಾಗೂ ನಾಗಪ್ಪನ ಬಗ್ಗೆ ಸಾಕಷ್ಟು ಚಿತ್ರಗಳು ಬಂಧಿವೆ. ಹಾವಿನ ಜನ್ಮಜನ್ಮಾಂತರಗಳ ಸಂಬಂಧವನ್ನು ಸಾಯಿ ಪ್ರಕಾಶ್ ತೋರಿಸಲಿದ್ದಾರೆ. ನಾಗ ಸಂಬಂಧ ಮಾನವ ಜನ್ಮದಲ್ಲಿ ಯಾವ ಪರಿಣಾಮ ಬೀರುತ್ತದೆ ಎಂಬುದು ಚಿತ್ರದ ಕಥಾ ಹಂದರ. ಚಿತ್ರದಲ್ಲಿ ಗ್ರಾಫಿಕ್ಸ್ ಯಥೇಚ್ಛವಾಗಿ ಬಳಸಿಕೊಳ್ಳಲಾಗುತ್ತಿದೆಯಂತೆ.
ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಸಾಯಿಪ್ರಕಾಶ್ ಅವರೇ ಹೊತ್ತಿದ್ದಾರೆ. ಸಂಭಾಷಣೆ ಮತ್ತು ಗೀತರಚನೆ ಗೋಟೂರಿ. ಗಣೇಶ್ ನಾರಾಯಣ್ ಸಂಗೀತ, ಸಿ.ನಾರಾಯಣ್ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ಸಂಯೋಜನೆ ಚಿತ್ರಕ್ಕಿದೆ. ಆಗಸ್ಟ್ 5ರಿಂದ 'ಶ್ರೀನಾಗಶಕ್ತಿ' ಚಿತ್ರೀಕರಣ ಆರಂಭ.
ಈ ಚಿತ್ರದ ಮೂಲಕ ಅಳುಮುಂಜಿ ಪಾತ್ರಗಳಿಗೆ ಸೀಮಿತವಾಗಿದ್ದ ಶ್ರುತಿ ನಾಗಿಣಿ ಅವತಾರ ಎತ್ತಲಿದ್ದಾರೆ. ಚಿತ್ರದ ನಾಯಕ ರಾಮ್ ಕುಮಾರ್. ಶಿವಕುಮಾರ್, ರಮೇಶ್ ಭಟ್, ಸಂಗೀತಾ, ಟೆನ್ನಿಸ್ ಕೃಷ್ಣ, ಗೋಟೂರಿ, ಮೋಹನ್ ಜುನೇನಾ ತಾರಾಬಳಗದಲ್ಲಿದ್ದಾರೆ. ಚಿತ್ರದ ನಿರ್ಮಾಪಕಿ ಚಂದ್ರಕಲಾ ಹಾಗೂ ಚಿ.ಗುರುದತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











