»   » ಜೀ ಕನ್ನಡದಲ್ಲಿ ಇಲ್ಲಿರುವುದು ಸುಮ್ಮನೆ

ಜೀ ಕನ್ನಡದಲ್ಲಿ ಇಲ್ಲಿರುವುದು ಸುಮ್ಮನೆ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬಹುಶಃ ಕನ್ನಡ ಕಿರುತೆರೆ ವೀಕ್ಷಕರಬೌದ್ಧಿಕ ಮಟ್ಟ ಹೆಚ್ಚಿಸಿದ ಕೀರ್ತಿ ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರಿಗೆ ಸಲ್ಲುತ್ತದೆ. ಸುಮಾರು ಏಳು ವರ್ಷಗಳ ಕೆಳಗೆ ಅವರು ಈ ಟೀವಿಗಾಗಿ ನಿರ್ದೇಶಿಸಿದ 'ಗರ್ವ' ಧಾರಾವಾಹಿ ಇಂದಿಗೂ ಜನಮಾನಸದಿಂದ ದೂರಾಗಿಲ್ಲ. ಬೆಳೆವಿಮೆ, ಮದ್ಯ ದೊರೆಗಳು, ಕೌಟುಂಬಿಕ ಕಲಹ, ಬಡವ-ಶ್ರೀಮಂತ ಹೀಗೆ ಎಲ್ಲ ಬಗೆಯ ಜನ ಜೀವನದ ನಾನಾ ಮಜಲನ್ನು ಸುಮಾರು 202 ಎಪಿಸೋಡ್ ಗಳಲ್ಲಿ ಹಿಡಿದಿಟ್ಟು ಜನರನ್ನು ರಂಜಿಸಿದ್ದರು. ಈಗ ಜೀ ಕನ್ನಡಕ್ಕಾಗಿ ಒಂದು ಉತ್ತಮ ವಿಷಯವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಮುಂದೆ ಬರುತ್ತಿದ್ದಾರೆ.

  ಕಥಾ ಸಾರಾಂಶ:
  ಇದೊಂದು ಯುವ ಭಾರತದ ಕಥೆ. ನಮ್ಮದೇಶದಲ್ಲಿನ ನಾಲ್ಕರಲ್ಲಿ ಮೂವರ ವಯಸ್ಸು 35ನ್ನು ದಾಟಿಲ್ಲ. ಇಂಥ ದೇಶ ಈಗ ಒಂದು ಸಂಕ್ರಮಣ ಸ್ಥಿತಿಯಲ್ಲಿದೆ. ಹಳ್ಳಿಯಿಂದ ಯುವ ಜನ ನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿರುವ ಮನೆಯಲ್ಲಿ ಉಳಿದಿರುವ ವಯಸ್ಸಾದ ಜೀವಗಳು ವಿಚಿತ್ರ ಗೊಂದಲದಲ್ಲಿವೆ. ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಲು ಯುವಕರು ನಗರಕ್ಕೆ ಹೋಗುವುದು ಅನಿವಾರ್ಯವೇ? ಹಾಗಾದರೆ ಹಳ್ಳಿಗಳ ಕತೆ ಏನು? ಇದು ಹಲವು ದಿನಗಳಿಂದ ಇರುವ ಪ್ರಶ್ನೆ.

  "ಇಲ್ಲಿರುವುದು ಸುಮ್ಮನೆ' ಈ ಪ್ರಶ್ನೆಗೆ ಉತ್ತರ ಹುಡುಕುವ ಒಂದು ಪುಟ್ಟ ಪ್ರಯತ್ನ. ಖಾಲಿ ಹೊಡೆಯುತ್ತಿರುವ ಹಳ್ಳಿಗಳು, ಅಲ್ಲಿ ಬದುಕುತ್ತಿರುವವರ ಗೊಂದಲಗಳನ್ನು ಹೇಳುತ್ತ ಈ ಕತೆ ನಗರ ಬದುಕಿನ ಸವಾಲುಗಳನ್ನೂ ವಿವರಿಸುತ್ತದೆ. ಹಳ್ಳಿಯಿಂದ ಬಂದು ನಗರಕ್ಕೆ ಹೊಂದಿಕೊಳ್ಳಲಾಗದೇ ಇರುವ ಪಾತ್ರಗಳ ಕತೆ ಹೇಳುತ್ತ ಹಳ್ಳಿಗೆ ಮರಳಿ ಹೋಗಲಾಗದ ಅನಿವಾರ್ಯತೆಯನ್ನೂ ಹೇಳುತ್ತದೆ. ನಗರದ ಇಂದಿನ ಬದುಕು, ಟ್ರಾಫಿಕ್ ಜಾಮ್, ರಿಯಲ್ ಎಸ್ಟೇಟ್, ಶೇರು, ಕ್ರೆಡಿಟ್ ಕಾರ್ಡ್ ಮತ್ತು ಫಾರ್ಮ್‌ಹೌಸ್‌ಗಳ ಕನಸನ್ನು ಸಣ್ಣದೊಂದು ತಮಾಷೆಯೊಂದಿಗೆ ವಿಮರ್ಶೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಈಗ ಬರುತ್ತಿರುವ ಧಾರಾವಾಹಿಗಳಲ್ಲಿ ಇದು ಬೇರೆ ರೀತಿ ರೂಪುಗೊಳ್ಳುತ್ತಿರುವ ಧಾರಾವಾಹಿ ಎಂದು ನಿಸ್ಸಂಕೋಚವಾಗಿ ಹೇಳಬಹುದು.

  ದಿವಂಗತ ಲೇಖಕಿ ಸರಿತಾ ಕುಸುಮಾಕರ್ ದೆಸಾಯಿಯವರ ನೀಳ್ಗತೆಯನ್ನು (ಕಾಶಿಯಲ್ಲಿ ಕಂಡಿದ್ದೇನು?) ಪ್ರೇರಣೆಯಾಗಿ ಇಟ್ಟುಕೊಂಡು ಪ್ರಕಾಶ್ ಈ ಧಾರಾವಾಹಿಯ ಕತೆ ಹೆಣೆದಿದ್ದಾರೆ. ಇದು ಮುಖ್ಯವಾಗಿ ವಿವಿಧ ಪೀಳಿಗೆಗಳ, ಹಳ್ಳಿ-ನಗರ ಸಂಸ್ಕೃತಿಯ , ಸಾಂಪ್ರಾದಾಯಿಕ ಹಾಗೂ ಆಧುನಿಕ ಸಂಸ್ಕೃತಿಯ ನಡುವೆ ಹುಟ್ಟಿಕೊಳ್ಳುವ ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ಹೇಳುತ್ತ ಹೋಗುತ್ತದೆ.

  ಜೀ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ನವೆಂಬರ್3, ಸೋಮವಾರದಿಂದ ರಾತ್ರಿ ಎಂಟು ಗಂಟೆಗೆ ಪ್ರಸಾರ ಕಾಣಲಿದೆ. ಮಿಡಿಟೆಕ್ ನಿರ್ಮಾಣ ಸಂಸ್ಥೆ ಇದನ್ನು ನಿರ್ಮಿಸುತ್ತಿದೆ. ಪ್ರಕಾಶ್ ಬೆಳವಾಡಿ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಕೆ ಎಸ್ ಎಲ್ ಸ್ವಾಮಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮೇರು, ನಂದಕುಮಾರ್, ಪಲ್ಲವಿ, ವೀಣಾ ಅಪ್ಪಯ್ಯ ಮೊದಲಾದವರು ಅಭಿನಯಿಸುತ್ತಿದ್ದಾರೆ. ಪುರಂದರದಾಸರ "ಇಲ್ಲಿ ಬಂದೆ ಸುಮ್ಮನೆ' ಹಾಡನ್ನು ಶೀರ್ಷಿಕೆ ಸಾಹಿತ್ಯವಾಗಿ ಬಳಸಿಕೊಳ್ಳಲಾಗುತ್ತಿದೆ.

  ಈ ಧಾರಾವಾಹಿ ಉಳಿದ ಧಾರಾವಾಹಿಗಳಿಗಿಂತ ಹಲವು ರೀತಿಯಲ್ಲಿ ಭಿನ್ನವಾಗಿದೆ. ಕನ್ನಡ ನೆಲದ ಕತೆ, ಕನ್ನಡದ ಪಾತ್ರಗಳು, ಕನ್ನಡದ ಸನ್ನಿವೇಶಗಳನ್ನು ಹೊಂದಿರುವ ಈ ಧಾರಾವಾಹಿಯನ್ನು ಪ್ರಕಾಶ್ ಬೆಳವಾಡಿ ನಿರ್ದೇಶಿಸಿರುವ ರೀತಿಯೂ ಭಿನ್ನ. ಈ ಧಾರಾವಾಹಿಯಲ್ಲಿ ಬಳಸಿಕೊಂಡ ಬೆಳಕಿನ ಸಂಯೋಜನೆ, ಛಾಯಾಗ್ರಹಣ, ಚಿತ್ರೀಕರಣ ತಾಣಗಳು ಈ ಮಾತನ್ನು ಪುಷ್ಟೀಕರಿಸುತ್ತವೆ.

  ಧಾರಾವಾಹಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಎಲ್ ಸ್ವಾಮಿ (ನಟ) ಅಭಿಪ್ರಾಯ:
  ಎಲ್ಲದಕ್ಕೂ ಒಂದು ಕಾಲ ಅಂತ ಇರುತ್ತದೆ. ಈ ಕತೆಯನ್ನು ಧಾರಾವಾಹಿ ಮಾಡಬೇಕು, ಸಿನಿಮಾ ಮಾಡಬೇಕು ಎಂದು ವರ್ಷಗಳಿಂದ ಓಡಾಡುತ್ತಿದ್ದೆ. ಜೀ಼ ಕನ್ನಡದ ಪ್ರೀತಿ ಮತ್ತು ಪ್ರೋತ್ಸಾಹದಿಂದ ಇಷ್ಟು ವರ್ಷಗಳ ನಂತರ ಈಗ ಇದು ಸಾಧ್ಯವಾಗುತ್ತಿದೆ. ಈ ಧಾರಾವಾಹಿಯಲ್ಲಿ ನನ್ನ ಪಾತ್ರ ವಿಶಿಷ್ಟವಾಗಿ ಬಂದಿದೆ. ಅದು ಹಾಗೆ ಬಂದಿದ್ದರೆ ಅದಕ್ಕೆ ಕಾರಣ ನಿರ್ದೇಶಕ ಪ್ರಕಾಶ್ ಬೆಳವಾಡಿ.

  ಪರಮೇಶ್ವರ ಗುಂಡ್ಕಲ್ (ಫಿಕ್ಷನ್ ಹೆಡ್, ಜೀ ಕನ್ನಡ) ಅಭಿಪ್ರಾಯ:
  ಮಕ್ಕಳು ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅನಿಸಿದರೆ ವಯಸ್ಸಾದ ತಂದೆ ತಾಯಿ ಮಕ್ಕಳ ವಿರುದ್ಧ ಕೋರ್ಟಿಗೆ ಹೋಗಬಹುದು. ಪರಿಹಾರ ಕೇಳಬಹುದು. ಅಂಥದ್ದೊಂದು ಕಾನೂನನ್ನು ಭಾರತ ಸರಕಾರ ಇತ್ತೀಚೆಗೆ ಪಾಸು ಮಾಡಿದೆ. ಈ ಕಾನೂನಿನಿಂದ ವಯಸ್ಸಾದ ತಂದೆ ತಾಯಿಗೆ ಎಷ್ಟು ಉಪಯೋಗವಾಗುತ್ತದೆ ಎನ್ನುವುದು ಬೇರೆ ಮಾತು. ಆದರೆ ಇಂಥದ್ದೊಂದು ಕಾನೂನು ಶ್ರವಣಕುಮಾರ ಹುಟ್ಟಿದ ದೇಶದಲ್ಲಿ ಬರಬೇಕಾಯಿತಲ್ಲ ಎನ್ನುವುದು ತಳಮಳ ಹುಟ್ಟಿಸುತ್ತದೆ. "ಇಲ್ಲಿರುವುದು ಸುಮ್ಮನೆ' ಈ ವಸ್ತುವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತದೆ. ಇದೊಂದು ಒಳ್ಳೆಯ ಧಾರಾವಾಹಿ ಆಗುತ್ತದೆ ಎನ್ನುವುದರಲ್ಲಿ ಅನುಮಾನ ಇಲ್ಲ.

  ಪ್ರಕಾಶ್ ಬೆಳವಾಡಿ (ನಿರ್ದೇಶಕ) ಅಭಿಪ್ರಾಯ:
  ಏಳು ವರ್ಷಗಳ ನಂತರ ಪುನಃ ಒಂದು ಸೀರಿಯಲ್ ಮಾಡುತ್ತಿದ್ದೇನೆ. ಜನ ಈಗಲೂ "ಗರ್ವ' ಧಾರಾವಾಹಿಯನ್ನು ನೆನಪು ಇಟ್ಟುಕೊಂಡಿದ್ದಾರೆ. ಇಷ್ಟು ವರ್ಷಗಳ ನಂತರವೂ ಒಂದು ಧಾರಾವಾಹಿಯ ಕುರಿತು ಜನ ಮಾತಾಡುವುದು ನನಗೆ ಅಚ್ಚರಿ ಹುಟ್ಟಿಸುತ್ತದೆ. "ಇಲ್ಲಿರುವುದು ಸುಮ್ಮನೆ' ಅಂಥದ್ದೇ ಇನ್ನೊಂದು ಪ್ರಯತ್ನ. ಇಂಥದ್ದೊಂದು ಅವಕಾಶವನ್ನು ಮಾಡಿಕೊಟ್ಟಿದ್ದಕ್ಕೆ ಜೀ ಕನ್ನಡಕ್ಕೆ ನಾನು ಧನ್ಯವಾದ ಹೇಳುತ್ತೇನೆ.

  (ದಟ್ಸ್ ಕನ್ನಡ ಕಿರುತೆರೆ)

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more