»   » ಚಿತ್ರ ಸಾಹಿತಿ ಕೆ.ಕಲ್ಯಾಣ್‌ರನ್ನು ಎಸ್ಪಿಬಿ ಹಾಗೂ ವಿಷ್ಣು ಬಾಯಿತುಂಬಾ ಹೊಗಳಿದ್ದಲ್ಲದೆ ಬೇಗ ಮದುವೆಯಾಗಲಿ ಅಂತ ಹಾರೈಸಿದರು.

ಚಿತ್ರ ಸಾಹಿತಿ ಕೆ.ಕಲ್ಯಾಣ್‌ರನ್ನು ಎಸ್ಪಿಬಿ ಹಾಗೂ ವಿಷ್ಣು ಬಾಯಿತುಂಬಾ ಹೊಗಳಿದ್ದಲ್ಲದೆ ಬೇಗ ಮದುವೆಯಾಗಲಿ ಅಂತ ಹಾರೈಸಿದರು.

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಜನವರಿ 29ರ ಬುಧವಾರ ವಿಷ್ಣುವರ್ಧನ್‌ ಚೆನ್ನೈನಲ್ಲಿ ಪಂಡರಮ್ಮನವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅಲ್ಲಿಂದ ಬೆಂಗಳೂರಲ್ಲಿ ಇಳಿದವರೇ ಕಾರಲ್ಲಿ ಮಲ್ಲೇಶ್ವರಂನ ಕೆ.ಕಲ್ಯಾಣ್‌ ಹೊಸ ಮನೆಗೆ ಬಂದರು. ಅಲ್ಲಿ ಮೇರು ಗಾಯಕ ಎಸ್‌.ಪಿ.ಬಾಲಸುಬ್ರಮಣ್ಯಂ ಕೂಡ ಇದ್ದರು.

ಪಂಡರಮ್ಮ ಅಗಲಿದ ದಿನವೇ ಕಲ್ಯಾಣ್‌ರ ಹೊಸಮನೆ ಕಂ ಆಫೀಸಿನ ಅಧಿಕೃತ ಗೃಹಪ್ರವೇಶ. ಮಲ್ಲೇಶ್ವರಂನ ಎಂಪಿಎಲ್‌ ಶಾಸ್ತ್ರಿ ರಸ್ತೆಯಲ್ಲಿ ಕಲ್ಯಾಣ್‌ ಕಚೇರಿ ಇದೆ. ಇವರ ಕಚೇರಿ ಮೇಲೆ ಮಂಜುಳಾ ಗುರುರಾಜ್‌ರ ಸಾಧನಾ ಸಂಗೀತ ಶಾಲೆಯ ಮಲ್ಲೇಶ್ವರಂ ಶಾಖೆ ಇದೆ. ಕೆಲವು ತಿಂಗಳ ಹಿಂದೆ ಗಾಯಕ ಜೇಸುದಾಸ್‌ ಸಾಧನಾ ಶಾಲೆಯ ಶಾಖೆಯನ್ನು ಉದ್ಘಾಟಿಸಿದ್ದರು. ಆಗಲೇ ಅವರಿಂದ ಕಲ್ಯಾಣ್‌ಗೆ ಶಹಭಾಸ್‌ಗಿರಿ ಸಿಕ್ಕಿತ್ತು. ಈಗ ಎಸ್ಪಿ ಬಾಲು ಹಾಗೂ ವಿಷ್ಣು ಪಾಳಿ.

ತಮ್ಮ ಕಚೇರಿಯ ಗೃಹ ಪ್ರವೇಶವನ್ನು ಪಂಡರಿಬಾಯಿ ಅವರ ನಿಧನದ ಕಾರಣ ಮೌನಾಚರಣೆಯಾಂದಿಗೇ ಶುರು ಮಾಡಿದ ಸರಳ ಜೀವಿ ಕಲ್ಯಾಣ್‌, ಬಾಲು ಹಾಗೂ ವಿಷ್ಣು- ಇಬ್ಬರಿಗೂ ಬಗೆಬಗೆಯ ಕೋಣೆಗಳನ್ನು ತೋರಿದರು. ರಿಸಪ್ಷನ್‌ ರೂಮು, ಪುಸ್ತಕಾಲಯ, ಮಟ್ಟು ಹಾಕುವ ಕೋಣೆ, ಕಲ್ಯಾಣ್‌ ಮಲಗುವ ಕೊಠಡಿ ಎಲ್ಲವನ್ನೂ ನೋಡುತ್ತಲೇ ಬಾಲು ಮಾತು ಸಾಗಿತ್ತು...

‘ನಾನೆಲ್ಲೋ ಇವತ್ತು ಕಲ್ಯಾಣ್‌ ಎಂಗೇಜ್‌ಮೆಂಟು ಅಂದುಕೊಂಡಿದ್ದೆ, ಅವರು ಬೇಗ ಮದುವೆಯಾಗಬೇಕು :) ನಾನು ನೋಡುತ್ತಿರುವ ಮೂರನೇ ತಲೆ ಮಾರಿನ ಚಿತ್ರ ಸಾಹಿತಿ ಕಲ್ಯಾಣ್‌. ಅವರು ಸರಳತೆಯ ಮೂರ್ತಿ ಅಂತ ಕೇಳಿದ್ದೇನೆ. ಅದಕ್ಕೇ ನಾನು ಅಲ್ಲಿಂದ ಇಲ್ಲಿಯವರೆಗೆ ಬಂದಿದ್ದು. ಕಲ್ಯಾಣ್‌ ಬರವಣಿಗೆಯಲ್ಲಿ ಮೊನಚಿದೆ. ಅವರೊಬ್ಬ ಒಳ್ಳೆಯ ಪ್ರೇಮಕವಿ. ಅಮೃತ ವರ್ಷಿನಿ ಚಿತ್ರದ ಹಾಡುಗಳ ಸಾಹಿತ್ಯದಿಂದಲೇ ಇವರ ಪ್ರತಿಭೆ ನನಗೆ ಪರಿಚಿತವಾಯಿತು. ನನಗೆ ಆ ಸಿನಿಮಾದ ಹಾಡುಗಳು ಬಹಳ ಇಷ್ಟ . ಕಲ್ಯಾಣ್‌ ಮೂಸೆಯಿಂದ ಇನ್ನಷ್ಟು ಒಳ್ಳೆಯ ಹಾಡುಗಳು ಮೂಡಲಿ. ದೇವರು ಈ ಒಳ್ಳೆಯ ಮನುಷ್ಯನನ್ನು ಇನ್ನಷ್ಟು ಆಶೀರ್ವದಿಸಿ ಬೆಳೆಸಲಿ.

‘ವಿಷ್ಣು ನನ್ನ ತಮ್ಮ ಇದ್ದಹಾಗೆ. ನಾನು ಹಾಡಿರುವ ಎಷ್ಟೋ ಹಾಡುಗಳಿಗೆ ಅವರು ನಿರೀಕ್ಷೆಗೂ ಮೀರಿ ಜೀವ ತುಂಬಿದ್ದಾರೆ. ಆ ಕಾರಣಕ್ಕೆ ಅವರನ್ನು ನಾನು ಮೆಚ್ಚಿದ್ದೇನೆ...’

ಬಾಲು ನಂತರ ಮಾತಿಗೆ ತೊಡಗಿದ್ದು ವಿಷ್ಣು- ‘ಇದೊಂದು ಕಾಂಟ್ರಾಸ್ಟ್‌ ದಿನ. ಬೆಳಗ್ಗೆ ಪಂಡರಮ್ಮನವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಚೆನ್ನೈಗೆ ಹೋಗಿದ್ದೆ. ಈಗ ಇಲ್ಲಿ ಬೇರೆಯದೇ ಸಮಾರಂಭಕ್ಕೆ ನಿಂತಿದ್ದೇನೆ. ಕಲ್ಯಾಣ್‌ ಅವರ ಸಂಪರ್ಕ ಬೆಳೆದದ್ದು ಇತ್ತೀಚೆಗಷ್ಟೆ. ಕೋಟಿಗೊಬ್ಬ ಚಿತ್ರದ ಕಾವೇರಿಗೆ ಕಾಲುಂಗುರ ತೊಡಿಸಿ ಎಂಬ ಹಾಡಿನ ಸಾಹಿತ್ಯ ನನ್ನನ್ನು ಬಹಳವಾಗಿ ಸೆಳೆಯಿತು. ಕಲ್ಯಾಣ್‌ ತುಡಿತ ಎಂತದ್ದು ಅನ್ನುವುದಕ್ಕೆ ಆ ಹಾಡಿನ ಸಾಲುಗಳು ಕನ್ನಡಿ ಹಿಡಿದಂತಿದ್ದವು.

‘ಆತ ತುಂಬಾ ಒಳ್ಳೆಯವರು ಅಂತ ಕೇಳಿದ್ದೇನೆ. ಯಾವಾಗಲೂ ತುಂಬಾ ಒಳ್ಳೆಯವರಾಗಿರುವವರು ಸಿನಿಮಾ ಉದ್ದಿಮೆಯಲ್ಲಿ ಏಗುವುದು ಕಷ್ಟವಾಗುತ್ತದೆ. ಹೀಗಾಗಿ ಕಲ್ಯಾಣ್‌ ಯಾವಾಗಲೂ ಬಹಳ ಒಳ್ಳೆಯವರಾಗಿರೋದು ಬೇಡ. ಅವರಿಗೆ ಸರಸ್ವತಿಯ ಅನುಗ್ರಹವಿದೆ. ನನ್ನಂಥ ನಟರಿಗೆ ಲಕ್ಷ್ಮಿಯ ಆಶೀರ್ವಾದ ಇದೆ. ಅವರ ಬೆಡ್‌ರೂಮಲ್ಲಿ ಇಬ್ಬರು ನಟಿಯರ ಫೋಟೋ ಇದೆ. ಕಲ್ಯಾಣ್‌ ಚೆಂಡು 50 ಪರ್ಸೆಂಟ್‌ ತಿರುಗುತ್ತಿದೆ. ಅದು ವಿಕೆಟ್ಟಿಗೆ ಬಡಿಯೋದೊಂದೇ ಬಾಕಿ. ನನಗೆ ಕಲ್ಯಾಣ್‌ ಬರೆದು ರಾಗ ಹಾಕಿರುವ ಮನಸೆ ಓ ಮನಸೇ ಹಾಡು ತುಂಬಾ ಇಷ್ಟ ’.

ಅಂದಹಾಗೆ, ಕಲ್ಯಾಣ್‌ ಸಾಹಿತ್ಯದ ಸ್ಫೂರ್ತಿ ಯಾರು?
ಅವರ ಬೆಡ್‌ರೂಮಲ್ಲಿ ಜ್ಯೂಲಿಯೆಟ್‌ ಹಾಗೂ ಮುಮ್ತಾಜ್‌ ಫೋಟೋ ಇರೋದನ್ನು ನೋಡಿದರೆ, ಅವರೇ ಇರಬಹುದಾ ಅನಿಸುತ್ತೆ. ಹುಡುಗಿಯರ ವಿಷಯ ಎತ್ತಿದರೆ ಮುದ್ದು ಮೊಗದ ಕಲ್ಯಾಣ್‌ ಕೆನ್ನೆ ಕೆಂಪಾಗುತ್ತದೆ. ಕಲ್ಯಾಣ್‌ಗೆ ಬೇಗ ಕಲ್ಯಾಣವಾಗಲಿ ಅನ್ನುವ ಆಶಯ ಇಡೀ ಸಮಾರಂಭದಲ್ಲಿ ಜೋರಾಗೇ ವ್ಯಕ್ತವಾಯಿತು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada