»   » ನಮಸ್ತೆ ದೇವರಾಜ್‌ ಅಂಕಲ್‌...

ನಮಸ್ತೆ ದೇವರಾಜ್‌ ಅಂಕಲ್‌...

Posted By:
Subscribe to Filmibeat Kannada

‘ನಾನು ಚಿತ್ರರಂಗಕ್ಕೆ ಆಗ ತಾನೇ ಬಂದಿದ್ದೆ. ನಿರ್ದೇಶಕ ಕೆ.ವಿ. ರಾಜು ಕಡೆಯಿಂದ ಶಂಕರ್‌ನಾಗ್‌ ಪರಿಚಯವಾದ್ರು. ಮರುದಿನ ಸಿಕ್ಕವರೇ -‘ಕೂಗು’ ಸಿನಿಮಾದಲ್ಲಿ ಒಂದು ಪಾತ್ರ ಇದೆ ಕಣ್ರಿ. ನಿಮ್ಗೆ ಡ್ರೆೃವಿಂಗ್‌ಬರುತ್ತಾ? ಅಂದ್ರು. ನಂಗೆ ಡ್ರೆೃವಿಂಗ್‌ಗೊತ್ತಿರಲಿಲ್ಲ. ಬರಲ್ಲ ಅಂದ್ರೆ ಛಾನ್ಸು ಕೈ ತಪ್ಪಿ ಹೋಗುತ್ತೆ ಅಂತ -‘ ಬರ್ತದೆ ಸಾರ್‌, ಡ್ರೆೃವಿಂಗ್‌ಚೆನ್ನಾಗಿ ಬರ್ತದೆ’ಅಂದು ಬಿಟ್ಟೆ. ಛಾನ್ಸು ಸಿಕ್ತು. ತಕ್ಷಣ ಅಂಬರೀಷ್‌ ಅವರ ಕಾರ್‌ಡ್ರೆೃವಿಂಗ್‌ ಪ್ರಕಾಶನ್ನ ಹಿಡ್ಕೊಂಡೆ. ನೋಡಪ್ಪಾ ಹೀಗ್‌ಹೀಗೆ! ನಂಗೆ ಡ್ರೆೃವಿಂಗ್‌ ಕಲಿಸು ಅಂತ ಕೇಳಿಕೊಂಡೆ. ಅವರು ಒಂದೇ ದಿನದಲ್ಲಿ ಡ್ರೆೃವಿಂಗ್‌ ಹೇಳಿಕೊಟ್ರು.

ಅದೇ ಖುಷೀಲಿ ಶೂಟಿಂಗ್‌ ಸ್ಥಳಕ್ಕೆ ಹೋದ್ರೆ-ಅಲ್ಲಿ ಶಂಕರನಾಗ್‌ ಇರಲಿಲ್ಲ. ಇದ್ದವರು ಅನಂತನಾಗ್‌! ಅವರನ್ನ ನೋಡಿದ್ದೇ ತಡ -ಗಾಬರಿಯಾಯ್ತು. ಕಲಿತದ್ದೆಲ್ಲ ಮರೆತುಹೋಯ್ತು. ಆದ್ರೂ ಕ್ಯಾಮರಾ ಮುಂದೆ ನಿಂತೆ. ರಂಗಭೂಮಿಯ ಹಿನ್ನೆಲೆ ಇದ್ರೂ ಕೂಡ ಹೆದರಿಕೆ ಆಯ್ತು. ಹಾಗೆ, ಹೆದರಿಕೊಂಡೇ ಸಿನಿಮಾಕ್ಕೆ ಬಂದ ನಾನು ಖಳನಾಯಕನಾದೆ ನೋಡಿ-ಜನ ನನ್ನನ್ನೇ ಬೆರಗಿನಿಂದ ನೋಡಿದ್ರು. ಇದ್ಯಾರಪ್ಪ ಇವ್ನು ?ಅಮರೀಷ್‌ಪುರಿ ಥರಾನೇ ಇದಾನಲ್ಲ ಅಂದ್ರು. ಒರಟು ಧ್ವನಿ, ಒರಟು ಮುಖವೇ ನನ್ನ ಪ್ಲಸ್‌ ಪಾಯಿಂಟ್‌ ಅಂತ ಅವತ್ತೇ ಗೊತ್ತಾಗಿಬಿಡ್ತು. ಹೆದರಿಕೊಂಡೇ ಚಿತ್ರರಂಗಕ್ಕೆ ಬಂದವನು-ಎಲ್ಲರನ್ನೂ ಹೆದರಿಸುವ ಖಳನಾದೆ. ಆ ಮೇಲೆ ನಾಯಕನಾದೆ! ಖಳವಾಗಿದ್ದಾಗ ಒದೆ ತಿನ್ನುತ್ತಿದ್ದವನು ಹೀರೋ ಆದ್ಮೇಲೆ -ಒದೆ ಕೊಡುವ ಜಾಗಕ್ಕೆ ಬಂದೆ...

ಆದ್ರೆ ಸ್ವಾಮೀ, ನೇರವಾಗಿ ಹೇಳ್ತೀನಿ ಕೇಳಿ: ನನ್ನನ್ನ ಹೆದರಿಸುವಂಥ, ನನ್ನ ಪದೇ ಪದೆ ಕೆಣಕುವಂಥ ಪಾತ್ರಗಳು ಹೆಚ್ಚಾಗಿ ಸಿಗಲಿಲ್ಲ. ಅದೊಂದು ಕೊರಗು ನಂಗೆ ಇದ್ದೇ ಇದೆ..’

ಡಿಯರ್‌ ದೇವರಾಜ್‌ ಅಂಕಲ್‌, ಯಾವುದೋ ಲಹರಿಗೆ ಬಿದ್ದು ನೀವು ಹೀಗೆಲ್ಲ ಮಾತಾಡಿದ್ದು ಆರೇಳು ತಿಂಗಳ ಹಿಂದೆ!

ನಿಮಗೆ ಒಳ್ಳೆಯ ಸಿನಿಮಾ, ಒಳ್ಳೆಯ ಪಾತ್ರ ಸಿಕ್ಕ ತಕ್ಷಣ ಹಳೆಯ ಮಾತನ್ನೆಲ್ಲ ನೆನಪಿಸಿ ನಿಮ್ಮನ್ನ ಖುಷಿ ಪಡಿಸಬೇಕು ಎಂಬ ಆಸೆಯಿತ್ತು. ಆದ್ರೆ ಅಂಕಲ್‌, ಆರು ತಿಂಗಳು ಕಳೆದ್ರೂ ನಿರ್ಮಾಪಕರಿಗೆ ನಿಮ್ಮ ನೆನಪಾಗಲಿಲ್ಲ! ನಿಮ್ಮ ಹೊಸ ಸಿನಿಮಾ ಸೆಟ್ಟೇರಲಿಲ್ಲ. ಅರೆ, ಈ ದರಿದ್ರ ಚಿತ್ರರಂಗ ದೇವರಾಜ್‌ರಂಥ ಅದ್ಭುತ ಕಲಾವಿದನನ್ನು ಮರೆತು ಬಿಡ್ತಾ ? ದೇವರಾಜ್‌ ಮಾತಿನ ಅಬ್ಬರ, ಕಂಗಳಲ್ಲಿನ ಕ್ರೌರ್ಯ, ಒರಟೊರಟು ಮತ್ತು ಉರುಟುರುಟು ಮುಖಭಾವವನ್ನು ಬೆಳ್ಳಿ ಪರದೆಯ ಮೇಲೆ ಕಾಣಲು ಇನ್ನೇಲೆ ಸಾಧ್ಯವೇ ಇಲ್ವಾ? ಇಂಥವೇ ನೂರು ಪ್ರಶ್ನೆಗಳು ಮನಕ್ಕೆ ಲಗ್ಗೆ ಹಾಕಿದ್ವಲ್ಲ ಅಂಕಲ್‌, ನಿಮಗೆ ಪತ್ರ ಬರೆಯಬೇಕು ಅನಿಸಿದ್ದು, ಆಗಲೇ...

*

ಅಂಕಲ್‌, ಹೊಸ ಸಿನಿಮಾ ಬರದೇ ಇದ್ರೆ ಏನಂತೆ ? ನಿಮ್ಮನ್ನ ನೆನಪು ಮಾಡಿಕೊಳ್ಳೋಕೆ ನೂರು ಕಾರಣಗಳಿವೆ. ನಿಮ್ಮನ್ನು ಹತ್ತಿರದಿಂದ ಕಂಡವರಂತೂ ಹೃದಯ ತುಂಬಿ ಹೇಳ್ತಾರೆ: ‘ದೇವ್ರಾಜಾ...ಅವ್ರು ಚಿತ್ರರಂಗದ ಜೆಂಟಲ್‌ ಮನ್‌. ಆತ ಭಾವುಕ. ತುಂಬ ಪ್ರಾಮಾಣಿಕ. ವಿಪರೀತ ಬುದ್ಧಿವಂತ. ಯಾರೂ ಒಪ್ಪುವಂಥ ಗುಣವಂತ. ಪೊಲೀಸ್‌ ಪಾತ್ರಗಳಿಗೆ ಒಂದು ‘ಖದರು’ ಬಂದದ್ದೇ ಅವರಿಂದ. ಗಾಸಿಪ್‌ಗಳಿಂದ; ಕ್ಯಾತೆಗಳಿಂದ ದೇವರಾಜ್‌ದೂರ ದೂರ. ಆತ- ಖಳನಾಗಿಯೂ ತೆಲುಗಿಯಲ್ಲಿ ಸಾವಿರಾರು ಅಭಿಮಾನಿಗಳನ್ನು, ಹತ್ತಾರು ಪ್ರಶಸ್ತಿಗಳನ್ನು ಪಡೆದ ಧೀರ. ಅಂಬರೀಷ್‌ ಬಿಟ್ರೆ‘ಮಿನಿಮಮ್‌ ಗ್ಯಾರಂಟಿ ಹೀರೋ’ ಎಂಬ ಬಿರುದು ಸ್ಯೂಟ್‌ ಆಗೋದು ಈಗ ಕೂಡಾ ದೇವ್ರಾಜ್‌ಗೇ..’

ಅಂಕಲ್‌, ನೀವು ಯಾಕೆ ಎಲ್ರಿಗೂ ಇಷ್ಟವಾಗ್ತೀರಿ ಅನ್ನೋಕೆ ಇಷ್ಟು ಸಾಕು. ನಿಮ್ಮನ್ನ ಅತ್ಯುತ್ತಮ ನಟ, ಅಪರೂಪದ ನಟ ಅನ್ನಲಿಕ್ಕೆ‘ ಎರ್ರ ಮಂದಾರಂ’ನ ಕ್ರೂರಿ, ‘ಇಂದ್ರಜಿತ್‌’ನ ಕುಂಟ, ‘ಯುದ್ಧ ಕಾಂಡ’ದ ಕೇಡಿ ಲಾಯರ್‌,‘ ಉತ್ಕರ್ಷ’, ‘ತರ್ಕ’ದ ವಿಕೃತಕಾಮಿ, ‘ರಾಜಕೀಯ’, ‘ಗೋಲಿ ಬಾರ್‌’,‘ ಕರ್ಫ್ಯೂ’,‘ಲಾಕಪ್‌ ಡೆತ್‌’, ಚಿತ್ರಗಳ ಇನ್ಸ್‌ಸ್ಪೆ ಕ್ಟರ್‌ ಪಾತ್ರಗಳೇ ಸಾಕು. ದೇವರಾಜ್‌ ಅಂದ್ರೆ ಏನು? ದೇವರಾಜ್‌ ಅಭಿನಯದ ತಾಕತ್ತೇನು? ಉಳಿದೆಲ್ಲ ಹೀರೋಗಳಿಗಿಂತ ದೇವರಾಜ್‌ ಹೇಗೆ ಮತ್ತು ಯಾಕೆ ಭಿನ್ನ ಅನ್ನೋದನ್ನ ಇಡೀ ಚಿತ್ರರಂಗಕ್ಕೇ ತೋರಿಸಿ ಕೊಡ್ತಲ್ಲ ‘ಹುಲಿಯಾ’ ಆ ಸಿನಿಮಾವನ್ನು ಮರೆಯೋದಾದ್ರೂ ಹ್ಯಾಗೆ ಅಂಕಲ್‌?

ಇದನ್ನೆಲ್ಲ ನೆನಪು ಮಾಡಿಕೊಂಡಾಗಲೇ ‘ಸಾಂಗ್ಲಿಯಾನಾ’ಸಿನಿಮಾ ಕಣ್ಮುಂದೆ ಬಂದು ನಿಲ್ಲುತ್ತೆ. ಭಾಗ-1, ಭಾಗ-2 ಅಂತ ಬಂದ ಸಿನಿಮಾ ಅದು. ಮೊದಲ ಎರಡೂ ಸಿನಿಮಾಗಳಲ್ಲಿ ವಿಲನ್‌ ಆಗಿದ್ದ ನೀವು, ಸಾಂಗ್ಲಿಯಾನ ಭಾಗ-3ರಲ್ಲಿ ಹೀರೋ ಆಗಿಬಿಟ್ರಿ! ವಿಲನ್‌ ಆಗಿದ್ದಾಗ ನಿಮ್ಗೆ ಒಳ್ಳೇ ಹೆಸರಿತ್ತು. ಆದ್ರೆ-ಹೀರೋ ಆದ ಮೇಲೆ ಇಡೀ ಸಿನಿಮಾದ ಜವಾಬ್ದಾರಿ ನಿಮ್ಮ ಹೆಗಲಿಗೇ ಬಿತ್ತು! ಹೇಳಿ ಅಂಕಲ್‌, ಚಿತ್ರರಂಗದಲ್ಲಿ ‘ಹೀರೋ’ಗಳಿಗೆ ಜಾಸ್ತಿ ಆಯಸ್ಸಿಲ್ಲ ಅಂತ ನಿಮಗೆ ಆಗ ಯಾಕೆ ಅರ್ಥವಾಗಲಿಲ್ಲ ?

ಸ್ಸಾರಿ. ಹೀಗೆಲ್ಲ ಕೇಳ್ದೆ ಅಂತ ಬೇಜಾರು ಮಾಡ್ಕೋಬೇಡಿ. ಯಾಕೆ ಅಂದ್ರೆ-ಖಳನಾಗಿದ್ದ ಪ್ರಭಾಕರ್‌, ಅಷ್ಟೇ ಬೇಗ ಹೀರೋ ಕೂಡಾ ಆಗಿಬಿಟ್ಟಿದ್ದನ್ನು ಪ್ರತ್ಯಕ್ಷ ಕಂಡವರು ನೀವು. ‘ಹೀರೋ ಪಾತ್ರಗಳ ಜಾತಕವೇ ಇಷ್ಟು . ಹೀರೋ ಆಗಿ ಬೇಗ ‘ರಿಟೈರ್ಡ್‌’ ಆಗೋದಕ್ಕಿಂತ ವಿಲನ್‌ ಆಗಿ ದಶಕದ ಕಾಲ ಮೆರೆಯೋದೇ ಸರಿ’ ಅಂತ ಆಗೆಲ್ಲ ನಿಮ್ಗೂ ಅನಿಸಿರುತ್ತೆ . ಕನ್ನಡದಲ್ಲಿ ವಜ್ರಮುನಿ, ಹಿಂದಿಯಲ್ಲಿ ಅಮರೀಷ್‌ ಪುರಿ ವಿಲನ್‌ ಗೆಟಪ್ಪಿನಲ್ಲೇ ‘ಹೀರೋ’ ಥರಾ ಮೆರೆದದ್ದೂ ನಿಮ್ಗೆ ಗೊತ್ತಿದೆ. ಹಾಗಿದ್ದೂ ನೀವು ಹೀರೋ ಪಾತ್ರಗಳನ್ನೇ ಯಾಕೆ ಇಷ್ಟಪಟ್ರಿ?

*

ಹೌದಲ್ವ? ಈ ಮೊದಲು ಎಚ್‌.ಎಂ.ಟಿ ಯಲ್ಲಿ ಕೆಲ್ಸ ಮಾಡ್ತಿದ್ದವರು ನೀವು. ಆಗ ಒಂದೊಂದು ನಿಮಿಷವನ್ನೂ ಲೆಕ್ಕ ಹಾಕ್ಕೊಂಡು ಕೆಲ್ಸ ಮಾಡಿದ್ರಲ್ಲ -ಈಗ ಜಾಸ್ತಿ ಕೆಲ್ಸ ಇಲ್ಲ ನೋಡಿ -‘ಪಿಚ್‌’ಅನ್ಸಲ್ವ? ಬಣ್ಣ ಅಳಿಸಿದ ತಕ್ಷಣವೇ-‘ಹೀರೋ’ಅನ್ನಿಸಿಕೊಂಡ ಹತ್ತು ಮಂದೀನ ಹೊಡೆದು ಹಾಕೋದು ಸುಳ್ಳೋ ಸುಳ್ಳು ಅನ್ಸಲ್ವ? ವಿಲನ್‌ ಜಮಾನಾದಲ್ಲಿದ್ದಾಗ ಕೋಟೆಯಂಥ ಮನೇಲಿ ; ಹೀರೋ ಆಗಿದ್ದಾಗ ಲಕಲಕಲಕ ಬೆಳಕಲ್ಲಿ (ಬೆಳದಿಂಗಳಂಥ ನಾಯಕಿ ಜತೇಲಿ!) ಇದ್ರಲ್ಲ -ಅದೆಲ್ಲ ನೆನಪಾದ್ರೆ ಒಂಥರಾ ಬೇಜಾರಾಗಲ್ವ? ಒಂಟಿತನ ಕಾಡಲ್ವ?

ಇದೆಲ್ಲ ಕುತೂಹಲದ ಪ್ರಶ್ನೆ. ಅಷ್ಟೆ. ಬೇಜಾರಾಗ್ಬೇಡಿ. ಸಿನಿಮಾದಲ್ಲಿ ಛಾನ್ಸು ಸಿಗದೇ ಹೋದ್ರೆ ಕತ್ತೆ ಬಾಲ. ದೇವರೂ ಬೆರಗಾಗಬೇಕು-ಅಷ್ಟು ಚೆನ್ನಾಗಿ ನಾಟಕದಲ್ಲಿ ಅಭಿನಯಿಸ್ತೀರಿ ನೀವು. ಯೋಚನೆ ಯಾಕೆ? ಎದ್ದು ಬನ್ನಿ. ನಿಮ್ಮ ಒಂದೊಂದು ಡೈಲಾಗ್‌ಗೂ ಸಿಳ್ಳೆ ಹೊಡೆಯಲಿಕ್ಕೆ, ಪ್ರೋತ್ಸಾಹಿಸಲಿಕ್ಕೆ, ಗೆಲ್ಲಿಸಲಿಕ್ಕೆ ನೂರಲ್ಲ. ಸಾವಿರ ಜನ ಇದಾರೆ. ‘ಹಾಸ್ಯಪಾತ್ರ ಮಾಡ್ಬೇಕು ಅಂತ ಬಹಳ ಆಸೆ ಕಣ್ರಿ’ ಅಂತ ಆಗಿಂದಾಗ್ಗೆ ಹೇಳ್ತಾನೇ ಇರ್ತೀರಲ್ಲ ನಾಟಕದಲ್ಲೇ ಹಾಸ್ಯ ಪಾತ್ರಯಾಕೆ ಮಾಡಬಾರ್ದು ಅಂಕಲ್‌?

ನಮಗೇನೂ ಗೊತ್ತಿಲ್ಲ ಅಂದ್ಕೋಬೇಡಿ. ಒಂದು ಸಿನಿಮಾ ನಿರ್ದೇಶಿಸಬೇಕು ಅಂತ ನಿಮ್ಗೆ ಆಸೆಯಿದೆ ಅಲ್ವಾ? ಧಾರಾಳವಾಗಿ ಡೈರೆಕ್ಷನ್‌ ಮಾಡಿ. ಅದಕ್ಕೂ ಮೊದಲು ಒಂದಷ್ಟು ನಾಟಕ ಮಾಡಿ. ನೀವು ಅದೇ ಉರುಟುರುಟು ಮತ್ತು ಒರಟೊರಟು ಮುಖದಲ್ಲಿ ರಂಗದ ಮೇಲೆ ಬಂದ್ರೆ-ಇಡೀ ರಂಗಭೂಮಿ ಖುಷಿಪಡುತ್ತೆ. ಆ ಖುಷಿ ನಿಮ್ಮ ‘ಯಜಮಾನ್ರು’-ಚಂದ್ರಲೇಖಾ ಮೇಡಂ ಇದಾರಲ್ಲ ಅವರ ಮೊಗದಲ್ಲಿ ಪ್ರತಿಫಲಿಸುತ್ತೆ. ನಿಮ್ಮ ಅನುಪಮ ಅಭಿನಯ ನೋಡಿ, ನಿಮ್ಮ ಮಕ್ಕಳು ಚಪ್ಪಾಳೆ ಹೊಡೀತಾರೆ. ಮೇಡಂ ಬೆರಗಾಗ್ತಾರೆ. ಭಾವುಕರಾಗ್ತಾರೆ. ಆ ಖುಷಿಯಲ್ಲೇ ಅವ್ರು ಕಣ್ತುಂಬಿಕೊಂಡರೆ ನೀವೂ ಕಣ್ಣು ಒರೆಸಿಕೊಳ್ತೀರಿ!

ಅದನ್ನೆಲ್ಲ ಕಂಡ ನಾವು ದೇವರಾಜ್‌ಗೆ ಒಳ್ಳೇದಾಗ್ಲಿ , ಅವ್ರುನೂರು ವರ್ಷ ಸಂತೋಷದಿಂದ ಬಾಳಲಿ ಅಂತ ಹಾರೈಸ್ತೀವಿ. ದೇವ್ರೇ, ಅಂಕಲ್‌ಗೆ ಒಳ್ಳೇದ್‌ ಮಾಡಪ್ಪಾ ಅಂದು ‘ ಕೈ’ಮುಗೀತೀವಿ. ಹೌದು ಅಂಕಲ್‌, ನಮ್ಮಿಂದ ಸಾಧ್ಯವಾಗೋದು ಇಷ್ಟೇ... ಹೇಳಿ, ಯಾವಾಗ ಸಿಗ್ತೀರಿ? ಎಲ್ಲಿ ಸಿಗ್ತೀರಿ?

ಪ್ರೀತಿ ಮತ್ತು ಪ್ರೀತಿಯಿಂದ

-ಎ.ಆರ್‌.ಮಣಿಕಾಂತ್‌

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada