»   » ಹಾರಿತು ನಾಲ್ಕು ಸಾವಿರ ಹಾಡುಗಳ ಸರದಾರ ಆನಂದ್‌ ಬಕ್ಷಿ ಪ್ರಾಣಪಕ್ಷಿ

ಹಾರಿತು ನಾಲ್ಕು ಸಾವಿರ ಹಾಡುಗಳ ಸರದಾರ ಆನಂದ್‌ ಬಕ್ಷಿ ಪ್ರಾಣಪಕ್ಷಿ

Posted By: Staff
Subscribe to Filmibeat Kannada

ನಲವತ್ತೆೈದು ವರ್ಷ ಕಾಲದ ಹಿಂದಿ ಸಿನಿಮಾ ಜೀವನದಲ್ಲಿ 4 ಸಾವಿರಕ್ಕೂ ಹೆಚ್ಚು ಹಾಡು ಹೊಸೆದ ಆನಂದ್‌ ಬಕ್ಷಿ ಅಜ್ಜ ಇನ್ನಿಲ್ಲ.

ಅನಾರೋಗ್ಯದ ಕಾರಣ ಕಳೆದ 6 ತಿಂಗಳಿಂದ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆನಂದ್‌ ಬಕ್ಷಿ ಶನಿವಾರ ರಾತ್ರಿ ಮೃತಪಟ್ಟರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಬಕ್ಷಿ ಅಗಲಿದ್ದಾರೆ. ಹಾಸಿಗೆ ಹಿಡಿದಿದ್ದಾಗಲೂ ಪೆನ್ನು- ಪೇಪರು ಹಿಡಿದು ಹಾಡು ಬರೆಯುತ್ತಿದ್ದುದು ಇವರ ಅಪರೂಪದ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

1961ರ ಜಂಗ್ಲಿ ಚಿತ್ರದ 'ಚಾಹೆ ಕೊಯಿ ಮುಝೆ ಜಂಗಲಿ ಕಹೇಂ" ಹಾಡಾಗಲೀ, 90ರ ದಶಕದ ಮೊಹ್ರಾ ಚಿತ್ರದ ತೂ ಚೀಸ್‌ ಬಡೀ ಹೈ ಮಸ್ತ್‌ ಮಸ್ತ್‌ ಗೀತೆಯಾಗಲೀ ಜನ ಮಾನಸದಲ್ಲಿ ಮನೆ ಮಾಡಿದೆ. ಸಂಗೀತದ ಜೊತೆಗೆ ಜನರ ಬದಲಾದ ಅಭಿರುಚಿಗೆ ತಕ್ಕಂತಹ ಹಾಡುಗಳನ್ನು ಇಳಿ ವಯಸ್ಸಲ್ಲೂ ರಚಿಸಿದ್ದು ಬಕ್ಷಿಯವರ ಸಾಧನೆ.

ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ 'ತುಝೆ ದೇಖಾ ತೋ ಯೇ" ಹಾಗೂ ತಾಲ್‌ ಚಿತ್ರದ 'ಇಶ್ಕ್‌ ಬಿನಾ ಕ್ಯಾ ಜೀನಾ ಯಾರೋಂ" ಹಾಡುಗಳ ಸಾಹಿತ್ಯಕ್ಕೆ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದ ಬಕ್ಷಿ ತಮ್ಮ ಜೀವಮಾನದಲ್ಲಿ ಬರೆದ ಹಾಡುಗಳ ಸಂಕ್ಯೆ 4 ಸಾವಿರಕ್ಕೂ ಹೆಚ್ಚು. ಮಿಲನ್‌, ಮಹಲ್‌, ದೋ ರಾಸ್ತೆ, ಹಿಮಾಲಯ್‌ ಕಿ ಗೋದ್‌ ಮೇ, ಮೊಹಬ್ಬತೇಂ, ಯಾದೇಂ, ಖಿಲೋನಾ, ಜೀವನ್‌ ಮೃತ್ಯು, ಮೊಹ್ರ ಇವು ಬಕ್ಷಿ ಸಾಹಿತ್ಯ ಒಳಗೊಂಡಿರುವ ಕೆಲವು ಪ್ರಮುಖ ಚಿತ್ರಗಳು.

ಆನಂದ್‌ ಬಕ್ಷಿ ಜೀವನ, ಸದಾ ನವನವೀನ
ರಾವಲ್ಪಿಂಡಿಯಲ್ಲಿ ಹುಟ್ಟಿದ ಬಕ್ಷಿ ಓದಿದ್ದು 8ನೇ ಕ್ಲಾಸಿನವರೆಗೆ. 3 ವರ್ಷ ಕಾಲ ಭೂಸೇನೆಯಲ್ಲಿ ಸೇವೆ. ಕನಸು ಮಾತ್ರ ಸಿನಿಮಾ ಜಗತ್ತಿನದು. ಮುಂಬಯಿಗೆ ಪಯಣ. ಬರವಣಿಗೆಯಲ್ಲಿ ಯಾರನ್ನೂ ಒಲಿಸಲು ವಿಫಲರಾದದ್ದಕ್ಕೆ ಬೇಸರ. ಮತ್ತೆ ಭೂಸೇನೆಗೆ ಭರ್ತಿ. ಮದುವೆ. ಒಂದು ಹೆಣ್ಣು ಮಗುವಿನ ಹುಟ್ಟು. ಮತ್ತೆ ಸಿನಿಮಾದಲ್ಲಿ ಒಂದು ಕೈನೋಡುವ ಬಯಕೆ. ಭೂಸೇನೆ ಕೆಲಸಕ್ಕೆ ಸಲಾಮು.

'ಭಲಾ ಆದ್ಮಿ" ಚಿತ್ರಕ್ಕೆ ಮೂರು ಹಾಡುಗಳಿಗೆ ಸಾಹಿತ್ಯ. ಭಗವಾನ್‌ ದಾದ ಇವುಗಳ ರಚನೆಗೆ ಕೊಟ್ಟ ಫೀಸು 150 ರುಪಾಯಿ. ಬ್ರೇಕ್‌ಗೆ ಚಾತಕ ಪಕ್ಷಿಯಾದ ಬಕ್ಷಿ ಕೊನೆಗೂ ರಾಜ್‌ಕಪೂರ್‌ ಅವರನ್ನು ಮುಟ್ಟಿದರು. ಮೆಹಂದಿ ಲಗಿ ಮೇರೇ ಹಾಥ್‌ ಸಿನಿಮಾ ಹಾಡುಗಳಿಗ ಸಾಹಿತ್ಯ ಬರೆಯುವ ಅವಕಾಶ. ಕಪೂರ್‌ ಹೆಸರಿನ ಜೊತೆ ಗುರುತಿಸಿಕೊಂಡದ್ದೇ ತಡ ಬಕ್ಷಿ ಮನೆಮಾತು. ಅವಕಾಶಗಳ ಮಹಾಪೂರ. ಖಾಲಿ ಬೀಳಲೇ ಇಲ್ಲ. ಕೈತುಂಬಾ ಕೆಲಸ. ಸಾಹಿತ್ಯ ಬರೆಯುವುದುದರ ಜೊತೆಗೆ ಕೆಲವು ಗೀತೆಗಳನ್ನು ಹಾಡಿದ್ದೂ ಉಂಟು.

ಬಕ್ಷಿ ಇನ್ನಿಲ್ಲ. ಆದರೆ ಇನ್ನು ಕನಿಷ್ಠ ವರ್ಷ ಕಾಲವಾದರೂ ಇವರು ಸಾಹಿತ್ಯ ಬರೆದಿರುವ ಹಾಡುಗಳಿರುವ ಸಿನಿಮಾಗಳು ತೆರೆ ಕಾಣಲಿವೆ. ಇದಕ್ಕೊಂದು ಉದಾಹರಣೆ- 'ಯೇ ರಸ್ತೆ ಹೈ ಪ್ಯಾರ್‌ ಕೆ".

Post Your Views?

English summary
Hindi cinema lyrist Anand Bakshi passes away

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada