»   » ತುಂಟಾಟ ರಿಲೀಸ್‌ ಮಾಡೋಕೆ ಪಟ್ಟ ಪಡಪಾಟಲು ಅಷ್ಟಿಷ್ಟಲ್ಲ.

ತುಂಟಾಟ ರಿಲೀಸ್‌ ಮಾಡೋಕೆ ಪಟ್ಟ ಪಡಪಾಟಲು ಅಷ್ಟಿಷ್ಟಲ್ಲ.

Posted By: Staff
Subscribe to Filmibeat Kannada

ಬೆಂಗಳೂರಿನ ಸಾಗರ್‌ ಥಿಯೇಟರ್‌ ಸ್ವರೂಪ ದೊಡ್ಡದಾದರೂ ಕೀರ್ತಿ ಚಿಕ್ಕದು. ಕಿರಿಕ್ಕು ಬಲು ದೊಡ್ಡದು. ಟಿಕೇಟು ಕೊಡೋ ವ್ಯವಸ್ಥೆಯೇ ಸರಿಯಾಗಿಲ್ಲಾ ರೀ ಅಂತ ತುಂಟಾಟದ ನಿರ್ದೇಶಕ ಇಂದ್ರಜಿತ್‌ ಅಲವತ್ತುಕೊಳ್ಳುತ್ತಾರೆ.

ತಾವು ಕಲಿತ ತುಂಟಾಟಗಳನ್ನೆಲ್ಲಾ ಈ ಚಿತ್ರವನ್ನು ತೆರೆ ಕಾಣಿಸಲು ಅವರು ಖರ್ಚು ಮಾಡಬೇಕಾಯಿತಂತೆ. ತುಂಟಾಟ ತೆರೆ ಕಂಡ ಖುಷಿಗಾಗಿ ನಡೆದ ಔತಣಕೂಟದಲ್ಲಿ ಇಂದ್ರಜಿತ್‌ ನಲಿವಿನ ನಡುವೆಯೇ ನೋವೂ ಇಣುಕುತ್ತಿತ್ತು. ಸಿನಿಮಾ ತೆಗೆಯೋದು ಎಂಥ ಕಷ್ಟ ಎಂಬುದರ ಅಭಿವ್ಯಕ್ತಿ ಅದಾಗಿತ್ತು.

ಹೊಸಬರೆಲ್ಲಾ ವೇಗವಾಗಿ ಓಡುತ್ತಿರುವ ಇವತ್ತಿನ ಪರಿಸ್ಥಿತಿಯಲ್ಲಿ ಮೊದಲು ಎದುರಾದ ದೊಡ್ಡ ಸಮಸ್ಯೆ ಥಿಯೇಟರಿನದು. ಅಪ್ಪು, ನಿನಗಾಗಿ ಭರಾಟೆ ಜೋರಾಗಿದೆ. ಎಚ್‌ಟುಓ ಸಾಧಾರಣವಾದರೂ, ಉಪ್ಪಿ ಇರುವುದರಿಂದ ಎತ್ತಂಗಡಿ ಮಾಡೋದಕ್ಕಾಗಲಿಲ್ಲ. ಜಮೀನ್ದಾರನ ಮೀಸೆ ಕೂಡ ಮಾಸಿಲ್ಲ. ಇಂಥಾ ಹೊತ್ತಲ್ಲಿ ನಿರ್ಮಾಪಕ ಬಾಲಚಂದ್ರ ಹಾಗೂ ಇಂದ್ರಜಿತ್‌ಗೆ ಕಂಡಿದ್ದು ಸಾಗರ್‌ ಥಿಯೇಟರ್ರು. ಕಂಪನಿ ಹಿಂದಿ ಸಿನಿಮಾ ದುಡ್ಡು ಮಾಡುತ್ತಾ ಸಾಗಿದ್ದಿದ್ದು ಇದೇ ಥಿಯೇಟರ್‌ನಲ್ಲಿ. ತುಂಟಾಟಕ್ಕೆ ಇಲ್ಲಿ ಜಾಗ ಪಡೆಯಲು ಸಾಕಷ್ಟು ಸೈಕಲ್‌ ಹೊಡೆಯಬೇಕಾಯಿತು.

ಥಿಯೇಟರ್‌ ಸಿಕ್ಕಿತು ಅಂತ ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಚಂದು ಓಡುತ್ತಿರುವಾಗ, ಸುದೀಪ್‌ ಚಹರೆ ಇರುವ ಇನ್ನೊಂದು ಚಿತ್ರದ ವಾಲ್‌ ಪೋಸ್ಟರುಗಳು ಕಾಣಕೂಡದು ಎಂಬ ಒತ್ತಡ. ಹೇಗೋ ಈ ಎಡರಿಂದಲೂ ಪಾರಾಗಿ ಚಿತ್ರ ತೆರೆ ಕಂಡಿತು. ಆದರೆ ಮೊದಲ ದಿನದ ಮೊದಲ ಆಟದಲ್ಲೇ ಗೋಳೋ ಗೋಳು. ಡಿಟಿಎಸ್‌ನಿಂದ ಮೋನೋ ಮಾಡೋಕೆ ಥಿಯೇಟರ್‌ನವರು ಗೋಳು ಗುಟ್ಟಿಸಿದರು. ಆಮೇಲೆ ಕರೆಂಟು ಹೋಗೋದು ಬರೋದು ಮಾಡಿತು. ಜನರಿಂದ ಪ್ರತಿರೋಧದ ಶಿಳ್ಳೆ.

ಹೀಗೆ ಕರೆಂಟು ಹೋಗಿ ಬಂದ ತಕ್ಷಣ, ಗಂಡಸಿನ ದನಿಯೂ ಹೆಂಗಸಿನಂತೆ ಕೇಳಿತು ಅಂತ ಪತ್ರಕರ್ತರೊಬ್ಬರು ಪುಗ್ಗ ಬಿಟ್ಟರು. ಎಲ್ಲರೂ ಗೊಳ್ಳೆಂದು ನಕ್ಕರು. ಅಂದಹಾಗೆ, ತುಂಟಾಟ ಟೀಂನಲ್ಲಿ ತುಂಬಾ ಲವಲವಿಕೆಯಿಂದ ಇದ್ದದ್ದು ಮಂಡ್ಯ ರಮೇಶ್‌. ಹೀರೋ ಆಗುತ್ತಿರುವ ಖುಷಿಯಲ್ಲಿ ಇಷ್ಟೊಂದು ಸಂತೋಷವಾಗಿದ್ದೀರಾ ಅಂತ ಕೇಳಿದರೆ, ಇಲ್ಲ ಸ್ವಾಮಿ, ತುಂಟಾಟದಲ್ಲಿ ನನ್ನ ಅಭಿನಯದ ಒಂದು ಶಾಟ್‌ಗೆ ಸೆನ್ಸಾರ್‌ನವರು ಕತ್ತರಿ ಹಾಕಿದ್ದಾರೆ. ನಾನೀಗ ಫೇಮಸ್ಸು ಅಂತ ನಕ್ಕರು. ಇವೆಲ್ಲವುಗಳ ನಡುವೆ ಇಂದ್ರಜಿತ್‌ ಮಾತ್ರ ನಗಲಿಲ್ಲ ! ವಾರ್ತಾ ಸಂಚಯ

English summary
Tuntata has to cross many hurdles to reach the audience : Indrajit !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada