»   » ಕಾರ್ಕಳದ ದಯಾ, ವಿರೋಧಿಗಳಿಗೆ ನಿರ್ದಯ

ಕಾರ್ಕಳದ ದಯಾ, ವಿರೋಧಿಗಳಿಗೆ ನಿರ್ದಯ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಎಚ್‌ಟಿ ಸಾಂಗ್ಲಿಯಾನಾ ಮಿಜೋರಾಂನಿಂದ ಕನ್ನಡ ನಾಡಿಗೆ ಬಂದವರು; ಸಾಹಸ- ಪ್ರಾಮಾಣಿಕತೆಯಿಂದ ದಂತ ಕತೆಯಾದವರು. ಹೊರನಾಡಿನಿಂದ ಬಂದು ಕನ್ನಡನಾಡಿನಲ್ಲಿ ಹೆಸರು ಮಾಡಿದ ಸಾಂಗ್ಲಿಯಾನ ಅವರ ಯಶೋಗಾಥೆಯಂತೆಯೇ ಕನ್ನಡಿಗನೊಬ್ಬ ಹೊರನಾಡಿನಲ್ಲಿ ತನ್ನ ಕೀರ್ತಿಪತಾಕೆ ಹಾರಿಸಿದ ಕಥೆಯಿದು. ಆತ-ಕಾರ್ಕಳದ ಹುಡುಗ ದಯಾನಾಯಕ್‌. ಮುಂಬಯಿಯಲ್ಲಿ ದಯಾನಾಯಕ್‌ರದೇ ಸುದ್ದಿ. ಮಹಾನಗರದ ತುಂಬಾ ದಯಾನಾಯಕ್‌ ಕುರಿತ ದಂತ ಕತೆಗಳು.

ಪೊಲೀಸ್‌ ಅಧಿಕಾರಿ ದಯಾನಾಯಕ್‌ ಎನ್‌ಕೌಂಟರ್‌ಗಳಿಗೆ ಹೆಸರಾದವರು. ಭೂಗತಲೋಕದ ವ್ಯಕ್ತಿಗಳ ಪಾಲಿಗಿಂತೂ ದಯಾನಾಯಕ್‌ ಹೆಸರು ಸಿಂಹಸ್ವಪ್ನ . ಹೆಸರಿನಲ್ಲಿ ದಯೆಯಿದ್ದರೂ, ಸಮಾಜಘಾತುಕರ ಪಾಲಿಗೀ ನಾಯಕ ಕಠೋರ.

ಸಬ್‌ ಇನ್‌ಸ್ಪೆಕ್ಟರ್‌ ದಯಾನಾಯಕ್‌ರ ವೃತ್ತಿ ಜೀವನ ಈಗ ಬಾಲಿವುಡ್‌ ಲೋಕಕ್ಕೆ ಸ್ಫೂರ್ತಿಯಾಗಿದೆ. 83 ಕ್ರಿಮಿನಲ್‌ಗಳನ್ನು ಗುಂಡೇಟಿನಿಂದ ಇಲ್ಲವಾಗಿಸಿದ ದಯಾನಾಯಕ್‌ ಕುರಿತು ನಾಲ್ಕು ಹೊಸ ಚಿತ್ರಗಳು ಸಾಲಾಗಿ ನಿರ್ಮಾಣವಾಗಲಿವೆ. ಇಂಡಿಯನ್‌ ಏರ್‌ಲೈನ್ಸ್‌ ಹೈಜಾಕ್‌ ಪ್ರಕರಣದ ಭರತ್‌ ಶಾ ಕೇಸಿನಲ್ಲಿ ನಜೀಂ ರಜ್ವಿಯನ್ನು ಬಂಧಿಸಿದ್ದೂ ಸೇರಿದಂತೆ 250 ಪ್ರಮುಖ ಆರೋಪಿಗಳನ್ನು ಬಂಧಿಸಿದ ಖ್ಯಾತಿ ದಯಾ ನಾಯಕ್‌ಗೆ ಸಲ್ಲುತ್ತದೆ. ಎನ್‌. ಚಂದ್ರ ನಿರ್ದೇಶನದ ಸಿನೆಮಾ ‘ಕಗಾರ್‌’, ಮಧುರ್‌ ಭಂಡಾರ್‌ಕಾರ್ಸ್‌ ಚಿತ್ರ ‘ಆನ್‌’, ರಾಜ್‌ಕುಮಾರ್‌ ಸಂತೋಷಿ ಚಿತ್ರ ‘ಖಾಕೀ’ ಹಾಗೂ ರಾಮ್‌ಗೋಪಾಲ್‌ ವರ್ಮಾ ಚಿತ್ರ ‘ಅಬ್‌ ತಕ್‌ ಚಪ್ಪನ್‌!’

‘ಆನ್‌’ ಚಿತ್ರದಲ್ಲಿ ಎನ್‌ಕೌಂಟರ್‌ ಪೊಲೀಸ್‌ ಆಗಿ ಅಪ್ಪಾ ನಾಯಕ್‌ ಪಾತ್ರದಲ್ಲಿ ಸುನೀಲ್‌ ಶೆಟ್ಟಿ ನಟಿಸಲಿದ್ದಾರೆ. ಈಗಾಗಲೇ ತೆರೆ ಕಂಡಿರುವ ರಾಮ್‌ಗೋಪಾಲ್‌ ವರ್ಮಾ ಚಿತ್ರಗಳಾದ ‘ಸತ್ಯ’, ‘ಶೂಲ್‌’ ಮತ್ತು ‘ಕಂಪೆನಿ’ ಚಿತ್ರಗಳಿಗೆ ದಯಾ ನಾಯಕ್‌ ಪ್ರಮುಖ ಮಾಹಿತಿದಾರರಾಗಿದ್ದಾರಂತೆ.

‘ಕಗಾರ್‌’ ಚಿತ್ರವಂತೂ ಸಂಪೂರ್ಣವಾಗಿ ದಯಾನಾಯಕ್‌ ಜೀವನವನ್ನೇ ಆಧರಿಸಿದೆ. ವರ್ಮಾ ಕಾರ್ಪೊರೇಷನ್‌ನ ‘ಅಬ್‌ ತಕ್‌ ಚಪ್ಪನ್‌’ ಚಿತ್ರವೂ ಹೆಚ್ಚು ಕಮ್ಮಿ ದಯಾ ಜೀವನಕ್ಕೆ ಹತ್ತಿರವಾಗಿದ್ದು , ಶಿಮ್ಮಿತ್‌ ಅಮೀನ್‌ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.

ಕಡೆಯದಾಗಿ - ಚಿತ್ರಲೋಕದ ಈ ವಿಚಿತ್ರಗಳಿಂದಾಚೆಗೆ ದಯಾ ನಾಯಕ್‌ ಜೀವನ ಕುರಿತು ಪತ್ರಕರ್ತರೊಬ್ಬರು ಪುಸ್ತಕವೊಂದನ್ನು ಬರೆಯುತ್ತಿದ್ದಾರಂತೆ. ಅಂದಹಾಗೆ, ದಯಾನಾಯಕ್‌ ಕುರಿತು ಸಿನಿಮಾ ತಯಾರಿಕೆಯಲ್ಲಿ ಸ್ಯಾಂಡಲ್‌ವುಡ್‌ ಕೂಡ ಹಿಂದೆ ಬಿದ್ದಿಲ್ಲ . ‘ದಯಾ- ಪೊಲೀಸ್‌ ಆಫೀಸರ್‌’ ಎನ್ನುವ ಚಿತ್ರ ತಯಾರಿಕೆಯ ಸಿದ್ಧತೆ ನಡೆಯುತ್ತಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada