»   » ಮಾನ್ಯ ವಿಲನ್‌ ಪಾತ್ರ ಮಾಡಿದ್ರೆ ನೀವೂ ಒಪ್ಪುವಿರಾ?

ಮಾನ್ಯ ವಿಲನ್‌ ಪಾತ್ರ ಮಾಡಿದ್ರೆ ನೀವೂ ಒಪ್ಪುವಿರಾ?

Subscribe to Filmibeat Kannada

ಒಬ್ಬೊಬ್ಬರಿಗೆ ಒಂದೊಂದು ಹುಚ್ಚು! ನಟಿ ಪ್ರೇಮಾಗೆ ಹುಚ್ಚಿ ಪಾತ್ರದಲ್ಲಿ ನಟಿಸುವ ಹುಚ್ಚಿದ್ದಂತೆ! ಆ ವಿಷಯ ಬಿಡಿ; ನಮ್ಮ ಮಾನ್ಯ ಅವರಿಗೀಗ ವಿಲನ್‌ ಪಾತ್ರದಲ್ಲಿ ನಟಿಸೋ ಆಸೆ ಯಾಕೋ ಬಂದು ಬಿಟ್ಟಿದೆ! ‘ಅಂತಹ ಪಾತ್ರಗಳಿದ್ದರೇ, ದಯವಿಟ್ಟು ನನ್ನ ಮರೀಬೇಡಿ’ ಅಂಥ ಈಯಮ್ಮ ನಿರ್ಮಾಪಕರು, ನಿರ್ದೇಶಕರನ್ನು ಕೇಳಿಕೊಂಡಿದ್ದಾರೆ! ಇಂಥ ನಟಿ ಕೋಟಿಗೊಬ್ಬಳು ಬಿಡಿ!

ನಟಿ ಮಣಿಯರು ಗ್ಲಾಮರ್‌ ಪಾತ್ರಗಳನ್ನು ಅಥವಾ ಹಾಸ್ಯಪಾತ್ರಗಳನ್ನು ಬಯಸೋದುಂಟು. ಕೆಲವರು ಐಟಂ ಸಾಂಗ್‌ ಬೇಕು ಅನ್ನೋದುಂಟು. ಆದರೆ ಸೌಮ್ಯ ಮುಖದ, ಬೊಗಸೆ ಕಂಗಳ ಮಾನ್ಯ ಮೇಡಂಗೆ ವಿಲನ್‌ ಪಾತ್ರ ಯಾಕಂತೆ ಅನ್ನೋ ಪ್ರಶ್ನೆಗೆ ಉತ್ತರಸಿಕ್ಕಿಲ್ಲ. ತಮ್ಮ ಇತ್ತೀಚಿನ ‘ಈ ಪ್ರೀತಿ ಒಂಥರಾ’ ಸಿನಿಮಾ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಮಾನ್ಯ, ಈ ಚಿತ್ರದಲ್ಲಿನ ವಿಲಕ್ಷಣ ಪಾತ್ರದ ಬಗ್ಗೆ ಹೇಳಿದರು. ವಿಲನ್‌ ಆಗೋ ಆಸೆಯನ್ನು ವ್ಯಕ್ತಪಡಿಸಿದರು.

‘ಧರ್‌’ ಚಿತ್ರದಲ್ಲಿ ಶಾರೂಖ್‌ ಖಾನ್‌, ‘ಗುಪ್ತ್‌ ’ಚಿತ್ರದಲ್ಲಿ ಕಾಜಲ್‌ ನಟಿಸಿದಂಥ ಪಾತ್ರಗಳು ನನಗಿಷ್ಟ. ಮುಂಬರುವ ದಿನಗಳಲ್ಲಿ ಅಂಥ ಪಾತ್ರಗಳು ಬಂದರೆ ಖುಷಿಯಿಂದ ಒಪ್ಪಿಕೊಳ್ಳುತ್ತೇನೆ ಅಂದರು.

ವರ್ಷ, ಬೆಳ್ಳಿಬೆಟ್ಟ, ಶಾಸ್ತ್ರೀ ಮತ್ತಿತರ ಚಿತ್ರಗಳಲ್ಲಿ ನಟಿಸಿರೋ ಈ ಮಾನ್ಯಗೆ ಎಲ್ಲೆಡೆ ಮಾನ್ಯತೆ ಸಿಕ್ಕಿದೆ. ಈಗ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಅವರು ಸಕತ್‌ ಬ್ಯುಸಿಯಾಗಿದ್ದಾರಂತೆ. ಕಲಾಭವನ್‌ ಮಣಿ ಜೊತೆ ಮಲಯಾಳಂ ಚಿತ್ರದಲ್ಲಿ ಪತ್ರಕರ್ತೆ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಇನ್ನೊಂದು ಮಲಯಾಳಿ ಚಿತ್ರಕ್ಕಾಗಿ ಎರಡು ವಾರ ಲಂಡನ್‌ಗೆ ಹೊರಟಿದ್ದಾರೆ.

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada