For Quick Alerts
  ALLOW NOTIFICATIONS  
  For Daily Alerts

  ಪುಟಿವ ಪುನೀತ್‌ ತುಟಿ ಬಿಚ್ಚಿದ ಘಳಿಗೆ

  By Staff
  |
  • ಮಹಾಂತೇಶ ಬಹಾದುಲೆ
  • ನಿಮ್ಮ ಐದು ಚಿತ್ರಗಳು ಸಾಲಾಗಿ ಯಶಸ್ಸು ಕಾಣಲು ಮುಖ್ಯ ಕಾರಣ ಏನು?
  ಒಂದೇ ಮಾತಿನಲ್ಲಿ ಹೇಳುವುದು ಸ್ವಲ್ಪ ಕಷ್ಟ. ಅತ್ಯುತ್ತಮ ಚಿತ್ರಕಥೆ, ಪ್ರತಿಭಾವಂತ ನಿರ್ದೇಶಕರು, ನನ್ನ ಕುಟುಂಬದ ಮಾರ್ಗದರ್ಶನ ಹಾಗೂ ಪ್ರೇಕ್ಷಕರ ಬೆಂಬಲ ಎಲ್ಲವೂ ಸೇರಿ ನಾನಿಂದು ಯಶಸ್ಸು ಕಂಡಿದ್ದೇನೆ.
  • ಈ ಎಲ್ಲ ಚಿತ್ರಗಳಲ್ಲೂ ನಿಮ್ಮ ಪಾತ್ರ ಬಹುತೇಕ ಒಂದೇ ತೆರನಾಗಿದೆ. ಡ್ಯಾನ್ಸ್‌, ಫೈಟ್‌ಗಳೇ ಹೆಚ್ಚು ವಿಜೃಂಭಿಸಿವೆ. ವೈವಿಧ್ಯತೆ ಕೊಡೋಕೆ ಆಗಲಿಲ್ಲ ಎಂಬ ಭಾವ ನಿಮ್ಮನ್ನು ಕಾಡುತ್ತಿಲ್ಲವೇ?
  ಇಲ್ಲಿಯವರೆಗೆ ಒಂದೇ ರೀತಿಯ ಪಾತ್ರಗಳು ಸಿಕ್ಕಿದ್ದು ನಿಜ. ಆದರೆ ಆ ಪಾತ್ರಗಳಿಗೆ, ಸಂದರ್ಭಗಳಿಗೆ ಏನು ಕೊಡಬೇಕಾಗಿದೆಯೋ ಅದನ್ನು ಕೊಡ್ತಾ ಇದೀನಿ. ಡ್ಯಾನ್ಸ್‌ ಫೈಟ್‌ಗಳು ಮನರಂಜನೆಯ ಒಂದು ಭಾಗವೇ ಅಲ್ಲವೇ? ವೈವಿಧ್ಯಮಯ ಪ್ರಯೋಗಗಳಿಗೆ ನನ್ನನ್ನು ತೆರೆದುಕೊಳ್ಳಬೇಕೆಂಬ ಇಚ್ಛೆ ನನಗೂ ಇದೆ. ಇಷ್ಟವಾಗುವಂತಹ ಕಥೆ ಸಿಕ್ಕರೆ ಖಂಡಿತ ಬೇರೆ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತೇನೆ. ನಾನೀಗ ನಾಯಕನಾಗಿ ನಟಿಸಿದ್ದು ಕೇವಲ ಐದೇ ಚಿತ್ರಗಳಲ್ಲಿ. ಪಯಣಿಸಬೇಕಾದ ಹಾದಿ ಇನ್ನೂ ತುಂಬ ದೂರ ಇದೆ. ಮುಂದೆ ಈ ಕುರಿತು ಯೋಚಿಸುತ್ತೇನೆ.
  • ನಿಮ್ಮ ಐದು ಚಿತ್ರಗಳಲ್ಲಿ ಎಲ್ಲವೂ ಪುನೀತ್‌ಮಯ. ಅಲ್ಲಿ ಇತರ ಪಾತ್ರಗಳು ಗೌಣವಾಗಿರುತ್ತವೆ ಎಂಬ ಮಾತಿದೆ?
  ಕಥಾವಸ್ತುಗಳೇ ಆ ಥರ ಇರುವಾಗ ನಾನಾದರೂ ಏನು ಮಾಡಲಿ. ಅದನ್ನು ತೆರೆಯ ಮೇಲೆ ಹಾಗೆಯೇ ತೋರಿಸಬೇಕಾಗುತ್ತದೆ. ಇಷ್ಟಕ್ಕೂ ಆ ಚಿತ್ರಕಥೆಗಳನ್ನು ನಾನೊಬ್ಬನೇ ಆಯ್ಕೆಮಾಡಿಕೊಳ್ಳುವುದಿಲ್ಲ. ನನ್ನ ಕುಟುಂಬದವರೆಲ್ಲರೂ ಸೇರಿ ನಿರ್ಧರಿಸುತ್ತಾರೆ. ‘ಆಕಾಶ್‌’ ಚಿತ್ರದಲ್ಲಿ ಹಾಗೇನಿಲ್ಲ. ಅಲ್ಲಿ ಎಲ್ಲ ಪಾತ್ರಗಳಿಗೂ ಮಹತ್ವ ಕೊಡಲಾಗಿದೆ.
  • ಇಲ್ಲಿಯವರೆಗೆ ಯಾವುದೇ ನಾಯಕಿಯ ಹೆಸರಿನ ಜತೆಯೂ ನಿಮ್ಮ ಹೆಸರು ಕೇಳಿ ಬಂದಿಲ್ಲ. ಇಂಥ ವಿವಾದಗಳಿಂದ ದೂರವಿರಲು ನಿಮಗೆ ಅದ್ಹೇಗೆ ಸಾಧ್ಯವಾಗಿದೆ?
  ವಿವಾದಗಳಿಂದ ದೂರ ಇರುತ್ತೇನೆ ಅಂತ ಅಲ್ಲ. ನಾನಿರುವುದೇ ಹೀಗೆ. ನಾಯಕಿಯರು ಅಂದರೆ ಅವರೂ ಕಲಾವಿದರೆ. ನಾನು ಅವರನ್ನು ಗೌರವಿಸುತ್ತೇನೆ. ನಾನು ಹೇಗೆ ಅಭಿನಯಿಸಲು ಬರುತ್ತೇನೊ, ಅವರೂ ಹಾಗೆಯೇ ಅಭಿನಯಿಸಲು ಬಂದಿರುತ್ತಾರೆ. ಇಷ್ಟಕ್ಕೂ ನಾನು ಅವರೊಂದಿಗೆ ಅವಶ್ಯಕತೆಗಿಂತಲೂ ಹೆಚ್ಚು ಮಾತನಾಡುವುದಿಲ್ಲ. ಆ ಪರಿಪಾಠವೂ ನನಗಿಲ್ಲ.
  • ಇಷ್ಟೆಲ್ಲ ಬೆಳೆಯಲು ಪತ್ರಕರ್ತರೂ ಕಾರಣ ಅಂತೀರಾ, ಆದರೆ ಅವರಿಂದ ದೂರ ಇರೋಕೆ ಇಷ್ಟಪಡ್ತೀರಾ ಎಂಬ ಆರೋಪವಿದೆಯಲ್ಲ?
  ಇದು ಖಂಡಿತ ಸುಳ್ಳು. ನಾನು ಯಾರನ್ನೂ ದ್ವೇಷಿಸುವುದಿಲ್ಲ. ಚಿತ್ರದ ಮುಹೂರ್ಥಕ್ಕೆ, ಕ್ಯಾಸೆಟ್‌ ಬಿಡುಗಡೆಗೆ ಹಾಗೂ ಚಿತ್ರ ಬಿಡುಗಡೆಗೆ ಮುನ್ನ ಪತ್ರಿಕಾಗೋಷ್ಠಿ ನಡೆಸುತ್ತೇನೆ. ಆದರೆ ಚಿತ್ರೀಕರಣದ ಸ್ಥಳಗಳಲ್ಲಿ ವಿಡಿಯೋ ಕ್ಯಾಸೆಟ್‌ ಮಾಡುವುದಕ್ಕಾಗಲಿ, ಸುದ್ದಿಗೋಷ್ಠಿಗಳನ್ನು ನಡೆಸುವುದಕ್ಕಾಗಲಿ ಅವಕಾಶ ಕೊಡುವುದಿಲ್ಲ. ಏಕೆಂದರೆ ಚಿತ್ರದ ಕಥಾವಸ್ತು ಗೌಪ್ಯವಾಗಿರಲಿ ಎಂದು. ಇದು ನಮ್ಮ ಕುಟುಂಬದವರು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಪದ್ಧತಿಯಷ್ಟೆ.
  • ನಿಮ್ಮ ಕನಸಿನ ಪಾತ್ರ ಯಾವುದು?
  ಅಪ್ಪಾಜಿ, ಶಿವಣ್ಣ, ರಾಘಣ್ಣ ಹಾಗೂ ನಾನು ಸೇರಿ ಒಂದೇ ಚಿತ್ರದಲ್ಲಿ ಅಭಿನಯಿಸಬೇಕು ಎಂಬ ಇಚ್ಛಯಿದೆ. ಅದರ ಬಗ್ಗೆ ಇನ್ನೂ ಮಾತುಕತೆ ನಡೆದಿಲ್ಲ. ಆದರೆ ಅಂಥ ಯೋಜನೆಯಂತೂ ಇದೆ.
  • ಮದುವೆಯಾದ ನಂತರ ಬದುಕು ಬದಲಾಗಿದೆ ಅಂತ ಅನಿಸಿದೆಯಾ?
  ಮದುವೆಯಾದ ಮೇಲೆ ಬದುಕಿನಲ್ಲಿ ಖಂಡಿತ ಹೊಸತನ ಕಂಡಿದ್ದೇನೆ. ನನ್ನ ಪತ್ನಿ ನನ್ನ ಬೆಸ್ಟ್‌ ಫ್ರೆಂಡ್‌. ಈ ವೃತ್ತಿಗೆ ಯಾವಾಗಲೂ ಸಹಕಾರ ನೀಡುತ್ತಾಳೆ. ಮಗಳಂತೂ ನನಗೆ ಪ್ರೇರಣೆಯ ಸೆಲೆ. ನನ್ನ ಬಣ್ಣದ ಬದುಕಿಗೆ ಕುಟುಂಬ ಇನ್ನಷ್ಟು ರಂಗು ತಂದಿದೆ.(ಸ್ನೇಹಸೇತು : ವಿಜಯ ಕರ್ನಾಟಕ)
  Post your views

  ಇದನ್ನೂ ಓದಿ :
  ‘ಆಕಾಶ’ದೆತ್ತರಕ್ಕೆ ಪುನೀತ್‌!

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X