twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯೋತ್ಸವದ ಬೆಳಕಲ್ಲಿ ಭರಣಾ ಸಂಕಲ್ಪ

    By Staff
    |

    *ದಟ್ಸ್‌ಕನ್ನಡ ಬ್ಯೂರೋ

    ರಾಜ್ಯೋತ್ಸವ ಪ್ರಶಸ್ತಿ ಪಡೆದ ಖುಷಿಯಲ್ಲಿರುವ ನಾಗಾಭರಣ ‘ಚಿಗುರಿದ ಕನಸು’ ಚಿತ್ರದ ಸೋಲನ್ನು ಜೀರ್ಣಿಸಿಕೊಳ್ಳಲಾಗದ ನೋವಿನಲ್ಲೂ ಒಂದು ಸಾತ್ವಿಕ ಠರಾವು ಮಾಡಿಕೊಂಡಿದ್ದಾರೆ. ಅದೇನೆಂದರೆ- ಇನ್ನು ಮುಂದೆ ಅವರು ನಿರ್ದೇಶಿಸುವ ಕಿರುತೆರೆ ಧಾರಾವಾಹಿಯ ಪ್ರತಿ ಎಪಿಸೋಡಿನ ಚಿತ್ರೀಕರಣವನ್ನು ಖುದ್ದು ನಿಂತು ನಿಭಾಯಿಸುವುದು.

    ಈಚೆಗೆ ‘ಕಿರುತೆರೆಯಲ್ಲಿ ನಾಗಾಭರಣ’ ಕ್ಲಿಕ್ಕಾದ ಮಟ್ಟಿಗೆ ಹಿರಿತೆರೆಯಲ್ಲಿ ಆಗಲಿಲ್ಲ. ‘ನೀಲಾ’ ತಾಚೊಂಡಿತು. ‘ಸಿಂಗಾರೆವ್ವ ಮತ್ತು ಅರಮನೆ’ ಬೋರಲಾಯಿತು. ಆದರೆ, ‘ಚಿಗುರಿದ ಕನಸು’ ಚಿತ್ರವನ್ನು ಭರಣಾ ತಮ್ಮೆಲ್ಲ ಚಿತ್ರವಿದ್ಯೆಯನ್ನು ಮುಷ್ಟಿಗೆ ತಂದುಕೊಂಡು ನಿರ್ದೇಶಿಸಿದ್ದರು. ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಸೆಳಕಿತ್ತು. ಹೊಸ ನಾಯಕಿಯರ ಹಸನಾದ ಮುಖಭಾವಗಳಿದ್ದವು. ಎಲ್ಲಕ್ಕೂ ಮಿಗಿಲಾಗಿ ಕವಿ ಹೃದಯದ ಜಯಂತ ಕಾಯ್ಕಿಣಿ ಸಂಭಾಷಣೆ ಇತ್ತು. ಹಾಡುಗಳಲ್ಲಿ ಸಾಹಿತ್ಯದ ಸೊಗಸಿತ್ತು. ಇಷ್ಟೆಲ್ಲಕ್ಕೂ ಶಿವರಾಮ ಕಾರಂತರ ಕಾದಂಬರಿಯ ಅಡಿಪಾಯವಿತ್ತು.

    ಎಲ್ಲ ನಿರೀಕ್ಷೆಗಳನ್ನು ತಲೆಕೆಳಗಾಗಿಸಿ ಚಿತ್ರ ಸೋತದ್ದು ಯಾಕೆ ? ಹಾಗಂತ ಕಾಯ್ಕಿಣಿ, ನಾಗಾಭರಣ ಕೂತು ಚರ್ಚಿಸಿದ್ದಾಗಿದೆ. ಜನರ ಅಭಿರುಚಿಯ ಬಗೆಗಿನ ಜಿಜ್ಞಾ ಸೆಯಲ್ಲೇ ಚರ್ಚೆ ಕೊನೆಗೊಂಡಿತಂತೆ. ಚಿತ್ರದಲ್ಲಿ ಮನರಂಜನೆಯ ಎಲಿಮೆಂಟು ಇಲ್ಲದಿರುವುದೇ ಸೋಲಿಗೆ ಕಾರಣ ಅಂತ ಪ್ರೇಕ್ಷಕ ಮಹಾಪ್ರಭು ರಿಜೆಕ್ಟ್‌ ಸರ್ಟಿಫಿಕೇಟನ್ನು ಕೊಡುತ್ತಿದ್ದಾನೆ.

    ಸದ್ಯಕ್ಕೆ ಭರಣ ಬಿಡುವಾಗಿದ್ದರೂ, ಅವರ ಕೈಯಲ್ಲೊಂದು ಮಕ್ಕಳ ಕತೆಯಿದೆ. ಯಾರಾದರೂ ನಿರ್ಮಾಪಕರು ಮುಂದೆ ಬಂದರೆ ಅದನ್ನು ಬೇಗ ಚೆನ್ನಾದ ಚಿತ್ರವನ್ನಾಗಿಸುವುದು ಅವರ ಕನಸು. ಗೆಳೆಯರ ಬಳಗದ ಜೊತೆ ಈ ಪ್ರಾಜೆಕ್ಟಿನ ಬಗ್ಗೆ ಭರಣ ಚರ್ಚೆಯಲ್ಲಿ ತೊಡಗಿದ್ದು, ಎಲ್ಲರೂ ಸೇರಿ ಹಣ ಹಾಕಲು ಮುಂದಾದರೂ ಸಿನಿಮಾ ಬೇಗ ಸೆಟ್ಟೇರುವುದು ಗ್ಯಾರಂಟಿ. ಈ ಸಿನಿಮಾ ಮುಗಿಯುವವರೆಗೆ ಕಿರುತೆರೆ ಕಡೆ ತಲೆ ಹಾಕುವುದಿಲ್ಲ ಎಂದಿರುವ ನಾಗಾಭರಣ, ಆ ನಂತರ ಕಿರುತೆರೆಯ ಧಾರಾವಾಹಿಯನ್ನು ಬಲು ಅಚ್ಚುಕಟ್ಟಾಗಿಸುವ ಸಂಕಲ್ಪ ಮಾಡಿದ್ದಾರೆ. ಅಂತೂ ಭರಣಾ ಬದಲಾಗಿದ್ದಾರೆ.

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Saturday, April 20, 2024, 8:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X