»   » ನಾಗಾಭರಣಗೆ 50 : ಜನವರಿಯಲ್ಲಿ ಸಿನಿಮಾ- ನಾಟಕೋತ್ಸವ

ನಾಗಾಭರಣಗೆ 50 : ಜನವರಿಯಲ್ಲಿ ಸಿನಿಮಾ- ನಾಟಕೋತ್ಸವ

Subscribe to Filmibeat Kannada

ಬೆಂಗಳೂರು : ರಂಗಕರ್ಮಿ ಹಾಗೂ ಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಅವರಿಗೆ 2004, ಜನವರಿ 23ನೇ ತಾರೀಕು 50 ವರ್ಷ ತುಂಬಲಿದ್ದು, ಅವರ ಸ್ನೇಹಿತರು ಈ ಸಂದರ್ಭವನ್ನು ಒಂದು ಉತ್ಸವವನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ.

ಮೌನ ಆಂದೋಲನ ರೂಪದ ಭರಣಾ ಹುಟ್ಟುಹಬ್ಬದ ಆಚರಣೆ ಹೆಸರು ‘ಭರಣ- 50’. ನಾಗಾಭರಣಾ ನಿರ್ದೇಶಿಸಿದ ಚಲನಚಿತ್ರ ಮತ್ತು ನಾಟಕಗಳನ್ನು ಭರಣಾ- 50 ಉತ್ಸವದಲ್ಲಿ ಪ್ರದರ್ಶಿಸಲಾಗುವುದು ಎಂದು ನಟ ಸುಂದರರಾಜ್‌ ಸುದ್ದಿಗಾರರಿಗೆ ತಿಳಿಸಿದರು.

ಗ್ರಾಮೀಣ ಬದುಕು ಹಾಗೂ ನಮ್ಮ ಸಂಸ್ಕೃತಿಯ ಸೊಗಡನ್ನು ಹೂರಣವಾಗಿ ಉಳ್ಳ ನಾಗಾಭರಣ ಚಿತ್ರಗಳು ಸಿನಿಮಾ ಲೋಕದಲ್ಲಿ ಹೊಸ ವ್ಯಾಕರಣವನ್ನೇ ಬರೆದವು. ಇಂಥಾ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಭರಣಾ ಜಗತ್ತಿನಲ್ಲೇ ಹೊಸ ಆಯಾಮ ಸೃಷ್ಟಿಸಿದವು ಎಂದು ಸುಂದರರಾಜ್‌ ಹೊಗಳಿದರು.

ರಾಜ್ಯದ ವಿವಿಧೆಡೆ ಭರಣಾ ಚಿತ್ರಗಳು ಹಾಗೂ ನಾಟಕಗಳನ್ನು ಪ್ರದರ್ಶಿಸುವ ಉದ್ದೇಶವಿದ್ದು, ಮೊದಲ ಹಂತವಾಗಿ ಜನವರಿ 9 ರಿಂದ 23 ರವರೆಗೆ ಬೆಂಗಳೂರಿನಲ್ಲಿ ಪ್ರದರ್ಶನ ನಡೆಯಲಿದೆ. ಆಸ್ಫೋಟ, ನಾಗಮಂಡಲ, ವಿಮೋಚನೆ, ಚಿನ್ನಾರಿ ಮುತ್ತ, ಜನುಮದ ಜೋಡಿ, ಚಿಗುರಿದ ಕನಸು, ಪ್ರೇಮಾಗ್ನಿ, ನೀಲಾ, ಸಿಂಗಾರೆವ್ವ ಮತ್ತು ಅರಮನೆ ಮುಂತಾದ 14 ಪ್ರಶಸ್ತಿ ಪುರಸ್ಕೃತ ಚಿತ್ರಗಳನ್ನು ಜನವರಿ 9 ರಿಂದ 14 ರವರೆಗೆ ನಗರದ ಪುಟ್ಟಣ್ಣ ಕಣಗಾಲ್‌ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗುವುದು. ಬೆಳಗ್ಗೆ 10.30, ಮಧ್ಯಾಹ್ನ 1.30 ಹಾಗೂ ಸಂಜೆ 4.30ಕ್ಕೆ ಚಿತ್ರಗಳ ಪ್ರದರ್ಶನವಿರಲಿದ್ದು, ಮಾಮೂಲಿಯಂತೆ ಪ್ರೇಕ್ಷಕರು ಕೌಂಟರ್‌ಗಳಲ್ಲಿ ಟಿಕೇಟ್‌ ಖರೀದಿಸಬಹುದು. ರಾತ್ರಿ 7.30ಕ್ಕೆ ನಡೆಯಲಿರುವ ಪ್ರದರ್ಶನ ಗಣ್ಯರು ಮತ್ತು ವಿಶೇಷ ಆಹ್ವಾನಿತರಿಗೆ ಮಾತ್ರ ಮೀಸಲಾಗಿರುತ್ತದೆ ಎಂದು ಸುಂದರರಾಜ್‌ ತಿಳಿಸಿದರು.

ಜನವರಿ 20ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ತಬರನ ಕತೆ, ಸಂಗ್ಯಾ ಬಾಳ್ಯಾ ಮತ್ತು ಸತ್ತವರ ನೆರಳು ನಾಟಕಗಳ ಪ್ರದರ್ಶನವಿರುತ್ತದೆ. 23ನೇ ತಾರೀಕು ಅಭಿನಂದನಾ ಸಮಾರಂಭ ನಡೆಯಲಿದ್ದು, ನಾಗಾಭರಣಾ ಅವರಿಗೆ ‘ಭರಣಾ- 50’ ಅಭಿನಂದನಾ ಗ್ರಂಥ ಅರ್ಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿದ್ದ ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿ ಡಿ.ಕೆ.ಚೌಟ ಹೇಳಿದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada