twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರರಂಗ-2003 : ಹಳಬರು ಸುಣ್ಣ, ಹೊಸಬರಿಗೆ ಬಣ್ಣ

    By Staff
    |
    • ವಿಶಾಖ, ರಘು

    ವಿಷ್ಣುವರ್ಧನ್‌, ಶಿವರಾಜ್‌ಕುಮಾರ್‌, ದೇವರಾಜ್‌, ಶಶಿಕುಮಾರ್‌, ರಮೇಶ್‌- ಇವರೆಲ್ಲರ ಸ್ವಯಂ ನಿವೃತ್ತಿಯ ಸಮಯ ಸನ್ನಿಹಿತವಾಯಿತಾ? 2003ನೇ ಇಸವಿಯ ಸಿನಿಮಾ ಫಲಿತಾಂಶಗಳನ್ನು ಗಮನಿಸಿದರೆ ಇಂಥದೊಂದು ದೊಡ್ಡ ಆತಂಕದ ಪ್ರಶ್ನೆ ಇದಿರಾಗುತ್ತದೆ.

    ರಾಜಾ ನರಸಿಂಹ, ಹೃದಯವಂತ ಚಿತ್ರಗಳನ್ನು ವಿಷ್ಣು ಅಭಿಮಾನಿಗಳು ಕೂಡ ಮುಗಿಬಿದ್ದು ನೋಡಲಿಲ್ಲ. ಆ್ಯಕ್ಷನ್ನಿನ ಡಾನ್‌, ಸೀತಾರಾಂ ಕಾರಂತರ ಸ್ಮೈಲ್‌, ರೈತರ ಸಮಸ್ಯೆಗೆ ಕನ್ನಡಿ ಹಿಡಿಯುವ ನಂಜುಂಡಿ, ಕಾರಂತರ ಕಾದಂಬರಿ ಆಧರಿಸಿದ ನಾಗಾಭರಣಾ ನಿರ್ದೇಶನದ ಸೊಗಸಾದ ಚಿತ್ರ ಚಿಗುರಿದ ಕನಸು ಎಲ್ಲವೂ ನೆಲಕಚ್ಚಿದವು. ಹಾಗಾಗಿ ವೆರೈಟಿಯ ಪಾತ್ರಗಳಿಗೆ ಮೊರೆಹೋದರೂ, ಶಿವರಾಜ್‌ಕುಮಾರ್‌ಗೆ ಸಿಕ್ಕ ವರ್ಷದ ಒಂದೇ ಒಂದು ಹಿಟ್‌ ಶ್ರೀರಾಮ್‌.

    ಇನ್ನು ದೇವರಾಜ್‌ ‘ಏ ನಾನ್‌ ಭೀಷ್ಮ ಕಣೋ’ ಚಿತ್ರದ ಮೇಕಪ್‌ ಪ್ರಚಾರದಿಂದ ಹಿಡಿದು ಶಿವಮಣಿ ನಿರ್ದೇಶನದ ‘ಖಾಕಿ’ ಚಿತ್ರದವರೆಗೆ ವರ್ಷದಲ್ಲಿ 6 ಚಿತ್ರಗಳಲ್ಲಿ ಬಣ್ಣ ಹಾಕಿಕೊಂಡರು. ಆದರೆ ಅವರ ಸಕಲ ಚಿತ್ರಗಳೂ ಡಬ್ಬಾ ಆಗಿಹೋದವು. ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ಸಾರ್‌... ಸರಣಿಯ ಚಿತ್ರಗಳ ಮುಂದುವರೆದ ಭಾಗದ ಕತ್ತೆಗಳ ಹಾಸ್ಯ, ಕುರಿ ಹಾಗೂ ಕೋತಿಗಳ ಆಟದಷ್ಟು ಜನರಿಗೆ ಹಿಡಿಸಲಿಲ್ಲ. ಕುಶಲವೇ ಕ್ಷೇಮವೇ ಎಂಬ ಫೋನ್‌ ಪ್ರೇಮದ ಚಿತ್ರ ಈಗಾಗಲೇ ಎರಡು ಸಲ ಟೀವಿಯಲ್ಲೇ ಪ್ರಸಾರವಾಗಿದೆ. ಅಲ್ಲಿಗೆ ರಮೇಶ್‌ ಮಾರುಕಟ್ಟೆ ಎಲ್ಲಿಗೆ ಬಂದಿದೆ ಅನ್ನೋದು ಸ್ಪಷ್ಟ. ನಾಯಕನಾಗಿ ಸೋಲುಂಡಿರುವ ರಮೇಶ್‌ ನಿರ್ದೇಶಕನಾಗುವ ಕನಸು ಇನ್ನೂ ಈಡೇರಿಲ್ಲ. ಬಿಸಿಬಿಸಿ ಮೂಲಕ ರಮೇಶ್‌ ಮತ್ತೆ ಬಿಜಿಯಾಗುವ ಕನಸು ಕಾಣುತ್ತಿದ್ದಾರೆ.

    ಕಳೆದ ವರ್ಷ ಜೋರು ಪ್ರಾರಂಭ ಮಾಡಿದ್ದ ವಿಜಯ ರಾಘವೇಂದ್ರ ಕೂಡ ಈ ವರ್ಷ ಬೋರು ಹೊಡೆಸಿದರು. ಹಾರ್ಟ್‌ಬೀಟ್ಸ್‌, ಪ್ರೀತಿಸ್ಲೇಬೇಕು, ವಿಕ್ರಂ, ವಿಜಯ ಸಿಂಹ- ಎಲ್ಲಾ ಬೊಕ್ಕಾ ಬೋರಲು. ಹೇಳಿಕೊಳ್ಳೋಕೆ ಅಂತ ಉಳಿದಿದ್ದು ‘ಖುಷಿ’ ಯಶಸ್ಸಿನ ಖುಷಿಯಾಂದೇ. ಆದರೆ ಅದರಲ್ಲೂ ವಿಜಯ್‌ಗೆ ಕ್ರೆಡಿಟ್ಟು ಸಿಗಲಿಲ್ಲ. ಖುಷಿ ನಿರ್ದೇಶಕರ ಚಿತ್ರ.

    ಈಗ ತಾನೆ ಪಕ್ಷಾಂತರವಾಗಿರುವ ಶಶಿಕುಮಾರ್‌ ಚುನಾವಣೆಯ ಮುಂಚೆ ಜನರಿಗೆ ಮುಖ ತೋರಿಸೋಣ ಎಂಬಂತೆ ತಾವೇ ದುಡ್ಡು ಹಾಕಿ ‘ರೀ ಸ್ವಲ್ಪ ಬರ್ತೀರಾ...’ ಕರೆದರು. ಆದರೆ ಅದನ್ನು ಕೇಳಿಸಿಕೊಂಡು ಜನ ಚಿತ್ರಮಂದಿರಕ್ಕೆ ಬರಲಿಲ್ಲ !

    ಅನನ್ಯ ದರ್ಶನ !

    ತಮ್ಮಿಂದ ದೂರ ವಾಲುತ್ತಿದ್ದ ಯಶಸ್ಸಿನ ಪೆಂಡ್ಯುಲಮ್ಮನ್ನು ಹಿಡಿದು ಎಳೆದುಕೊಂಡವರೆಂದರೆ ದರ್ಶನ್‌. ಮೊದಲನೇ ರಿಲೀಸ್‌ನಲ್ಲಿ ಆಮೆ ವೇಗದಲ್ಲಿ ಸಾಗಿದ ‘ಕರಿಯಾ’, ಆಮೇಲೆ ಭರ್ಜರಿ ಹಿಟ್‌. ‘ಲಾಲಿ ಹಾಡಿ’ಗೆ ಪ್ರಶಸ್ತಿಯ ಗರಿ, ‘ನಮ್ಮ ಪ್ರೀತಿಯ ರಾಮು’ಗೆ ಶಹಬ್ಭಾಸ್‌ಗಿರಿ, ದಾಸ ಚಿತ್ರದ ಕೋಪದ ಕಣ್ಣಿಗೆ ಸುಭಾನ್‌ ಅಲ್ಲಾ ಗಿಟ್ಟಿಸಿಕೊಂಡ ದರ್ಶನ್‌, ಅಂಬರೀಶ್‌ ಜೊತೆ ನಟಿಸಿರುವ ಅಣ್ಣಾವ್ರು ಚಿತ್ರಕ್ಕೂ ಸಖತ್‌ ಓಪನಿಂಗ್‌ ಸಿಕ್ಕಿದೆ. ಬಹುಶಃ ಉಪೇಂದ್ರ ಅಭಿನಯದ ‘ರಕ್ತ ಕಣ್ಣೀರು’ ಸೋತಿದ್ದರೆ ದರ್ಶನ್‌ ವರ್ಷದ ನಾಯಕರಾಗಿರುತ್ತಿದ್ದರು.

    ‘ವರ್ಷಕ್ಕೊಂದೇ ಸಾಕು, ಜನ ಅದನ್ನ ನೋಡಬೇಕು’ ಅನ್ನುವ ಪಾಲಿಸಿ ಇಟ್ಟುಕೊಂಡಿರುವ ಪುನೀತ್‌ ರಾಜ್‌ಕುಮಾರ್‌ ಜೊತೆಗೆ ಅದೃಷ್ಟ ಜೋರಾಗೇ ಇದೆ. ‘ಅಭಿ’ ಚಿತ್ರದಲ್ಲಿ ಜಾತಿ ವಿನಾಶ ಸಂದೇಶದ ವಾಸನೆ ಇತ್ತು. ‘ಅಪ್ಪು’ ಚಿತ್ರಕ್ಕಿಂತ ಮನರಂಜನೆ ವಿಷಯದಲ್ಲಿ ಸ್ವಲ್ಪ ಕಡಿಮೆ ಅಂಕ ಪಡೆಯುವ ಈ ಚಿತ್ರ ಯಶಸ್ವಿಯಾಗಿದ್ದು ಅವರನ್ನು ಹ್ಯಾಟ್ರಿಕ್‌ ನಿರೀಕ್ಷೆಯ ಘಟ್ಟಕ್ಕೆ ತಂದು ನಿಲ್ಲಿಸಿದೆ. ‘ವೀರ ಕನ್ನಡಿಗ’ ಪುನೀತ್‌ ಕೊಡುತ್ತಿರುವ ಹೊಸ ವರ್ಷದ ಗಿಫ್ಟು.

    ಒಂದು ರಾಜ್ಯ ಪ್ರಶಸ್ತಿ ಗಿಟ್ಟಿಸಿಕೊಂಡರೂ ಸುದೀಪ್‌ ಅಭಿನಯದ ಪಾರ್ಥ ಬೋರಲಾಯಿತು. ಕಿಚ್ಚ ಕೂಡ ಡಲ್ಲಾಯಿತು. ಆದರೆ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿರುವ ‘ಸ್ವಾತಿಮುತ್ತು’ ರೀಮೇಕಾದರೂ ಒಳ್ಳೆಯ ವಿಮರ್ಶೆ ಸಿಕ್ಕಿದೆ. ಹಾಡುಗಳು ನಿಧಾನವಾಗಿ ಟೀವಿ ಚಾನೆಲ್ಲುಗಳಲ್ಲಿ ಸದ್ದು ಮಾಡತೊಡಗಿವೆ. ಭರವಸೆ ಅಂತೇನಾದರೂ ಸುದೀಪ್‌ಗೆ ಉಳಿದಿದ್ದರೆ ಸದ್ಯಕ್ಕೆ ಅದು ಸ್ವಾತಿ ಮುತ್ತು.

    ಬಂತು ಹೊಸಬರ ಗಾಡಿ, ದಾರಿಬಿಡಿ

    ಬಾಲಿವುಡ್‌ ಸಾಣೆ ಕಂಡಿರುವ, ಪುಟ್ಟುಪುಟ್ಟದಾಗಿ ಮುದ್ದುಮುದ್ದಾಗಿ ಇರುವ ಸುನಿಲ್‌ ರಾವ್‌ ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರದಲ್ಲಿ ತಾತನಿಗೆ ತಕ್ಕ ಮೊಮ್ಮಗನಾಗಿ ಗಮನ ಸೆಳೆದರು. ವರ್ಷಾಂತ್ಯದಲ್ಲಿ ತೆರೆಕಂಡ ‘ಎಕ್ಸ್‌ಕ್ಯೂಸ್‌ ಮಿ’ಯಲ್ಲಿ ಕೋಪದ ಕಣ್ಣುಗಳಿಂದ ಹುಡುಗಿಯರ ಮನ ಗೆದ್ದರು. ಒಂದಿಷ್ಟು ಓನ್ಸು ಹೆಚ್ಚು ಮಾಂಸ ಇದ್ದಿದ್ದರೆ ಸುನಿಲ್‌ ವಿಜಯ ರಾಘವೇಂದ್ರನನ್ನೂ ಹಿಂದಿಕ್ಕುತ್ತಿದ್ದುದರಲ್ಲಿ ಅನುಮಾನವೇ ಇಲ್ಲ. ಅದೇ ಚಿತ್ರದ ಮೂಲಕ ಭರವಸೆ ಹುಟ್ಟಿಸಿರುವ ಇನ್ನೊಬ್ಬ ನಟ ಅಜಯ್‌. ನಟನೆಯನ್ನು ಕಲಿತು, ಕಾನಿಷ್ಕಾ ಗೇಟಲ್ಲಿ ನಿಂತು ಅವಕಾಶಕ್ಕಾಗಿ ಚಾತಕ ಪಕ್ಷಿಯಾಗಿದ್ದ ಅಜಯ್‌ ಸಿಕ್ಕ ಅವಕಾಶವನ್ನು ಅಬ್ಬರವನ್ನಾಗಿಸಲಿಲ್ಲ ಎಂಬ ಕಾರಣಕ್ಕೆ ಇಷ್ಟವಾಗುತ್ತಾರೆ. ಅವರ ನಗು ಹಾಗೂ ಟೈಮಿಂಗ್‌ ಚೆನ್ನಾಗಿದೆ.

    ಅಣ್ಣ ವಿಜಯ ರಾಘವೇಂದ್ರನನ್ನೇ ಹೋಲುವ ಮುರಳಿ ಚೊಚ್ಚಿಲ ಚಿತ್ರ ‘ಚಂದ್ರ ಚಕೋರಿ’ ನೂರು ದಿನ ಓಡಿದೆ. ಮೂಗನ ಪಾತ್ರವನ್ನು ಹಾಗೂ ಹೀಗೂ ತೂಗಿಸಿಕೊಂಡ ಮುರಳಿ ಪ್ರತಿಭೆ ಇನ್ನೂ ನಿಜವಾದ ಒರೆಗೆ ಹಚ್ಚಲ್ಪಟ್ಟಿಲ್ಲ. ಮುಖ ಭಾವನೆಯಲ್ಲಿ ಏಕತಾನತೆ ಕಾಣುವ ಈ ಹುಡುಗ ಬೇರೆ ಇಮೇಜಲ್ಲಿ ಹೇಗೆ ಕಾಣಿಸುವರೋ ನೋಡಬೇಕು.

    ‘ಪ್ಯಾರಿಸ್‌ ಪ್ರಣಯ’ ಚಿತ್ರದ ಮೂಲಕ ನಾಗತೀಹಳ್ಳಿ ಪರಿಚಯಿಸಿದ ರಘು ಮುಖರ್ಜಿ ಮೈಕಟ್ಟು ಮಜಬೂತು. ನೃತ್ಯ ಅಪ್ಪಟ ಕವಾಯತು. ಬಹುಶಃ ಇವರಿಗೆ ಚಿತ್ರಲೋಕ ಅಷ್ಟಾಗಿ ಹಿಡಿಸಿಲ್ಲವೇನೋ, ಸದ್ಯಕ್ಕೆ ಹೆಂಡದ ಜಾಹೀರಾತೊಂದಕ್ಕೆ ಮಾಡೆಲ್‌ ಆಗಿ ಕೆಲಸ ಮಾಡುತ್ತಿದ್ದಾರೆ ! ಇದೇ ನಾಗತಿ ಪರಿಚಯಿಸಿದ ಚಾಕೊಲೇಟ್‌ ಹೀರೋ ಧ್ಯಾನ್‌ ಕನ್ನಡಕ್ಕೆ ಮತ್ತೆ ಮರಳಿದ್ದಾರೆ. ಇಂದ್ರಜಿತ್‌ ನಿರ್ದೇಶನದ ಮೊನಾಲಿಸಾ ಈತನ ಎರಡನೇ ಕನ್ನಡ ಚಿತ್ರ. ಪ್ಯಾರಿಸ್‌ ಪ್ರಣಯದ ನಾಯಕಿ ಮಿನಲ್‌ ಅಡ್ರೆಸ್‌ ಸಿಗುತ್ತಿಲ್ಲ .

    ಕೇವಲ ‘ರಾಂಗ್‌ ನಂಬರ್‌’ ಒಂದೇ ಚಿತ್ರದಲ್ಲಿ ನಟಿಸಿದ ಸುದೇಶ್‌ ಮ್ಯಾನರಿಸಂ ಕನ್ನಡಕ್ಕೊಬ್ಬ ನಾನಾ ಪಾಟೇಕರ್‌ ಸಿಕ್ಕಂತೆ ಕಂಡಿತು. ಆದರೆ, ಚಿತ್ರದ ಟ್ರಂಪ್‌ಕಾರ್ಡ್‌ ಆಗಿದ್ದ ಕಂಠ ಸುಚೇಂದ್ರ ಪ್ರಸಾದ್‌ ಅವರದ್ದು. ಅದಾಗಿಯೂ ಸುದೇಶ್‌ ಒಳಗೊಬ್ಬ ಅಪರೂಪದ ನಟನಿದ್ದಾನೆ.

    ‘ಖುಷಿ’ ಚಿತ್ರದಲ್ಲಿ ನಟಿಸಿದ ಹರೀಶ್‌ ಹಾಗೂ ತರುಣ್‌ ಭರವಸೆ ಹುಟ್ಟಿಸಿದ ಇನ್ನೂ ಇಬ್ಬರು ಹುಡುಗರು. ರೂಪ- ಕುಣಿತದಲ್ಲಿ ಜೋರಾಗಿರುವ ಈ ಹುಡುಗರು ನಟನೆಯಲ್ಲಿ ಪಳಗಿದರೆ ಒಳ್ಳೆಯ ಭವಿಷ್ಯವಿದೆ.

    ವರ್ಷಾಂತ್ಯದಲ್ಲಿ ಹೊಸಬರಿಗೆ ಮಣೆ ಜೋರಾಗಿದೆ. ಅದಕ್ಕೆ ಉದಾಹರಣೆ ‘ಮಣಿ’. ಪುಣೆಯಲ್ಲಿ ಕಲಿತು ಬಂದಿರುವ ಮಯೂರ್‌ ನೋಡೋಕೆ ಚೆನ್ನಾಗಿದ್ದಾರೆ. ಆದರೆ ಅವರು ಕನ್ನಡವನ್ನು ನುಂಗಿಕೊಂಡು ಮಾತಾಡುವುದನ್ನು ಸಹಿಸೋದು ಕಷ್ಟ. ಹೊಸತನಕ್ಕೆ ಕಿರುತೆರೆಯಲ್ಲಿ ಹೆಸರುವಾಸಿಯಾಗಿದ್ದ ಯೋಗರಾಜ್‌ ಭಟ್‌ ಚಿತ್ರವನ್ನು ನಿರ್ದೇಶಿಸಿರುವ ಕಾರಣಕ್ಕೆ ಮಯೂರ್‌ಗೆ ಬ್ರೇಕ್‌ ಸಿಕ್ಕಿದೆ. ಅಂದಹಾಗೆ ಈತ ಮದನ್‌ ಪಟೇಲ್‌ ಪುತ್ರ. ಎಂಥ ಅಪ್ಪನಿಗೆ ಎಂಥಾ ಮಗ ಅನ್ನುತ್ತಿದೆ ಗಾಂಧಿನಗರ.

    ತೀರಾ ಹೊಸಬನಲ್ಲದಿದ್ದರೂ ಅವಕಾಶಗಳ ಕೊರತೆ ಅನುಭವಿಸಿದ್ದ ಜಗ್ಗೇಶ್‌ ಸೋದರ ಕೋಮಲ್‌ಗೆ 2003 ಯಶಸ್ಸಿನ ಬುತ್ತಿ ಕಟ್ಟಿಕೊಟ್ಟ ವರ್ಷ. ಡಲ್ಲೆನಿಸಿದ ಕತ್ತೆಗಳ ಸಾಲಿನಲ್ಲಿ ಮಿಂಚಿದ್ದು ಕೋಮಲ್‌. ಕಾಸು ಇದ್ದೋನೆ ಬಾಸು ಚಿತ್ರದಲ್ಲಿ ಹಾಸ್ಯದ ಮ್ಯಾನರಿಸಂನಲ್ಲಿ ಜಗ್ಗೇಶನ್ನೂ ಮೀರಿಸಿದ್ದು ಇದೇ ಕೋಮಲ್‌. ನಂಜುಂಡಿ ಚಿತ್ರದ ಪೋಷಕ ಪಾತ್ರದಲ್ಲಿ ಮಿಂಚಿಂಗು. ಕೊನೆಗೆ ತವರಿಗೆ ಬಾ ತಂಗಿ ಚಿತ್ರದ ಪೋಷಕ ಪಾತ್ರ ನಟನೆಗೆ ರಾಜ್ಯ ಪ್ರಶಸ್ತಿಯೂ ಸಿಕ್ಕಿತು. ಅದೇ ಹಳಸಲು ಜೋಕುಗಳನ್ನು ಹೊಡೆಯುವ ಸಾಧು ಕೋಕಿಲಾ, ಟೆನ್ನಿಸ್‌ ಕೃಷ್ಣ ಕಾಮಿಡಿಯ ಮೊನಾಟನಿಗೆ ಕೋಮಲ್‌ ಸ್ವಾಗತಾರ್ಹ ಬದಲಾವಣೆ.

    ಸಾ.ರಾ.ಗೋವಿಂದು, ಮಂಡ್ಯ ರಮೇಶ್‌, ರಾಜೇಶ್‌ ರಾಮನಾಥ್‌ ಥರದ ‘ಚಿತ್ರ ಪರಿಕರ’ ಪಾತ್ರಧಾರಿಗಳೆಲ್ಲ ಹೀರೋ ವೇಷ ಹಾಕಿದ್ದು, ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡಂತಾಯ್ತು. ಕಾಮಿಡಿಯ ಎಕ್ಸ್‌ಪ್ರೆಷನ್ನೇ ಕ್ಲೀಷೆ ಎಂಬ ಅಗೌರವಕ್ಕೆ ಪಾತ್ರರಾಗಿದ್ದ ಮಂಡ್ಯ ರಮೇಶ್‌ ನಾಯಕಿಯ ಕೈ ಹಿಡಿದುಕೊಂಡು ಹಾಡು ಹಾಡಿದ್ದು ವರ್ಷದ ಮುಖ್ಯ ಜೋಕುಗಳಲ್ಲಿ ಒಂದು !

    ಹೊಸ ಅಲೆಯಲ್ಲೂ ಏಗಿ ಸಾಗಿದವರು

    ಜಗ್ಗೇಶ್‌ ಈ ಸಲ ಸೇಫ್‌ ನಡೆಯನ್ನು ಆರಿಸಿಕೊಂಡರು. ‘ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ’ ಹಳ್ಳಿ ಹೈಕಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಅದೇ ಗುಂಗಿನಲ್ಲಿ ಬಂದ ‘ಕಾಸು ಇದ್ದೋನೆ ಬಾಸು’ ನಿರ್ಮಾಪಕ ಪ್ರಭುವಿನ ಬೊಕ್ಕಸಕ್ಕೆ ಕಾಸು ತಂದಿತ್ತಿತು. ಆಮೇಲೆ ಬಂದ ‘ಹುಚ್ಚನ ಮದುವೇಲಿ ಉಂಡೋನೆ ಜಾಣ’ ಲೆಕ್ಕಾಚಾರ ತಲೆಕೆಳಗಾಗಿಸಿತು. ಜಗ್ಗೇಶ್‌ಗೆ ತಮ್ಮ ಮಿತಿ ಗೊತ್ತಾಗಿದೆ. ಹೀಗಾಗಿ ಅವರು ಆರಕ್ಕೇರುವ ಸಾಹಸಕ್ಕೆ ಕೈ ಹಾಕುತ್ತಲೇ ಇಲ್ಲ. ಅವರ ಅಭಿನಯದ ನೂರನೇ ಚಿತ್ರದ ಹೆಸರು ‘ಮಠ’. ಅಂದಹಾಗೆ, ಇತ್ತೀಚೆಗೆ ನಿಧನರಾದ ಜಿ.ವಿ.ಅಯ್ಯರ್‌ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದರಂತೆ.

    ಆಲ್‌ ರೀಮೇಕ್‌, ಬಟ್‌ ಪೀಪಲ್‌ ಲೈಕ್‌ ಇಟ್‌ !

    ಇನ್ನೇನು ಉಪೇಂದ್ರ ಕೆರಿಯರ್ರು ಶುಭಂ ಅಂತ ಮಾತಾಡಿಕೊಳ್ಳುತ್ತಿದ್ದವರಿಗೆ ಶಾಕ್‌ ಕೊಟ್ಟಿದ್ದು ನಾಗಣ್ಣ. ಹೌದು, ಇವರ ನಿರ್ದೇಶನದ ‘ಕುಟುಂಬ’ ಹಡ್ರೆಂಡ್‌ ಡೇಸ್‌ ಓಡಿದ್ದೇ ಉಪ್ಪಿ ತಮ್ಮ ‘ಸುಮ್ಮನೆ’ಯಿಂದ ಹೊರಬಂದರು. ಐವತ್ತು ವರ್ಷದ ಹಿಂದೆ ತಮಿಳಲ್ಲಿ ಬಂದಿದ್ದ ‘ರಕ್ತ ಕಣ್ಣೀರು’ ಚಿತ್ರವನ್ನು ಉದ್ದುದ್ದ ಡೈಲಾಗ್‌ ಹೆಣೆದು ಕನ್ನಡೀಕರಿಸಿ ಮಹಾಜನತೆಗೆ ಕೊಟ್ಟರು. ಇದೂ ನೂರು ದಿನ ಓಡಿತು. ಪಡ್ಡೆಗಳು ‘ಐ ಲೈಕ್‌ ಇಟ್‌’ ಅಂತ ಗುನುಗುವಂಥಾ ಪಂಚ್‌ ಕೊಟ್ಟು ಉಪ್ಪಿ ‘ಡಿಫರೆಂಟಾಗಿರಬೇಕು’ ಅಂತ ಮತ್ತೆ ನಕ್ಕರು. ಹಾಗೆಯೇ ಅವರು ಡಿಫರೆಂಟಾಗಿ ಮದುವೆಯಾಗಿ ಹನಿಮೂನಲ್ಲಿರುವಾಗಲೇ ಅವರದ್ದೇ ಅಭಿನಯದ ಇನ್ನೊಂದು ಚಿತ್ರ ‘ಗೋಕರ್ಣ’ದ ಕ್ರಿಸ್‌ಮಸ್‌ ಗಿಫ್ಟ್‌ ಜನರಿಗೆ ಸಿಕ್ಕಿದೆ. ಇದೂ ಏನಾದರೂ ಗೆದ್ದರೆ, ಉಪ್ಪಿಯನ್ನು ಕೂಡ ಮರಿ ವಿಷ್ಣುವರ್ಧನ್‌ ಅನ್ನಬಹುದು. ಯಾಕೆಂದರೆ ರೀಮೇಕ್‌ ವಿಷಯದಲ್ಲಿ ಇಬ್ಬರಿಗೂ ಸಾಕಷ್ಟು ಸಾಮ್ಯವಿದೆ !

    ನಾಯಕಿಯರ ಬಗ್ಗೆ ಹೇಳೋದೇನಿದೆ...

    ನಾಯಕಿಯರಿಂದ ಚಿತ್ರ ಓಡುವ ಕಾಲ ಮಾಲಾಶ್ರೀಯಾಂದಿಗೇ ಮುಗಿದುಹೋದಂತಿದೆ. ಮರಿ ಮಾಲಾಶ್ರೀ ಎನ್ನುವ ಅಪಾತ್ರದಾನಕ್ಕೆ ಪಾತ್ರವಾಗಿದ್ದ ರಾಧಿಕಾ ಕೆಲವೇ ತಿಂಗಳೊಳಗೆ ಖಾಲಿಯಾಗಿದ್ದು ಮಾಯಾಬಜಾರಿನ ವಿಧಿವಿಪರೀತದಂತಿತ್ತು . ಸಂಖ್ಯೆಯ ದೃಷ್ಟಿಯಲ್ಲಿ ಪಿವಿಸಿ ಪ್ರೇಮಾ ಮುಂದಿದ್ದರೂ, ಆಕೆಯನ್ನು ಜನ ನೆನಪಿಟ್ಟುಕೊಂಡಿರುವುದು ಆರೋಗ್ಯ ಹಾಲು ಹಾಗೂ ಎಣ್ಣೆಯ ಜಾಹಿರಾತಿನಿಂದಾಗಿ.

    ಶ್ರುತಿ ಅಪ್ಪಟ ಗೃಹಿಣಿಯಾಗಿ ಮಗುವಿನ ಲಾಲನೆ ಪಾಲನೆಯಲ್ಲಿದ್ದಾರೆ. ಮಾಲಾಶ್ರೀ ದುರ್ಗಿ ಚಿತ್ರದಲ್ಲಿ ನಟಿಸುತ್ತಾ ಯಶಸ್ಸಿನ ಕನಸು ಕಾಣುತ್ತಿದ್ದಾರೆ. ಅನು ಪ್ರಭಾಕರ್‌ ಮದುವೆಯಾದ ನಂತರ ರೋಚಕವಾಗಿ ಕಾಣಲು ಪ್ರಯತ್ನಿಸುತ್ತಿದ್ದಾರೆ.

    ಇದ್ದುದರಲ್ಲಿ ರಕ್ಷಿತಾ ಹಾಗೂ ರಮ್ಯ ಎನ್ನುವ ಹುಡುಗಿಯರೇ ವಾಸಿ. ರಕ್ಷಿತಾ ಹೇಳುವುದೆಲ್ಲಾ ನಿಜವಲ್ಲವಾದರೂ, ತೆಲುಗಿನ ಪೂರಿ ಚಿತ್ರಗಳಲ್ಲಿ ಆಕೆಗೆ ಅವಕಾಶಗಳು ನಿರಂತರವಾಗಿವೆ. ಉಪೇಂದ್ರನ ಜೊತೆ ನಟಿಸಬೇಡ ಎಂದು ಅಪ್ಪ ಹೇಳಿದ್ದಾರೆ ಎನ್ನುತ್ತಿದ್ದ ರಕ್ಷಿತಾ, ಗೋಕರ್ಣ ಚಿತ್ರದಲ್ಲಿ ಉಪ್ಪಿಗೆ ಜೋತುಬಿದ್ದರು. ಉಪ್ಪಿ ಜೊತೆಗಿನ ಡುಯೆಟ್‌ನಿಂದ ರಕ್ಷಿತಾ ರೋಮಾಂಚಿತರಾಗಿದ್ದರೂ, ತೆರೆಯ ಮೇಲೆ ರೋಚಕವಾಗಿ ಕಾಣುತ್ತಿದ್ದರೂ, ಫೀಲಿಂಗ್ಸೇ ಇಲ್ವೇ!

    ಇನ್ನೊಬ್ಬ ಹುಡುಗಿ ರಮ್ಯಾಳ ಅಭಿ ಹಾಗೂ ಎಕ್ಸ್‌ಕ್ಯೂಸ್‌ ಮಿ ಎರಡೂ ಒಳ್ಳೆಯ ಚಿತ್ರಗಳು. ಅಭಿನಯದ ಮಟ್ಟಿಗೆ ಆಕೆಯಿನ್ನೂ ಎಬಿಸಿಡಿಯಲ್ಲಿದ್ದಾಳೆ. ಈ ನಡುವೆ ಹಿಂದಿಯಲ್ಲೊಂದು, ತೆಲುಗಿನಲ್ಲೊಂದು ಚಿತ್ರ ಸಿಕ್ಕಿರುವುದಾಗಿ ಹೇಳಿಕೊಳ್ಳುತ್ತಿದ್ದಾಳೆ. ಆ ಸುದ್ದಿ ನಿಜವಾಗಲಿ.

    ಯಥಾ ಪ್ರಕಾರ- ರಮ್ಯಕೃಷ್ಣ , ಮೀನಾ, ಭಾನುಪ್ರಿಯ, ಕೌಸಲ್ಯ ಮುಂತಾದ ಒಂದಾನೊಂದು ಕಾಲದ ನಾಯಕಿಯರೊಂದಿಗೆ ಪ್ರಿಯಾಂಕ, ಸೋನಿಯಾ, ಮೇಘನಾ, ಹರ್ದೀಪ್‌ ಇತ್ಯಾದಿ ಪ್ರಾಯದ ನಾಯಕಿಯರು ಕನ್ನಡಕ್ಕೆ ಬಂದರೂ ಯಾರೂ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ . ಅವರುಗಳ ಮಧ್ಯೆ- ಕನ್ನಡದವರೇ ಆದ ಸಿಂಧೂ, ಚೈತ್ರ, ಮುಂತಾದವರು ತಲೆ ತೂರಿಸುತ್ತಿದ್ದಾರೆ. ಛಾಯಾಸಿಂಗ್‌ ಹಾಗೂ ಜಿಂಕೆಮರಿ ರೇಖಾ... ಪಾಪ !

    2004ರ ಬಣ್ಣಗಳು ಕಣ್ಣ ಮುಂದಿದೆ. ಮೊದಲನೇ ದಿನವೇ ಪುನೀತನ ‘ವೀರ ಕನ್ನಡಿಗ’ !

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, March 28, 2024, 15:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X