»   » ಸ್ಯಾಂಡಲ್‌ವುಡ್‌ 2004: ಯಶಸ್ವಿ ಚಿತ್ರಗಳ ಜಾಡಿನಲ್ಲಿ....

ಸ್ಯಾಂಡಲ್‌ವುಡ್‌ 2004: ಯಶಸ್ವಿ ಚಿತ್ರಗಳ ಜಾಡಿನಲ್ಲಿ....

Posted By: Super
Subscribe to Filmibeat Kannada

2004 ಕನ್ನಡ ಚಿತ್ರರಂಗದ ಮಟ್ಟಿಗೆ ಪ್ರತಿಭಟನೆ, ಹೋರಾಟ, ಕೆಸರೆರೆಚಾಟ, ಕಾಲೆಳೆಯುವಾಟದ ವರ್ಷವಾದರೂ, ಸುಮಾರು ಹನ್ನೆರಡು ಚಿತ್ರಗಳು ಗಮನ ಸೆಳೆಯುವ ಯಶಸ್ಸು ಕಂಡಿದ್ದು ಸಾಧನೆಯೇ ಎನ್ನಬಹುದು.

ಈ ವರ್ಷ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಯಶಸ್ಸು ಆಪ್ತ ಮಿತ್ರದ್ದು. ಸೌಂದರ್ಯಳ ಕಡೆಯ ಚಿತ್ರವಾಗಿ ಬಂದ ಈ ಸಿನಿಮಾ, ಕನ್ನಡ ಪ್ರೇಕ್ಷಕರ ಪಾಲಿಗೆ ಹೊಸ ಅನುಭವ ನೀಡಿತು. ನಂಬಿಕೆ, ವೈಜ್ಞಾನಿಕತೆ ತಳಹದಿ ಮೇಲೆ ಆತ್ಮದ ಕತೆಯಾಂದನ್ನು ಬ್ಯಾಲೆನ್ಸ್‌ ತಪ್ಪದಂತೆ ನಿರೂಪಿಸಿದ್ದೇ ಈ ಚಿತ್ರದ ಹೆಗ್ಗಳಿಕೆ. 'ಮಣಿಚಿತ್ರತ್ತಾಳ್‌' ಎಂಬ ಮಲಯಾಳಂ ಚಿತ್ರದ ರೀಮೇಕ್‌ ಆದರೂ 'ಆಪ್ತಮಿತ್ರ' ಒಂದು ಒಳ್ಳೆ ಪ್ರಯತ್ನ. ಚಿತ್ರದ ಯಶಸ್ಸಿಗೆ ಸಂಪೂರ್ಣ ಕಾರಣ, ಸೌಂದರ್ಯರ ಅದ್ಭುತ ನಟನೆ ಮತ್ತು ಗುರುಕಿರಣ್‌ ಸಂಗೀತದಲ್ಲಿ ಮೂಡಿಬಂದ ಹಾಡುಗಳು. ಈ ಚಿತ್ರದಿಂದ ಕನ್ನಡ ನಿರ್ಮಾಪಕರು-ನಿರ್ದೇಶಕರು ಕಲಿಯಲೇಬೇಕಾದ ಪಾಠವೆಂದರೆ ಚಿತ್ರವೊಂದರ ಯಶಸ್ಸಿಗೆ ಐಟಂ ಸಾಂಗ್‌ ಆಗಲೀ, ನಟಿಯರ ಮೈದೋರಿಕೆಯಾಗಲಿ ಅವಶ್ಯವೇ ಇಲ್ಲ ಎಂಬುದು.

'ಆಪ್ತ ಮಿತ್ರ'ಕ್ಕೆತದ್ವಿರುದ್ಧ ಚಿತ್ರ ಮಲ್ಲ. ಬಹುದಿನಗಳ ನಂತರ ರವಿಚಂದ್ರನ್‌ಗೆ ಯಶಸ್ಸು ನೀಡಿದ ಈ ಚಿತ್ರದ ಹಾಡಿನಲ್ಲಿ ಚೆಲುವೆ ಪ್ರಿಯಾಂಕಾಳ ಚೆಲುವನ್ನು ತೋರಿಸಿದ್ದು ಸುದ್ದಿಗೆ ಗ್ರಾಸವಾಯಿತು. ನಟಿಯರ ಅಂದ ತೋರಿಸುವಲ್ಲಿ ನಿಪುಣರಾದ ರವಿಚಂದ್ರನ್‌, ಈ ಚಿತ್ರದ ಯಶಸ್ಸಿಗೆ ಕಥೆಯೇ ಮುಖ್ಯ ಕಾರಣ ಎನ್ನುತ್ತಾರೆ.

ಹೊಸ ನಿರ್ದೇಶಕ ದಯಾಳ್‌ರ 'ಬಾ ಬಾರೋ ರಸಿಕ' ವಿಭಿನ್ನವಾಗಿ ಗಮನ ಸೆಳೆಯಿತು. ತನಗಿಂತ ಕಿರಿಯ ಸಹೋದ್ಯೋಗಿ ಮೇಲೆ ಅಧಿಕಾರಿಣಿಯಾಬ್ಬಳ ಆಸಕ್ತಿಯನ್ನು ಎಲ್ಲೆ ಮೀರದಂತೆ ಚಿತ್ರಿಸಿದ ಈ ಸಿನಿಮಾ, ನಟ ಸುನೀಲ್‌ ಪಾಲಿಗೆ ಇನ್ನೊಂದು ಯಶಸ್ಸು ತಂದುಕೊಟ್ಟಿತು.

ರವಿಚಂದ್ರನ್‌-ಜಗ್ಗೇಶ್‌ ಅಭಿನಯದ 'ರಾಮಕೃಷ್ಣ' ಮಧ್ಯಮ ಯಶಸ್ಸು ಕಂಡ ಮತ್ತೊಂದು ರೀಮೇಕ್‌ ಚಿತ್ರ. ಇಡೀ ವರ್ಷಕ್ಕೆ ಜಗ್ಗೇಶ್‌ಗೆ ದಕ್ಕಿದ ಯಶಸ್ಸು ಇದೊಂದೇ ಚಿತ್ರ. ಹಳ್ಳಿಯ ಸೊಗಡಿನ ಕತೆ, ನವಿರು ನಿರೂಪಣೆ ಚಿತ್ರದ ಯಶಸ್ಸಿಗೆ ಕಾರಣ.

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಮೊನಾಲಿಸಾ ಅನಿರೀಕ್ಷಿತ ಯಶಸ್ಸು ಕಂಡಿತು. ನಾಯಕಿ ಸದಾಳನ್ನು ಜಾಸ್ತಿ ಎಕ್ಸ್‌ಫೋಸ್‌ ಮಾಡಿದ್ದಾರೆ ಎಂಬ ಆಪಾದನೆಗಳಿದ್ದರೂ, ಚಿತ್ರದ ಯಶಸ್ಸಿಗೆ ಅದರೊಳಗಿರುವ ಕತೆಯ ಎಳೆಯೇ ಕಾರಣ ಎನ್ನುತ್ತಾರೆ ನಿರ್ದೇಶಕರು.

ದರ್ಶನ್‌ ಅಭಿನಯದ 'ಭಗತ್‌', 'ಭಗವಾನ್‌', 'ದಾಸ', 'ಕಲಾಸಿಪಾಳ್ಯ' ಈ ವರ್ಷ ಅನಿರೀಕ್ಷಿತ ಯಶಸ್ಸು ಗಳಿಸಿದ್ದು ವಿಶೇಷ. ಆ್ಯಕ್ಷನ್‌ ಹೀರೋ ಆಗಿ ಬಿಂಬಿತವಾಗಿರುವ ದರ್ಶನ್‌ರ ಈ ನಾಲ್ಕೂ ಚಿತ್ರಗಳೂ ಸಾಹಸ ಪ್ರಧಾನ ಎಂಬುದು ಇನ್ನೊಂದು ವಿಶೇಷ. ಇಂಥ ಚಿತ್ರಗಳ ಯಶಸ್ಸು ಒಂದು ಸಂಭವನೀಯತೆ ಅಷ್ಟೆ.

'ದುರ್ಗಿ' ಚಿತ್ರ ಯಶಸ್ಸು ಕಂಡಿದೆ ಎಂದು ಹೇಳಿಕೊಳ್ಳುತ್ತಾರೆ ನಿರ್ಮಾಪಕ ರಾಮು. ಈ ಸಲ ಅವರ 'ಮಲ್ಲ' , ಕಲಾಸಿ ಪಾಳ್ಯ ವೂ ಯಶಸ್ಸಾದ್ದರಿಂದ ತಾವು ಹ್ಯಾಟ್ರಿಕ್‌ ನಿರ್ಮಾಪಕ ಎಂಬ ಹೆಮ್ಮೆ ಅವರದು. 'ಮೌರ್ಯ'ಚಿತ್ರ ಸೆಂಟಿಮೆಂಟ್‌ ಮತ್ತು ಆ್ಯಕ್ಷನ್‌ ಮಿಶ್ರಿತವಾಗಿ ಉಭಯ ಪ್ರೇಕ್ಷಕರನ್ನೂ ಆಕರ್ಷಿಸಿತು. ಚಿತ್ರದ್ದು ಮಧ್ಯಮ ಯಶಸ್ಸೇ ಎನ್ನಬಹುದು.

ಸುದೀಪ್‌ಗೆ ಈ ವರ್ಷ ಹೇಳಿಕೊಳ್ಳುವ ಶುಭವೇನೂ ತರಲಿಲ್ಲ. ನಲ್ಲ ಸರಾಸರಿ ಗಳಿಕೆ ಹೆಚ್ಚಿದ್ದೊಂದೇ ಯಶಸ್ಸು. ಸುದೀಪ್‌ ಅವರ ಚಿತ್ರಗಳಲ್ಲಿ ನ ಏಕತಾನತೆ ಬಹುಶಃ ಗೆಲುವು ದೂರವಾಗಲು ಕಾರಣವಾಗಿರಬಹುದು.

ವರ್ಷಾಂತ್ಯದ ಹೊತ್ತಿಗೆ ತೆರೆ ಕಂಡ, ರಮೇಶ್‌ ಅಭಿನಯದ ಜೋಕ್‌ಫಾಲ್ಸ್‌ ಚಿತ್ರ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಸದಭಿರುಚಿಯ ಹಾಸ್ಯಕ್ಕೆ ಯಾವ ಕಾಲಕ್ಕೂಬೇಡಿಕೆ ಇದೆ ಎಂಬುದು ಇದರಿಂದ ಸಾಬೀತಾಗಿದೆ.

ಇವುಗಳ ನಡುವೆ, ಈ ವರ್ಷದ ಮಧ್ಯಭಾಗದಲ್ಲಿ ಒಂದು ಚಿತ್ರ ಬಂದು ಹೋಯಿತು. ಉಪೇಂದ್ರ ಶಿಷ್ಯ ಮಹೇಶ್‌ ನಿರ್ದೇಶಿಸಿದ ಈ ಚಿತ್ರದ ಹೆಸರು  ಸೊಗಸಾಗಿ ಮೂಡಿ ಬಂದ ಈ ಚಿತ್ರ ಸಂಪೂರ್ಣ ಹೊಸಬರದೆ ಆದರೂ ಜನರನ್ನು ಸೆಳೆಯುವಲ್ಲಿ ಸಫಲವಾಯಿತು. ವಿಶೇಷವೆಂದರೆ ಈ ಸ್ವಮೇಕ್‌ ಚಿತ್ರ ಎಲ್ಲಾ ವಿಭಾಗಗಳಲ್ಲೂ ಉತ್ತಮ ಸಾಧನೆ ಮಾಡಿತ್ತು.

ನಾಯಕಿಯರ ವಿಷಯದಲ್ಲಿ ಈ ವರ್ಷ ಹೇಳಿಕೊಳ್ಳುವ ವರ್ಷವಾಗಲಿಲ್ಲ. ಯಾವ ಚಿತ್ರವೂ ನಾಯಕಿಯ ಹೆಸರಿನಲ್ಲಿ ನಡೆದಿಲ್ಲ. ಹತ್ತಾರು ನಾಯಕಿಯರು ಹೀಗೆ ಬಂದವರು ಹಾಗೆ ಹೋದರು. ವರ್ಷಾಂತ್ಯದಲ್ಲಿ ರಾಧಿಕಾ, ದಾಮಿನಿ ಮುಂತಾದವರು ಮತ್ತೆ ಕಾಣಿಸಿಕೊಂಡಿದ್ದೇ ಹೆಚ್ಚುಗಾರಿಕೆ.

ವರ್ಷಾಂತ್ಯಕ್ಕೆ ತೆರೆಕಂಡಿರುವ 'ಚಪ್ಪಾಳೆ'ಯ ಬಗ್ಗೆ ವಿಪರೀತ ನಿರೀಕ್ಷೆ ಮಡುಗಟ್ಟಿದೆ.

English summary
Sandalwood-2004 : Box Office Report

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada