2 ದಿನಗಳ ಅಂತರದಲ್ಲಿ ನಟ ದರ್ಶನ್ ವಿರುದ್ಧ 4 ದೂರುಗಳು ದಾಖಲು
ನಟ ದರ್ಶನ್ ವಿರುದ್ಧ 2 ದಿನಗಳಲ್ಲಿ 4 ದೂರುಗಳು ದಾಖಲಾಗಿದೆ. ಕಳೆದ ಶನಿವಾರ ಶ್ರೀರಂಗಪಟ್ಟಣದಲ್ಲಿ ನಟ ದರ್ಶನ್ ಭಾಷಣದ ವೇಳೆ ಮಾತನಾಡಿದ್ದ ಮಾತುಗಳು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ. ಜೊತೆಗೆ ಇತ್ತೀಚೆಗೆ ಪ್ರಸನ್ನ ಚಿತ್ರಮಂದಿರದಲ್ಲಿ 'ಕಾಟೇರ' ಸಕ್ಸಸ್ ಸಂಭ್ರಮದಲ್ಲಿ ನಿರ್ಮಾಪಕ ಉಮಾಪತಿ ಕುರಿತು ದರ್ಶನ್ ಆಡಿದ ಮಾತುಗಳು ಭಾರೀ ಚರ್ಚೆ ಹುಟ್ಟಾಕಿದೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಗ್ಗೆ ಮಾತನಾಡುತ್ತಾ ನಟ ದರ್ಶನ್ ಅಯ್ಯೋ ತಗಡೇ, ಗುಮ್ಮಿಸ್ಕೊತ್ತಿಯಾ ಎಂದಿದ್ದರು. ಇದು ಬೆದರಿಕೆ ಆರೋಪ ಎಂದು ಖಂಡನೆ ವ್ಯಕ್ತವಾಗುತ್ತಿದೆ. ಎರಡು ದಿನಗಳ ಹಿಂದೆ ಈ ಹೇಳಿಕೆ ಸಂಬಂಧ ಕರ್ನಾಟಕ ಪ್ರಜಾ ಪರವೇದಿಕೆ ಸಂಘಟನೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿತ್ತು. ಇದೀಗ ಈ ಬಗ್ಗೆ ಕ್ಷಮೆ ಕೇಳಿ ದೂರು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುತ್ತಾ ನಟ ದರ್ಶನ್ "ಇವತ್ತು ಇವ್ಳು ಇರ್ತಾಳೆ, ನಾಳೆ ಅವ್ಳು ಬರ್ತಾಳೆ" ಎಂದಿದ್ದರು. ಇದನ್ನು ಖಂಡಿಸಿ 'ಗೌಡತಿ ಸೇನೆ' ಹೆಸರಿನ ಸ್ತ್ರೀ ಸಂಘಟನೆಯು ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರು ನೀಡಿದೆ.
ಯುವಜನರಿಗೆ ಮಾದರಿಯಾಗಬೇಕಾಗಿದ್ದ ನಟ ಅಸಹಜ ಹೇಳಿಕೆ ನೀಡುತ್ತಿದ್ದಾರೆ. 25ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೀಳು ಭಾವನೆಯಿ೦ದ ಒಬ್ಬಳು ಹೋಗುತ್ತಾಳೆ, ಒಬ್ಬಳು ಬರುತ್ತಾಳೆ, ಅವಳ ಅಜ್ಜಿನಾ ಬಡಿಯ, ಎಂದು ಉಡಾಫೆಯಾಗಿ ಮಾತನಾಡಿರುತ್ತಾರೆ. ಈ ಸಭೆಯಲ್ಲಿ ಆದಿ ಚು೦ಚನಗಿರಿ ಗುರುಗಳು, ಸಂಸದೆ ಸುಮಲತಾ ಹಾಗೂ ಹಲವಾರು ಗಣ್ಯತಿಗಣ್ಯರು, ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು. ಸಮಾಜಕ್ಕೆ ಮಾದರಿ ಆಗಬೇಕಾದ ನಟನೊಬ್ಬ ಸಾರ್ವಜನಿಕವಾಗಿ ಮಾತನಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ವಿಚಾರಣೆ ನಡೆಸಿ ಆತ ಉಪಯೋಗಿಸಿರುವ ಪದಗಳು ಯಾವ ಭಾವನೆಯಿ೦ದ ಹೇಳಿದ್ದಾರೆಂದು ವಿವರಣೆ ಕೇಳಬೇಕಾಗಿ ವಿನಂತಿ" ದೂರಿನಲ್ಲಿ ಆಗ್ರಹಿಸಿದ್ದರು.

ಇನ್ನು ಹೆಣ್ಣು ಮಕ್ಕಳ ನಿಂದನೆ ಹಾಗೂ ರಾಜ್ಯದ ಪ್ರಭಾವಿ ಸಮುದಾಯದ ನಾಯಕನಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಇಂದು(ಫೆಬ್ರವರಿ 23) ಮತ್ತೆರಡು ದೂರು ನೀಡಲಾಗಿದೆ. ದರ್ಶನ್ ವಿರುದ್ಧ ಆರ್. ಆರ್ ನಗರ ಹಾಗೂ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಗಣೇಶ್ ಗೌಡ ಹಾಗೂ ಜಗದೀಶ್ ಎಂಬುವವರು ದೂರು ನೀಡಿದ್ದಾರೆ.
ಇದೆಲ್ಲದರ ನಡುವೆ ಎರಡು ದಿನಗಳ ಹಿಂದೆ ನಟ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕರ್ನಾಟಕ ಪ್ರಜಾಪರ ವೇದಿಕೆಯ ರಾಜ್ಯಾಧ್ಯಕ್ಷ ಕನ್ನಡ ಶಫಿ ಉಲ್ಟಾ ಹೊಡೆದಿದ್ದರು. ಕುಡುಕ ದರ್ಶನ್. ಈತ ಅಭಿಮಾನಿಗಳಿಗೆ ಹೇಗೆ ಮಾದರಿ ಆಗುತ್ತಾನೆ?" ಎಂದು ಪ್ರಶ್ನಿಸಿದ್ದ ಶಫಿ ಇವತ್ತು ತಮ್ಮ ಹೇಳಿಕೆ ವಾಪಸ್ ಪಡೆದು ವಿಡಿಯೋ ಬಿಡುಗಡೆ ಮಾಡಿದ್ದಾರೆ.
"ನಟ ದರ್ಶನ್ ಪದ ಬಳಕೆ ಮುಜುಗರ ತಂದಿದ್ದ ವಿಚಾರ. ಹಾಗಾಗಿ ನಾವು ದೂರು ದಾಖಲಿಸಿದ್ದೆವು. ನಮ್ಮ ಸಂಘಟನೆಯವರು ಸ್ವಲ್ಪ ಆತುರ ಬಿದ್ವಿ ಅನ್ನಿಸ್ತಿದೆ. ಒಬ್ಬ ಬೆಳೆದಿರುವಂತಹ ದೊಡ್ಡ ನಟ. ಅವರ ಮನಸ್ಸಿಗೆ ನೋವಾಗಿದ್ದರೆ ಸಂಘಟನೆ ಪರವಾಗಿ ಕನ್ನಡ ಮನಸ್ಸುಗಳಿಗೆ ಕ್ಷಮೆ ಯಾಚಿಸುತ್ತಾ ವಾಣಿಜ್ಯ ಮಂಡಳಿಗೆ ಕೊಟ್ಟಿರುವ ದೂರು ಹಿಂಪಡೆಯುವ ಕೆಲಸ ಮಾಡ್ತೀನಿ" ಎಂದು ಶಫಿ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.


Click it and Unblock the Notifications











