ಕನ್ನಡ ರಾಜ್ಯೋತ್ಸವಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾಗಳ ಪಟ್ಟಿ
ನವೆಂಬರ್ 1 ಕನ್ನಡದ ಹಬ್ಬ. ಅರ್ಥಾತ್ ಕನ್ನಡ ರಾಜ್ಯೋತ್ಸವ. ಈ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಚಿತ್ರರಂಗ ತಯಾರಾಗಿ ನಿಂತಿದೆ. ಕನ್ನಡದ ನಾಲ್ಕು ಸಿನಿಮಾಗಳು ಈ ದಿನ ಬಿಡುಗಡೆಯಾಗುತ್ತಿವೆ.
ಶರಣ್ ಅಭಿನಯದ 'ವಿಕ್ಟರಿ 2', ರಾಜ್ ಬಿ ಶೆಟ್ಟಿ ನಟನೆಯ 'ಅಮ್ಮಚ್ಚಿಯೆಂಬ ನೆನಪು', ರಾಜ್ಯೋತ್ಸದ ವಿಶೇಷ ಚಿತ್ರ 'ಕನ್ನಡ ದೇಶದೊಳ್' ಹಾಗೂ 'ಮನಸಿನ ಮರೆಯಲಿ' ಎಂಬ ಸಿನಿಮಾಗಳು ಆ ದಿನ ಬಿಡುಗಡೆಯಾಗುತ್ತಿವೆ.
ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹತ್ತಿರದಲ್ಲಿ ಬರಲಿದ್ದು, ಆ ಉದ್ದೇಶದಿಂದ ಸಿನಿಮಾ ಬಿಡುಗಡೆಗೆ ಇದು ಒಳ್ಳೆಯ ಸಮಯ ಎಂದು ಅನೇಕ ಚಿತ್ರತಂಡಗಳು ನಿರ್ಧಾರ ಮಾಡಿವೆ.
ಅಂದಹಾಗೆ, ಕನ್ನಡದ ರಾಜ್ಯೋತ್ಸವದ ದಿನ ಬಿಡುಗಡೆ ಆಗುತ್ತಿರುವ ಸಿನಿಮಾಗಳ ವಿವರ ಮುಂದಿದೆ ಓದಿ...

ವಿಕ್ಟರಿ 2
ಶರಣ್ ಮತ್ತೆ ಕಾಮಿಡಿ ಮಾಡೋಕ್ಕೆ ಬರುತ್ತಿದ್ದಾರೆ. ಅವರ 'ವಿಕ್ಟರಿ 2' ಸಿನಿಮಾ ನವೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. 'ವಿಕ್ಟರಿ' ಸಿನಿಮಾದ ಯಶಸ್ಸಿನ ನಂತರ ಮತ್ತೆ ಶರಣ್ ಅದೇ ಹೆಸರಿನ ಸಿನಿಮಾ ಮಾಡಿದ್ದಾರೆ. ಹರಿ ಸಂತೋಷ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಅಮ್ಮಚ್ಚಿಯೆಂಬ ನೆನಪು
'ಅಮ್ಮಚ್ಚಿಯೆಂಬ ನೆನಪು' ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿದೆ. ಸಿನಿಮಾ ವಿಶೇಷವಾಗಿದೆ ಎನ್ನುವ ಭಾವನೆಯನ್ನು ಟ್ರೇಲರ್ ಮೂಡಿಸಿದೆ. ಲೇಖಕಿ ವೈದೇಹಿ ಕಥೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ವೈಜಯಂತಿ, ರಾಜ್ ಬಿ ಶೆಟ್ಟಿ ಚಿತ್ರದಲ್ಲಿ ನಟಿಸಿದ್ದಾರೆ. ನವೀನ್ ಕುಮಾರ್ ಕ್ಯಾಮರಾ ಕಣ್ಣಿಗೆ ಹಬ್ಬದಂತಿದೆ.

ಕನ್ನಡ ದೇಶದೊಳ್
ಕನ್ನಡ ರಾಜ್ಯೋತ್ಸವದ ವಿಶೇಷವಾಗಿ 'ಕನ್ನಡ ದೇಶದೊಳ್' ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದ ಪ್ರತಿಭೆಗಳು ಸೇರಿ ಈ ಸಿನಿಮಾವನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಈ ಚಿತ್ರದ ಟೈಟಲ್ ಎಲ್ಲರ ಗಮನ ಸೆಳೆದಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ.

ಮನಸಿನ ಮರೆಯಲಿ
'ಮನಸಿನ ಮರೆಯಲಿ' ಎಂಬ ಸಿನಿಮಾವನ್ನು ಕೂಡ ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಚಿತ್ರವನ್ನು ಆಸ್ಕರ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ದಿವ್ಯ ಗೌಡ ಸಿನಿಮಾದ ನಾಯಕಿ ಆಗಿದ್ದಾರೆ.


Click it and Unblock the Notifications











