"ಪುನೀತ್ ಹೋದ ಬಳಿಕ 40% ಇಂಡಸ್ಟ್ರಿ ಸತ್ತುಹೋಗಿದೆ"; ಥಿಯೇಟರ್ ಮಾಲೀಕ ಅಳಲು
ಕನ್ನಡ ಚಿತ್ರರಂಗ ಸಂಕಷ್ಟ ಎದುರಿಸುತ್ತಿದೆ. ದೊಡ್ಡ ಸಿನಿಮಾಗಳು ಹೆಚ್ಚು ಬರದೇ, ಸಣ್ಣ ಸಿನಿಮಾಗಳನ್ನು ಜನ ನೋಡದೇ ಪರಭಾಷಾ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ನಮ್ಮ ಕಲಾವಿದರೇ ನಿಧಾನವಾಗಿ ಬೇರೆ ಭಾಷೆಗಳತ್ತ ಮುಖ ಮಾಡುತ್ತಿದ್ದಾರೆ. ಹೀಗೆ ಮುಂದುವರೆದರೆ ಚಿತ್ರರಂಗಕ್ಕೆ ಉಳಿಗಾಲ ಇಲ್ಲ ಎನ್ನುವ ಚರ್ಚೆ ಶುರುವಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಸಂಖ್ಯೆ ಕಮ್ಮಿ ಇದೆ. ಯಶ್ ಮೂರು ವರ್ಷಕ್ಕೆ ಒಂದು ಸಿನಿಮಾ ಎನ್ನುತ್ತಿದ್ದಾರೆ. ಇದೀಗ ಸುದೀಪ್ ಕೂಡ ಅದೇ ಹಾದಿಯಲ್ಲಿದ್ದಾರೆ. ರಕ್ಷಿತ್ ಶೆಟ್ಟಿ ಒಂದು ಸಿನಿಮಾ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ರವಿಚಂದ್ರನ್ ಸಿನಿಮಾಗಳು ಮೊದಲಿನ ಕ್ರೇಜ್ ಉಳಿಸಿಕೊಂಡಿಲ್ಲ. ದರ್ಶನ್ ಇದ್ದಿದ್ದರಲ್ಲಿ ವರ್ಷಕ್ಕೊಂದು ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಶಿವಣ್ಣ ಮಾತ್ರ ಈ ವಿಚಾರದಲ್ಲಿ ಮುಂದೆ ಇದ್ದಾರೆ. ಗಣೇಶ್, ದುನಿಯಾ ವಿಜಯ್, ಶ್ರೀಮುರಳಿ, ಉಪೇಂದ್ರ, ಧ್ರುವ ಸಿನಿಮಾಗಳು ತಕ್ಕಮಟ್ಟಿಗೆ ಸದ್ದು ಮಾಡ್ತಿವೆ.

ಪುನೀತ್ ರಾಜ್‌ಕುಮಾರ್ ಅಗಲಿಕೆ ಚಿತ್ರರಂಗದ ಮೇಲೆ ಕೂಡ ಪರಿಣಾಮ ಬೀರಿದೆ. ದೊಡ್ಡ ಅಭಿಮಾನಿಗಳ ಬಳಗ ಹೊಂದಿದ್ದ ಅಪ್ಪು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದರು. ಆದರೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದರು. ಇದು ಚಿತ್ರರಂಗಕ್ಕೆ ತುಂಬಲಾರದ ನಷ್ಟವೇ ಸರಿ. ಸದ್ಯ ಪುನೀತ್ ನಟನೆಯ 'ಅಪ್ಪು' ಸಿನಿಮಾ ರೀ-ರಿಲೀಸ್ ಆಗಿ ಸದ್ದು ಮಾಡ್ತಿದೆ.
ಪುನೀತ್ ರಾಜ್‌ಕುಮಾರ್ ಜೊತೆಗೆ 40% ಚಿತ್ರರಂಗ ಸತ್ತು ಹೋಯಿತು ಎಂದು ಮೈಸೂರಿನ ಗಾಯತ್ರಿ ಚಿತ್ರಮಂದಿರದ ಮಾಲೀಕ ರಾಜಾರಾಮ್ ಹೇಳಿದ್ದಾರೆ. 'ಅಪ್ಪು' ಸಿನಿಮಾರ ರೀ-ರಿಲೀಸ್ ಹಿನ್ನೆಲೆಯಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರ ಸಮಸ್ಯೆಗಳು ಏನೇನು ಎನ್ನುವುದನ್ನು ವಿವರಿಸಿದ್ದಾರೆ. ಸರ್ಕಾರ ಕೂಡ ಈ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮೈಸೂರಿನಲ್ಲಿ ಮೊದಲು 21 ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಿದ್ದವು. ಈಗ ಬೆರಳೆಣಿಯಷ್ಟಿವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮೈಸೂರಿನಲ್ಲಿ ಆಸ್ತಿ ತೆರಿಗೆ ಜಾಸ್ತಿ. ನಾವು ವರ್ಷ 4.5 ಲಕ್ಷ ರೂ. ಚಿತ್ರಮಂದಿರದ ತೆರಿಗೆ ಕಟ್ಟುವಂತಾಗಿದೆ. ಅದೇ ಬೆಂಗಳೂರಿನ ನವರಂಗ್ ಥಿಯೇಟರ್ ಮಾಲೀಕರು 1.5 ಲಕ್ಷ ರೂ. ಪಾವತಿಸುತ್ತಾರೆ. ವರ್ಷಕ್ಕೆ ಇಷ್ಟು ದೊಡ್ಡ ಮೊತ್ತದ ತೆರಿಗೆ ಕಟ್ಟುವುದು ನಮಗೆ ನಿಜಕ್ಕೂ ಕಷ್ಟ ಎಂದಿದ್ದಾರೆ.
"ಪುನೀತ್ ಅಗಲಿಕೆ ಬಳಿಕ ಇಂಡಸ್ಟ್ರಿ 40% ರಷ್ಟು ಸತ್ತು ಹೋಗಿದೆ. ಅದರಲ್ಲಿ ಯಾವುದೇ ಚರ್ಚೆ ಬೇಡ. ಇಂಡಸ್ಟ್ರಿಯ 35% ರಿಂದ 40% ಆದಾಯ ಪುನೀತ್ ಅವರ ಜೊತೆ ಹೊರಟು ಹೋಗಿದೆ. ಅವರದ್ದು ಕನಿಷ್ಠಪಕ್ಷ ವರ್ಷಕ್ಕೊಂದು ಸಿನಿಮಾ ಬರ್ತಿತ್ತು. ಮಿನಿಮಮ್ 5 ವಾರ ಪ್ರದರ್ಶನ ಕಾಣುತ್ತಿತ್ತು. ಜನ ಮೆಚ್ಚಿದ್ದರೆ 15 ವಾರ ಓಡುತ್ತಿತ್ತು. ಕಮ್ಮಿ ಅಂದರೂ ಎರಡ್ಮೂರು ತಿಂಗಳು ಅಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಓಡಿ ಆದಾಯ ಬರುತ್ತಿತ್ತು" ಎಂದು ರಾಜಾರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬರೀ ಥಿಯೇಟರ್ ಅಲ್ಲ. ಪಕ್ಕದ ಹೋಟೆಲ್, ಟೀ ಅಂಗಡಿ ಹೀಗೆ ಒಂದು ವ್ಯವಸ್ಥೆಯೇ ಒಂದು ಸಿನಿಮಾ ನಂಬಿಕೊಂಡು ಇರುತ್ತಿತ್ತು. ಪುನೀತ್ ನಟಿಸಿದ ಎಲ್ಲಾ ಸಿನಿಮಾಗಳನ್ನು ನಮ್ಮ ಗಾಯತ್ರಿ ಚಿತ್ರಮಂದಿರದಲ್ಲಿ ಪ್ರದರ್ಶಿಸಿದ್ದೇವೆ. ಹೊಸ ಸಿನಿಮಾ ನೋಡಲು ಇಷ್ಟು ಜನ ಬರಲ್ಲ, ಅಷ್ಟು ಜನ 'ಅಪ್ಪು' ರೀ-ರಿಲೀಸ್ ನೋಡೊಕೆ ಬರ್ತಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಕಳೆದ ವರ್ಷ 'ಜಾಕಿ' ರೀ-ರಿಲೀಸ್ ಆಗಿ ಒಂದು ವಾರ ಭರ್ಜರಿ ಪ್ರದರ್ಶನ ಕಂಡಿತ್ತು. ಪುನೀತ್ ರೀತಿ ಮತ್ತೆ ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಹಿಡಿದು ಕೂರಿಸುವಂತವರು ಯಾರು ಬರ್ತಾರೆ ನೋಡಬೇಕು. ನಮ್ಮ ಗಾಯತ್ರಿ ಥಿಯೇಟರ್ ಅಣ್ಣಾವ್ರ ಕುಟುಂಬಕ್ಕೆ ಬಹಳ ಲಕ್ಕಿ ಆಗಿತ್ತು. 'ದೂರದ ಬೆಟ್ಟ' ಚಿತ್ರದಿಂದ ಹಲವು ಸಿನಿಮಾಗಳನ್ನು ಇಲ್ಲಿ ಪ್ರದರ್ಶಿಸಿದ್ದೇವೆ" ಎಂದು ರಾಜಾರಾಮ್ ನೆನಪಿಸಿಕೊಂಡಿದ್ದಾರೆ.
20 ವರ್ಷಗಳ ಹಿಂದೆ 'ಅಪ್ಪು' ಸಿನಿಮಾ ನಮ್ಮ ಚಿತ್ರಮಂದಿರದಲ್ಲಿ ದೊಡ್ಡಮಟ್ಟದಲ್ಲಿ ಪ್ರದರ್ಶನ ಕಂಡಿತ್ತು. ಅಂದು ಅಣ್ಣಾವ್ರು ಸಿನಿಮಾ ನೋಡಲು ಇಲ್ಲಿಗೆ ಬರಬೇಕು ಎಂದಿದ್ದರು. 5 ಶೋಗೆ ಆಗುವಷ್ಟು ಜನ ಇದ್ದಾರೆ, ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದೆ. ಅಷ್ಟರಮಟ್ಟಿಗೆ 'ಅಪ್ಪು' ಕ್ರೇಜ್ ಇತ್ತು ಎಂದು ವಿವರಿಸಿದ್ದಾರೆ.


Click it and Unblock the Notifications











