ರಾಜ್. ಬಿ ಶೆಟ್ಟಿಗೆ ಕೊನೆಗೂ ಸಿಕ್ತು ಬಿರುದು; ಸೀಕ್ರೆಟ್ ರಿವೀಲ್ ಮಾಡಿದ ಶಿವಣ್ಣ
ಸಿನಿಮಾ ನಟ-ನಟಿಯರು, ನಿರ್ದೇಶಕರು, ಗಾಯಕರು, ಸಂಗೀತ ನಿರ್ದೇಶಕರಿಗೆ ಅಭಿಮಾನಿಗಳು ಬಿರುದುಗಳನ್ನು ಕೊಡುತ್ತಾರೆ. ನಿರ್ಮಾಪಕರಿಗೂ ಬಿರುದುಗಳು ಸಿಕ್ಕಿವೆ. ಕೆಲವೊಮ್ಮೆ ಚಿತ್ರತಂಡಗಳು ತಮ್ಮ ಚಿತ್ರದ ನಾಯಕ-ನಾಯಕಿಗೆ ಬಿರುದು ಕೊಡುವುದು ಇದೆ. ಅಣ್ಣಾವ್ರಿಗೆ ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆ ಹತ್ತಾರು ಬಿರುದುಗಳನ್ನು ಕೊಟ್ಟಿದ್ದರು.
ಇತ್ತೀಚಿನ ವರ್ಷಗಳಲ್ಲಿ ಕೆಲ ತಾರೆಯರು ತಮಗೆ ಯಾವುದೇ ಬಿರುದು ಬಾವಲಿಗಳು ಬೇಡ. ನಮ್ಮ ಸ್ವತಃ ಹೆಸರಿನಿಂದ ಕರೆದರೆ ಸಾಕು ಎನ್ನುತ್ತಾರೆ. ಇನ್ನು ಕೆಲವರು ಬಿರುದು ಕೊಡುವುದಕ್ಕೂ ಮುನ್ನ ಬೇಡ ಎಂದು ಪಟ್ಟು ಹಿಡಿಯುತ್ತಾರೆ. ಕನ್ನಡ ಸ್ಟಾರ್ ನಟರಿಗೆಲ್ಲಾ ಬಿರುದುಗಳಿವೆ. ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಸೇರಿದಂತೆ ಕೆಲವರ ಹೆಸರಿನ ಜೊತೆ ಯಾವುದೇ ಬಿರುದು ಸೇರಿಕೊಂಡಿಲ್ಲ.

'45' ಚಿತ್ರತಂಡ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಹೊಸ ಬಿರುದು ನೀಡಲು ಮುಂದಾಗಿತ್ತು. ಆದರೆ ಅವರು ನಯವಾಗಿಯೇ ತಿರಸ್ಕರಿಸಿದ್ದರು. ಆದರೆ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಆ ಟೈಟಲ್ ಏನು ಎನ್ನುವುದನ್ನು ಶಿವಣ್ಣ ರಿವೀಲ್ ಮಾಡಿದ್ದಾರೆ. ರಾಜ್ ಅದನ್ನು ಒಪ್ಪಿಕೊಳ್ತಾರಾ? ತಮ್ಮ ಹೆಸರಿನ ಜೊತೆ ಸೇರಿಸಿಕೊಳ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.
ನಟಸಾರ್ವಭೌಮ ಸೇರಿದಂತೆ ಡಾ. ರಾಜ್‌ಕುಮಾರ್ ಅವರಿಗೆ ಸಾಕಷ್ಟು ಬಿರುದುಗಳಿದ್ದವು. ಸಾಹಸ ಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ ನಾಗ್, ಹ್ಯಾಟ್ರಿಕ್ ಹೀರೊ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ತ್ಯಾಗರಾಜ ರಮೇಶ್ ಅರವಿಂದ್, ನವರಸ ನಾಯಕ ಜಗ್ಗೇಶ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ಹೀಗೆ ಕನ್ನಡದ ಸ್ಟಾರ್ ನಟರಿಗೆಲ್ಲಾ ಬಿರುದುಗಳಿವೆ.
ರಾಜ್. ಬಿ ಶೆಟ್ಟಿ ಅವರಿಗೆ ಸೋಲ್ ಸ್ಟಾರ್ ರಾಜ್ ಬಿ. ಶೆಟ್ಟಿ ಎಂದು ಬಿರುದು ಕೊಡಲು ಅರ್ಜುನ್ ಜನ್ಯಾ ಮುಂದಾಗಿದ್ದರು. '45' ಸಿನಿಮಾ ಟೀಸರ್‌ನಲ್ಲಿ ಅದನ್ನು ಹಾಕಿದ್ದರಂತೆ. ಆದರೆ ಬೇಡವೇ ಬೇಡ ಎಂದು ಹೇಳಿ ರಾಜ್ ಅದನ್ನು ತೆಗೆಸಿಬಿಟ್ಟರಂತೆ. ನನಗೆ ಯಾವುದೇ ಬಿರುದು ಬೇಡ, ದಯವಿಟ್ಟು ತೆಗೆಯಿರಿ ಎಂದು ಕೊಂಚ ಕೇಳಿದ್ದರಂತೆ. ಹಾಗಾಗಿ ಅದನ್ನು ಕೈಬಿಡಲಾಗಿತ್ತು. ಟೀಸರ್ ರಿಲೀಸ್ ವೇದಿಕೆಯಲ್ಲಿ ಶಿವಣ್ಣ ಅದನ್ನು ರಿವೀಲ್ ಮಾಡಿಬಿಟ್ಟರು.
ಎಸ್. ಎಸ್ ರಾಜ್ ಬಿ ಶೆಟ್ಟಿ ಅಂದರೆ ಸೋಲ್ ಸ್ಟಾರ್ ರಾಜ್ ಬಿ ಶೆಟ್ಟಿ ಎಂದು ಶಿವಣ್ಣ ಹೇಳಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಜೀವ ತುಂಬಿ ರಾಜ್ ನಟಿಸುತ್ತಾರೆ. ಹಾಗಾಗಿ ಈ ಟೈಟಲ್ ಕೊಡಲಾಗಿದೆ. ತಮಿಳು ನಟರಾದ ಅಜಿತ್, ಕಮಲ್ ಹಾಸನ್ ತಮಗೆ ಯಾವುದೇ ಬಿರುದು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಇತ್ತೀಚೆಗೆ ನಯನತಾರ ಕೂಡ ತಮಗೆ ಲೇಡಿ ಸೂಪರ್ ಸ್ಟಾರ್ ಎಂಬ ಬಿರುದು ಬೇಡ ಎಂದು ತಿರಸ್ಕರಿಸಿ ಅಭಿಮಾನಿಗಳಿಗೆ ಪತ್ರ ಬರೆದಿದ್ದರು.
ಒಂದ್ಕಾಲದಲ್ಲಿ ನಟರು ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಗೆದ್ದ ಮೇಲೆ ಬಿರುದುಗಳು ಸಿಗುತ್ತಿತ್ತು. ಇತ್ತೀಚೆಗೆ ಕೆಲವರು ಬಿರುದು ಇಟ್ಟುಕೊಂಡೇ ಚಿತ್ರರಂಗಕ್ಕೆ ಬರುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ಕೆಲವರು ನಮಗೆ ಬಿರುದು ಬೇಡ ಎನ್ನುತ್ತಾರೆ. ಮತ್ತೆ ಕೆಲವರು ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಿದ್ದನ್ನು ಬೇಡ ಎನ್ನಬಾರದು ಎನ್ನುತ್ತಾರೆ. ಮುಂದೆ ಅದನ್ನು ಉಳಿಸಿಕೊಂಡರೆ ಸಾಕು ಎನ್ನುವ ಲೆಕ್ಕಾಚಾರದಲ್ಲಿರುತ್ತಾರೆ.
ಸಂಗೀತ ನಿರ್ದೇಶನ ಅರ್ಜುನ್ ಜನ್ಯಾ ನಿರ್ದೇಶನದ ಚೊಚ್ಚಲ ಸಿನಿಮಾ '45'. ಈ ಮಲ್ಟಿಸ್ಟಾರರ್ ಚಿತ್ರದಲ್ಲಿ ಶಿವಣ್ಣ, ಉಪೇಂದ್ರ ಜೊತೆ ರಾಜ್. ಬಿ ಶೆಟ್ಟಿ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ಬಹಳ ಮಹತ್ವ ಇದೆ. ಆ ಪಾತ್ರದ ಸುತ್ತಾ ಕಥೆ ಸುತ್ತುತ್ತದೆ. ಸದ್ಯ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











