ಸಿಕ್ಕಾಪಟ್ಟೆ ಜೋಶ್‌ನಲ್ಲಿ ಶಿವಣ್ಣ, ಉಪ್ಪಿ, ರಾಜ್; 'Afro ತಪಾಂಗ್' ಸಾಂಗ್ ಅಷ್ಟೇ ಮಜವಾಗಿದೆ ಮೇಕಿಂಗ್
ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಬಿಡುಗಡೆಗೆ ಅಣಿಯಾಗ್ತಿದೆ. ಶೀಘ್ರದಲ್ಲೇ ಟ್ರೈಲರ್ ಬಿಡುಗಡೆ ಮಾಡಲು ಲೆಕ್ಕಾಚಾರ ಶುರುವಾಗಿದೆ. ಸುದೀಪ್ ನಟನೆಯ 'ಮಾರ್ಕ್' ಎದುರು ಕ್ರಿಸ್‌ಮಸ್ ಸಂಭ್ರಮದಲ್ಲೇ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ 'Afro ತಪಾಂಗ್' ಸಾಂಗ್ ಸಖತ್ ವೈರಲ್ ಆಗಿದೆ. ಸದ್ಯ ಅದರ ಮೇಕಿಂಗ್ ಸಿನಿರಸಿಕರ ಗಮನ ಸೆಳೆಯುತ್ತಿದೆ.
ಉಂಗಾಡದ ಘೆಟ್ಟೋ ಕಿಡ್ಸ್ ಜೊತೆ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಸೇರಿ ಹೆಜ್ಜೆ ಹಾಕಿರುವ ಡ್ಯಾನ್ಸಿಂಗ್ ನಂಬರ್ ಇದು. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಾಂಗ್ ಕಟ್ಟಿಕೊಡಲಾಗಿದೆ. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಸೆರೆಹಿಡಿದಿದ್ದಾರೆ. ಅರ್ಜುನ್ ಜನ್ಯಾ ಸಂಗೀತದ ಹಾಡಿಗೆ ಎಂ ಸಿ ಬಿಜ್ಜು ಮತ್ತು ನಿಶಾನ್ ರೈ ಸಾಹಿತ್ಯ ಬರೆದು ಹಾಡಿದ್ದಾರೆ.

ರಾಜ್ಯೋತ್ಸವ ಸಂಭ್ರಮದಲ್ಲಿ '45' ಚಿತ್ರದ ಈ ಪ್ರಮೋಷನಲ್ ಸಾಂಗ್ ರಿಲೀಸ್ ಆಗಿತ್ತು. ಶಿವಣ್ಣ, ಉಪ್ಪಿ ಹಾಗೂ ಶೆಟ್ರ ಸಿಗ್ನೇಚರ್ ಸ್ಟೆಪ್‌ಗಳನ್ನು ಮಿಕ್ಸ್ ಮಾಡಿ ಹೊಸ ರೀತಿಯಲ್ಲಿ ಡ್ಯಾನ್ಸ್ ಕಂಪೋಸ್ ಮಾಡಲಾಗಿದೆ. ಮಕ್ಕಳ ಜೊತೆ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾ ಮೂವರು ಹೆಜ್ಜೆ ಹಾಕಿರೋದು ವಿಶೇಷ.
ಚಿತ್ರದಲ್ಲಿ ಬಹಳ ಪುಕ್ಕಲು ವ್ಯಕ್ತಿತ್ವದ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಮಾಡಿದ್ದಾರೆ. ಅವರ ಪಾತ್ರದ ಸುತ್ತಾ ಇಡೀ ಸಿನಿಮಾ ಕಥೆ ಸಾಗುತ್ತದೆ. ಅವರ ಮೂಲಕವೇ ಈ ಸಾಂಗ್ ಶುರುವಾಗುತ್ತದೆ. ಕಾಡಿನಲ್ಲಿ ತಪ್ಪಿಸಿಕೊಂಡ ಶೆಟ್ರನ್ನು ಒಂದಷ್ಟು ನಾಯಿಗಳು ಬೆನ್ನಟ್ಟತ್ತವೆ. ತಪ್ಪಿಸಿಕೊಳ್ಳು ಹೋಗಿ ಮೇಲಿಂದ ಕೆಳಗೆ ದಟ್ಟ ಕಾಡಿನಲ್ಲಿ ಬೀಳ್ತಾರೆ.
ಅಲ್ಲಿದ್ದ ಒಂದಷ್ಟು ಹುಡುಗರು ಅವ್ರ ಅವತಾರ ಬದಲಿಸಿ ತಮ್ಮ ಜಾಗಕ್ಕೆ ಕರ್ಕೊಂಡ್ ಹೋಗಿ ಕ್ವಾಟ್ಲೆ ಕೊಡೊಕೆ ಆರಂಭಿಸುತ್ತಾರೆ. ಅಲ್ಲಿಗೆ ಶಿವಣ್ಣ, ಉಪ್ಪಿ ಎಂಟ್ರಿಯಾದ ಬಳಿಕ ಸಾಂಗ್ ಮತ್ತೊಂದು ಹಂತಕ್ಕೆ ಹೋಗುತ್ತೆ.
ವೆರೈಟಿ ವೆರೈಟಿ ಕಾಸ್ಟ್ಯೂಮ್‌ಗಳಲ್ಲಿ ಇಬ್ಬರೂ ಸ್ಟೈಲಿಶ್ ಅವತಾರದಲ್ಲಿ ಮಿಂಚಿದ್ದಾರೆ. ಕ್ರೇನ್, ಜಿಮ್ಮಿ ಜೀಪ್ ಬಳಸಿ ಸಾಂಗ್ ಶೂಟ್ ಮಾಡಿದ್ದಾರೆ. ಶಿವಣ್ಣನನ್ನು ಸಿಂಹಕ್ಕೆ ಉಪೇಂದ್ರ ಅವರನ್ನು ಕಾಡುಕೋಣಕ್ಕೆ ಹೋಲಿಸಿ ಜನ್ಯಾ ತೋರಿಸಿದ್ದಾರೆ. ಶಿವಣ್ಣನ 'ಜೋಗಿ' ಚಿತ್ರದ ಸ್ಟೆಪ್, ಉಪ್ಪಿ 'ಬರೀ ಓಳು' ಹಾಗೂ ಶೆಟ್ರ ಹುಲಿ ಕುಣಿತ ಸ್ಟೆಪ್ ಸೇರಿಸಿ ಒಂದು ಸೀಕ್ವೆನ್ಸ್ ಕಂಪೋಸ್ ಮಾಡಿದ್ದಾರೆ. ಅದು ಹೈಲೆಟ್ ಆಗಿದೆ.
ಗೀತಾ ಶಿವರಾಜ್‌ಕುಮಾರ್ ಕೂಡ ಸಾಂಗ್ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯಲ್ಲಿ ಉಂಗಾಡದ ಘೆಟ್ಟೋ ತಂಡಕ್ಕೆ ಅರ್ಜುನ್ ಜನ್ಯಾ ಹಾಗೂ ಜಾನಿ ಮಾಸ್ಟರ್ ಧನ್ಯವಾದ ತಿಳಿಸಿದ್ದಾರೆ. ಅವ್ರು ಕೂಡ ಅವಕಾಶ ಕೊಟ್ಟಿದ್ದಕ್ಕಾಗಿ ಇಡೀ ತಂಡಕ್ಕೆ ಧನ್ಯವಾದ ತಿಳಿಸಿರುವುದನ್ನು ನೋಡಬಹುದು.
ಅನಾರೋಗ್ಯದಿಂದ ವಿದೇಶದಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ಶಿವಣ್ಣ ಕೊಂಚ ವಿಶ್ರಾಂತಿ ಪಡೆದಿದ್ದರು. ಬಳಿಕ '45' ಚಿತ್ರದ ಸಾಂಗ್ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಎಂದಿನಂತೆ ತಮ್ಮ ಎನರ್ಜಿ ಹಾಗೂ ಡ್ಯಾನ್ಸ್ ಮೂಲಕ ಕಮಾಲ್ ಮಾಡಿದ್ದಾರೆ. ಇಡೀ ತಂಡದ ಜೊತೆ ಬಹಳ ಹುರುಪಿನಿಂದ ಚಿತ್ರೀಕರಣದಲ್ಲಿ ಭಾಗಿ ಆಗಿರುವುದನ್ನು ನೋಡಬಹುದು.
ಡಿಸೆಂಬರ್ 25ಕ್ಕೆ ಸಿನಿಮಾ ರಿಲೀಸ್ ಎಂದು ಮೇಕಿಂಗ್ ವೀಡಿಯೋದಲ್ಲಿ ಚಿತ್ರತಂಡ ಮತ್ತೆ ಖಚಿತಪಡಿಸಿದೆ. ರಮೇಶ್ ರೆಡ್ಡಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಯಾವುದಕ್ಕೂ ರಾಜಿ ಆಗದ ಕೇಳಿದ್ದನ್ನೆಲ್ಲಾ ಕೊಟ್ಟು ಒಂದೊಳ್ಳೆ ಸಿನಿಮಾ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಪೋಸ್ಟ್ ಪ್ರೊಡಕ್ಷನ್ ತಡವಾಗಿ ವರ್ಷದ ಕೊನೆಗೆ ಬಿಡುಗಡೆ ಮಾಡುತ್ತಿದ್ದಾರೆ.


Click it and Unblock the Notifications











