ಈ ಶುಕ್ರವಾರ ಬಿಡುಗಡೆಯಾಗುತ್ತಿರುವ ಐದು ಸಿನಿಮಾಗಳ ಪಟ್ಟಿ
ಈ ಶುಕ್ರವಾರ (ಜುಲೈ 26) ಐದು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿದೆ. 'ಡಿಯರ್ ಕಾಮ್ರೇಡ್', 'ದಶರಥ', 'ಮಹಿರಾ', 'ಜರ್ಕ್' ಹಾಗೂ 'ನಂದನವನದೊಳ್' ನಾಳೆ ರಿಲೀಸ್ ಆಗುವ ಸಿನಿಮಾಗಳಾಗಿವೆ.
'ದಶರಥ' ರವಿಚಂದ್ರನ್ ಅಭಿನಯದ ಸಿನಿಮಾ. ಸೋನಿಕಾ ಅಗರ್ವಾಲ್ ಹಾಗೂ ಅಬಿರಾಮಿ ಚಿತ್ರದ ನಾಯಕಿಯರು. ಎಂ ಎಸ್ ರಮೇಶ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಗುರುಕಿರಣ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
'ಡಿಯರ್ ಕಾಮ್ರೇಡ್' ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಶನ್ ನ ಎರಡನೇ ಸಿನಿಮಾವಾಗಿದೆ. ಮೊದಲ ಬಾರಿಗೆ ತೆಲುಗು ಸಿನಿಮಾವೊಂದು ಏಕಕಾಲದಲ್ಲಿ ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಈಗಾಗಲೇ ಸಿನಿಮಾ ಟ್ರೇಲರ್ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ.

'ಮಹಿರಾ' ರಾಜ್ ಬಿ ಶೆಟ್ಟಿ ಅಭಿನಯದ ಹೊಸ ಸಿನಿಮಾ. ಮಹೇಶ್ ಗೌಡ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಇಲ್ಲಿ ಇಂಟಲಿಜೆನ್ಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ವರ್ಜೆಸಿಯಾ ರಾಡ್ರಿಗ್ಸ್ ಹಾಗೂ ಚೈತ್ರಾ ಆಚಾರ್ ಸಿನಿಮಾದಲ್ಲಿ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾಗಳ ಜೊತೆಗೆ 'ಜರ್ಕ್' ಹಾಗೂ 'ನಂದನವನದೊಳ್' ಚಿತ್ರಗಳೂ ನಾಳೆ ಬಿಡುಗಡೆ ಆಗುತ್ತಿವೆ. 'ಜರ್ಕ್' ಸಿನಿಮಾದಲ್ಲಿ 'ತಿಥಿ' ಚಿತ್ರದ ಖ್ಯಾತಿಯ ಗಡ್ಡಪ್ಪ ದ್ವಿಪಾತ್ರದಲ್ಲಿ ನಟಿಸಿದ್ದಾರೆ. 'ನಂದನವನದೊಳ್' ಸಿನಿಮಾ ಕೊಡಗಿನಲ್ಲಿ ಚಿತ್ರೀಕರಣ ಆಗಿದೆ. ವೃತ್ತಿಪರ ಕೊಲೆಗಾರನೊಬ್ಬನನ್ನು ಹುಡುಕುವ ಕಥೆ ಇದಾಗಿದೆ. ವಿಶೇಷ ಅಂದ್ರೆ ಕೊಲೆಗಾರನ ಹುಡುಕಲು, ಸಿನಿಮಾದಲ್ಲಿ 'ನಂದನವನದೊಳ್' ಎನ್ನುವ ಕಾದಂಬರಿ ಸಹಾಯ ಮಾಡುತ್ತಂತೆ.


Click it and Unblock the Notifications











