ನಾಳೆ 'ಆಯುಷ್ಮಾನ್ ಭವ' ಜೊತೆ 4 ಚಿತ್ರಗಳ ಬಿಡುಗಡೆ
ಶುಕ್ರವಾರ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವ ದಿನ. ನಾಳೆ 5 ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಶಿವರಾಜ್ ಕುಮಾರ್ ನಟನೆಯ 'ಆಯುಷ್ಮಾನ್ ಭವ', ಮಂಜು ಸ್ವರಾಜ್ ನಿರ್ದೇಶನದ 'ಮನೆ ಮಾರಾಟಕ್ಕಿದೆ', ನವೀನ್ ರೆಡ್ಡಿ ನಿರ್ದೇಶನದ 'ರಿಲ್ಯಾಕ್ಸ್ ಸತ್ಯ', 'ನಮ್ ಗಣಿ ಬಿ ಕಾಮ್ ಪಾಸ್', 'ರಾಜ ಪಥ' ಸಿನಿಮಾಗಳು ರಿಲೀಸ್ ಆಗುತ್ತಿವೆ.
'ಆಯುಷ್ಮಾನ್ ಭವ' ಸಿನಿಮಾದ ಬಿಡುಗಡೆ ದಿನಾಂಕ ಪದೇ ಪದೇ ಬದಲಾಗಿದ್ದು, ಈಗ ಅಂತಿಮವಾಗಿ ಸಿನಿಮಾ ರಿಲೀಸ್ ಆಗುತ್ತಿದೆ. 'ಜನುಮದ ಜೋಡಿ' ಸಿನಿಮಾ ಬಿಡುಗಡೆಯಾದ ದಿನವೇ 'ಆಯುಷ್ಮಾನ್ ಭವ' ಸಿನಿಮಾ ಬರುತ್ತಿದೆ ಎನ್ನುವುದು ಮತ್ತೊಂದು ಮತ್ತೊಂದು ವಿಶೇಷವಾಗಿದೆ.

ಪಿ ವಾಸು ಸಿನಿಮಾದ ನಿರ್ದೇಶನ ಮಾಡಿದ್ದಾರೆ. ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣ ಆಗಿದೆ. ರಚಿತಾ ರಾಮ್ ಸಿನಿಮಾದ ನಾಯಕಿ. ಗುರುಕಿರಣ್ ಸಂಗೀತದ ನೂರನೇ ಸಿನಿಮಾ.
'ಮನೆ ಮಾರಾಟಕ್ಕಿದೆ' ಮಂಜು ಸ್ವರಾಜ್ ನಿರ್ದೇಶನದ ಸಿನಿಮಾ. ಕುರಿ ಪ್ರತಾಪ್, ರವಿಶಂಕರ್, ಸಾಧುಕೋಕಿಲ ಹಾಗೂ ಚಿಕ್ಕಣ್ಣ ಸಿನಿಮಾದ ನಾಯಕರು. ಶ್ರುತಿ ಹರಿಹರನ್ ಸಿನಿಮಾದ ನಾಯಕಿ. ಇದೊಂದು ಹಾರರ್ ಕಮ್ ಕಾಮಿಡಿ ಸಿನಿಮಾ. ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.
'ರಿಲ್ಯಾಕ್ಸ್ ಸತ್ಯ' ಮಾನ್ವಿತಾ ಹರೀಶ್ ಹಾಗೂ ಪ್ರಭು ಮುಂಡ್ಕೂರ್ ನಟನೆಯ ಸಿನಿಮಾ. 'ಅಕಿರ' ಖ್ಯಾತಿಯ ನವೀನ್ ರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರಾಜ ವಿಕ್ರಂ ಸಂಗೀತ ನೀಡಿದ್ದಾರೆ. ಸಿನಿಮಾ ಒಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ.

'ನಮ್ ಗಣಿ ಬಿ ಕಾಮ್ ಪಾಸ್' ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಅಭಿಷೇಕ್ ಶೆಟ್ಟಿ, ಐಶಾನಿ ಶೆಟ್ಟಿ, ವಿಕಾಸ್ ವಸಿಷ್ಟ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳ ಜೊತೆಗೆ 'ರಾಜ ಪಥ' ಎಂಬ ಸಿನಿಮಾ ಕೂಡ ನವೆಂಬರ್ 15 ರಂದು ಬಿಡುಗಡೆ ಆಗುತ್ತಿದೆ.


Click it and Unblock the Notifications











