ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ನೋಡಲು 5 ಕಾರಣಗಳು ಇಲ್ಲಿವೆ
ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿಯಿದ್ದು ಮಧ್ಯರಾತ್ರಿಯಿಂದಲೇ ತೆರೆಮೇಲೆ 'ಕಾಟೇರ'ನ ದರ್ಶನವಾಗಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ 1 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಸದ್ಯ ಸಿನಿಮಾ ಎರಡು ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ.
'ಕ್ರಾಂತಿ' ಬಳಿಕ ದರ್ಶನ್ ನಟನೆಯ ಮತ್ತೊಂದು ಸಿನಿಮಾ ಇದೇ ವರ್ಷ ಬಿಡುಗಡೆಯಾಗುತ್ತಿದೆ. ಮುಂದಿನ ವರ್ಷ ಬರುತ್ತೆ ಎಂದುಕೊಂಡಿದ್ದ ಸಿನಿಮಾ ಈ ವರ್ಷವೇ ಬರುತ್ತದೆ ಎಂದು ಹೇಳಿ ಚಿತ್ರತಂಡ ಸರ್‌ಪ್ರೈಸ್ ನೀಡಿತ್ತು. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ 'ಕಾಟೇರ' ಸಿನಿಮಾ ಮೇಲೆ ಕುತೂಹಲ ಮೂಡುವಂತೆ ಮಾಡಿದೆ.

ರಾಕ್‌ಲೈನ್ ವೆಂಕಟೇಶ್ ಬಹಳ ಅದ್ಧೂರಿಯಾಗಿ 'ಕಾಟೇರ' ಚಿತ್ರ ನಿರ್ಮಿಸಿದ್ದಾರೆ. ಮಿಡ್‌ನೈಟ್ ಶೋ, ಅರ್ಲಿ ಮಾರ್ನಿಂಗ್ ಶೋಗಳ ಟಿಕೆಟ್ ಬೆಲೆ ಹೆಚ್ಚಿಸಲಾಗಿದೆ. ಆದರೂ ಕೂಡ ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್ ಅಂಗಳಲ್ಲಿ 'ಕಾಟೇರ' ಕ್ರೇಜ್ ಜೋರಾಗಿದೆ. 'ಕಾಟೇರ' ಸಿನಿಮಾ ನೋಡಲು 5 ಕಾರಣಗಳು ಇಲ್ಲಿವೆ.
1. ದರ್ಶನ್- ತರುಣ್ ಕಾಂಬಿನೇಷನ್
'ಕಾಟೇರ' ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ತರುಣ್ ನಿರ್ದೇಶನದ 'ಚೌಕ' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಬಳಿಕ 'ರಾಬರ್ಟ್' ಚಿತ್ರಕ್ಕಾಗಿ ಇವರಿಬ್ಬರು ಕೈ ಜೋಡಿಸಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ವಿಭಿನ್ನ ಶೇಡ್‌ಗಳಲ್ಲಿ ದಾಸನನ್ನು ತೋರಿಸಿ ನಿರ್ದೇಶಕರು ಗೆದ್ದಿದ್ದರು. 3ನೇ ಬಾರಿ ಇಬ್ಬರೂ ಜೊತೆಯಾಗಿರುವುದು ಕುತೂಹಲ ಮೂಡಿಸಿದೆ. ಈಗಾಗಲೇ ಟ್ರೈಲರ್ ಹಿಟ್ ಆಗಿ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದೆ.

2. 70ರ ದಶಕದ ಹಳ್ಳಿ ಕಥೆ
ಕಮರ್ಷಿಯಲ್ ಸಿನಿಮಾಗಳ ನಡುವೆ ಆಗೊಮ್ಮೆ ಈಗೊಮ್ಮೆ ಹಳ್ಳಿಸೊಗಡಿನ ಸಿನಿಮಾಗಳು ಬರ್ತಿದೆ. 'ಕಾಟೇರ' ಚಿತ್ರದಲ್ಲಿ 70ರ ದಶಕದ ಹಳ್ಳಿಗಳ ಕಥೆಯನ್ನು ಹೇಳಲಾಗಿದೆ. ಉಳುವವನೇ 'ಭೂಮಿಯ ಒಡೆಯ ಕಾಯ್ದೆ' ಸುತ್ತಾ ಸಿನಿಮಾ ಕಥೆ ಸುತ್ತಲಿದೆ. ಆ ಕಾಯ್ದೆ ಹಿನ್ನೆಲೆಯಲ್ಲಿ ಜಮೀನ್ದಾರರು ಹಾಗೂ ರೈತನ ನಡುವಿನ ಸಂಘರ್ಷದ ಕಥೆ ಚಿತ್ರದಲ್ಲಿದೆ. 50 ವರ್ಷಗಳ ಹಿಂದಿನ ಹಳ್ಳಿ ಕಥೆ ಈಗ ನೋಡಲು ಸಿಗುವುದು ಕಷ್ಟ. ಸಾಧ್ಯವಾದಷ್ಟು ಅಂದಿನ ಕಾಲಘಟ್ಟಕ್ಕೆ ಕರೆದುಕೊಂಡು ಹೋಗಲು ಚಿತ್ರತಂಡ ಪ್ರಯತ್ನಿಸಿದೆ. ನೈಜ ಘಟನೆಗಳನ್ನು ಆಧರಿಸಿ ಜಡೇಶ್ ಹಾಗೂ ತರುಣ್ ಕಥೆ ಚಿತ್ರಕಥೆ ಮಾಡಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.
3. ದರ್ಶನ್ ನಾನಾವತಾರ
'ಕಾಟೇರ' ಚಿತ್ರದಲ್ಲಿ ಪ್ರೇಕ್ಷಕರು ದರ್ಶನ್ ಅವರನ್ನು ಹಿಂದೆಂದೂ ನೋಡಿರದ ಪಾತ್ರದಲ್ಲಿ ನೋಡಲಿದ್ದಾರೆ. ಕುಲುಮೆಯಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ದರ್ಶನ್ ಲುಕ್, ಬಾಡಿ ಲಾಂಗ್ವೇಜ್, ಹಳ್ಳಿ ಶೈಲಿಯ ಭಾಷೆ ಎಲ್ಲವೂ ಹೊಸದಾಗಿ ಇರಲಿದೆ. ಜೊತೆಗೆ ವಯಸ್ಸಾದ ಪಾತ್ರದಲ್ಲೂ ದರ್ಶನ್ ಕಾಣಿಸಿಕೊಳ್ಳಲಿದ್ದು ಅಭಿಮಾನಿಗಳಿಗೆ ಹಬ್ಬವೇ ಸರಿ.
4. ಘಟಾನುಘಟಿ ಕಲಾವಿದರು, ತಂತ್ರಜ್ಞರ ಶ್ರಮ
ಅನುಭವಿ ಕಲಾವಿದರು, ತಂತ್ರಜ್ಞರ ತಂಡ ಕಟ್ಟಿಕೊಂಡು ತರುಣ್ ಸುಧೀರ್ 'ಕಾಟೇರ' ಚಿತ್ರ ಕಟ್ಟಿಕೊಟ್ಟಿದ್ದಾರೆ. ಸುಧಾಕರ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ಹರಿಕೃಷ್ಣ ಮ್ಯೂಸಿಕ್ ಬಗ್ಗೆ ಭಾರೀ ನಿರೀಕ್ಷೆಯಿದೆ. ಈಗಾಗಲೇ ಟ್ರೈಲರ್‌ನಲ್ಲಿ ಅದ್ರ ಸಣ್ಣ ಸಣ್ಣ ಝಲಕ್ ನೋಡಿದ್ದೇವೆ. ಇನ್ನು ಜಗಪತಿ ಬಾಬು, ಅಚ್ಯುತ್ ಕುಮಾರ್, ಬಿರಾದಾರ್, ಶ್ರುತಿ, ಕುಮಾರ್ ಗೋವಿಂದ್ ರೀತಿಯ ಅನುಭವಿ ಕಲಾವಿದರು ತಾರಾಗಣದಲ್ಲಿದ್ದಾರೆ.
5. ರೈತರ ಕಥೆ, ಸಂದೇಶ
ಟ್ರೈಲರ್ ಬರೀ ಸಣ್ಣ ಝಲಕ್ ಅಷ್ಟೇ. ಚಿತ್ರದಲ್ಲಿ ಇನ್ನು ಸಾಕಷ್ಟು ಸರ್‌ಪ್ರೈಸಿಂಗ್ ಎಲಿಮೆಂಟ್ಸ್ ಇದೆ ಎಂದು ಚಿತ್ರತಂಡ ಹೇಳುತ್ತಲೇ ಬರ್ತಿದೆ. ಇನ್ನು ರೈತನ ನೋವು ನಲಿವಿನ ಕಥೆ ಚಿತ್ರದಲ್ಲಿದೆ ಎಂದು ಚಿತ್ರತಂಡ ಹೇಳಿದೆ. ಇವತ್ತಿಗೂ ರೈತರು ಸಂಕಷ್ಟದಲ್ಲೇ ದಿನ ದೂಡುತ್ತಿದ್ದಾರೆ. ಸರ್ಕಾರದ ಕಾಯ್ದೆ ಜಾರಿ ಆಗುವಾಗ ಬಲಿಷ್ಠರು ಹೇಗೆ ತಮ್ಮ ಪ್ರಭಾವ ಬೀರುತ್ತಾರೆ. ಇದರಿಂದ ಅಸಹಾಯಕರು ಏನೆಲ್ಲಾ ಕಷ್ಟ ಎದುರಿಸಿದರು. ಅನ್ಯಾಯದ ವಿರುದ್ಧ ನ್ಯಾಯ ಗೆಲ್ಲುತ್ತದೆ ಎನ್ನುವ ಸಂದೇಶ ಚಿತ್ರದಲ್ಲಿದೆ.
{document1}


Click it and Unblock the Notifications











