ದರ್ಶನ್- ಸುದೀಪ್ ಸ್ನೇಹ ಮುರಿದು ಆಯ್ತು 5 ವರ್ಷ: ಒಂದಾಗೋದ್ಯಾವಾಗ?
ಮಾರ್ಚ್ 5 ಕನ್ನಡ ಚಿತ್ರರಂಗದಲ್ಲಿ ಕಹಿ ನೆನಪನ್ನು ಉಳಿಸಿದ ದಿನ. ಈ ದಿನಾಂಕವನ್ನು ಕನ್ನಡಿಗರು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವೇ ಇಲ್ಲ. ಯಾಕೆಂದರೆ ಕನ್ನಡದ ಇಬ್ಬರು ಸ್ಟಾರ್ ನಟರು ಇದೇ ದಿನ ಐದು ವರ್ಷದ ಹಿಂದೆ ತಮ್ಮ ಸ್ನೇಹವನ್ನು ಮುರಿದುಕೊಂಡಿದ್ದಾರೆ. ಅದು ಮತ್ಯಾರೂ ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯದ ಚಕ್ರವರ್ತಿ ಸುದೀಪ್.
ಹೌದು 2017ರಲ್ಲಿ ಕನ್ನಡ ಚಿತ್ರರಂಗದಲ್ಲಿ ಇದ್ದಕ್ಕಿದ್ದ ಹಾಗೆ ದೊಡ್ಡ ಬಿರುಗಾಳಿ ಬೀಸಿತು. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶಾಕಿಂಗ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅವರ ಪೋಸ್ಟ್‌ನಲ್ಲಿ ಸುದೀಪ್ ಮತ್ತು ಅವರ ಸ್ನೇಹದ ಬಗ್ಗೆ ಬರೆದುಕೊಂಡಿದ್ದರು.
ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ, ಸುದೀಪ್ ಮತ್ತು ದರ್ಶನ್ ಇನ್ನು ಮುಂದೆ ಸ್ನೇಹಿತರಾಗಿ ಇರುವುದಿಲ್ಲ ಎನ್ನುವುದನ್ನು ಹೇಳುವ ಪೋಸ್ಟ್ ಆಗಿತ್ತು. ಇದನ್ನು ಕಂಡು ಅವರ ಅಭಿಮಾನಿ ಬಳಗ, ಕನ್ನಡ ಚಿತ್ರರಂಗ ದೊಡ್ಡ ಶಾಕ್‌ಗೆ ಒಳಗಾಗಿತ್ತು.

ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ: ದರ್ಶನ್ ಟ್ವೀಟ್!
ನಟ ದರ್ಶನ್ 2017 ಮಾರ್ಚ್ 5ರಂದು ಮಾಡಿದ್ದ ಟ್ವೀಟ್ ಹೀಗಿದೆ. "ನಾನು ಮತ್ತು ಸುದೀಪ್ ಇನ್ನು ಸ್ನೇಹಿತರಾಗಿ ಉಳಿಯುವುದಿಲ್ಲ. ನಾನು ಕನ್ನಡ ಚಲನಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ. ದಯವಿಟ್ಟು ಯಾವುದೇ ಊಹಾ, ಪೋಹಗಳು ಬೇಡ. ಇದೇ ಅಂತಿಮ". ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದರು. ಆದರೆ ಇದಕ್ಕೆ ಕಿಚ್ಚ ತಮ್ಮ ಮೌನದಿಂದಲೇ ಉತ್ತರ ನೀಡಿದ್ದರು.

ದರ್ಶನ್ ಬಗ್ಗೆ ಸ್ನೇಹ ಬಾವನೆ ಇದೆ ಎನ್ನುತ್ತಿರುವ ಕಿಚ್ಚ!
ದಶಕಗಳ ಕಾಲ ದರ್ಶನ್ ಮತ್ತು ಸುದೀಪ್ ಸ್ನೇಹಿತರಾಗಿ ಒಟ್ಟಿಗೆ ಇದ್ದವರು. ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ಗೆಳೆಯ ಹೀಗೆ ಏಕಾಏಕಿ ಸ್ನೇಹ ಮುರಿದುಕೊಂಡಿದ್ದು ಸುದೀಪ್ ಅವರಿಗೂ ಬೇಸರ ತಂದಿತ್ತು. ಹಲವು ಸಂದರ್ಶನಗಳಲ್ಲಿ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾದಾಗ. ದರ್ಶನ್ ಬಗ್ಗೆ ತಮ್ಮ ಮನದಲ್ಲಿ ಇನ್ನೂ ಸ್ನೇಹದ ಭಾವನೆ ಇದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತಲೇ ಬಂದಿದ್ದಾರೆ. ಸುದೀಪ್ ತಮ್ಮ ಮನೆಯಲ್ಲಿ ದರ್ಶನ್ ಅವರ ಫೋಟೊವನ್ನು ಕೂಡ ಇಟ್ಟುಕೊಂಡಿದ್ದಾರೆ.

ದಚ್ಚು-ಕಿಚ್ಚ ದೂರ ಇರೋದು ಅಭಿಮಾನಿಗಳಿಗೂ ಇಷ್ಟವಿಲ್ಲ!
ಕಿಚ್ಚ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳು ನಡುವೆ ಆಗಾಗ ವಾಗ್ವಾದ ನಡೆಯುತ್ತಲೇ ಇದ್ದರೂ ಒಂದು ಅದ್ಭುತ ಟ್ರೆಂಡ್‌ಗೆ ಈ ಹಿಂದೆ ಹಲವು ಬಾರಿ ಅವರ ಅಭಿಮಾನಿಗಳು ಸಾಕ್ಷಿಯಾಗಿದ್ದರು. ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದಾಗಬೇಕು ಎಂದು ಅಭಿಮಾನಿಗಳೇ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ್ದರು. ಹಾಗಾಗಿ #DbossKicchaReunion #DbossKicchaComeTogether #KicchaDacchu ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಇಬ್ಬರ ಬಗ್ಗೆ ಅಭಿಯಾನ ಮಾಡಿ ನಂತರ ಸುಮ್ಮನಾಗಿದ್ದಾರೆ.

ದರ್ಶನ್, ಸುದೀಪ್ ಕೊನೆತನಕ ಒಂದಾಗುವುದೇ ಇಲ್ಲವಾ?
5 ವರ್ಷಗಳಿಂದ ಮುನಿಸಿಕೊಂಡು ದೂರಾಗಿರುವ ಸುದೀಪ್ ಮತ್ತು ದರ್ಶನ್ ಅವರನ್ನು ಒಂದು ಮಾಡಲು ತೆರೆಮರೆಯಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ಶಿವರಾಜ್‌ಕುಮಾರ್, ರವಿಚಂದ್ರನ್ ಅವರಿಂದ ಹಿಡಿದು ದೊಡ್ಡ ದೊಡ್ಡ ಗಣ್ಯರು ಈ ಜೋಡಿಯನ್ನು ಒಂದು ಮಾಡುವ ಸಾಹಸಕ್ಕೆ ಕೈ ಹಾಕಿ ಸುಮ್ಮನಾಗಿದ್ದಾರೆ. ಹಾಗಾಗಿ ಇವರು ಯಾವಾಗ ಒಂದಾಗ್ತಾರೆ ಎನ್ನುವ ಯಕ್ಷ ಪ್ರಶ್ನೆ ಹಾಗೇ ಉಳಿದೆ. ಅವರು ಒಂದಾದರೆ ಕನ್ನಡ ಚಿತ್ರರಂಗದ ಪಾಲಿಗೆ ಅದು ಇತಿಹಾಸವೇ ಸರಿ. ಒಂದಾಗುತ್ತಾರೋ, ಇಲ್ಲವೋ ಆದರೆ ಜೇಮ್ಸ್ ಚಿತ್ರದ ಕಾರ್ಯಕ್ರಮಕ್ಕಾಗಿ ಇಬ್ಬರು ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











