50 Years Of Anant Nag: ಚಿತ್ರರಂಗದಲ್ಲಿ ಅರ್ಧಶತಕ ಬಾರಿಸಿದ ಅನಂತ್‌ನಾಗ್‌ಗೆ ಯಾರೆಲ್ಲಾ ವಿಶ್ ಮಾಡಿದ್ರು?
ಕನ್ನಡ ಚಲನಚಿತ್ರರಂಗ ಕಂಡ ಸಾರ್ವಕಾಲಿಕ ಲೆಜೆಂಡರಿ ಕಲಾವಿದರ ಪೈಕಿ ಒಬ್ಬರಾಗಿರುವ ಅನಂತ್‌ನಾಗ್ ಅವರು ಚಿತ್ರರಂಗ ಪ್ರವೇಶಿಸಿ ಐವತ್ತು ವರ್ಷಗಳು ತುಂಬಿವೆ. ಹೌದು, 1973ರಲ್ಲಿ ತೆರೆಗೆ ಬಂದಿದ್ದ ಸಂಕಲ್ಪ ಎಂಬ ಚಿತ್ರದಲ್ಲಿ ಡಾ. ರಾಜು ಎಂಬ ಪಾತ್ರವನ್ನು ನಿರ್ವಹಿಸುವ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ಅನಂತ್‌ನಾಗ್ ಬಳಿಕ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ನಾಯಕನಾಗಿ ಹಲವಾರು ವಿಭಿನ್ನ ಕಥಾಹಂದರವಿರುವ ಚಿತ್ರಗಳಲ್ಲಿ ನಟಿಸಿದ್ದ ಅನಂತ್‌ನಾಗ್ ಕನ್ನಡದ ಇತರೆ ಬಹುತೇಕ ಮೇರುನಟರ ಚಿತ್ರಗಳಲ್ಲಿ ನಟಿಸಿರುವ ಮೇರುನಟನಾಗಿದ್ದಾರೆ. ರಾಜ್‌ಕುಮಾರ್ ಜತೆ ಸಹ ತೆರೆ ಹಂಚಿಕೊಂಡಿರುವ ಅನಂತ್ ನಾಗ್ ಈಗಲೂ ಸಹ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಸಾಲು ಸಾಲು ಚಿತ್ರಗಳಲ್ಲಿ ಪೋಷಕ ನಟನಾಗಿ ಪಾತ್ರಗಳನ್ನು ಮಾಡುತ್ತಿದ್ದಾರೆ.

ಈ ಹಿಂದೆ ನಾಯಕನಾಗಿ ಮಿಂಚಿದ್ದ ಅನಂತ್ ನಾಗ್ ಸದ್ಯ ವಿಭಿನ್ನ ಪೋಷಕ ಪಾತ್ರಗಳ ಮೂಲಕವೂ ಸಹ ಸಿನಿ ರಸಿಕರ ಮನ ಗೆಲ್ಲುತ್ತಿದ್ದು, ಸತತವಾಗಿ 50 ವರ್ಷಗಳ ಕಾಲ ಕನ್ನಡಿಗರನ್ನು ರಂಜಿಸುತ್ತಲೇ ಬಂದಿದ್ದಾರೆ. ಹೀಗೆ ತಮ್ಮ ಇಡೀ ಜೀವನವನ್ನೇ ಸಿನಿಮಾಗಾಗಿ ಮುಡಿಪಾಗಿಟ್ಟಿರುವ ಅನಂತ್ ನಾಗ್ ಅವರು ಇಂತಹ ಮೈಲಿಗಲ್ಲನ್ನು ಸಾಧಿಸಿದ ದಿನದಂದು ಕನ್ನಡದ ಹಲವಾರು ನಟರು ಹಾಗೂ ನಟಿಯರು ಅನಂತ್ ನಾಗ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಈ ಕೆಳಕಂಡಂತೆ ಶುಭ ಕೋರಿದ್ದಾರೆ.
ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅನಂತ್ ನಾಗ್ ಅವರಿಗೆ ಶುಭ ಕೋರಿದ್ದು, "ಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ ೫೦ ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು. ನಿಮ್ಮ ಪಯಣ ಸ್ಫೂರ್ತಿದಾಯಕ" ಎಂದು ಬರೆದುಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಸಹ ಅನಂತ್ ನಾಗ್ ಅವರು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸುವುದರ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, "ಚಿತ್ರರಂಗದಲ್ಲಿ 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಅನಂತ್ ನಾಗ್ ಸರ್, ನಿಮಗೆ ಹೃತ್ಪೂರ್ವಕ ಅಭಿನಂದನೆ. ನಿಮ್ಮ ಪ್ರತಿಭೆ ಮತ್ತು ವರ್ಚಸ್ಸು ತಲೆಮಾರುಗಳಿಗೆ ಪ್ರೇರಣೆ" ಎಂದು ಬರೆದುಕೊಂಡಿದ್ದಾರೆ.
ಇನ್ನು ಯುವ ನಟ ಧೀರೆನ್ ರಾಮ್‌ಕುಮಾರ್ ಸಹ ಅನಂತ್ ನಾಗ್ ಅವರು ಈ ಮೈಲಿಗಲ್ಲನ್ನು ಸಾಧಿಸಿರುವುದರ ಬಗ್ಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಳ್ಳುವುದರ ಮೂಲಕ ಶುಭ ಕೋರಿದ್ದಾರೆ. ಕನ್ನಡ ಚಲನಚಿತ್ರರಂಗದಲ್ಲಿ ಐವತ್ತು ಅಮೋಘ ವರ್ಷಗಳನ್ನು ಪೂರೈಸಿದ ಅನಂತ್ ನಾಗ್ ಅವರಿಗೆ ಶುಭಾಶಯಗಳು ಎಂದು ಧೀರೆನ್ ಉಲ್ಲೇಖಿಸಿದ್ದಾರೆ.


Click it and Unblock the Notifications











