ಕನ್ನಡದಲ್ಲಿ 500 ಕೋಟಿ ವೆಚ್ಚದ ಸಿನಿಮಾ: ನಿರ್ಮಾಪಕ ಯಾರು?
ಕನ್ನಡದಲ್ಲಿ ಇತ್ತೀಚೆಗೆ ಬಿಗ್ ಬಜೆಟ್ ಸಿನಿಮಾಗಳು ಹೆಚ್ಚಾಗಿವೆ. ಅದರಲ್ಲಿಯೂ ಪ್ಯಾನ್ ಇಂಡಿಯಾ ಕಲ್ಚರ್ ಪ್ರಾರಂಭವಾದ ನಂತರವಂತೂ ಬಿಗ್ ಬಜೆಟ್ ಸಿನಿಮಾಗಳು ನಾಯಿಕೊಡೆಗಳಾಗಿವೆ.
ಏನೇ ಬಿಗ್ ಬಜೆಟ್ ಎಂದು ಬೀಗಿದರೂ ಹಿಂದಿ, ತಮಿಳು, ತೆಲುಗಿನ ಸ್ಟಾರ್ ನಟರ ಸಿನಿಮಾಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಅಬ್ಬಬ್ಬಾ ಎನ್ನುವಂಥಹಾ ಬಿಗ್ ಬಜೆಟ್‌ಗಳು ಅಷ್ಟಾಗೇನೂ ಬಂದಿಲ್ಲವೆಂದೇ ಹೇಳಬೇಕು. ಕನ್ನಡದ ಬಿಗ್ ಬಜೆಟ್ ಸಿನಿಮಾಗಳೆಂದರೆ 'ಕೆಜಿಎಫ್' ಬಳಿಕ ಹೆಚ್ಚಿನ ಸಿನಿಮಾಗಳು ನೆನಪಿಗೆ ಬರುವುದಿಲ್ಲ.
ಆದರೆ ಈಗ ಕನ್ನಡದಲ್ಲಿ ನಿಜ ಅರ್ಥದ ಬಿಗ್ ಬಜೆಟ್ ನಿರ್ಮಾಣ ಮಾಡುವುದಾಗಿ ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ. ಅದೂ ಬರೋಬ್ಬರಿ 500 ಕೋಟಿ ಬಂಡವಾಳವನ್ನು ಕನ್ನಡ ಸಿನಿಮಾದ ಮೇಲೆ ಹೂಡಲು ಈ ಉದ್ಯಮಿ ತಯಾರಾಗಿದ್ದಾರೆ.
ಗಾನ ಶ್ರವಣ ಸ್ವಾಮೀಜಿ ಎಂಬ ಉದ್ಯಮಿ ಕನ್ನಡದಲ್ಲಿ ಭಾರಿ ಬಜೆಟ್‌ನ ಸಿನಿಮಾ ಮಾಡಲು ತಯಾರಾಗಿದ್ದಾರೆ. ದೇಶ ಹಾಗೂ ವಿದೇಶಗಳಲ್ಲಿ ಚಿನ್ನದ ಮಳಿಗೆಗಳನ್ನು ಹೊಂದಿರುವುದಾಗಿ ಹೇಳಿರುವ ಗಾನ ಶ್ರವಣ ಸ್ವಾಮೀಜಿ ಮೂಲತಃ ದೊಡ್ಡಬಳ್ಳಾಪುರದವರಾಗಿದ್ದು ಭಾರತ ಸಿನಿಮಾರಂಗವೇ ತಿರುಗಿ ನೋಡುವಂತಹಾ ಕನ್ನಡ ಸಿನಿಮಾ ಒಂದನ್ನು ನೀಡುವ ಉಮೇದಿನಿಂದ ಭಾರಿ ಬಜೆಟ್ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಮೈಸೂರು ಬಳಿ 640 ಎಕರೆ ಜಮೀನು ಖರೀದಿ!
ಮೈಸೂರಿನ ಬಳಿ ಸುಮಾರು 640 ಎಕರೆ ಜಾಗವನ್ನು ಈ ಉದ್ಯಮಿ ಖರೀದಿಸಿದ್ದು ಅಲ್ಲಿ ಸ್ವಾಮೀಜಿ ಫಿಲಂ ಸಿಟಿ ಸ್ಥಾಪಿಸುತಿದ್ದಾರೆ. ಅದೇ ಫಿಲಂ ಸಿಟಿಯಲ್ಲಿ ಬೃಹತ್ ಆದ ಸೆಟ್ ನಿರ್ಮಾಣ ಮಾಡಿ ಸೆಟ್‌ನಲ್ಲಿ ಚಿತ್ರೀಕರಣ ಮಾಡಲಿದ್ದಾರೆ. ನಂತರ ಸೆಟ್ ಅನ್ನು ಹಾಗೆಯೇ ಬಿಡಲಿದ್ದಾರಂತೆ. ಭಾರಿ ದೊಡ್ಡ ಯೋಜನೆಯನ್ನೇ ತಲೆಯಲ್ಲಿಟ್ಟುಕೊಂಡಿದ್ದಾರೆ ಈ ಉದ್ಯಮಿ.

ಸಿನಿಮಾಕ್ಕೆ ಹೆಸರು ಸಹ ಇಡಲಾಗಿದೆ
ಸಿನಿಮಾದ ಕತೆ ಈಗಾಗಲೇ ತಯಾರಾಗಿದ್ದು ಸಿನಿಮಾಕ್ಕೆ 'ಕೃಷ್ಣರಾಜ-4' ಎಂದು ಹೆಸರು ಸಹ ಇಟ್ಟುಬಿಟ್ಟಿದ್ದಾರೆ. ಈ ಸಿನಿಮಾದ ನಾಯಕ ಪಾತ್ರದ ಹೆಸರು ಕೃಷ್ಣ ಎಂದು ಆತನಿಗೆ ನಾಲ್ಕು ಶೇಡ್‌ಗಳಿರುವುದರಿಂದ ಸಿನಿಮಾಕ್ಕೆ ಈ ಹೆಸರು ಇಡಲಾಗಿದೆ. ಈ ಸಿನಿಮಾಕ್ಕೂ ಮೈಸೂರಿನ ಒಡೆಯರಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ ಸಿನಿಮಾದ ಸಹ ನಿರ್ಮಾಪಕಿ ಎಂ.ವಿ.ಅದಿತಿ. ಈ ಸಿನಿಮಾವನ್ನು ಕನ್ನಡ ಮಾತ್ರವೇ ಅಲ್ಲದೆ ಒಟ್ಟು ಆರು ಭಾಷೆಗಳಲ್ಲಿ ಬಿಡುಗಡೆ ಮಾಡುವ ಉಮೇದು ಇವರಿಗಿದೆ.

ಅತ್ಯುತ್ತಮ ನಿರ್ದೇಶಕ, ನಟನ ಹುಡುಕಾಡದಲ್ಲಿ ನಿರ್ಮಾಪಕ
''ಸಿನಿಮಾಕ್ಕಾಗಿ ಭಾರತದ ಅತ್ಯುತ್ತಮ ನಿರ್ದೇಶಕರುಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುವುದು ಅಷ್ಟೇ ಅಲ್ಲದೆ ಸಿನಿಮಾದ ನಾಯಕನಾಗಿಯೂ ತೂಕದ ವ್ಯಕ್ತಿಯನ್ನೇ ಆಯ್ಕೆ ಮಾಡುತ್ತೇವೆ. ಆದರೆ ಸಿನಿಮಾದ ಇತರ ಪಾತ್ರಗಳಿಗೆ ಎಲ್ಲ ಚಿತ್ರರಂಗದ ಸ್ಥಳೀಯ ನಟರಿಗೂ ಅವಕಾಶ ನೀಡುತ್ತೇವೆ. ಸಿನಿಮಾವನ್ನು ಎಲ್ಲ ಭಾಷೆಯ ಜನರಿಗೂ ತಲುಪಿಸುವ ಇರಾದೆ ನಮ್ಮದು'' ಎಂದಿದ್ದಾರೆ ಗಾನ ಶ್ರವಣ ಸ್ವಾಮೀಜಿ. ಸಿನಿಮಾದ ಸಂಗೀತವನ್ನು ಲಂಡನ್‌ನಲ್ಲಿ ಮ್ಯೂಸಿಕ್ ಸಂಸ್ಥೆಯಿಂದ ಮಾಡಿಸುತ್ತಾರಂತೆ!

ಕೇರಳದ ದೇವಾಲಯಕ್ಕೆ 526 ಕೋಟಿ ದೇಣಿಗೆ
ಶ್ರೀ ಭಗವತಿ ದೇವಿಯ ಆರಾಧಕರಾಗಿರುವ ಉದ್ಯಮಿ ಗಾನ ಶ್ರವಣ ಸ್ವಾಮೀಜಿಗೆ ಸಿನಿಮಾ ರಂಗ ಹೊಸದೇನೂ ಅಲ್ಲ. 1995ರ ಅವಧಿಯಲ್ಲಿ ಟ್ರ್ಯಾಕ್ ಹಾಡುಗಾರರಾಗಿ ಅವರು ಕೆಲಸ ಮಾಡಿದ್ದಾರೆ. ಹಲವು ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರೊಂದಿಗೆ ತಾವು ಕೆಲಸ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಆ ನಂತರ ಉದ್ಯಮದ ಕಡೆ ಗಮನ ಹರಿಸಿದ್ದರಿಂದ ಚಿತ್ರರಂಗದ ನಂಟು ತಪ್ಪಿಹೋಯಿತಂತೆ. ಇವರ ಚಿನ್ನ ಮಾರಾಟದ ಸಂಸ್ಥೆ, ಲಂಡನ್, ಹಾಂಕಾಂಗ್ ಇತರೆ ಪ್ರತಿಷ್ಠಿತ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆಯಂತೆ. ಇತ್ತೀಚೆಗೆ ಕೇರಳದ ಭಗವತಿ ದೇವಾಲಯಕ್ಕೆ 526 ಕೋಟಿ ದೇಣಿಗೆ ನೀಡಿ ಸುದ್ದಿಯಾಗಿದ್ದರು ಈ ಉದ್ಯಮಿ.

ಫಿಲಂ ಪ್ರೊಡಕ್ಷನ್ ಬ್ಯಾನರ್ ಅನಾವರಣ
''ನನಗೆ ಸಂಗೀತದ ಮೇಲೆ ಮೊದಲಿನಿಂದಲೂ ಹಿಡಿತವಿದೆ. ಐದಾರು ವರ್ಷಗಳ ಹಿಂದೆಯೇ ಸಿನಿಮಾ ಮಾಡುವ ಯೋಜನೆ ಇತ್ತು. ಆದರೆ ಕೆಲವು ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಸಿನಿಮಾ ಮಾಡುತ್ತಿದ್ದು, ಸಿನಿಮಾದ ಬಹುತೇಕ ಚಿತ್ರೀಕರಣ ಮೈಸೂರಿನ ಬಳಿಯೇ ನಡೆಯಲಿದೆ. ಮೈಸೂರಿನ ಬಳಿ 640 ಎಕರೆ ಜಾಗ ಖರೀದಿಸಿದ್ದೇವೆ ಅಲ್ಲಿಯೇ ಸಿನಿಮಾ ನಿರ್ಮಾಣ ಮಾಡುತ್ತೇವೆ. ಸಿನಿಮಾಕ್ಕೆ 400 ರಿಂದ 500 ಕೋಟಿ ಬಂಡವಾಳ ಹೂಡಲಿದ್ದೇವೆ'' ಎಂದಿದ್ದಾರೆ. 'ಜಿಎಸ್‌ಆರ್ ಫಿಲಂ ಪ್ರೊಡಕ್ಷನ್ಸ್' ಹೆಸರಿನ ಬ್ಯಾನರ್ ಸಹ ಅವರು ಅನಾವರಣ ಮಾಡಿದರು.


Click it and Unblock the Notifications











