58 ವರ್ಷಗಳ ಸುದೀರ್ಘ ಸಿನಿಮಾ ಪ್ರಯಾಣ ಅಂತ್ಯ ; ಚಿತ್ರರಂಗಕ್ಕೆ ದಿಢೀರ ಗುಡ್ ಬೈ ಹೇಳಿದ ಖ್ಯಾತ ನಟಿ ತುಳಸಿ ಶಿವಮಣಿ
ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ನಂಬಿ ಬಂದವರ ರಕ್ಷಣೆಯನ್ನು ನೆನೆಯದೆ ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಕತ್ತಲು-ಬೆಳಕು ಎಂಬ ಜೋಡೆತ್ತುಗಳನ್ನು ಎಳೆಯಲು ಸಾಧ್ಯವಾಗದೇ ಬದುಕಿಗೆ ಇತಿಶ್ರೀ ಹಾಡುತ್ತಾರೆ. ಮತ್ತೂ ಕೆಲವರು ಆಧ್ಯಾತ್ಮದ ಹಾದಿಯಲ್ಲಿ ಸಾರ್ಥಕ ಬದುಕನ್ನು ಕಂಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ..
ಬದುಕಿನ ಅಂತರಾಳ ತೆರೆದಿಡುವ ಪ್ರಸಿದ್ಧ ಕವಿತೆಯ ಈ ಸಾಲುಗಳಿಗೆ ಹಿರಿಯ ಕಲಾವಿದೆ ತುಳಸಿ ಸದ್ಯದ ತಾಜಾ ಉದಾಹರಣೆ. ಹೌದು, ತುಳಸಿ .. ಕನ್ನಡದ ಖ್ಯಾತ ನಿರ್ದೇಶಕ ಶಿವಮಣಿ ಅವರ ಪತ್ನಿ. ಕೇವಲ ಮೂರು ತಿಂಗಳಿರುವಾಗಲೇ ಮಹಾನಟಿ ಸಾವಿತ್ರಿ ಅವರ ''ಭಾರ್ಯ'' ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದ ತುಳಸಿ ಶಿವಮಣಿ ಆ ನಂತರ ''ಸೀತಾ ಲಕ್ಷ್ಮಿ''.. ''ಶಂಕರಾಭರಣಂ''.. ''ಮುದ್ದ ಮಂದಾರಂ'' ಅಂತಹ ಚಿತ್ರಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡರು.

ಆ ನಂತರ ''ನಗಬೇಕಮ್ಮ ನಗಬೇಕು''.. ''ಇಂದಿನ ರಾಮಾಯಣ'' .. ''ಹೆಣ್ಣೇ ನಿನಗೇನು ಬಂಧನ''.. ಚಿತ್ರಗಳಲ್ಲಿ ಕಾಣಿಸಿಕೊಂಡರು. ತಮ್ಮ 28ನೇ ವರ್ಷದಲ್ಲಿ ''ದೊರೆ''.. ''ಶಿವ ಸೈನ್ಯ''..''ಗೋಲಿಬಾರ್''.. ''ಜೋಶ್''.. ಹೀಗೆ ಕನ್ನಡದ ಹಲವು ಬ್ಲಾಕ್ ಬಸ್ಟರ್ ಚಿತ್ರ ನಿರ್ದೇಶಿಸಿರುವ ನಿರ್ದೇಶಕ ಶಿವಮಣಿ ಅವರನ್ನು ಮದುವೆಯಾದ ತುಳಸಿ, ಜೋಗಿ ಪ್ರೇಮ್ ನಿರ್ದೇಶಕದ ''ಎಕ್ಸ್‌ಕ್ಯೂಸ್ ಮೀ'' ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳಿದರು.
ಇಲ್ಲಿಂದಾಚೆ ''ಯಶವಂತ''.. ''ಜೂಟಾಟ''.. ''ಸಿರಿವಂತ''.. ''ಜೊತೆ ಜೊತೆಯಲಿ''.. ''ಸವಿಸವಿ ನೆನಪು''.. ''ನೀನ್ಯಾರೇ''.. ''ಮೊಗ್ಗಿನ ಮನಸು''.. ''ಜೋಶ್''.. ''ರಾಜ್ ದಿ ಶೋ ಮ್ಯಾನ್''.. ''ಉಲ್ಲಾಸ ಉತ್ಸಾಹ''.. ''ಸಿಹಿ ಗಾಳಿ''.. ''ರಾಜಧಾನಿ''.. ''ಅಂಬರೀಶ''.. ''ನಿನ್ನಿಂದಲೇ''..
ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡ ತುಳಸಿ ಶಿವಮಣಿ ಇದರ ನಡುವೆ ತೆಲುಗು, ತಮಿಳು , ಮಲಯಾಳಂ ಚಿತ್ರಗಳಲ್ಲಿ ಕೂಡ ಅಭಿನಯಿಸಿದರು. ''ಡಾರ್ಲಿಂಗ್''.. ''ಮಿಸ್ಟರ್ ಪರ್ಫೆಕ್ಟ್''.. ''ಜುಲಾಯಿ''.. ''ಇದ್ದರಮ್ಮಾಯಿಲಥೋ''.. ''ಶ್ರೀಮಂತುಡು''.. ಇವರು ಅಭಿನಯಿಸಿದ ಕೆಲವು ಪ್ರಮುಖ ಚಿತ್ರಗಳು.
ಹೀಗೆ ಒಂದಲ್ಲ.. ಎರಡಲ್ಲ.. ಬರೋಬ್ಬರಿ 58 ವರ್ಷ ಕಲಾ ಸೇವೆಯನ್ನು ಮಾಡಿದ, ನಾಲ್ಕು ಭಾಷೆಗಳಲ್ಲಿ 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ ತುಳಸಿ ಶಿವಮಣಿ ಸದ್ಯ ದಿಢೀರ್ ಎಂದು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಚಿತ್ರರಂಗದವರನ್ನು ಮತ್ತು ತಮ್ಮ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ತುಳಸಿ ಶಿವಮಣಿ, ನನ್ನ ಮತ್ತು ನನ್ನ ಮಗ ಸಾಯಿಯನ್ನು ರಕ್ಷಿಸಿ ಮತ್ತು ಮಾರ್ಗದರ್ಶನ ನೀಡಿ ಎಂದು ಹೇಳಿದ್ದಾರೆ. ಓ ದೇವಾ, ಓ ಸಾಯಿನಾಥ ಎಂದು ಬರೆದುಕೊಂಡಿರುವ ತುಳಸಿ ಶಿವಮಣಿ ನಿಮ್ಮ ಅಂತಃಪ್ರಜ್ಞೆಯನ್ನು ನಂಬಿ. ನಿಮ್ಮ ಭಾವನೆಗಳನ್ನು ಯಾರಿಗೂ ವಿವರಿಸುವ ಅಥವಾ ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ, ನಿಮ್ಮ ಆಂತರಿಕ ಮಾರ್ಗದರ್ಶನವನ್ನು ನಂಬಿ, ಅದು ನಿಮ್ಮನ್ನು ಸನ್ಮಾರ್ಗದೆಡೆ ನಡೆಸುತ್ತೆ ಎಂದು ಬರೆದುಕೊಂಡಿದ್ದಾರೆ.
ಆ ನಂತರ ನಿಮ್ಮ ಹೊಸ ಸ್ವಾತಂತ್ರ್ಯ, ಪ್ರತಿ ನಿಮಿಷವನ್ನು ಆನಂದಿಸಿ ಎಂದು ಬರೆದುಕೊಂಡಿರುವ ತುಳಸಿ ಶಿವಮಣಿ, ನನ್ನ ಶಿರಡಿ ದರ್ಶನದ ಮುಂದುವರೆದ ಭಾಗವಾಗಿ ಈ ಡಿಸೆಂಬರ್ 31ರಿಂದ ಸಂತೋಷದಿಂದ ನಾನು ನಿವೃತ್ತಿ ಹೊಂದುತ್ತಿದ್ದೇನೆ ಎಂದು ಹೇಳಿದ್ದಾರೆ. ಬದುಕಿನ ಈ ಪ್ರಯಾಣದಲ್ಲಿ ಕಲಿಯಲು ಸಹಾಯ ಮಾಡಿದ ಎಲ್ಲರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ತಮಗೆ ತಾವೇ ಹ್ಯಾಪಿ ರಿಟೈರ್ಮೆಂಟ್ ಎಂದು ಶುಭ ಕೋರಿಕೊಂಡಿದ್ದಾರೆ.
ತುಳಸಿ ಶಿವಮಣಿ ಅವರ ಈ ಏಕಾಏಕಿ ನಿರ್ಧಾರದಿಂದ ಸದ್ಯ ಹಲವರು ಆಘಾತ ಮತ್ತು ಆಶ್ಚರ್ಯಕ್ಕೆ ಒಳಗಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ತುಳಸಿ ಶಿವಮಣಿ ಅವರ ಈ ನಿರ್ಧಾರದ ಕುರಿತು ಚರ್ಚೆ ಮಾಡುತ್ತಿದ್ದಾರೆ. ಅಂದ್ಹಾಗೇ ನಿವೃತ್ತಿಯನ್ನು ಘೋಷಣೆ ಮಾಡಿರುವ ತುಳಸಿ ಶಿವಮಣಿ ತಮ್ಮ ಕಾಮೆಂಟ್ ಸೆಕ್ಷನ್‌ನ ಆಫ್ ಮಾಡಿದ್ದಾರೆ.


Click it and Unblock the Notifications











