'ಸಲಾರ್' ಚಿತ್ರದಲ್ಲಿ ಯಶ್ ಇಲ್ಲದಿದ್ರು 6 ಜನ ಕನ್ನಡಿಗರಿಗೆ ಸಿಕ್ಕಿದೆ ಅವಕಾಶ: 'ಉಗ್ರಂ' ರೀಮೇಕ್ ಆಗಿದ್ರೆ ಯಾರಿಗೆ ಯಾವ ಪಾತ್ರ?
ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ 'ಸಲಾರ್' ಸಿನಿಮಾ ಟ್ರೈಲರ್ ರಿಲೀಸ್ ಧೂಳೆಬ್ಬಿಸಿದೆ. ಮಿಶ್ರಪ್ರತಿಕ್ರಿಯೆ ಪಡೆದುಕೊಂಡರೂ ಸಿಕ್ಕಾಪಟ್ಟೆ ವೀವ್ಸ್, ಲೈಕ್ಸ್ ಸಾಧಿಸಿ ಸದ್ದು ಮಾಡ್ತಿದೆ. ಡಿಸೆಂಬರ್ 22ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ಮತ್ತೊಂದು ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ.
ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ 'ಸಲಾರ್' ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಬಾಬಿ ಸಿಂಹ, ತಿನ್ನು ಆನಂದ್, ಈಶ್ವರಿ ರಾವ್, ಜಾನ್ ವಿಜಯ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನು 'ಸಲಾರ್' ಟ್ರೈಲರ್ ನೋಡಿದವರೆಲ್ಲ ವಿಷ್ಯುವಲ್ಸ್ ಬಗ್ಗೆ ಮಾತನಾಡುತ್ತಿದ್ದಾರೆ.

ರಾಮೋಜಿ ಫಿಲ್ಮ್ ಸಿಟಿ, ಮಂಗಳೂರು, ಸಿಂಗರೇಣಿ ಗಣಿಗಳಲ್ಲಿ 'ಸಲಾರ್' ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಇನ್ನು 'ಸಲಾರ್' ಟ್ರೈಲರ್ ನೋಡಿದರೆ ಇದು 'ಉಗ್ರಂ' ಚಿತ್ರದ ಅಪ್‌ಡೇಟೆಡ್ ವರ್ಷನ್ ಎನ್ನುವುದು ಅರ್ಥವಾಗುತ್ತಿದೆ. ಪ್ರಭಾಸ್ ಆರ್ಭಟ ಅಂತೂ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಡುವಂತಿದೆ. ಟ್ರೈಲರ್‌ನಲ್ಲಿ ಪ್ರಭಾಸ್ ಸನ್ನಿವೇಶಗಳು ಕಮ್ಮಿಯಾಯಿತು ಎನ್ನುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ.
ದೇವ ಹಾಗೂ ವರದರಾಜ ಮನ್ನಾರ್ ಎನ್ನುವ ಇಬ್ಬರು ಸ್ನೇಹಿತರ ಕತೆ 'ಸಲಾರ್'. ಬಹಳ ಆತ್ಮೀಯ ಸ್ನೇಹಿತರಾಗ ಇವರಿಬ್ಬರು ಆಜನ್ಮ ಶತ್ರುಗಳಾದರೆ ಏನಾಗುತ್ತದೆ? ಎನ್ನುವುದನ್ನು 2 ಸಿನಿಮಾಗಳಲ್ಲಿ ಪ್ರಶಾಂತ್ ನೀಲ್ ಕಟ್ಟಿಕೊಡುತ್ತಿದ್ದಾರೆ. ಚಿಕ್ಕಂದಿನಲ್ಲೇ ಸ್ನೇಹಿತರಿಬ್ಬರು ದೂರಾಗಿರುತ್ತಾರೆ. ವರದರಾಜ ಮನ್ನಾರ್ ಕೈತಪ್ಪಿದ ಖಾನ್ಸಾರ್ ಸಾಮ್ರಾಜ್ಯವನ್ನು ಮರಳಿ ಕೊಡಲು ದೇವ ತಿರುಗಿ ಬರ್ತಾನೆ. ತಾನೇ ಒಂದು ಸೈನ್ಯವಾಗಿ ಆತನ ಹೋರಾಟ ಹೇಗಿರುತ್ತದೆ ಎನ್ನುವುದು ಮೊದಲ ಭಾಗದ ಕತೆ. ಕ್ಲೈಮ್ಯಾಕ್ಸ್‌ನಲ್ಲಿ ಸ್ನೇಹಿತರಿಬ್ಬರ ನಡುವೆ ವೈಮನಸ್ಸು ಮೂಡುತ್ತದೆ. ಕತೆ ಅಲ್ಲಿಂದ ಮುಂದಿನ ಚಿತ್ರಕ್ಕೆ ಚಾಚಿಕೊಳ್ಳುತ್ತದೆ.
ಡಿಸೆಂಬರ್ 16ಕ್ಕೆ ಮತ್ತೊಂದು ಟ್ರೈಲರ್ ರಿಲೀಸ್ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಾರಿ ಪ್ರಭಾಸ್ ಆರ್ಭಟ ಹೆಚ್ಚಿರುವ ಸನ್ನಿವೇಶಗಳು ಟ್ರೈಲರ್‌ನಲ್ಲಿರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಡಿಸೆಂಬರ್ 15ಕ್ಕೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಲಿದೆ. ಇನ್ನು 'KGF' ಚಿತ್ರಕ್ಕೆ ಕೆಲಸ ಮಾಡಿದ ಸಾಕಷ್ಟು ತಂತ್ರಜ್ಞರು 'ಸಲಾರ್' ಚಿತ್ರತಂಡದಲ್ಲಿದ್ದಾರೆ. ಭುವನ್ ಗೌಡ ಛಾಯಾಗ್ರಹಣ, ರವಿ ಬಸೂರು ಸಂಗೀತ, ಶಿವಕುಮಾರ್ ಕಲಾ ನಿರ್ದೇಶನವಿದೆ.
'ಸಲಾರ್' ಚಿತ್ರಕ್ಕೂ 'KGF' ಸರಣಿಗೂ ಲಿಂಕ್ ಇಲ್ಲ ಎಂದು ಈಗಾಗಲೇ ಪ್ರಶಾಂತ್ ನೀಲ್ ಹೇಳಿಬಿಟ್ಟಿದ್ದಾರೆ. ಯಶ್ ಗೆಸ್ಟ್ ಅಪಿಯರೆನ್ಸ್ ಇರಲ್ಲ ಎನ್ನುವುದು ಪಕ್ಕಾ ಆಗಿದೆ. ಕನ್ನಡ ಬ್ಯಾನರ್‌ನಲ್ಲೇ 'ಸಲಾರ್' ಸಿನಿಮಾ ನಿರ್ಮಾಣವಾಗಿದೆ. ಹಾಗಾಗಿ ಕನ್ನಡ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿದೆ. 'ಸಲಾರ್' ಚಿತ್ರದ ತಾರಾಗಣದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್, ರತ್ನನ್ ಪ್ರಪಂಚ ಪ್ರಮೋದ್, ಗುಲ್ಟು ನವೀನ್ ಶಂಕರ್, ಗರುಡ ರಾಮಚಂದ್ರ ರಾಜು, ಮಧು ಗುರುಸ್ವಾಮಿ ಹಾಗೂ ರವಿಭಟ್ ತಾರಾಗಣದಲ್ಲಿದ್ದಾರೆ.
ಪ್ರಶಾಂತ್ ನೀಲ್ ತಮ್ಮ ಸಿನಿಮಾಗಳನ್ನು ಪವರ್‌ಫುಲ್ ಪಾತ್ರಗಳನ್ನು ಚಿತ್ರಿಸುತ್ತಾ ಹೋಗುತ್ತಾರೆ. ರಾಜ ಮನ್ನಾರ್ ಜೊತೆಗಿರುವ ಸಹಚರನಾಗಿ ಕನ್ನಡದ ನಟ ರವಿಭಟ್ ನಟಿಸಿದ್ದಾರೆ. ರಾಜಮನ್ನಾರ್ ಅರಮನೆಯಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ತಲೆ ತಗ್ಗಿಸಿ ನಿಂತಿರುವುದನ್ನು ಒಂದು ಫ್ರೇಮ್‌ನಲ್ಲಿ ನೋಡಬಹುದು.
ಕೆಲವರು 'ಉಗ್ರಂ' ಚಿತ್ರದ ರೀಮೇಕ್ 'ಸಲಾರ್' ಎಂದು ಫಿಕ್ಸ್ ಆಗಿಬಿಟ್ಟಿದ್ದಾರೆ. ಅಂತಹವರು ಪ್ರೇಮ್ ಪಾತ್ರದಲ್ಲಿ ನವೀನ್ ಶಂಕರ್ ಹಾಗೂ ವರದರಾಜ ಮನ್ನಾರ್(ಬಾಲ) ಸಹೋದರನ ಪಾತ್ರದಲ್ಲಿ ಪ್ರಮೋದ್ ನಟಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನುಳಿದಂತೆ ಗರುಡ ರಾಮ್, ಮಧು ಗುರುಮೂರ್ತಿ ಕೂಡ ಖಡಕ್ ಪಾತ್ರಗಳಲ್ಲಿ ನಟಿಸಿದ್ದಾರೆ. ಭಜರಂಗಿ ಲೋಕಿ ಕೂಡ 'ಸಲಾರ್' ಚಿತ್ರದಲ್ಲಿ ನಟಿಸಿರೋದಾಗಿ ಸುದ್ದಿಯಾಗಿತ್ತು. ಆದರೆ ಟ್ರೈಲರ್‌ನಲ್ಲಿ ಅವರು ಕಾಣಿಸಿಕೊಂಡಿಲ್ಲ.


Click it and Unblock the Notifications










