ಐಪಿಎಲ್ ಮತ್ತು ಚುನಾವಣೆ ನಡುವೆ ಈ ವಾರ 6 ಸಿನಿಮಾಗಳ ಪೈಪೋಟಿ
Recommended Video

ಹಿಂದಿನ ಕೆಲ ವಾರಗಳಲ್ಲಿ ಕನ್ನಡದಲ್ಲಿ ಮೂರರಿಂದ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿತ್ತು. ಆದರೆ ಈ ವಾರ ಮತ್ತೆ ಸಿನಿಮಾಗಳ ಅಬ್ಬರ ಶುರುವಾಗಿದೆ. ಕಾರಣ ಕನ್ನಡದಲ್ಲಿ ಈ ಶುಕ್ರವಾರ ಬಿಡುಗಡೆಯಾಗುತ್ತಿರುವುದು ಬರೋಬ್ಬರಿ ಆರು ಸಿನಿಮಾಗಳು.
ಒಂದು ಕಡೆ ಐಪಿಎಲ್ ಹಬ್ಬ, ಇನ್ನೊಂದು ಕಡೆ ಚುನಾವಣೆಯ ಅಬ್ಬರ ಈ ಎರಡರ ನಡುವೆ ಆರು ಸಿನಿಮಾಗಳ ಪೈಪೋಟಿಗೆ ನಿಂತಿವೆ. 'ಎಟಿಎಂ' ಅಟೆಂಪ್ಟ್ ಟು ಮರ್ಡರ್), 'ಕೃಷ್ಣತುಳಸಿ', '6 ಟು 6', 'ರುಕ್ಕು', 'ನಾಗವಲ್ಲಿ ವರ್ಸಸ್ ಆಪ್ತಮಿತ್ರರು' ಮತ್ತು 'ಸಾಗುವ ದಾರಿಯಲ್ಲಿ' ಸಿನಿಮಾಗಳು ಈ ವಾರ ಯುದ್ಧಕ್ಕೆ ಸಿದ್ಧವಾಗಿವೆ. ಇವುಗಳಲ್ಲಿ ಬಹುತೇಕ ಹೊಸಬರ ಸಿನಿಮಾಗಳೆ ಇದ್ದು, ಯಾವ ಸಿನಿಮಾವನ್ನು ಜನ ಮೆಚ್ಚಿಕೊಳ್ಳುತ್ತಾರೆ ಎನ್ನುವ ಕುತೂಹಲ ಜೋರಾಗಿದೆ.
ಅಂದಹಾಗೆ, ಈ ವಾರ ತೆರೆಗೆ ಬರುತ್ತಿರುವ ಆರು ಸಿನಿಮಾಗಳ ವಿವರ ಮುಂದಿದೆ ಓದಿ...

ಎಟಿಎಂ (ಅಟೆಂಪ್ಟ್ ಟು ಮರ್ಡರ್)
ಎಟಿಎಂ (ಅಟೆಂಪ್ಟ್ ಟು ಮರ್ಡರ್) ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್ ನಲ್ಲಿರುವ ಎಟಿಎಂ ಒಂದರಲ್ಲಿ ನಡೆದ ಹಲ್ಲೆ ಘಟನೆ ದೇಶಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ಘಟನೆಯನ್ನು ಇಟ್ಟುಕೊಂಡು ಹೊಸಬರ ತಂಡ ಈ ಸಿನಿಮಾ ಮಾಡಿದೆ. ಖ್ಯಾತ ನಿರೂಪಕಿ ಹೇಮಲತಾ ಸಿನಿಮಾದಲ್ಲಿ ಪತ್ರಕರ್ತೆ ಪಾತ್ರವನ್ನು ನಿರ್ವಹಿಸಿದ್ದಾರೆ. ಅಮರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ.

ಕೃಷ್ಣ ತುಳಸಿ
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ 'ಕೃಷ್ಣ ತುಳಸಿ' ಚಿತ್ರ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. 'ವರ್ತಮಾನ' ಚಿತ್ರದ ನಂತರ 'ಕೃಷ್ಣ ತುಳಸಿ' ಚಿತ್ರ ಬಿಡುಗಡೆ ಆಗುತ್ತಿದೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ಸಂಜಾರಿ ವಿಜಯ್ ಅಂಧನ ಪಾತ್ರ ಮಾಡಿದ್ದಾರೆ. ಕಣ್ಣು ಕಾಣದ ಒಬ್ಬ ಹುಡುಗ ಇಲ್ಲಿ ಟ್ರಾವೆಲ್ ಗೈಡ್ ಆಗಿರುತ್ತಾನೆ. ಈ ಹುಡುಗನ ಸುತ್ತ ಸಿನಿಮಾದ ಕಥೆ ಇದೆ. ಸಂಚಾರಿ ವಿಜಯ್ ಪ್ರೇಯಸಿಯಾಗಿ ಮೇಘಶ್ರೀ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ಸಿನಿಮಾದ ಬಗ್ಗೆ ಕುತೂಹಲವನ್ನು ಹುಟ್ಟುಹಾಕಿದೆ. ಸುಕೇಶ್ ನಾಯಕ್ ನಿರ್ದೇಶನ, ಕಿರಣ್ ರವೀಂದ್ರನಾಥ್ ಸಂಗೀತ ಚಿತ್ರದಲ್ಲಿದೆ. ಕೃಷ್ಣ ತುಳಸಿ' ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಮ್ಯೂಸಿಗ್ ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.

ಸಾಗುವ ದಾರಿಯಲ್ಲಿ
'ಸಾಗುವ ದಾರಿಯಲ್ಲಿ' 2011 ನಡೆದ ನೈಜ ಘಟನೆ ಆಧಾರಿತ ಸಿನಿಮಾವಾಗಿದೆ. ನಟಿ ಪವಿತ್ರ ಗೌಡ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಅವರ ಪುತ್ರ ಅನೂಪ್ ಸಾ.ರಾ.ಗೋವಿಂದು ಚಿತ್ರದಲ್ಲಿ ನಟಿಸಿದ್ದಾರೆ ವಾಸ್ತವವಾಗಿ ಈ ಸಿನಿಮಾ ಅನೇಕ ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ ಅಂತೂ ಸಿನಿಮಾ ಈಗ ರಿಲೀಸ್ ಆಗುತ್ತಿದೆ. ಶಿವಶಂಕರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಅವರ ಬದುಕಿನಲ್ಲಿ ಆದ ಘಟನೆಗಳನ್ನು ಇಟ್ಟುಕೊಂಡು ಕಥೆ ಮಾಡಿದ್ದಾರೆ. ಸೈನಿಕನ ಪಾತ್ರದಲ್ಲಿ ನಟ ದೇವರಾಜ್ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ, ಬುಲೇಟ್ ಪ್ರಕಾಶ್, ರಂಗಾಯಣ ರಘು, ಮಜಾ ಟಾಕೀಸ್ ಪವನ್, ಜಹಂಗೀರ್ ಚಿತ್ರದಲ್ಲಿ ನಗಿಸಲಿದ್ದಾರೆ. ಶರಣ್ ಲೋಹಿತಾಶ್ವ ಪೊಲೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ. 'ಸಾಗುವ ದಾರಿಯಲಿ' ಸಿನಿಮಾ ಏಪ್ರಿಲ್ 20ಕ್ಕೆ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ.

ನಾಗವಲ್ಲಿ ವರ್ಸಸ್ ಆಪ್ತಮಿತ್ರರು
ಮತ್ತೆ ಈಗ ಗಾಂಧಿನಗರಕ್ಕೆ ನಾಗವಲ್ಲಿಯ ಎಂಟ್ರಿ ಆಗಿದೆ. 'ನಾಗವಲ್ಲಿ ವರ್ಸಸ್ ಆಪ್ತಮಿತ್ರರು' ಸಿನಿಮಾ ಇದೇ ವಾರ ತೆರೆಗೆ ಬರಲು ಸಿದ್ಧವಾಗಿದೆ. ಸನ್‍ಶೈನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಶ್ವೇತಾ ಅರುಣ್ ನಿರ್ಮಿಸಿದ್ದಾರೆ. ಶಂಕರ್ ಅರುಣ್ ಆಕ್ಷನ್ ಕಟ್ ಹೇಳಿದ್ದಾರೆ. 'ಬಿಗ್ ಬಾಸ್' ಮತ್ತು 'ದೇವ್ರಂತ ಮನುಷ್ಯ' ಸಿನಿಮಾ ಖ್ಯಾತಿಯ ವೈಷ್ಣವಿ ಚಂದ್ರನ್ ಸಿನಿಮಾದ ನಾಯಕಿ ಆಗಿದ್ದಾರೆ. ಇವರಿಗೆ ಕಾರ್ತಿಕ್ ಜೊತೆಯಾಗಿ ನಟಿಸಿದ್ದಾರೆ.

6 ಟು 6
ತಾರಖ್ ಪೊನ್ನಪ್ಪ, ಶಂಖನಾದ ಅರವಿಂದ್, ವಿನಯ್ ಅಂಕೋಲಾ, ಮೈಸೂರು ರಮಾನಂದ್, ಪ್ರದೀಪ್ ಹೆಬ್ಬಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ '6 ಟು 6' ಎಪ್ರಿಲ್ 20ಕ್ಕೆ ತೆರೆಗೆ ಬರುತ್ತಿದೆ. ಶ್ರೀನಿವಾಸ್ ಶಿಡ್ಲಘಟ್ಟ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಎಂ ಅಭಿಷೇಕ್ ನಿರ್ಮಾಣದ ಚಿತ್ರ ಇದಾಗಿದೆ. 6 ಟು 6 ಸಿನಿಮಾ ಥ್ರಿಲ್ಲರ್, ಸಸ್ಪೆನ್ಸ್, ಕಾಮಿಡಿ ಅಂಶಗಳನ್ನು ಹೊಂದಿದೆಯಂತೆ.
ಚಿತ್ರದ ಕಥೆ ಬೆಳಗ್ಗೆ 6 ಗಂಟೆಯಿಂದ ಹಿಡಿದು ಸಂಜೆ 6 ಗಂಟೆಯೊಳಗೆ ನಡೆಯುವ ಘಟನೆಯನ್ನು ಹೊಂದಿದೆ.

ರುಕ್ಕು
'ರುಕ್ಕು' ಎಂಬ ಹೊಸಬರ ಸಿನಿಮಾ ಕೂಡ ಇದೇ ಶುಕ್ರವಾರ ಶುಭಾರಂಭ ಮಾಡಲಿದೆ. ಬಸವರಾಜ್ ಬಳ್ಳಾರಿ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶ್ರೇಯಸ್ ಸಿನಿಮಾದ ನಾಯಕನಾಗಿದ್ದಾರೆ. ಥ್ರಿಲ್ಲರ್ ಮಂಜು ಸಾಹಸಗಳು ಸಿನಿಮಾದಲ್ಲಿದೆ. ಡಿಂಪಲ್ ಆರ್ಟ್ಸ್ ಬ್ಯಾನರ್ ನಲ್ಲಿ ರಾಜಣ್ಣ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.


Click it and Unblock the Notifications











