twitter
    For Quick Alerts
    ALLOW NOTIFICATIONS  
    For Daily Alerts

    ಅರುವತ್ತರ ಸಂಭ್ರಮದಲ್ಲಿ ಅಂಬರೀಷ್ ಮಾತುಗಳು

    |

    "ದುಂಡಗಿರುವ ಜಗತ್ತಲ್ಲಿ, ಗುಂಡಗಿರುವ ದೇಶದಲ್ಲಿ, ಕರುನಾಡಿನಲ್ಲಿ ಪ್ರೀತಿಪಾತ್ರವಾದ ಮಂಡ್ಯದಲ್ಲಿ, ಟಿಪ್ಪು ಸುಲ್ತಾನ್ ಮೆರೆದ ನಾಡಿನಲ್ಲಿ, ಕಾವೇರಿ ತೀರದಲ್ಲಿ, ಚೌಡಯ್ಯರ ಪಿಟೀಲು ಕೇಳುತ್ತಾ, ಕುವೆಂಪುರನ್ನು ಓದುತ್ತಾ, ಡಾ ರಾಜ್ ಕುಮಾರ್ ಅವರನ್ನು ನೋಡುತ್ತಾ ಬೆಳೆದ ಗಂಡು ನಾನು..., ಮಂಡ್ಯದ ಗಂಡು..." ಎಂಬ ಡೈಲಾಗನ್ನು ಹೇಳುತ್ತಾ ರಾಜಗಾಂಭೀರ್ಯದಿಂದ ವೇದಿಕೆಯನ್ನೇರಿ ಬಂದರು ಕನ್ನಡದ ಹೆಮ್ಮೆಯ ರೆಬೆಲ್ ಸ್ಟಾರ್ ಅಂಬರೀಷ್.

    "60 ವರ್ಷಗಳು ತುಂಬಿರುವ ನಾನು ಈಗ ಸೀನಿಯರ್ ಸಿಟಿಜನ್. ಬೆಳೆಯಬೇಕು ಎನ್ನುವ ಕಾರಣಕ್ಕೆ ಚಿತ್ರರಂಗಕ್ಕೆ ಬರಲಿಲ್ಲ. ನಾನು ಏನೂ ಅಂದುಕೊಳ್ಳದೇ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ನನ್ನೊಂದಿಗಿರುವ ಸ್ನೇಹಿತರ ಬಳಗ ದೇವರು ಕೊಟ್ಟ ವರ. ನಾನು ಗಳಿಸಿದ್ದು ಏನೂ ಇಲ್ಲ.

    ವೇದಿಕೆಯ ಮೇಲಿರುವ ಗಣ್ಯರೆಲ್ಲಾ ಒಂದೊಂದು ರಾಜ್ಯವನ್ನು ಪ್ರತಿನಿಧಿಸುವ, ಆಯಾ ರಾಜ್ಯಗಳನ್ನೂ ಮೀರಿ ಆರಾಧಿಸಲ್ಪಡುವ ಮಹನೀಯರು. ಅವರೆಲ್ಲಾ ನನ್ನ ಸ್ನೇಹತರು ಎಂಬುದೇ ನನಗೆ ಹೆಮ್ಮೆ. ಅವರು ಮಾಡಿರುವ ಆಶೀರ್ವಾದವನ್ನು ನಾನು ಎಂದೆಂದೂ ಮರೆಯಲಾರೆ.

    ಜೀವವಿರುವವರೆಗೂ ಎಲ್ಲರಿಗೂ ನಾನು ಋಣಿಯಾಗಿರುತ್ತೇನೆ" ಎಂದು ಅಂಬರೀಷ್ ಭಾವಪರವಶವಾಗಿ ಹೇಳುತ್ತಿದ್ದರೆ ನೆರೆದವರೆಲ್ಲರ ಕಣ್ಣಿನಲ್ಲೂ ಗೊತ್ತಿಲ್ಲದಂತೆ ನೀರು ಜಿನುಗಿತು. ಇದು ನಿನ್ನೆ ಅಂಬರೀಷ್ 60 ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ 'ಅಂಬಿ ಸಂಭ್ರಮ' ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯ.

    ಬಂದಿದ್ದ ಗಣ್ಯಾತಿಗಣ್ಯರು, ಕನ್ನಡ ಸೇರಿದಂತೆ ನೆರೆ ಹಾಗೂ ಪರಭಾಷೆಯ ಚಿತ್ರರಂಗದ ಅತಿರಥಮಹಾರಥರು ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಷ್ ಅವರ ಸ್ನೇಹಪರ ವ್ಯಕ್ತಿತ್ವ ಹಾಗೂ ನಿಸ್ವಾರ್ಥ ಗುಣಕ್ಕೆ ಮನಸೋತು ಹಾಡಿ ಹೊಗಳುತ್ತಿದ್ದರೆ ಹುಟ್ಟುಹಬ್ಬ ಆಚರಣೆಯ ಕೇಂದ್ರಬಿಂದು ಅಂಬರೀಷ್ ಕಣ್ಣಲ್ಲಿ ಆನಂದಬಾಷ್ಪ ಹರಿಯಿತು.

    ಅರಮನೆ ಆವರಣದಲ್ಲಿ ಸೇರಿದ್ದ ಅಸಂಖ್ಯಾತ ಅಭಿಮಾನಿಗಳು ಹಾಗೂ ಗಣ್ಯರನ್ನು ಉದ್ದೇಶಿಸಿ ಮಾತನಾಡಲು ಬಂದ ರೆಬೆಲ್ ಸ್ಟಾರ್ ಅಂಬರೀಷ್ ಎಲ್ಲರ ಪ್ರೀತಿ, ಶುಭ-ಹಾರೈಕೆಗಳನ್ನು ಕಂಡು ಮೂಕವಿಸ್ಮಿತರಾದರು. ಕನ್ನಡಿಗರ ಪ್ರೀತಿ-ಆದರಗಳ ಜೊತೆ ಪರಭಾಷೆಯ ನಟ-ನಟಿಯರ ಪ್ರೀತಿ-ಹಾರೈಕೆಗಳಿಗೆ ತಲೆಬಾಗಿದರು. "ಎಲ್ಲರ ಪ್ರೀತಿ, ಹಾರೈಕೆಗಳಿಗೆ ನಾನು ಚಿರಋಣಿ" ಎನ್ನುತ್ತಾ ಭಾವಪರವಶರಾಗಿ ಕಣ್ಣೀರಾದರು.

    ಖ್ಯಾತ ಗಾಯಕ ಹಾಗೂ ತಮ್ಮ ಹೆಚ್ಚಿನ ಎಲ್ಲಾ ಚಿತ್ರಗಳ ಗೀತೆಗೆ ಧ್ವನಿಯಾಗಿರುವ ಡಾ ಎಸ್ ಪಿ ಬಾಲಸುಬ್ರಮಣ್ಯಂ ಅವರನ್ನು ತಬ್ಬಿಕೊಂಡು ಹೃತ್ಪೂರ್ವಕ ಕೃತಜ್ಞತೆ ಅರ್ಪಿಸಿದರು ಅಂಬರೀಷ್. ಅಂಬರೀಷ್ ಚಿತ್ರದ ಗೀತೆಗಳಿಗೆ ನಿನ್ನೆ ವೇದಿಕೆಯಲ್ಲೇ ಹಾಡಿ ಪ್ರೇಕ್ಷಕರನ್ನು ರಂಜಿಸಿದರು ಗಾನಗಂಧರ್ವ ಎಸ್ಪಿ ಬಾಲಸುಬ್ರಮಣ್ಯಂ.

    ಅಂಬರೀಶ್ ಹೊಗಳಿಕೆಗೆ ಪ್ರತಿಯಾಗಿ ಎಸ್ಪಿಬಿ "ಅಂಬರೀಶ್ ಕೇವಲ ಸಿನಿಮಾದಲ್ಲಿ ಮಾತ್ರ ನಟಿಸುತ್ತಾರೆ, ನಿಜ ಜೀವನದಲ್ಲಲ್ಲ. ನಿಜ ಜೀವನದಲ್ಲೂ ನಟಿಸುವವರ ಮುಂದೆ ಅಂಬರೀಷ್ ತುಂಬಾ ವಿಭಿನ್ನವಾಗಿ ನಿಂತು ಮಾದರಿ ಎನಿಸುತ್ತಾರೆ. ಇಂತಹ ಸ್ನೇಹಜೀವಿಯ ಸಿನಿಮಾಗೆ ಹಾಡಿದ್ದು ನನ್ನ ಪುಣ್ಯ" ಎಂದು ಪ್ರತಿಧನ್ಯವಾದ ಅರ್ಪಿಸಿದರು.

    ಪತ್ನಿ ಸುಮಲತಾ ಅಂಬರೀಷ್, ಪುತ್ರ ಅಭಿಷೇಕ್ ಹಾಗೂ ಗಣ್ಯರ ಜೊತೆ ವೇದಿಕೆಯಲ್ಲಿದ್ದ ಅಂಬರೀಷ್, ದೂದದೂರದಿಂದ ತಮ್ಮ ಹುಟ್ಟುಹಬ್ಬಕ್ಕೆ ಆಗಮಿಸಿದ ಲಕ್ಷಲಕ್ಷ ಜನರಿಗೆ, ಅಭಿಮಾನಿಗಳಿಗೆ ಹೂತ್ಪೂರ್ವಕ ಧನ್ಯವಾದ ಅರ್ಪಿಸಿದರು. ತಮ್ಮ ಅದ್ದೂರಿ ಹುಟ್ಟುಹಬ್ಬದ ಆಚರಣೆಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಹೇಳಲು ಮರೆಯಲಿಲ್ಲ ಅಂಬಿ.

    ಈ ಕಲಿಯುಗ ಕರ್ಣನ ಹುಟ್ಟುಹಬ್ಬದ ವೈಭವನ್ನು ಹಾಗೂ ಅವರ ಜನಪ್ರಿಯತೆಯನ್ನು ಕಣ್ಣಲ್ಲಿ ತುಂಬಿಕೊಂಡು ತಮ್ಮ ಮನೆಯತ್ತ ಜನರು ಹೆಜ್ಜೆ ಹಾಕುತ್ತಿದ್ದರೆ ಆ ದೃಶ್ಯ ನೋಡಿದ ಕಣ್ಣುಗಳು ಧನ್ಯತೆ ಅನುಭವಿಸಿದವು. ಅಂಬಿಯ ಅದ್ದೂರಿ ಹುಟ್ಟುಹಬ್ಬದ ಆಚರಣೆಗೆ ಸಾಕ್ಷಿಯಾದ ಅರಮನೆ ಮೈದಾನ, ಇಂಥ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಪುಳಕ ಅನುಭವಿಸಿ ಇತಿಹಾಸದ ಘನ ಪುಟವೊಂದನ್ನು ನಿರ್ಮಿಸಿ ಧನ್ಯವಾಯಿತು. (ಒನ್ ಇಂಡಿಯಾ ಕನ್ನಡ)

    English summary
    Rebel Star Ambarish's 60th Birthday Celebrated at Bangalore Palace Ground yesterday, on 29th May 2012. This Grand celebration included Super Star Rajinikanth, Mega Star Chiranjeevi, Nandamoori Balakrishna, shatrughna Sinha, Jockie Shroff, Mohanlal and others included Kannada movie industry. 
 
    Wednesday, May 30, 2012, 18:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X