ತಮಿಳುನಾಡಿನಲ್ಲಿ 'ಕೆಜಿಎಫ್' ಸಿನಿಮಾಗೆ ದೊಡ್ಡ ಸ್ಪರ್ಧೆ
'ಕೆ ಜಿ ಎಫ್' ಎಂಬ ಮೂರು ವರ್ಷಗಳ ತಪಸ್ಸಿಗೆ ಫಲ ಸಿಗಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಕರ್ನಾಟಕ, ಆಂಧ್ರ, ತಮೀಳುನಾಡು, ಮುಂಬೈ, ಹೀಗೆ ಎಲ್ಲಾ ಕಡೆ 'ಕೆಜಿಎಫ್' ಸಿನಿಮಾದ್ದೇ ಹವಾ. ರಾಕಿಂಗ್ ಸ್ಟಾರ್ ಯಶ್ ಎಲ್ಲಾ ರಾಜ್ಯಗಳಿಗೂ ಹೋಗಿ, ಸುಮಾರು ಎಪ್ಪತ್ತು ಸಂದರ್ಶನ ಕೊಟ್ಟು ಬಂದಿದ್ದಾರೆ.
ಯಶ್ ಕನ್ನಡದ ಜನಪ್ರಿಯ ನಟರಾದ್ದರಿಂದ ಕರ್ನಾಟಕದಲ್ಲಿ ಕೆಜಿಎಫ್ ಗೆ ಒಳ್ಳೆ ಓಪನಿಂಗ್ ಸಿಗುತ್ತದೆ ಎನ್ನುವ ನಂಬಿಕೆ ಅವರಿಗಿದೆ. ಅದರಂತೆ ಈಗಾಗಲೇ ಮೊದಲ ದಿನದ ಬಹುತೇಕ ಶೋಗಳು ಬುಕ್ ಆಗಿದೆ. ಆಂಧ್ರ ಮತ್ತು ಮುಂಬೈನಲ್ಲಿ ಯಶ್ ಪ್ರಚಾರ ಮಾಡಿ ಬಂದ ಮೇಲೆ ಅವರಿಗೆ ಅಲ್ಲೂ ಒಳ್ಳೆ ಓಪನಿಂಗ್ ಸಿಗುತ್ತದೆ ಎನ್ನುವ ನಂಬಿಕೆ ಬಂದಿದೆ.
ತೆಲುಗಿನಲ್ಲಿ 'ಅಂತರಿಕ್ಷಂ' ಮತ್ತು ಹಿಂದಿಯಲ್ಲಿ 'ಝೀರೊ' ಕೆ.ಜಿ.ಎಫ್ ನ ಎದುರಿಗೆ ಬರುತ್ತಿದ್ದರು, ಚಿತ್ರತಂಡದವರಿಗೆ ಆತಂಕವಿಲ್ಲ. ಆದರೆ, ಯಶ್ ಮತ್ತು ಚಿತ್ರತಂಡದವರಿಗೆ ಆತಂಕವಿರುವುದು, ತಮಿಳುನಾಡಿನಲ್ಲಿ ನಾಳೆ 'ಕೆ,ಜಿ,ಎಫ್' ಬಿಡುಗಡೆಯಾಗುತ್ತಿರುವುದರ ಬಗ್ಗೆ. ಏಕೆಂದರೆ ನಾಳೆ ಅಲ್ಲಿ ಬಿಡುಗಡೆಯಾಗುತ್ತಿರುವುದು ಎರಡಲ್ಲ, ಮೂರಲ್ಲ, ಒಟ್ಟು ಏಳು ಸಿನಿಮಾಗಳು. 'ಮಾರಿ 2', 'ಸೀತಾಕತ್ತಿ' ಸೇರಿದಂತೆ ಏಳು ಚಿತ್ರಗಳು ತಮಿಳಿನಲ್ಲಿ ರಿಲೀಸ್ ಆಗುತ್ತಿವೆ.

ಒಂದು ರಾಜ್ಯದಲ್ಲಿ ಎರಡು ಮೂರು ದೊಡ್ದ ಸಿನಿಮಾ ಬಿಡುಗಡೆಗೆ ಜಾಗವಿರುತ್ತದೆ. ಆದರೆ, ಏಳು ಸಿನಿಮಾಗಳು ಬಿಡುಗಡೆಯಾದಾಗ, ಹಂಚಿ ಹೋಗುತ್ತದೆ ಎಂಬುದನ್ನ ಯಶ್ ಅವರೇ ಹೇಳಿದ್ದರೆ. ವಿಶಾಲ್ ಬಿಡುಗಡೆಯನ್ನು ಒಂದು ವಾರ ಮುಂದೂಡಲು ಕೇಳಿಕೊಂಡರು. ಆದರೆ, ಎಲ್ಲಾ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ೨೧ಕ್ಕೆ ಬಿಡುಗಡೆ ಮಾಡಲು ತೀರ್ಮಾನಿಸಿದೆವು ಎಂದು ಸಂದರ್ಶನವೊಂದರಲ್ಲಿ ಯಶ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಯಾವುದೇ ಸ್ಪರ್ಧೆ ಇದ್ದರೂ 'ಕೆ.ಜಿ.ಎಫ್' ಎಲ್ಲಾ ಭಾಷೆಗಳಲ್ಲು ಗೆದ್ದು, ಕನ್ನಡದಲ್ಲಿ ಇಂತಹ ಮತ್ತಷ್ಟು ಸಿನಿಮಾ ಬರಲು ಸ್ಪೂರ್ತಿಯಾಗಲಿ.


Click it and Unblock the Notifications











