70th National Film Awards: ರಾಷ್ಟ್ರಪ್ರಶಸ್ತಿ ಇತಿಹಾಸದಲ್ಲಿ ರಿಷಬ್ ಶೆಟ್ಟಿ ಹೊಸ ದಾಖಲೆ
ಕನ್ನಡ ನಟ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಗರಿ ಲಭಿಸಿದೆ. ಅತ್ಯುತ್ತಮ ನಟ ವಿಭಾಗದಲ್ಲಿ ಮಲಯಾಳಂ ನಟ ಮಮ್ಮುಟಿ ಹಾಗೂ ಬಾಲಿವುಡ್ ನಟ ವಿಕ್ರಾಂತ್ ಮೆಸ್ಸಿ ಪ್ರಬಲ ಪೈಪೋಟಿ ಕೊಟ್ಟಿದ್ದರು. ಅವರಿಬ್ಬರನ್ನು ಹಿಂದಿಕ್ಕಿ ರಿಷಬ್ ಶೆಟ್ಟಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೊರಹೊಮ್ಮಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರರಂಗಕ್ಕೆ ಇದು ಹರುಷ ತಂದಿದೆ.
2022ರ ದಸರಾ ಸಂಭ್ರಮದಲ್ಲಿ 'ಕಾಂತಾರ' ಸಿನಿಮಾ ತೆರೆಗೆ ಬಂದಿತ್ತು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿತ್ತು. ಮೊದಲಿಗೆ ಕನ್ನಡ ಚಿತ್ರವಾಗಿಯೇ ತೆರೆಗೆ ಬಂದಿದ್ದ 'ಕಾಂತಾರ' ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. 4 ಭಾಷೆಗಳಿಗೆ ಡಬ್ ಆಗಿ ಹಿಟ್ ಆಗಿತ್ತು. ರಿಷಬ್ ಶೆಟ್ಟಿ ನಟನೆ ಕಂಡು ಪರಭಾಷಿಕರು ಬಹುಪರಾಕ್ ಎಂದಿದ್ದರು.

ರಿಷಬ್ ಶೆಟ್ಟ ನಿರ್ದೇಶನದ 'ಕಾಂತಾರ' ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದರು. ಇನ್ನುಳಿದಂತೆ ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್ ಸೇರಿ ದೊಡ್ಡ ತಾರಾಗಣವೇ ಚಿತ್ರದಲ್ಲಿತ್ತು. ಕರಾವಳಿಯ ಆಚಾರ ವಿಚಾರ, ದೈವಗಳ ಬಗ್ಗೆ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೇಳಿದ್ದರು. ಮುಖ್ಯವಾಗಿ ಪಂಜುರ್ಲಿ ಹಾಗೂ ಗುಳಿಗ ದೈವಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿತ್ತು.
ಚಿತ್ರದಲ್ಲಿ ಕಾಡುಬೆಟ್ಟು ಶಿವನ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದರು. ಆರಂಭದಲ್ಲಿ ಬಹಳ ಉಡಾಫೆ, ತಮಾಷೆ ಸ್ವಭಾವದ ಪಾತ್ರ ಕೊನೆ ಕೊನೆಗೆ ಗಂಭೀರವಾಗುತ್ತಾ ಹೋಗುತ್ತದೆ. ಪಂಜುರ್ಲಿ ದೈವ ವೇಷಧಾರಿ ಆಗಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಕೊನೆಗೆ ಗುಳಿಗ ಮೈಮೇಲೆ ಆವಾಹನೆ ಆಗುವಾಗ ರಿಷಬ್ ನಟನೆ ನೋಡುಗರಿಗೆ ಮೈ ಜುಮ್ ಎನಿಸಿತು. ಅಷ್ಟರಮಟ್ಟಿಗೆ ಅದನ್ನು ತೆರೆಗೆ ತಂದಿದ್ದರು. ಈ ನಟನೆಯನ್ನು ಮೆಚ್ಚಿ ರಾಷ್ಟ್ರಪ್ರಶಸ್ತಿ ಘೋಷಿಸಿದ್ದಾರೆ.

ಯಾವುದೇ ಸಿನಿಮಾ, ಪಾತ್ರ ಆಗಿದ್ದರೂ ಅದು ಮೊದಲು ನಿರ್ದೇಶಕ ಕಲ್ಪನೆ. ನಿರ್ದೇಶಕನ ನಿರ್ದೇಶನಂತೆ ಒಂದು ಚಿತ್ರದಲ್ಲಿ ಎಲ್ಲವೂ ಮೂಡಿ ಬರುತ್ತದೆ. ಒಬ್ಬ ನಟ ಅದ್ಭುತವಾಗಿ ನಟಿಸಬಹುದು. ಆದರೆ ಆತ ಆ ರೀತಿ ನಟಿಸಲು ಬೇಕಾದ ಕಥೆ, ಚಿತ್ರಕಥೆ, ಪಾತ್ರ, ಆ ಪಾತ್ರವನ್ನು ಕಟ್ಟುವ ರೀತಿ ಮುಖ್ಯವಾಗುತ್ತದೆ. ಅದು ನಿರ್ದೇಶಕನ ಕೆಲಸ. 'ಕಾಂತಾರ' ಚಿತ್ರದಲ್ಲಿ ನಟನಾಗಿ ಮಾತ್ರವಲ್ಲದೇ ತನ್ನನ್ನು ತಾನೇ ರಿಷಬ್ ಶೆಟ್ಟಿ ನಿರ್ದೇಶಿಸಿಕೊಂಡಿದ್ದಾರೆ.
ಅತ್ಯುತ್ತಮ ನಟನಾಗಿ ತಮ್ಮ ರಾಷ್ಟ್ರಪ್ರಶಸ್ತಿಯನ್ನು ಖುದ್ದು ರಿಷಬ್ ಶೆಟ್ಟಿ ನಿರ್ದೇಶಿಸಿ ಗೆದ್ದುಕೊಂಡಿದ್ದಾರೆ. ಈ ಸಾಧನೆ ಮಾಡಿದ ಮೊದಲಿಗ ರಿಷಬ್ ಶೆಟ್ಟಿ ಎಂದರೆ ತಪ್ಪಾಗಲ್ಲ. ಒಂದಲ್ಲ ಎರಡು ಮೂರು ರಾಷ್ಟ್ರಪ್ರಶಸ್ತಿ ಪಡೆದುಕೊಂಡವರು ಇದ್ದಾರೆ. ಆದರೆ ತಾವೇ ಸಿನಿಮಾ ನಿರ್ದೇಶಿಸಿ ನಟಿಸಿ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದವರು ರಿಷಬ್ ಶೆಟ್ಟಿ ಮಾತ್ರ. 1997ರಲ್ಲಿ ಮಲಯಾಳಂ ನಟ, ನಿರ್ದೇಶಕ ಬಾಲಚಂದ್ರ ಮೆನನ್ ಇದೇ ಸಾಧನೆ ಮಾಡಿದ್ದರು. ಆದರೆ ಅವರು ಮತ್ತೊಬ್ಬ ನಟ ಸುರೇಶ್ ಗೋಪಿ ಜೊತೆ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.
ರಿಷಬ್ ಶೆಟ್ಟಿಗೆ ಪ್ರಶಸ್ತಿ ಸಿಕ್ಕಿರುವುದು ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ನಟ ಯಶ್ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸಿದ್ದಾರೆ. ಇನ್ನು ನಟ ರಿಷಬ್ ಶೆಟ್ಟಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ರಾಷ್ಟ್ರಪ್ರಶಸ್ತಿ ಪಡೆದ ಸಂತಸ ಹಂಚಿಕೊಂಡಿದ್ದಾರೆ. ಇನ್ನು ನಟನೆ ಜೊತೆಗೆ ರಿಷಬ್ ನಿರ್ದೇಶನದ 'ಕಾಂತಾರ' ಜನಪ್ರಿಯ ಚಿತ್ರ ವಿಭಾಗದಲ್ಲೂ ಪ್ರಶಸ್ತಿಗೆ ಭಾಜನವಾಗಿರುವುದು ವಿಶೇಷ.
'ಕಾಂತಾರ' ಸಕ್ಸಸ್ ಬಳಿಕ ಒಪ್ಪಿಕೊಂಡಿದ್ದ ಬೇರೆ ಸಿನಿಮಾಗಳನ್ನೆಲ್ಲಾ ಪಕ್ಕಕ್ಕಿಟ್ಟು ರಿಷಬ್ ಶೆಟ್ಟಿ ಪ್ರೀಕ್ವೆಲ್ ಮಾಡುತ್ತಿದ್ದಾರೆ. ಕುಂದಾಪುರದಲ್ಲಿ ಭಾರೀ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸುತ್ತಿದ್ದಾರೆ. ಈ ಬಾರಿ ಕಾಡುಬೆಟ್ಟು ಶಿವನ ಹಿಂದಿನ ಕಥೆ ಹೇಳಲು ಹೊರಟಿದ್ದಾರೆ. ಹೀರೊ ಕನಸು ಕಂಡು ಚಿತ್ರರಂಗಕ್ಕೆ ಬಂದಿದ್ದ ರಿಷಬ್ ಶೆಟ್ಟಿ ಮೊದಲಿಗೆ ಸಣ್ಣಪುಟ್ಟ ಪಾತ್ರ ಜೊತೆಗೆ ನಿರ್ದೇಶಕನಾಗಿ ಗುರ್ತಿಸಿಕೊಂಡರು. ಇದೀಗ ಹೀರೊ ಆಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.


Click it and Unblock the Notifications











