ಶಾರುಖ್‌ಗೆ ರಾಷ್ಟ್ರಪ್ರಶಸ್ತಿ, ಪೃಥ್ವಿರಾಜ್‌ಗೆ ಯಾಕಿಲ್ಲ? ಎಲ್ಲಾ ಪ್ರಶ್ನೆಗಳಿಗೆ ಜ್ಯೂರಿ ಎಂ. ಎನ್ ಸ್ವಾಮಿ ಸ್ಪಷ್ಟನೆ
ಎರಡು ದಿನದ ಹಿಂದೆಯಷ್ಟೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಘೋಷಣೆಯಾಗಿದೆ. ಶಾರುಖ್ ಖಾನ್ ಹಾಗೂ ವಿಕ್ರಾಂತ್ ಮೆಸ್ಸಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಆಯ್ಕೆ ವಿಚಾರದಲ್ಲಿ ತೀರ್ಪುಗಾರರ ನಡೆಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.
'ಜವಾನ್' ಚಿತ್ರದ ನಟನೆಗಾಗಿ ಶಾರುಖ್ ಖಾನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿದ್ದು ಹಾಗೂ ಆಡುಜೀವಿತಂ ಚಿತ್ರದ ನಟನೆಗೆ ಯಾಕೆ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಪ್ರಶಸ್ತಿ ಸಿಗಲಿಲ್ಲ ಎನ್ನುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಜ್ಯೂರಿ ಕಮಿಟಿಯಲ್ಲಿದ್ದ ಎಡಿಟರ್ ಎಂ. ಎನ್ ಸ್ವಾಮಿ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ವಿಜೇತರ ಪಟ್ಟಿ ಪ್ರಕಟ ಆಗಿದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕರ್ನಾಟಕದ ಮೂಲದ ಎಂ. ಎನ್ ಸ್ವಾಮಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಡಾಕ್ಯುಮೆಂಟರಿಗಳ ನಿರ್ದೇಶನ, ಸಂಕಲನ ಮಾಡಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ. ದಶಕಗಳಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ.
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಆಯ್ಕೆಗೆ ಸೆಂಟ್ರಲ್ ಜ್ಯೂರಿ ಚೇರ್‌ಪರ್ಸನ್ ಆಗಿ ಅಶುತೋಷ್ ಗೌವಾರಿಕರ್ ಇದ್ದರು. ಇನ್ನುಳಿದಂತೆ ಎಂ. ಎನ್ ಸ್ವಾಮಿ, ಪ್ರದೀಪ್ ನಾಯರ್, ಪ್ರಕಾಶ್ ವೋರ ಸೇರಿ 10 ಜನ ಸದಸ್ಯರು ಕಮಿಟಿಯಲ್ಲಿದ್ದರು. 2023ರಲ್ಲಿ ಸೆನ್ಸಾರ್ ಆಗಿದ್ದ ಸಿನಿಮಾಗಳಿಗೆ ವಿವಿಧ ವಿಭಾಗಳಲ್ಲಿ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಆರಿಸಲಾಗಿದೆ.
332 ಫೀಚರ್ ಚಲನಚಿತ್ರಗಳು, 115 ನಾನ್-ಫೀಚರ್ ಚಲನಚಿತ್ರಗಳು ಈ ಬಾರಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು. 12th ಫೇಲ್ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. 'ಮಿಸಸ್ ಚಟರ್ಜಿ Vs ನಾರ್ವೆ' ಚಿತ್ರದಲ್ಲಿನ ಅಭಿನಯಕ್ಕಾಗಿ ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಜಯರಾಘವನ್ ಹಾಗೂ ಎಂ. ಎಸ್ ಭಾಸ್ಕರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಹಂಚಿಕೊಂಡಿದ್ದಾರೆ.
'ಉಲ್ಲೋಳುಕ್ಕು' ಚಿತ್ರದ ನಟನೆಗಾಗಿ ಊವರ್ಶಿ ಹಾಗೂ 'ವಶ್' ಚಿತ್ರಕ್ಕಾಗಿ ಜಾನಕಿ ಬೋಡಿವಾಲಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. 'ಜವಾನ್' ಚಿತ್ರಕ್ಕೆ ಶಾರುಖ್ ಖಾನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿರುವ ಬಗ್ಗೆ ಊರ್ವಶಿ ಚಕಾರ ಎತ್ತಿದ್ದಾರೆ. ವಿಜಯ್ ರಾಘವನ್ ಅವರಿಗೆ ಪೋಷಕ ನಟ ಯಾಕೆ? ಶಾರುಖ್ ಖಾನ್‌ಗೆ ಅತ್ಯುತ್ತಮ ನಟ ಯಾಕೆ? ವಿಜಯ್ ರಾಘವನ್ ಅವರನ್ನು ಕೂಡ ಅತ್ಯುತ್ತಮ ನಟ ವಿಭಾಗದಲ್ಲಿ ಗುರ್ತಿಸಿ ಪ್ರಶಸ್ತಿ ಕೊಡಬಹುದಿತ್ತಲ್ಲ ಎನ್ನುವ ಅರ್ಥದಲ್ಲಿ ಊರ್ವಶಿ ಪ್ರಶ್ನಿಸಿದ್ದಾರೆ.

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ಬಗ್ಗೆ ಜ್ಯೂರಿ ಸದಸ್ಯರಾದ ಎಂ. ಎನ್ ಸ್ವಾಮಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ನಾನು ಹತ್ತು ಹನ್ನೊಂದು ಜನ ಕೂತು ಸಿನಿಮಾ ನೋಡುವಾಗ ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿ ಇರುತ್ತದೆ. ಒಂದೇ ಅಭಿಪ್ರಾಯ ಇರಲು ಸಾಧ್ಯವಿಲ್ಲ. ಹೆಚ್ಚು ಜನರ ಅಭಿಪ್ರಾಯ ಏನು? ವಿಶ್ಲೇಷಣೆ ಏನು? ಎನ್ನುವುದನ್ನು ನೋಡಿ ಆ ಕಡೆ ಗಮನ ಹರಿಸಬೇಕಾಗುತ್ತದೆ. ನಾನು ಒಬ್ಬ ಒಪ್ಪದಿದ್ದ ಮಾತ್ರಕ್ಕೆ ಅದೇ ಸರಿ ಎನ್ನುವುದಕ್ಕೆ ಸಾಧ್ಯವಿಲ್ಲ" ಎಂದಿದ್ದಾರೆ.
"ಆಡು ಜೀವಿತಂ' ಸಿನಿಮಾ ವಿಚಾರ ಯಾಕೆ ಇಷ್ಟು ಚರ್ಚೆ ಆಗುತ್ತಿದೆ ಎನ್ನುವುದು ನನಗೆ ಅರ್ಥವಾಗ್ತಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ 'ಆಡು ಜೀವಿತಂ' ಸಿನಿಮಾ ಆಗಲಿ, ಪೃಥ್ವಿರಾಜ್ ನಟನೆ ಆಗಲಿ ವಿಶೇಷ ಅನಿಸಲಿಲ್ಲ. ಬೇರೆ ಸಿನಿಮಾಗಳಿಗೆ ಹೋಲಿಸಿ ನೋಡಿದಾಗ ಪ್ರಶಸ್ತಿ ಕೊಡುವಂಥದ್ದು ಏನು ಇಲ್ಲ ಎನಿಸಿತು. ಇದು ಒಬ್ಬ ಪ್ರೇಕ್ಷಕನಾಗಿ ನನ್ನ ಅಭಿಪ್ರಾಯ ಮಾತ್ರ" ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಮಾನದಂಡ ಇಟ್ಟುಕೊಂಡು ಪ್ರಶಸ್ತಿ ಕೊಡುವುದಕ್ಕೆ ಆಗುವುದಿಲ್ಲ. ಆಯಾ ಸಿನಿಮಾಗಳನ್ನು ನೋಡಿ ಅದರಲ್ಲಿ ಯಾವುದೇ ಉತ್ತಮ ಎಂದು ಜ್ಯೂರಿ ಸದಸ್ಯರು ನಿರ್ಧರಿಸಿ ಒಮ್ಮತದ ನಿರ್ಣಯ ಕೈಗೊಳ್ಳುತ್ತಾರೆ. ಉದಾಹರಣೆಗೆ ಡಾ. ರಾಜ್‌ಕುಮಾರ್ ಅವರ ನಟನೆಗೆ ಸರಿಸಮನಾದ ನಟನೆ ಯಾರು ಮಾಡೋಕೆ ಸಾಧ್ಯ ಹೇಳಿ. ಅವರ ಬಳಿಕ ಅಂತಹ ನಟರು ಯಾರು ಬಂದಿದ್ದಾರೆ ಹೇಳಿ? ಎಂದು ಎಂ. ಎನ್ ಸ್ವಾಮಿ ವಿವರಿಸಿದ್ದಾರೆ.
ಒಂದೇ ಪ್ರಶಸ್ತಿಯನ್ನು ಇಬ್ಬರಿಗೂ ಹಂಚುವ ಕೆಲಸ ಕೆಲವೊಮ್ಮೆ ನಡೆಯುತ್ತದೆ. ಈ ಬಾರಿ ಕೂಡ ಅದು ಆಗಿದೆ. ಸಾಹಸಸಿಂಹ ವಿಷ್ಣುವರ್ಧನ್ ಸೇರಿದಂತೆ ಕೆಲವರು ಹೀಗೆ ಒಂದೇ ಪ್ರಶಸ್ತಿಯನ್ನು ಇಬ್ಬರಿಗೆ ಹಂಚುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. 'ವೀರಪ್ಪ ನಾಯ್ಕ' ಚಿತ್ರಕ್ಕಾಗಿ ವಿಷ್ಣುವರ್ಧನ್ ಹಾಗೂ 'ಹೂಮಳೆ' ಚಿತ್ರಕ್ಕಾಗಿ ರಮೇಶ್ ಅರವಿಂದ್ ಅವರಿಗೆ ಅದೇ ವರ್ಷದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಘೋಷಿಸಿದ್ದರು. ಆಗ ದಾದಾ ಪ್ರಶಸ್ತಿ ಕಡ್ಲೇ ಮಿಠಾಯಿ ಮುರಿದು ಕೊಡುವುದಕ್ಕೆ ಎಂದು ಬೇಸರ ವ್ಯಕ್ತಪಡಿಸಿದ್ದರು. ರಮೇಶ್ ಅರವಿಂದ್ ಅವರಿಗೆ ಪ್ರಶಸ್ತಿ ಕೊಡಿ ನನಗೆ ಬೇಡ, ಆದರೆ ಹೀಗೆ ಇಬ್ಬರಿಗೆ ಕೊಡುವುದು ಪದ್ಧತಿ ಬೇಡ ಎಂದಿದ್ದರು. ಈ ಬಗ್ಗೆ ಎಂ. ಎನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
"ನನ್ನ ಪ್ರಕಾರ ಒಂದೇ ಪ್ರಶಸ್ತಿಯನ್ನು ಇಬ್ಬರಿಗೆ ಕೊಡುವುದರಲ್ಲಿ ತಪ್ಪೇನಿಲ್ಲ. ಸಮಾನತೆ ಎಂದು ನೋಡಿದಾಗ, ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ ಎಂದಾಗ ಕೊಡುವುದರಲ್ಲಿ ಸಮಸ್ಯೆ ಏನಿಲ್ಲ" ಎಂದು ಹೇಳಿದ್ದಾರೆ.
'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಛಾಯಾಗ್ರಹಕ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪ್ರಕಟವಾಗಿದೆ. ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಪ್ಪು ಮಾಹಿತಿ ಹರಡುವ ಚಿತ್ರಕ್ಕೆ ಪ್ರಶಸ್ತಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಶೀಘ್ರದಲ್ಲೇ ದೆಹಲಿಯ ವಿಜ್ಞಾನ್ ಭವನದಲ್ಲಿ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇನ್ನು ವಿಜೇತರಿಗೆ ಬಹುಮಾನದ ಹಣದ ಜೊತೆಗೆ ವಿವಿಧ ರೀತಿಯ ಪದಕಗಳು ಸಿಗಲಿದೆ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ(12th ಫೇಲ್) ಸ್ವರ್ಣ ಕಮಲ ಮತ್ತು ರೂ. 3,00,000 ಬಹುಮಾನವನ್ನು ಒಳಗೊಂಡಿರುತ್ತದೆ. ನಿರ್ದೇಶಕ, ನಿರ್ಮಾಪಕರು ತಲಾ ರೂ. 3,00,000 ಬಹುಮಾನದ ಹಣ ಪಡೆಯುತ್ತಾರೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಪೋಷಕ ನಟ, ಪೋಷಕ ನಟಿ, ಅತ್ಯುತ್ತಮ ಗಾಯಕ ಹೀಗೆ ವಿಜೇತರಿಗೆ ಬೆಳ್ಳಿ ಕಮಲ ಪ್ರಶಸ್ತಿ ಪದಕದ ಜೊತೆಗೆ ಬಹುಮಾನದ ಹಣ ಸಿಗುತ್ತದೆ.
ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿರುವ ಶಾರುಖ್ ಖಾನ್ ಹಾಗೂ ವಿಕ್ರಾಂತ್ ಮೆಸ್ಸಿ ಒಟ್ಟು 2 ಲಕ್ಷ ರೂ ಬಹುಮಾನದ ಹಣವನ್ನು ಸಮನಾಗಿ ಹಂಚಿಕೊಳ್ಳಲಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವ ರಾಣಿ ಮುಖರ್ಜಿ ಅವರಿಗೆ ಬೆಳ್ಳಿ ಕಮಲ ಪ್ರಶಸ್ತಿ ಪದಕ ಜೊತೆಗೆ 2 ಲಕ್ಷ ರೂ. ಬಹುಮಾನದ ಹಣ ಸಿಗಲಿದೆ.
ರಾಷ್ಟ್ರಪ್ರಶಸ್ತಿ ವಿಜೇತರಿಗೆ ಅಭಿಮಾನಿಗಳು, ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ. ಅಭಿನಂದನೆ ತಿಳಿಸಿದ ಎಲ್ಲರಿಗೂ ಶಾರುಖ್ ಖಾನ್ ಧನ್ಯವಾದ ತಿಳಿಸುತ್ತಿದ್ದಾರೆ. 2024ರಲ್ಲಿ ಸೆನ್ಸಾರ್ ಆಗಿರುವ ಸಿನಿಮಾಗಳಿಗೆ ಮುಂದಿನ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.


Click it and Unblock the Notifications











