ಜಪಾನ್‌ನಲ್ಲಿ ರಾಜಮೌಳಿ 'RRR'.. ಥೈಲ್ಯಾಂಡ್‌ನಲ್ಲಿ ರಕ್ಷಿತ್ ಶೆಟ್ಟಿ 777
ಕನ್ನಡ ಸಿನಿಮಾಗಳು ದೇಶವಿದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿವೆ. 'ಕಾಂತಾರ' ಚಿತ್ರವನ್ನು ಟೊರೆಂಟೋದಲ್ಲಿ ಪ್ರೇಕ್ಷಕರು ಕ್ಯೂ ನಿಂತು ಟಿಕೆಟ್ ಖರೀದಿಸಿ ನೋಡಿದ್ದಾರೆ. ಇದೀಗ ಥೈಲ್ಯಾಂಡ್ ಭಾಷೆಗೆ ಡಬ್ ಆಗಿ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಕನ್ನಡ ಸಿನಿಮಾಗಳು ಹೊರ ರಾಜ್ಯಗಳಲ್ಲಿ ಬಿಡುಗಡೆಯಾಗುವುದೇ ಕಷ್ಟ ಎನ್ನುವ ಕಾಲವೊಂದಿತ್ತು. ಇದೀಗ ವಿದೇಶಗಳಲ್ಲೂ ಕನ್ನಡ ಸಿನಿಮಾಗಳು ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. KGF ಸರಣಿ ಸಿನಿಮಾಗಳ ನಂತರ 'ಕಾಂತಾರ' ಸಿನಿಮಾ ಆ ರೀತಿ ಸದ್ದು ಮಾಡ್ತಿದೆ. ಈ ವರ್ಷ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. KGF ಚಾಪ್ಟರ್-2 ಬೆನ್ನಲ್ಲೇ '777 ಚಾರ್ಲಿ' ಸಿನಿಮಾ ರಿಲೀಸ್ ಆಗಿ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈಗ 'ಕಾಂತಾರ' ಕಾರುಬಾರು ನಡೀತಿದೆ.

ಕಿರಣ್ ರಾಜ್ ನಿರ್ದೇಶನದ ಅಡ್ವೆಂಚರ್ ಕಾಮಿಡಿ ಡ್ರಾಮಾ ಸಿನಿಮಾ '777 ಚಾರ್ಲಿ' ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಮನುಷ್ಯ ಮತ್ತು ಶ್ವಾನದ ನಡುವಿನ ಅಪೂರ್ವ ಬಾಂಧವ್ಯದ ಕಥೆಯನ್ನು ಬಹಳ ಭಾವನಾತ್ಮಕವಾಗಿ ಕಟ್ಟಿಕೊಡಲಾಗಿತ್ತು. ಕರ್ಣನಾಗಿ ರಕ್ಷಿತ್ ಶೆಟ್ಟಿ ಚಾರ್ಲಿ ಎನ್ನುವ ಲ್ಯಾಬ್ರಡಾರ್ ಶ್ವಾನದ ಜೊತೆಗೆ ಕಾಣಿಸಿಕೊಂಡು ಮೋಡಿ ಮಾಡಿದ್ದರು. ಫನ್, ಕಾಮಿಡಿ ಜೊತೆಗೆ ಎಮೋಷನಲ್ ದೃಶ್ಯಗಳು ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಪರಭಾಷಿಕರು ಕೂಡ ಸಿನಿಮಾ ನೋಡಿ ಬಹುಪರಾಕ್ ಹೇಳಿದ್ದರು. ಭಾರತದ ಒಂದೊಳ್ಳೆ ಡಾಗ್ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿತ್ತು.
ಜಿ. ಎಸ್ ಗುಪ್ತಾ ಜೊತೆ ಸೇರಿ ಸ್ವತಃ ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾ ನಿರ್ಮಿಸಿ ಗೆದ್ದಿದ್ದರು. ಸಿನಿಮಾ 100 ಕೋಟಿ ರೂ. ಬ್ಯುಸಿನೆಸ್ ಮಾಡಿತ್ತು. ಎಲ್ಲವನ್ನು ಕಳೆದುಕೊಂಡು ಹತಾಶನಾಗಿದ್ದ ಕರ್ಣನ ಬದುಕಿಗೆ ಎಲ್ಲಿಂದಲೋ ಬರುವ ಚಾರ್ಲಿ ಬಣ್ಣ ತುಂಬುತ್ತದೆ. ತನ್ನ ಜೀವನಕ್ಕೆ ಬಣ್ಣ ತುಂಬಿದ ಚಾರ್ಲಿಯ ಆಸೆ ಈಡೇರಿಸಲು ಮೈಸೂರಿನಿಂದ ಕಾಶ್ಮೀರದವರೆಗೆ ಸಾಗುವ ಇಬ್ಬರ ಪಯಣ ಪ್ರಾಣಿಪ್ರಿಯರಿಗಂತೂ ಕಣ್ಣಂಚಲ್ಲಿ ನೀರು ತರಿಸಿತ್ತು. ಇದೇ ಚಿತ್ರವನ್ನು ಥಾಯ್ ಭಾಷೆಗೆ ಡಬ್ ಮಾಡಿ ಡಿಸೆಂಬರ್ 1ಕ್ಕೆ ಬಿಡುಗಡೆ ಮಾಡಲಾಗುತ್ತಿದೆ.

ಭಾರತದ ಸಿನಿಮಾಗಳನ್ನು ನಮ್ಮ ಸಿನಿಮಾಗಳ ಪರಿಚಯವೇ ಇಲ್ಲದ ದೇಶಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಜಪಾನ್ ಭಾಷೆಗೆ ಡಬ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜಪಾನ್ ದೇಶದಲ್ಲಿ 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇತ್ತ ಕನ್ನಡದ '777 ಚಾರ್ಲಿ' ಥಾಯ್ ಭಾಷೆಗೆ ಡಬ್ ಆಗಿ ಥೈಲ್ಯಾಂಡ್‌ನಲ್ಲಿ ಬಿಡುಗಡೆಯಾಗುವ ಸುದ್ದಿ ಬಂದಿದೆ.


Click it and Unblock the Notifications











