ಬಿಗ್ ಬಾಸ್‌ಗೆ ತೆರೆ ಬಿದ್ದ ಬೆನ್ನಲ್ಲೇ ಸುದೀಪ್ ಬೆನ್ನೇರಿದ ಚಿಕ್ಕಮಗಳೂರು 'ವಾರಸ್ಧಾರ' ; 90 ಲಕ್ಷ ವಂಚನೆ ಆರೋಪ!
ಕರುನಾಡಿನಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಈ ಪರಿ ಯಶಸ್ವಿಯಾಗಲು ಕಾರಣಗಳು ಹಲವಾರು ಇರಬಹುದು, ಆದರೆ ಆ ಕಾರಣಗಳಲ್ಲಿ ಪ್ರಮುಖವಾದ ಕಾರಣ ಸುದೀಪ್ . ಹನ್ನೆರಡು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬಂದ ಸುದೀಪ್ ಮೊನ್ನೆ..ಮೊನ್ನೆ.. ಹನ್ನೆರಡನೇ ಸೀಸನ್‌ನ ಕೂಡ ಮುಗಿಸಿದ್ದಾರೆ. ಸದ್ಯ ತಮ್ಮ ಗಮನವನ್ನು ತಮ್ಮ ನೆಚ್ಚಿನ ಹವ್ಯಾಸ-ಅಭ್ಯಾಸವಾದ ಕ್ರಿಕೆಟ್‌ನತ್ತ ನೀಡಿದ್ದಾರೆ. ಮೊದಲ ಪಂದ್ಯವನ್ನು ಗೆದ್ದು ಬೀಗಿದ್ದಾರೆ.
ಇದೇ ವೇಳೆ ಪುರಾತನ ಕಾಲದ ವಿವಾದಕ್ಕೆ ಮತ್ತೆ ಜೀವ ಬಂದಿದ್ದು ಸುದೀಪ್ ವಿರುದ್ಧ ದೂರು ದಾಖಲಾಗಿದೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಸುದೀಪ್ ಕೇವಲ ನಾಯಕ-ಗಾಯಕ-ನಿರೂಪಕ ಮತ್ತು ನಿರ್ದೇಶಕ ಮಾತ್ರವಲ್ಲ. ನಿರ್ಮಾಪಕ ಕೂಡ ಹೌದು.

ಇಂಥಾ ಸುದೀಪ್ 2016ರಲ್ಲಿ ಧಾರಾವಾಹಿಯೊಂದನ್ನು ನಿರ್ಮಾಣ ಮಾಡಿದ್ದರು. ಆ ಧಾರಾವಾಹಿಯ ಹೆಸರು ''ವಾರಸ್ಧಾರ''. ಕನ್ನಡದ ಪ್ರತಿಭಾವಂತ ನಾಯಕಿ ಯಜ್ಞ ಶೆಟ್ಟಿ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಧಾರಾವಾಹಿಯ ಚಿತ್ರೀಕರಣ ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ದೀಪಕ್ ಎಂಬುವರ ಮನೆಯಲ್ಲಿ ಮಾಡಲಾಗಿತ್ತು. ಇದಕ್ಕೆ ಒಪ್ಪಂದವೂ ಆಗಿ ಬಾಡಿಗೆಯನ್ನು ಕೂಡ ನಿಗಧಿ ಮಾಡಲಾಗಿತ್ತು.
ಆದರೆ.. ಡಿಸೆಂಬರ್ 19-2016ರಲ್ಲಿ ಶುರುವಾದ ಈ ಧಾರಾವಾಹಿ ಹೆಚ್ಚು ಕಡಿಮೆ ಒಂದು ವರ್ಷದೊಳಗೆಯೇ ಅಂತ್ಯವಾಯ್ತು. ಇಲ್ಲಿಂದ ಹೊಸದೊಂದು ವಿವಾದ ಶುರುವಾಯ್ತು. ಧಾರಾವಾಹಿಯ ಚಿತ್ರೀಕರಣಕ್ಕೆ ತಮ್ಮ ಮನೆ ಮತ್ತು ಕಾಫಿ ತೋಟವನ್ನು ಬಾಡಿಗೆ ನೀಡಿದ್ದ ದೀಪಕ್ 2019ರಲ್ಲಿ ಸುದೀಪ್ ವಿರುದ್ಧ ಸಿಡಿದೆದ್ದರು.
ಧಾರಾವಾಹಿ ಸಂದರ್ಭದಲ್ಲಿ ಕಾಫಿ ತೋಟಕ್ಕೆ ಸಾಕಷ್ಟು ಹಾನಿಯಾಗಿದೆ ಎಂದು ಹೇಳಿದ್ದ ಮರ-ಗಿಡಗಳನ್ನು ಕಡಿದಿದ್ದರಿಂದ 60ರಿಂದ 70 ಲಕ್ಷ ಖರ್ಚಾಗಿದೆ ಎಂದು ಹೇಳಿದ್ದರು. ಸುದೀಪ್ ಈ ನಷ್ಟವನ್ನು ಭರಿಸಿಕೊಡಬೇಕು ಎಂದು ಹೇಳಿದ್ದರು. ಆದರೆ ಸುದೀಪ್ ಒಪ್ಪಿರಲಿಲ್ಲ.
ಈ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ದೀಪಕ್ ದೂರು ದಾಖಲಿಸಿದ್ದರು. ಆ ನಂತರ ಪ್ರಕರಣದ ವಿಚಾರಣೆ ಮಾಡಿದ್ದ ಚಿಕ್ಕಮಗಳೂರು 2ನೇ ಹೆಚ್ಚುವರಿ ಕೋರ್ಟ್ ಸುದೀಪ್ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಆ ನಂತರ ಹೈಕೋರ್ಟ್‌ನಲ್ಲಿ ವಾದ ವಿವಾದ ನಡೆದಿತ್ತು. 2020ರಲ್ಲಿ ಹೈಕೋರ್ಟ್ ಸುದೀಪ್‌ಗೆ ಬಿಗ್ ರಿಲೀಫ್ ನೀಡಿತ್ತು. ಪ್ರಕರಣವನ್ನು ವಜಾಗೊಳಿಸಿತ್ತು.

ಇದೀಗ ಆರು ವರ್ಷಗಳ ನಂತರ ದೀಪಕ್ ಮತ್ತೆ ಎದ್ದು ಬಂದಿದ್ದಾರೆ. ಹಳೆಯ ಆರೋಪಗಳನ್ನೆ ಪುನರುಚ್ಚಿಸಿದ್ದಾರೆ. ಆದರೆ ಈ ಬಾರಿ 90 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿರುವ ದೀಪಕ್ ಸುದೀಪ್ ವಿರುದ್ಧ ಸದ್ಯ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ದೂರು ಸಲ್ಲಿಸಿದ್ದಾರೆ.
2016ರಿಂದಲೂ ಚಿಕ್ಕಮಗಳೂರು ಎಸ್ಪಿ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ದೀಪಕ್, ಚಿತ್ರೀಕರಣದ ವೇಳೆ ಆದ ನಷ್ಟಕ್ಕೆ ಪರಿಹಾರ ನೀಡುವುದಾಗಿ ಸುದೀಪ್ ಭರವಸೆ ನೀಡಿದ್ದರು. ಆದರೆ ಇದುವರೆಗೆ ತಮಗೆ 10 ಲಕ್ಷ ರೂಪಾಯಿಯ ಚೆಕ್ ಮಾತ್ರವೇ ಬಂದಿದೆ ಎಂದು ಹೇಳಿದ್ದಾರೆ. ''ವಾರಸ್ಧಾರ'' ಧಾರಾವಾಹಿಯ ಕಾರ್ಯಕಾರಿ ನಿರ್ಮಾಪಕರಾಗಿದ್ದ ಮಹೇಶ್ ಮತ್ತು ನಿರ್ದೇಶಕ ಗಡ್ಡ ವಿಜಿ ಅವರ ಹೆಸರನ್ನು ಕೂಡ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಟ್ನಲ್ಲಿ ಸದ್ಯ 8 ವರ್ಷದ ಹಿಂದಿನ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಬಾರಿ ಸುದೀಪ್ ಈ ವಿವಾದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ..? ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ..? ಇನ್ನಾದರೂ ಈ ವಿವಾದಕ್ಕೆ ಮುಕ್ತಿ ಸಿಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











