'ಸೂಪರ್' ಸಿನಿಮಾಗೆ 8 ವರ್ಷ : ರಿಯಲ್ ಸ್ಟಾರ್ ಚಿತ್ರದ 'ರಿಯಲ್' ಸಂಗತಿಗಳು
ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ದಿನಾಂಕ ಡಿಸೆಂಬರ್ 3 ಅನ್ನು ಮರೆಯುವ ಆಗಿಲ್ಲ. ಯಾಕಂದ್ರೆ, ಆ ದಿನ ಉಪೇಂದ್ರ ಮತ್ತೆ ಮೈ ಕೊಡವಿ ಎದ್ದು ಬಂದ ದಿನ.
'ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಉಪೇಂದ್ರ' ಎಂಬ ಬರಹ 10 ವರ್ಷಗಳ ನಂತರ ಬೆಳ್ಳಿ ಪರದೆ ಮೇಲೆ ಮೂಡಿತ್ತು. ಅಭಿಮಾನಿಗಳು ಆ ಖುಷಿಯನ್ನು ಹಬ್ಬದಂತೆ ಆಚರಣೆ ಮಾಡಿದ್ದರು.
ಹೌದು, ನಿನ್ನೆ (ಡಿಸೆಂಬರ್ 3)ಕ್ಕೆ ಸರಿಯಾಗಿ ಉಪೇಂದ್ರ ನಿರ್ದೇಶನದ 'ಸೂಪರ್' ಸಿನಿಮಾ ಬಂದು 8 ವರ್ಷ ಕಳೆದಿದೆ. ಈ ಸಂತಸವನ್ನು ಉಪ್ಪಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
'ಸೂಪರ್' ಉಪೇಂದ್ರ ವೃತ್ತಿ ಜೀವನದ ಮೈಲಿಗಲ್ಲು ಸಿನಿಮಾಗಳಲ್ಲಿ ಒಂದು. ಇಂತಹ ಸಿನಿಮಾ ಬಂದು ಇದೀಗ ಎಂಟು ವರ್ಷ ಕಳೆದಿದ್ದು, ಆ ಚಿತ್ರದ ಬಗೆಗಿನ ಕೆಲ ಕುತೂಹಲಕಾರಿ ಅಂಶಗಳು ಮುಂದಿವೆ ಓದಿ..

10 ವರ್ಷದ ಬಳಿಕ ರಿಯಲ್ ಸ್ಟಾರ್ ಕಮ್ ಬ್ಯಾಕ್
ಉಪೇಂದ್ರ ಒಬ್ಬ ನಟನಿಗಿಂತ ನಿರ್ದೇಶಕನಾಗಿ ಅವರ ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ. ಅವರು ಡೈರೆಕ್ಟರ್ ಕ್ಯಾಪ್ ತೊಟ್ಟು ಬಂದರೆ ಗಾಂಧಿನಗರದಲ್ಲಿ ಹೊಸ ಇತಿಹಾಸ ಸೃಷ್ಟಿ ಆಗುತ್ತಿದೆ. ಇಂತಹ ಗ್ರೇಟ್ ಡೈರೆಕ್ಟರ್ 'ಉಪೇಂದ್ರ' ಬಳಿಕ ನಟನೆಯಲ್ಲಿ ಬ್ಯುಸಿಯಾಗಿದ್ದರು. 10 ವರ್ಷದ ಬಳಿಕ ರಿಯಲ್ ಸ್ಟಾರ್ ಮತ್ತೆ ಎದ್ದು ಬಂದಿದ್ದು 'ಸೂಪರ್' ಚಿತ್ರದ ಮೂಲಕ.

ಪ್ರೇಕ್ಷಕರ ಟೈಟಲ್
'ಸೂಪರ್' ಸಿನಿಮಾಗೆ ಹೆಸರಿಟ್ಟಿದ್ದು ಪ್ರೇಕ್ಷಕರು. ಸಿನಿಮಾ ಶುರು ಮಾಡಿದ್ದ ಉಪ್ಪಿ ಕೈ ಚಿಹ್ನೆಯನ್ನು ಮಾತ್ರ ನೀಡಿದ್ದರು. ಕೈನ ಆ ಆಕಾರಕ್ಕೆ 'ವಿತರ್ಕ ಮುದ್ರೆ' ಎಂದು ಕರೆಯುತ್ತಾರೆ. ಟೈಟಲ್ ಅವರವರ ಭಾವಕ್ಕೆ ತಕ್ಕಂತೆ ಎಂದಿದ್ದ ಉಪ್ಪಿ ಯಾವುದೇ ಟೈಟಲ್ ಫಿಕ್ಸ್ ಮಾಡದೆ ಸಿಂಬಲ್ ಇಟ್ಟಿದ್ದರು, ಜನರೇ ಸಿನಿಮಾಗೆ 'ಸೂಪರ್' ಎಂದು ಕರೆದರು.

ರಾಕ್ ಲೈನ್ 25ನೇ ಸಿನಿಮಾ
ರಾಕ್ ಲೈನ್ ಪ್ರೊಡಕ್ಷನ್ಸ್ ಬ್ಯಾನರ್ ಆಗಲೇ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿತ್ತು. 25ನೇ ಸಿನಿಮಾವನ್ನು ಉಪೇಂದ್ರ ಕೈನಲ್ಲಿ ನಿರ್ದೇಶನ ಮಾಡಿಸಬೇಕು ಎಂಬುದು ರಾಕ್ ಲೈನ್ ವೆಂಕಟೇಶ್ ಅವರ ಆಸೆಯಾಗಿತ್ತು. ಅದೇ ರೀತಿ ಉಪ್ಪಿಯ ಕಲ್ಪನೆಯನ್ನ ರಾಕ್ ಲೈನ್ ಅದ್ದೂರಿಯಾಗಿ ತೆರೆ ಮೇಲೆ ತೋರಿಸಿದರು.

ನಯನ ತಾರ ಮೊದಲ ಕನ್ನಡ ಚಿತ್ರ
ಸೌತ್ ಸಿನಿಮಾದಲ್ಲಿ ಸ್ಟಾರ್ ನಟಿ ನಯನ ತಾರ ದೊಡ್ಡ ಹೆಸರು ಮಾಡಿದ್ದರು. 'ಸೂಪರ್' ಸಿನಿಮಾಗಾಗಿ ಅವರನ್ನು ಕನ್ನಡಕ್ಕೆ ಕರೆ ತರಲಾಯಿತು. ಇದು ಅವರ ಮೊದಲ ಕನ್ನಡ ಸಿನಿಮಾ ಆಗಿತ್ತು. ಇಂದಿರಾ ಎಂಬ ಅವರ ಪಾತ್ರ ದೇಸಿ ಹಾಗೂ ಗ್ಲಾಮರ್ ಎರಡು ಶೇಡ್ ಹೊಂದಿತ್ತು.

ಮೊದಲ ಬಾರಿ ವಿದೇಶದಲ್ಲಿ ಚಿತ್ರೀಕರಣ
ಉಪೇಂದ್ರ ತಮ್ಮ ನಿರ್ದೇಶನದ ಸಿನಿಮಾಗಳನ್ನ ಆ ವರೆಗೆ ಹೊರದೇಶದಲ್ಲಿ ಚಿತ್ರೀಕರಣ ಮಾಡಿರಲಿಲ್ಲ. ಆದರೆ, 'ಸೂಪರ್' ಸಿನಿಮಾದ ಚಿತ್ರೀಕರಣವನ್ನ ದುಬೈ ಹಾಗೂ ಲಂಡನ್ ನಲ್ಲಿ ಮಾಡಲಾಗಿತ್ತು. ಸಿನಿಮಾದ ದೃಶ್ಯಗಳ ಹಾಗೂ ಹಾಡಿನ ಚಿತ್ರೀಕರಣ ಅಲ್ಲಿ ಆಗಿತ್ತು.

ಥ್ರಿಲ್ ಆದ ರಜನಿ
ಸೂಪರ್ ಸ್ಟಾರ್ ರಜನಿಕಾಂತ್ ಈ ಸಿನಿಮಾವನ್ನು ಬೆಂಗಳೂರಿನಲ್ಲಿ ನೋಡಿದ್ದರು. ಚಿತ್ರದವೀಕ್ಷಿಸಿದ ಬಳಿಕ ಮಾತನಾಡಿದ್ದ ಅವರು ''ಉಪೇಂದ್ರ ಡಿಫರೆಂಟ್ ಆಕ್ಟರ್, ಡೈರೆಕ್ಟರ್. ಇಡೀ ಇಂಡಿಯಾದಲ್ಲಿ ಉಪೇಂದ್ರ ರೀತಿ ಯೋಚನೆ ಮಾಡುವವರು ಯಾರು ಇಲ್ಲ. ಅವರೊಬ್ಬರು ಮಾತ್ರ ಆ ರೀತಿ ಯೋಚನೆ ಮಾಡಲು ಸಾಧ್ಯ. ಐ ಲೈಕ್ ಉಪೇಂದ್ರ ಡೈರೆಕ್ಟರ್ ವೆರಿ ಮಚ್'' ಎಂದು ಹೊಗಳಿದಿದ್ದರು.

ಪುನೀತ್ ಆಡಿಯೋ ಲಾಂಚ್
ಸಿನಿಮಾ ಹಾಡುಗಳನ್ನು ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದರು. ಹರಿಕೃಷ್ಣ ಸಂಗೀತ ನೀಡಿದ್ದು, ಮೊದಲ ಬಾರಿಗೆ ಉಪ್ಪಿ ನಿರ್ದೇಶನದ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದರು. ವಿ ಮನೋಹರ್, ಯೋಗರಾಜ್ ಭಟ್, ಉಪೇಂದ್ರ (ಮೂರು ಹಾಡು) ಹಾಡು ಬರೆದಿದ್ದರು.

175 ದಿನದ ಓಟ
'ಸೂಪರ್' ಚಿತ್ರ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು. 90 ಸೆಂಟರ್ ಗಳಲ್ಲಿ 100 ದಿನ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. 125 ದಿನ ಬೆಂಗಳೂರಿನ ಮುಖ್ಯ ಚಿತ್ರಮಂದಿರ ಹಾಗೂ 175 ಬೆಂಗಳೂರಿನ ಮಲ್ಟಿಪ್ಲೆಕ್ಸ್ ನಲ್ಲಿ ಚಿತ್ರ ಓಡಿತ್ತು. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ಸಿನಿಮಾ ದೊಡ್ಡ ಕ್ರೇಜ್ ಹುಟ್ಟುಹಾಕಿತ್ತು.

ಬಾಕ್ಸ್ ಆಫೀಸ್ ನಲ್ಲಿ ದಾಖಲೆ
ಸಿನಿಮಾ ಡಿಸೆಂಬರ್ 3 ರಂದು ಬಿಡುಗಡೆಯಾಗಿದ್ದು, ಎರಡೇ ದಿನದಲ್ಲಿ 2.5 ಕೋಟಿ ಗಳಿಕೆ ಮಾಡಿತ್ತು. ಆ ಸಮಯಕ್ಕೆ ಬಂದ ಸಿನಿಮಾಗಳಿಗೆ ಹೋಲಿಸಿದರೆ ಸೂಪರ್ ಕಲೆಕ್ಷನ್ ನಲ್ಲಿ ದೊಡ್ಡ ದಾಖಲೆ ಮಾಡಿತ್ತು. ಕನ್ನಡದ ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳ ಪೈಕಿ ಈ ಸಿನಿಮಾ ಕೂಡ ಒಂದಾಗಿದೆ.

ವಿ'ಚಿತ್ರ' ಕಥೆ
ಸೂಪರ್ ವಿ'ಚಿತ್ರ' ಕಥೆ ಹೊಂದಿತ್ತು. 2010 ರಲ್ಲಿಯೇ 2030ರ ಭಾರತದ ದರ್ಶನವನ್ನು ಉಪೇಂದ್ರ ಮಾಡಿಸಿದ್ದರು. ದೇಶದ ಎಲ್ಲ ಸಮಸ್ಯೆಗೆ U (ನೀವು) ಕಾರಣ ಎಂದು ಎಲ್ಲರಿಗೆ ಸಂದೇಶ ನೀಡಿದ್ದರು. ಸುಭಾಷ್ ಚಂದ್ರ ಗಾಂಧಿಯಾಗಿ ಉಪೇಂದ್ರ ಅಭಿಮಾನಿಗಳಿಗೆ ಬಹಳ ಇಷ್ಟ ಆಗಿದ್ದರು.


Click it and Unblock the Notifications











