ಸುಮಲತಾ ಪರ ನಿಂತಿರುವ ಸ್ಟಾರ್ ನಟರ ನಡೆ ಪ್ರಶ್ನಿಸಿದ ನಟ ಚೇತನ್
Recommended Video

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಟಿ ಸುಮಲತಾ ಅವರು ಸ್ಪರ್ಧೆ ಮಾಡುತ್ತಿರುವುದಕ್ಕೆ ಸಿನಿಮಾರಂಗ ಮತ್ತು ರಾಜಕೀಯ ವಲಯದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಲತಾ ಅವರು ಇಷ್ಟು ಬೇಗ ರಾಜಕೀಯಕ್ಕೆ ಬರಬಾರದಿತ್ತು ಎಂದು ಕೆಲವರು ಹೇಳುತ್ತಿದ್ದರೇ, ಅಂಬಿ ಆದರ್ಶಗಳನ್ನ ಮುಂದುವರಿಸಲು ಸುಮಲತಾ ರಾಜಕೀಯ ಪ್ರವೇಶ ಸ್ವಾಗತರ್ಹ ಎನ್ನುತ್ತಿದ್ದಾರೆ.
ಈ ನಡುವೆ ಹಲವು ಸಿನಿಮಾ ಸ್ಟಾರ್ ಗಳು ಸುಮಲತಾ ಅವರ ಬೆಂಬಲಕ್ಕೆ ನಿಂತಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ಬೆಂಗಳೂರಿನಲ್ಲಿ ನಟ ದರ್ಶನ್ ಮತ್ತು ಯಶ್ ಜೊತೆಯಲ್ಲಿ ಸುದ್ದಿಗೋಷ್ಠಿ ಮಾಡಿದ ಸುಮಲತಾ, ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆಂದು ಘೋಷಿಸಿದರು.
ಸುಮಲತಾ ಅವರ ಈ ನಿರ್ಧಾರ ಮತ್ತು ಸಿನಿಮಾ ನಟರ ನಡೆಯನ್ನ ಸಾಮಾಜಿಕ ಹೋರಾಟಗಾರ ಮತ್ತು ಸಿನಿಮಾ ನಟ ಚೇತನ್ ಪ್ರಶ್ನಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೇತನ್, ಸುಮಲತಾ ಯಾವುದರ ಪರ ಎಂದು ಕೇಳಿದ್ದಾರೆ. ಮುಂದೆ ಓದಿ.....

ಮಂಡ್ಯ ಅಭಿವೃದ್ದಿಗೆ ನಿಮ್ಮ ಕೊಡುಗೆ ಏನು?
''ಸುಮಲತಾ ಅವರಿಗೆ ಬೆಂಬಲ ನೀಡಿರುವ ಸಿನಿಮಾ ಸ್ಟಾರ್ ಗಳು ಮತ್ತು ಮಾಜಿ ಮುಖ್ಯಮಂತ್ರಿಯೊಬ್ಬರ ನಡೆ ಕುತೂಹಲವಾಗಿದ್ದು, ಮಂಡ್ಯ ಅಭಿವೃದ್ದಿಗೆ ಏನೂ ಮಾಡದ ನಿಮ್ಮ ಈ ಹೆಜ್ಜೆ ಪ್ರಶ್ನಾರ್ಥಕವಾಗಿದೆ'' ಎಂದು ನಟ ಚೇತನ್ ಪರೋಕ್ಷವಾಗಿ ಸ್ಟಾರ್ ನಟರನ್ನ ಪ್ರಶ್ನಿಸಿದ್ದಾರೆ.

ದರ್ಶನ್ ಮತ್ತು ಯಶ್ ಟಾರ್ಗೆಟ್?
ಹಾಗ್ನೋಡಿದ್ರೆ, ಸುಮಲತಾ ಅವರ ಜೊತೆಯಾಗಿ ಅವರ ಬೆಂಬಲಕ್ಕೆ ಬಹಿರಂಗವಾಗಿ ನಿಂತಿರುವುದು ನಟ ದರ್ಶನ್ ಮತ್ತು ಯಶ್. ಇವರ ಜೊತೆಗೆ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಇನ್ನು ಕೆಲವರು. ಇವರಲ್ಲಿ ಯಾರೂ ಕೂಡ ಮಂಡ್ಯದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ನಟ ಚೇತನ್ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.

ಸುಮಲತಾ ಯಾರ ಪರ-ಯಾರ ವಿರೋಧ
''ಸಾಮಾಜಿಕ ಸೇವೆ, ಭ್ರಷ್ಟಾಚಾರ ನಿರ್ಮೂಲನೆ ಅಥವಾ ಕೇವಲ ಸಿದ್ಧಾಂತಗಳು ಸುಮಲತಾ ಅವರ ಚುನಾವಣಾ ಸ್ಪರ್ಧೆಗೆ ಕಾರಣವೇ. ಹಾಗಿದ್ರೆ, ಸುಮಲತಾ ಅವರು ಯಾವುದರ ವಿರೋಧ ಮತ್ತು ಯಾವುದರ ಪರ ಎಂದು ಯಾರಿಗಾದರೂ ಗೊತ್ತಿದೆಯಾ'' ಎಂದು ನಟ ಚೇತನ್ ಅಂಬರೀಶ್ ಪತ್ನಿಯನ್ನ ಪ್ರಶ್ನಿಸಿದ್ದಾರೆ.

ಮಾರ್ಚ್ 20ಕ್ಕೆ ನಾಮಪತ್ರ ಸಲ್ಲಿಕೆ
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರು, ಮಾರ್ಚ್ 20 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ನಟ ದರ್ಶನ್, ಯಶ್, ಅಂಬರೀಶ್ ಪುತ್ರ ಅಭಿಷೇಕ್ ಸೇರಿದಂತೆ ಹಲವು ಸಿನಿಮಾ ತಾರೆಯರು ಮತ್ತು ಅಂಬರೀಶ್ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ.


Click it and Unblock the Notifications











