ಫಿಲಿಪ್ಪೀನ್ಸ್ ನಿಂದ ಬಂದಿದ್ದ ಅಭಿಮಾನಿಯನ್ನು ಭೇಟಿಯಾಗಿ ಖುಷಿ ಪಟ್ಟ ಯಶ್
Recommended Video
ಕಲೆಗೆ ಭಾಷೆಯ ಗಡಿ ಇಲ್ಲ ಅಂತಾರಲ್ಲ.. ಅದಕ್ಕೆ ಸ್ಪಷ್ಟ ನಿದರ್ಶನ ಇಲ್ಲಿದೆ ನೋಡಿ... ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಕಂಡ್ರೆ ಫಿಲಿಪ್ಪೀನ್ಸ್ ನ ಓರ್ವ ವ್ಯಕ್ತಿಗೆ ಪಂಚಪ್ರಾಣ. ಯಶ್ ನಟನೆ ಮತ್ತು ಯಶ್ ಮಾಡಿರುವ ಎಲ್ಲಾ ಕಾರ್ಯಗಳನ್ನು ಫಿಲಿಪ್ಪೀನ್ಸ್ ನ ಪೆಟೆ ಅಶೋಕ್ ಜೊರ್ನಲ್ ಎಂಬುವರು ಮೆಚ್ಚಿಕೊಂಡಿದ್ದಾರೆ.
ಕಳೆದ ವರ್ಷ ಯೂಟ್ಯೂಬ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಒಂದು ವಿಡಿಯೋ ನೋಡಿ ಫಿಲಿಪ್ಪೀನ್ಸ್ ನ ಪೆಟೆ ಅಶೋಕ್ ಜೊರ್ನಲ್ ಎಂಬುವರು ಇಂಪ್ರೆಸ್ ಆಗಿದ್ದರು. ಅಂದಿನಿಂದ ಯಶ್ ಗೆ ಫ್ಯಾನ್ ಆದ ಅವರು ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದರು. ಅದು ಯಶ್ ರನ್ನ ಭೇಟಿ ಮಾಡಲು.!
ಯಶ್ ಮೇಲಿನ ಗೌರವ ಮತ್ತು ಅಭಿಮಾನವನ್ನು ವ್ಯಕ್ತಪಡಿಸಲು ಫಿಲಿಪ್ಪೀನ್ಸ್ ನಿಂದ ಬೆಂಗಳೂರಿಗೆ ಫ್ಲೈಟ್ ಹತ್ತಿದ್ದರು ಪೆಟೆ ಅಶೋಕ್ ಜೊರ್ನಲ್. ''ಯಶ್ ರನ್ನ ಭೇಟಿ ಆಗಲು ಸಹಾಯ ಮಾಡಿ'' ಎಂದು ಫೇಸ್ ಬುಕ್ ನಲ್ಲಿ ಸುಧೀರ್ಘ ಪತ್ರ ಬರೆದಿದ್ದರು. ಅದನ್ನೆಲ್ಲಾ ನೋಡಿ ಪೆಟೆ ಅಶೋಕ್ ಜೊರ್ನಲ್ ರನ್ನ ನಟ ಯಶ್ ಭೇಟಿ ಮಾಡಿದ್ದಾರೆ.

ನಿನ್ನೆಯಷ್ಟೇ ಪೆಟೆ ಅಶೋಕ್ ಜೊರ್ನಲ್ ರನ್ನ ಮೀಟ್ ಮಾಡಿ ಯಶ್ ಸಿಹಿ ತಿನಿಸಿದರು. ಕೆಲ ಹೊತ್ತು ಪೆಟೆ ಅಶೋಕ್ ಜೊರ್ನಲ್ ಜೊತೆ ಮಾತನಾಡಿ ಖುಷಿ ಪಟ್ಟರು. ಅಚ್ಚರಿ ಅಂದ್ರೆ ಯಶ್ ಗಾಗಿ ಪೆಟೆ ಅಶೋಕ್ ಜೋರ್ನಲ್ ಕನ್ನಡ ಕೂಡ ಕಲಿತಿದ್ದಾರೆ. ಇದನ್ನ ಕಂಡ ಯಶ್ ಸಂತಸಕ್ಕೆ ಪಾರವೇ ಇರಲಿಲ್ಲ.
''ತುಂಬಾ ಖುಷಿ ಆಗಿದೆ. ಒಂದೊಳ್ಳೆ ವಿಷಯಕ್ಕೆ ಯಾವುದೇ ಬೇಲಿ ಇಲ್ಲ. ಅಷ್ಟು ದೂರದಿಂದ ಬಂದಿದ್ದಾರೆ ಅಂದ್ರೆ ಮೀಟ್ ಮಾಡಲೇಬೇಕು. ಅದು ನನ್ನ ಕರ್ತವ್ಯ'' ಎಂದಿದ್ದಾರೆ ನಟ ಯಶ್.
ಒಟ್ನಲ್ಲಿ, ಕನ್ನಡದ ನಟನಿಗೆ ವಿದೇಶದಲ್ಲೂ ಅಭಿಮಾನಿಗಳು ಇರುವುದು ಖುಷಿಯ ವಿಚಾರವೇ.


Click it and Unblock the Notifications











