ಟೆಡ್ಡಿಬೇರ್ ವೇಷದಲ್ಲಿ ದರ್ಶನ್ ನೋಡಲು ಬಳ್ಳಾರಿ ಜೈಲಿಗೆ ಬಂದ ಶಿವಮೊಗ್ಗದ ಅಭಿಮಾನಿ...!
ದರ್ಶನ್ ಜೈಲು ಪಾಲಾಗಿ ಒಂದಲ್ಲ, ಎರಡಲ್ಲ, ನಾಲ್ಕು ತಿಂಗಳಾಗಿವೆ. ಈ ನಾಲ್ಕು ತಿಂಗಳಿನಲ್ಲಿ ದರ್ಶನ್ ಅವರನ್ನು ಹೊರ ತರುವ ಪ್ರಯತ್ನಗಳು ಕೂಡ ನಡೆದಿವೆ. ಆದರೆ ಯಾವುದೇ ಫಲಿತಾಂಶ ಸಿಕ್ಕಿಲ್ಲ.
ಹಾಗಂಥ ದರ್ಶನ್ ಅವರ ಅಭಿಮಾನಿಗಳು ಕುಗ್ಗಿಲ್ಲ. ಇವತ್ತಲ್ಲ.. ನಾಳೆ.. ದರ್ಶನ್ ಜೈಲಿನಾಚೆ ಬರುತ್ತಾರೆ ಎಂದು ಕಾಯುತ್ತಿದ್ದಾರೆ. ಈ ಸೋಮವಾರ ದರ್ಶನ್ ಅವರಿಗೆ ಜಾಮೀನು ಸಿಗುತ್ತೆ ಎಂಬ ಆಶಾಭಾವನೆಯಲ್ಲಿ ಕಾಯುತ್ತಿದ್ದಾರೆ. ಇದರ ನಡುವೆ ದರ್ಶನ್ ಅವರ ಅಭಿಮಾನಿಯೊಬ್ಬ ಟೆಡ್ಡಿ ಬೇರ್ ವೇಷದಲ್ಲಿ ತನ್ನ ಆರಾಧ್ಯ ದೈವನನ್ನು ನೋಡಲು ಬಳ್ಳಾರಿ ಜೈಲಿಗೆ ಬಂದಿದ್ದಾನೆ. ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ಹೌದು, ದರ್ಶನ್ ಜೈಲು ಪಾಲಾದ ದಿನದಿಂದ, ಅವರ ಅನೇಕ ಅಭಿಮಾನಿಗಳು ಜೈಲಿನ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ. ಒಮ್ಮೆ ದರ್ಶನ್ ಮುಖ ನೋಡಬೇಕೆಂದು ಹಂಬಲಿಸಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆಯಂತೆ ಇಂದು ವ್ಯಕ್ತಿಯೊಬ್ಬ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಬಳ್ಳಾರಿಗೆ ಬಂದಿದ್ದಾನೆ. ಟೆಡ್ಡಿ ಬೇರ್ ವೇಷ ಹಾಕಿಕೊಂಡು ಬಳ್ಳಾರಿ ಜೈಲಿನಾಚೆ ''ವಿ ಆರ್ ವೇಟಿಂಗ್ ಫಾರ್ ಯೂ ಡಿ ಬಾಸ್'' ಎಂಬ ಸಂದೇಶದ ಫಲಕ ಹಿಡಿದು ನಿಂತಿದ್ದಾನೆ.
ಆದರೆ, ಟೆಡ್ಡಿ ಬೇರ್ ವೇಷ ಹಾಕಿಕೊಂಡು ನಿಂತ ಶಿವಮೊಗ್ಗದ ಸಾಗರದ ಅಭಿಮಾನಿ ಕಾರ್ತಿಕ್‌ಗೆ ದರ್ಶನ್ ಅವರನ್ನು ನೋಡುವ ಸೌಭಾಗ್ಯ ಸಿಗಲಿಲ್ಲ. ಯಾಕೆಂದರೆ ಕುಟುಂಬಸ್ಥರ ಒಪ್ಪಿಗೆ ಇಲ್ಲದೇ ಯಾರೆಂದರೆ ಯಾರಿಗೂ ಭೇಟಿಯ ಅವಕಾಶ ಇಲ್ಲ. ಈ ಕಾರಣಕ್ಕೆ ಜೈಲು ಸಿಬ್ಬಂದಿ ಅವಕಾಶ ನಿರಾಕರಿಸಿದ ಹಿನ್ನೆಲೆ ನಿರಾಸೆಯಿಂದ ತೆರಳಿದ ಕಾರ್ತಿಕ್ ನಮ್ಮ ಬಾಸ್ ಜೈಲಿನಿಂದ ಹೊರ ಬರಬೇಕು ಎನ್ನುತ್ತಾ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮನೆಯ ಕಡೆ ತೆರಳಿದ್ದಾನೆ.
ಇನ್ನೂ ಇದೇ ಸಮಯದಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ಕಾರ್ತಿಕ್, ಅವರು ಮಾಡಿರುವುದು ತಪ್ಪು ಎಂದು ಹೇಳಲು ಬರುವುದಿಲ್ಲ ಎಂದು ಹೇಳಿದ್ದಾನೆ. ಹೆಣ್ಣು ಮಕ್ಕಳ ದೌರ್ಜನ್ಯ ನಡೆಯುತ್ತಿರುವುದು ದಿನನಿತ್ಯ ನಾವು ನೋಡ್ತಾನೇ ಇದ್ದೇವೆ, ಹೀಗಿರುವಾಗ ದರ್ಶನ್ ದೌರ್ಜನ್ಯ ಎಸಗುವ ವ್ಯಕ್ತಿಗೆ ಶಿಕ್ಷೆಯನ್ನು ನೀಡಿದ್ದಾರೆ ಎಂದು ತಿಳಿದುಕೊಳ್ಳಬಹುದು ಎಂದು ಹೇಳಿದ್ದಾನೆ. ಇವತ್ತು ಅವಕಾಶ ಸಿಗ್ದೇ ಇದ್ದರೆ ಏನಂತೆ ನಾನು ಮತ್ತೆ ದರ್ಶನ್ ಅವರನ್ನು ನೋಡಲು ಬರುವುದಾಗಿ ಕೂಡ ಹೇಳಿ ಹೋಗಿದ್ದಾನೆ.
ಅಂದ್ಹಾಗೇ ಸದ್ಯಕ್ಕೆ ಜೈಲಿನಲ್ಲಿರುವ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 14ರಂದು ಅಂದರೆ ನಾಳೆ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯಲಿದೆ. ಇನ್ನೂ ದರ್ಶನ್ ಜೊತೆಯಲ್ಲಿ ನಾಳೆಯೇ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಎ 1 ಆರೋಪಿಯಾಗಿರುವ ಪವಿತ್ರಾ ಗೌಡ, ಎ 8 ಆರೋಪಿ ರವಿಶಂಕರ್ ಮತ್ತು ಎ 11, ಎ 12, ಎ 13 ಆರೋಪಿಗಳ ಜಾಮೀನು ಅರ್ಜಿಯ ಆದೇಶ ಕೂಡ ಹೊರ ಬೀಳಲಿದೆ. ಇನ್ನೂ ಈಗಾಗಲೇ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಮತ್ತು ಎಸ್‌ಪಿಪಿ ಪ್ರಸನ್ನ ಕುಮಾರ್ ನಡುವೆ ತೀವೃ ವಾದ ಪ್ರತಿವಾದ ನಡೆದಿದ್ದು, ಕೃತ್ಯ ನಡೆದ ಸಮಯದಲ್ಲಿ ದರ್ಶನ್ ಸ್ಥಳದಲ್ಲಿಯೇ ಇರಲಿಲ್ಲ ಎಂಬ ರೀತಿಯಲ್ಲಿ ಸಿವಿ ನಾಗೇಶ್ ತಮ್ಮ ವಾದವನ್ನು ಮಂಡಿಸಿದ್ದಾರೆ.ರೇಣುಕಾಸ್ವಾಮಿ ತಲೆಯಲ್ಲಿ 1 ರಿಂದ 2.5 ಸೆ.ಮೀ ಗಾಯವಾಗಿದೆ. ಇದರಿಂದ ಅಷ್ಟು ಪ್ರಮಾಣದಲ್ಲಿ ರಕ್ತಸ್ರಾವ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಹಾಗೇ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು 13 ದಿನ ವಿಳಂಬವಾಗಿ ಸೇರಿಸಿದ್ದು ಯಾಕೆ? ಪೋಸ್ಟ್ ಮಾರ್ಟಂ ಬಂದ ಬಳಿಕ ಹೇಳಿಕೆ ದಾಖಲಿಸಿದ್ದಾರೆ ಎಂದು ವಾದವನ್ನು ಕೂಡ ಸಿವಿ ನಾಗೇಶ್ ಮಂಡಿಸಿದ್ದಾರೆ.


Click it and Unblock the Notifications