ಚಾಮುಂಡಿ ಬೆಟ್ಟಕ್ಕೆ ದರ್ಶನ್ ಫೋಟೊ ಹಿಡಿದು ಬಂದ ಮಹಿಳಾ ಅಭಿಮಾನಿ; ಬಳಿಕ ಹೈಡ್ರಾಮಾ
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜುಲೈ 18ರವರೆಗೆ 17 ಜನ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರೆದಿದೆ. ಇತ್ತ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಆದಷ್ಟು ಬೇಗ ಸಂಕಷ್ಟದಿಂದ ಪಾರಾಗಿ ಜೈಲಿನಿಂದ ಹೊರ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.
ನಿನ್ನೆ(ಜುಲೈ 13) ವರ್ಷದ ಮೊದಲ ಆಷಾಡ ಶುಕ್ರವಾರ. ಪ್ರತಿವರ್ಷ ನಟ ದರ್ಶನ್ ಸಹ ಈ ವಿಶೇಷ ದಿನದಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈ ವರ್ಷ ಸಾಧ್ಯವಾಗುತ್ತಿಲ್ಲ. ಆದರೆ ಅಭಿಮಾನಿಗಳು ದರ್ಶನ್ ಭಾವಚಿತ್ರ ಹಿಡಿದು ಚಾಮುಂಡಿ ಬೆಟ್ಟ ಏರಿದ್ದಾರೆ. ಮಹಿಳಾ ಅಭಿಮಾನಿಯೊಬ್ಬರು ದರ್ಶನ್ ಫೋಟೊ ಹಿಡಿದು ಬೆಟ್ಟ ಏರಿ ದೇವಿಯ ದರ್ಶನ ಪಡೆಯಲು ಮುಂದಾಗಿದ್ದರು.

ಆಕೆ ಸರತಿ ಸಾಲಿನಲ್ಲಿ ದರ್ಶನ್ ಭಾವಚಿತ್ರ ಪ್ರದರ್ಶಿಸಿದ್ದರು. ದೇವಸ್ಥಾನದ ಒಳಗೆ ಭಾವಚಿತ್ರ ಕೊಂಡೊಯ್ಯುವಂತಿಲ್ಲ ಎಂದು ಪೊಲೀಸ್ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಜೊತೆ ದರ್ಶನ್ ಅಭಿಮಾನಿ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ಕೊನೆಗೂ ಸರತಿ ಸಾಲಿನಿಂದ ಮಹಿಳೆಯನ್ನು ಪೊಲೀಸ್ ಸಿಬ್ಬಂದಿ ಹೊರಗಡೆ ಕಳುಹಿಸಿರುವ ವೀಡಿಯೋ ವೈರಲ್ ಆಗುತ್ತಿದೆ. ಸ್ಥಳೀಯರು ಮೊಬೈಲ್‌ನಲ್ಲಿ ಆ ದೃಶ್ಯ ಸೆರೆ ಹಿಡಿದಿದ್ದಾರೆ.
ಇಬ್ಬರು ಮಹಿಳಾ ಅಭಿಮಾನಿಗಳು ಈ ರೀತಿ ದರ್ಶನ್ ಫೋಟೊ ಹಿಡಿದು ಬಂದಿದ್ದು ಪೊಲೀಸರು ತಡೆದಿದ್ದರು. ಮೊದಲಿಗೆ ವಾಗ್ವಾದಕ್ಕಿಳಿದ ಮಹಿಳೆಯರು ಕೊನೆಗೆ ವಿಧಿಯಿಲ್ಲದೇ ಹೊರಗೆ ಬರುವಂತಾಗಿದೆ. ಈ ಬಾರಿ ಆಷಾಢದ ಮೊದಲ ಶುಕ್ರವಾರವಾದ ಹಿನ್ನೆಲೆ ಚಾಮುಂಡೇಶ್ವರಿಗೆ ವಿಶೇಷವಾದ ಪೂಜೆ ನೆರವೇರಿತು. ಬೆಟ್ಟದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ದೊಡ್ಡ ಸಂಖ್ಯೆಯಲ್ಲಿ ಭಕ್ತರು ತಾಯಿಯ ದರ್ಶನಕ್ಕಾಗಿ ಆಗಮಿಸಿದ್ದರು.
ಬೆಳಗಿನ ಜಾವ 3.3೦ಕ್ಕೆ ದೇವಸ್ಥಾನದಲ್ಲಿ ಬೆಟ್ಟದ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ಶುರುವಾಗಿತ್ತು. ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ದೇವಿಗೆ ಅಭಿಷೇಕ, ಅರ್ಚನೆ, ಅಷ್ಟೋತ್ತರ ಪೂಜೆ ನಡೆಯಿತು. ಇಡೀ ದೇವಸ್ಥಾನವನ್ನು ಬಗೆ ಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು. ಈ ವಿಶೇಷ ದಿನ ತಾಯಿಯ ದರ್ಶನ ಮಾಡಿದರೆ ಶುಭವಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗಾಗಿ ದೊಡ್ಡ ಸಂಖ್ಯೆಯಲ್ಲೇ ನಿನ್ನೆ ಜನ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು.


Click it and Unblock the Notifications











