ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು
ಸೆಲ್ಫಿ ನೆಪದಲ್ಲಿ ಅಭಿಮಾನಿಯೋರ್ವ ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಘಟನೆಯಿಂದ ನಟಿ ಮುಜುಗರಕ್ಕೊಳಗಾಗಿದ್ದಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ಮೂವತ್ತನೇ ವರ್ಷದ ಕೋಟಿಚೆನ್ನಯ್ಯ ಜೋಡುಕರೆ ಕಂಬಳ ಕೂಟ ನಡೆಯುತ್ತಿದ್ದು, ಶನಿವಾರ ರಾತ್ರಿ ವಿಶೇಷ ಅಹ್ವಾನಿತರಾಗಿ ಬಿಗ್ ಬಾಸ್ ಖ್ಯಾತಿಯ ಸಾನಿಯಾ ಅಯ್ಯರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಾನಿಯಾ ಐ ಲವ್ ಯೂ ಪುತ್ತೂರು ಎಂಬ ವಾಕ್ಯದೊಂದಿಗೆನೇ ಭಾಷಣ ಆರಂಭಿಸಿದ್ದರು.
ಭಾಷಣದುದಕ್ಕೂ 'ಸಾನಿಯಾ ಐ ಲವ್ ಯೂ' ಎಂದು ಆ ಕಿಡಿಗೇಡಿ ಅಭಿಮಾನಿ ಕೂಗುತ್ತಲೇ ಇದ್ದ. ಇದು ನೆರೆದವರೆಲ್ಲರಿಗೂ ಮುಜುಗರ ತಂದಿತ್ತು. ಸಾನಿಯಾ ಭಾಷಣ ಮುಗಿಸಿ ಕಾರ್ಯಕ್ರಮದಿಂದ ನಿರ್ಗಮಿಸಲು ವೇದಿಕೆಯಿಂದ ಕೆಳಗಿಳಿಯುತ್ತಿದ್ದ ವೇಳೆ, ಅಭಿಮಾನಿ ವೇದಿಕೆಯ ಬಳಿ ಬಂದು ಸೆಲ್ಫಿಗಾಗಿ ಸಾನಿಯಾ ಕೈ ಹಿಡಿದಿದ್ದಾನೆ. ಇದರಿಂದ ಮುಜುಗರಕೊಳ್ಳಗಾದ ಸಾನಿಯಾ ಸೆಲ್ಫಿಯನ್ನು ತಿರಸ್ಕರಿಸಿ ತೆರಳಿದ್ದಾರೆ.

ಅಭಿಮಾನಿಗೆ ಜನರ ಧರ್ಮದೇಟು
ಅಭಿಮಾನಿ ಮದ್ಯದ ನಶೆಯಲ್ಲಿ ಕೃತ್ಯ ಎಸಗಿದ್ದು ಸಾನಿಯಾ ಭಾಷಣದುದ್ದಕ್ಕೂ ಆಭಾಸಗೊಳ್ಳುವಂತೆ ವರ್ತಿಸಿದ್ದ. ಜನರಿಗೆ ಕಿರಿಕಿರಿಯಾಗುವಷ್ಟು ವರ್ತನೆ ತೋರಿದ್ದ. ಸಾನಿಯಾ ತೆರಳುತ್ತಿದ್ದಂತೆಯೇ ಸ್ಥಳೀಯ ಯುವಕರು ಪಾನಮತ್ತ ಅಭಿಮಾನಿಗೆ ಧರ್ಮದೇಟು ನೀಡಿದ್ದಾರೆ. ಕಿಡಿಗೇಡಿತನ ಮೆರೆದ ಆತನಿಗೆ ಹೊಡೆದು ಕಂಬಳದಿಂದ ಹೊರಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಲಭ್ಯವಾಗಿದೆ. ಆದರೆ ಯಾರೂ ದೂರು ದಾಖಲಿಸಿದ ಹಿನ್ನಲೆಯಲ್ಲಿ ಕ್ರಮವಾಗಿಲ್ಲ ಅಂತಾ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಹೇಳಿದ್ದಾರೆ.

ತುಳು ಬಗ್ಗೆ ಹೆಮ್ಮೆಯ ಮಾತಾಡಿದ ಸಾನ್ಯಾ
ಅದಕ್ಕೂ ಮುನ್ನ ವೇದಿಕೆಯಲ್ಲಿ ಭಾಷಣ ಮಾಡಿದ ನಟಿ ಸಾನಿಯಾ ಅಯ್ಯರ್, 'ನನಗೆ ತುಳು ಬರೋದಿಲ್ಲ. ಆದರೆ ನನಗೆ ತುಳು ಭಾಷೆ ತುಂಬಾ ಇಷ್ಟ. ಕಂಬಳ ಕೇವಲ ಸಾಂಸ್ಕೃತಿಕ ಕಲೆ ಅಥವಾ ಕ್ರೀಡೆ ಅಲ್ಲ. ಕಂಬಳ ಎನ್ನುವುದು ಜೀವನದ ಮೌಲ್ಯ. ತುಳುನಾಡಿನ ಸಂಸ್ಕೃತಿ ನಮಗೆ ಜೀವನ ಪಾಠ ಕಲಿಸಿಕೊಡುತ್ತದೆ. ಎಲ್ಲಾ ಕಲೆಗಳ ಹಿಂದೆ ಪಾಠಗಳಿವೆ' ಎಂದು ಹೇಳಿದ್ದರು.

ಸಾನ್ಯಾ ಐಯ್ಯರ್-ರೂಪೇಶ್ ಶೆಟ್ಟಿ ಗೆಳೆತನ
ಸಾನ್ಯಾ ಐಯ್ಯರ್ ಕನ್ನಡ ಕೆಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ. ಬಿಗ್‌ಬಾಸ್ ಒಟಿಟಿ ಮೂಲಕ ಸಾನ್ಯಾ ಹೆಚ್ಚು ಬೆಳಕಿಗೆ ಬಂದರು. ಅದರಲ್ಲಿಯೂ ಕರಾವಳಿ ಹುಡುಗ ರೂಪೇಶ್ ಶೆಟ್ಟಿ ಜೊತೆಗಿನ ಅವರ ಆತ್ಮೀಯತೆ ಬಹಳ ಚರ್ಚೆಗೆ ಕಾರಣವಾಗಿತ್ತು. ರೂಪೇಶ್ ಶೆಟ್ಟಿ ಬಿಗ್‌ಬಾಸ್ ಒಟಿಟಿ ಹಾಗೂ ಟಿವಿ ಬಿಗ್‌ಬಾಸ್ ಎರಡರಲ್ಲೂ ಜಯ ಸಾಧಿಸಿದರು. ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಪರಸ್ಪರ ಪ್ರೀತಿಯಲ್ಲಿದ್ದು, ವಿವಾಹವಾಗುತ್ತಾರೆ ಎನ್ನಲಾಗುತ್ತಿದೆ.


Click it and Unblock the Notifications











