A Re-Release: "ಪೆನ್‌ಡ್ರೈವ್ ವಿಚಾರ ಕೂಡ ಅವತ್ತೇ ಹೇಳ್ಬಿಟ್ಟಿದ್ದಾರೆ ಬಾಸ್.. ಫಿಲ್ಮ್ ಅಲ್ಟಿಮೇಟ್" ಎಂದ ಅಭಿಮಾನಿ
ಉಪೇಂದ್ರ ನಿರ್ದೇಶಿಸಿ ನಟಿಸಿದ ಮೊದಲ ಚಿತ್ರ 'A' ಮತ್ತೆ ತೆರೆಗಪ್ಪಳಿಸಿದೆ. ಬಹಳ ರಿಯಲಿಸ್ಟಿಕ್ ಆಗಿ ಕಥೆ ಹೇಳುವ ಪ್ರಯತ್ನ ಮಾಡಿ ಉಪ್ಪಿ 25 ವರ್ಷಗಳ ಹಿಂದೆಯೇ ಗೆದ್ದಿದ್ದರು. ಅವತ್ತು ಫಸ್ಟ್ ಡೇ ಫಸ್ಟ್ ಶೋ ಥಿಯೇಟರ್‌ಗಳಲ್ಲಿ ಸಿನಿಮಾ ನೋಡಿದವರು ಮತ್ತೆ ಅದೇ ಅನುಭವ ಪಡೆದಿದ್ದಾರೆ. ತೆರೆಮೇಲೆ ಸಿನಿಮಾ ನೋಡದವರು ಈಗ ನೋಡಿ ಥ್ರಿಲ್ಲಾಗಿದ್ದಾರೆ.
ರಾಜ್ಯಾದ್ಯಂತ 'A' ರೀ- ರಿಲೀಸ್ ಆಗಿದೆ. ಮಾಡಗಿ ರಸ್ತೆಯ ಪ್ರಸನ್ನ ಚಿತ್ರಮಂದಿರದಕ್ಕೆ ಬೆಳ್ಳಂಬೆಳಗ್ಗೆ 6 ಗಂಟೆಗೆ ಸಿನಿಮಾ ತೆರೆಗಪ್ಪಳಿಸಿತ್ತು. ಬಹಳ ಅದ್ಧೂರಿ ಅಭಿಮಾನಿಗಳು ಕಲ್ಟ್ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಉಪೇಂದ್ರ ನಿರ್ದೇಶನ, ನಟನೆ ಡೈಲಾಗ್ಸ್ ಎಲ್ಲಾ ನೋಡಿ ಫಿದಾ ಆಗಿದ್ದಾರೆ. ಇನ್ನು ಸಿಲ್ವರ್ ಸ್ಕ್ರೀನ್ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆಗೆ ಮುಗಿಲುಮುಟ್ಟಿತ್ತು.

ಥಿಯೇಟರ್ ಹೊರೆಗೆ ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಇನ್ನು ಬೆಳ್ಳಬೆಳಗ್ಗೆ ಮಹಿಳಾ ಪ್ರೇಕ್ಷಕರು ಸಿನಿಮಾ ನೋಡಲು ಬಂದಿದ್ದರು. ಒಟ್ಟಾರೆ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. 25 ವರ್ಷಗಳ ಹಿಂದೆ 'ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ' ಎನ್ನುವ ಟ್ಯಾಗ್‌ಲೈನ್ ಕೊಟ್ಟು ಉಪ್ಪಿ ಸಿನಿಮಾ ಮಾಡಿ ಗೆದ್ದಿದ್ದರು. ಆ ಚಿತ್ರವನ್ನು ಮತ್ತೆ ತೆರೆಮೇಲೆ ನೋಡಿದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಉಪೇಂದ್ರ ಅಭಿಮಾನಿಯೊಬ್ಬರು ಮಾತನಾಡಿ "ನಾನು 20's ಕಿಡ್. ಆಗ ಸಿನಿಮಾ ಓಪನಿಂಗ್, ರೆಸ್ಪಾನ್ಸ್ ಹೇಗಿತ್ತು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಆಗಿನ ಕ್ರೇಜ್ ಈಗ ಕೂಡ ಇದೆ ಅನ್ನೋದು ಖುಷಿ ಆಗುತ್ತಿದೆ. ನಾನು ಉಪ್ಪಿ ಸರ್ ಅಭಿಮಾನಿ. ಸಿನಿಮಾ ಮಾತ್ರ ಅಲ್ಟಿಮೇಟ್. 25 ವರ್ಷಗಳ ಬಳಿಕ ನಡೆಯುತ್ತಿರುವ ಪೆನ್‌ಡ್ರೈನ್ ವಿಚಾರವನ್ನು ಆಗಲೇ ತೋರ್ಸಿದ್ದಾರೆ ನಿಜಕ್ಕೂ ಸೂಪರ್" ಎಂದಿದ್ದಾರೆ.

ಸದ್ಯ ಅಭಿಮಾನಿಯ ಹೇಳಿಕೆ ವೈರಲ್ ಆಗುತ್ತಿದೆ. ರಾಜ್ಯದಲ್ಲಿ ಪೆನ್‌ಡ್ರೈವ್ ವಿಚಾರ ಭಾರೀ ಕೋಹಾಹಲ ಸೃಷ್ಟಿಸಿರುವುದು ಗೊತ್ತೇಯಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯ ಭಾರೀ ಚರ್ಚ ಹುಟ್ಟಾಕ್ಕಿದೆ. ಈಗಾಗಲೇ ಪ್ರಕರಣದ ಬಗ್ಗೆ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ. ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಅಜ್ಞಾತವಾಗಿದ್ದಾರೆ. ಯಾವಾಗ ಬೆಂಗಳೂರಿಗೆ ವಾಪಸ್ ಬರುತ್ತಾರೆ ಎನ್ನುವುದು ಖಚಿತವಾಗಿಲ್ಲ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಶ್ಲೀಲ ವಿಡಿಯೋದಲ್ಲಿದ್ದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದಲ್ಲಿ ಮಾಜಿ ಸಚಿವ ರೇವಣ್ಣ ಸಹ ಜೈಲಿಗೆ ಹೋಗುವಂತಾಯಿತು. ರಾಜಕೀಯ ನಾಯಕರ ರಾಸಲೀಲೆ ವೀಡಿಯೋ ಪ್ರಕರಣ ಸದ್ದು ಮಾಡುತ್ತಿರುವುದು ಇದೇ ಮೊದಲೇನಲ್ಲ. ಆದರೆ ಇಂತಹ ವಿಷಯಗಳನ್ನು ಉಪೇಂದ್ರ 25 ವರ್ಷಗಳ ಹಿಂದೆ 'A' ಚಿತ್ರದಲ್ಲಿ ಹೇಳಿದ್ದರು.
ಚಿತ್ರದ ಕಥೆ ಸುತ್ತುವುದೇ ನಿರ್ದೇಶಕ ಸೂರ್ಯ ಮಾಡಿದ 'A' ಸಿನಿಮಾದ ಸುತ್ತ. ಸೂರ್ಯ ತನ್ನ ಸಿನಿಮಾದಲ್ಲಿ ಭ್ರಷ್ಟಾಚಾರ, ರಾಜಕಾರಣಿಗಳ ರಾಸಲೀಲೆಗಳನ್ನು ನೈಜವಾಗಿ ತೋರಿಸುವ ಪ್ರಯತ್ನ ಮಾಡುತ್ತಾನೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಪ್ರಪಂಚಕ್ಕೆ ತೋರಿಸಲು ಮುಂದಾದಾಗ ಅದನ್ನು ನಿಲ್ಲಿಸಲು ಬಾಂದಿನಿಯ ಆಗಮನವಾಗುತ್ತದೆ. ಮುಂದೆ ಕತೆ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತದೆ.
ನಟ ಉಪೇಂದ್ರ ತಮ್ಮ ಹಲವು ಸಿನಿಮಾಗಳಲ್ಲಿ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ತಪ್ಪುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ನಮ್ಮ ದೇಶ ಹೀಗೆ ಇರಬೇಕು, ಹಾಗೆ ಇರಬೇಕು ಎಂದು ಕನಸುಗಳನ್ನು ತೆರೆಮೇಲೆ ತಂದಿದ್ದಾರೆ. ಅದೇ ರೀತಿಯಲ್ಲಿ 'A' ಚಿತ್ರದಲ್ಲಿ ತೋರಿಸಿದ ವಿಚಾರಗಳು ಇವತ್ತಿಗೂ ಪ್ರಸ್ತುತ ಎನ್ನುವಂತಾಗಿದೆ.


Click it and Unblock the Notifications











