ಅಂಬರೀಷ್ ಧರ್ಮಪತ್ನಿ ಸುಮಲತಾ ಬಗ್ಗೆ ಒಂದಿಷ್ಟು
ಇಂದು ಎಲ್ಲೆಲ್ಲೂ ಅಂಬರೀಷ್ ಅವರ ಬಗ್ಗೆಯೇ ಮಾತು, ಕತೆ, ಸಂಭಾಷಣೆ, ಹಾಡು, ಹರಟೆ. ಕಾರಣ ಎಲ್ಲರಿಗೂ ಗೊತ್ತೇ ಇದೆ. ರೆಬೆಲ್ ಸ್ಟಾರ್ ಅಂಬರೀಷ್ ಅವರು 60ನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ಅವರ ಹುಟ್ಟುಹಬ್ಬ ಸಂಭ್ರಮವನ್ನು ಇಡೀ ಚಿತ್ರರಂಗ ಸಂಭ್ರಮದಿಂದ ಆಚರಿಸುತ್ತಿದೆ.
ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಸುಮಲತಾ ಬಗ್ಗೆ ಒಂದೆರಡು ಮಾತು ಹೇಳಲೇಬೇಕಾಗಿದೆ. ಯಾವುದೇ ಯಶಸ್ವಿ ಪುರುಷನೊಬ್ಬನ ಹಿಂದೆ ಸ್ತ್ರೀಯೊಬ್ಬಳು ಇರುತ್ತಾರೆ ಎಂಬ ಮಾತಿಗೆ ಅಂಬಿ ಸುಮಲತಾ ಅವರ ಅನುರೂಪ ದಾಂಪತ್ಯವೇ ಸಾಕ್ಷಿ.
'ಮಂಡ್ಯದ ಗಂಡು' ಅಂಬರೀಷ್ ಅವರು ನೇರ ನಿಷ್ಠುರ ವ್ಯಕ್ತಿತ್ವಕ್ಕೆ ಹೆಸರಾದವರು. ಅವರ ಈ ಧೋರಣೆಯೇ ಸುಮಲತಾ ಅವರನ್ನು ಸೆಳೆದದ್ದು. ಬಳಿಕ ಇಬ್ಬರ ನಡುವೆ ಪ್ರೇಮ ಅರಳಿದ್ದು. ತೆಲುಗು ಪಿಲ್ಲ ಸುಮಲತಾ 'ನಮ್ಮೂರ ಹಮ್ಮೀರ'ನ ಕೈಹಿಡಿದದ್ದು.
ಸುಮಲತಾ ಅವರೂ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯಗಳಲ್ಲಿ ಅವರ ಚಿತ್ರಗಳು ಹರಿದು ಹಂಚಿಹೋಗಿವೆ. ಸುಮಲತಾ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಮಲಯಾಳಂ ಚಿತ್ರರಂಗದಲ್ಲಿ.
ತಮ್ಮ 15ನೇ ವಯಸ್ಸಿಗೇ ಚಿತ್ರರಂಗಕ್ಕೆ ಸುಮಲತಾ ಅಡಿಯಿಟ್ಟಿದ್ದರು. ಆರಂಭದ ದಿನಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ. ತಮಿಳಿನಲ್ಲಿ ರಜನಿಕಾಂತ್ ಜೊತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ತೆಲುಗಿನಲ್ಲಿ ಬಹುತೇಕ ಚಿತ್ರಗಳು ಮೆಗಾ ಸ್ಟಾರ್ ಚಿರಂಜೀವಿ ಜೊತೆ ಅಭಿನಯಿಸಿದ್ದಾರೆ. ಮಲಯಾಳಂನ ಥಾಝ್‌ವರಮ್, ಇಸಬೆಲ್ಲ, ನಿರಕ್ಕೂಟಿ, ಥೂವನಥುಮ್‌ಬಿಕಲ್, ಪರಂಪರ ಹಾಗೂ ನ್ಯೂ ಡೆಲ್ಲಿ ಸುಮಲತಾ ಅವರಿಗೆ ಹೆಸರುತಂದುಕೊಟ್ಟಂತಹ ಚಿತ್ರಗಳು.
ಸುಮಲತಾ ಅವರು ವರನಟ ಡಾ.ರಾಜ್ ಕುಮಾರ್ ಜೊತೆಗೂ ಅಭಿನಯಿಸಿದ್ದಾರೆ. ಅಣ್ಣಾವ್ರ ಜೊತೆ 'ರವಿಚಂದ್ರ' ಚಿತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ. ತೆಲುಗಿನ 'ಶ್ರುತಿಲಯಲು' (1987) ಚಿತ್ರಕ್ಕೆ ಆಂಧ್ರಪ್ರದೇಶದ ರಾಜ್ಯ ಪ್ರಶಸ್ತಿ ನಂದಿ ಪುರಸ್ಕಾರ ಲಭಿಸಿದೆ.
ಸುಮಲತಾ ಅವರಿಗೆ ಆಪ್ತಗೆಳತಿ ಯಾರು ಗೊತ್ತೆ? ಸುಹಾಸಿನಿ ಮಣಿರತ್ನಂ. ಇವರಿಬ್ಬರ ನಡುವಿನ ಸ್ನೇಹ ತೆಲುಗಿನ ಒಂದು ಚಿತ್ರಕ್ಕೂ ವಸ್ತುವಾಗಿದೆ. ಇವರಿಬ್ಬರ ನಡುವಿನ ಸ್ನೇಹಸಂಬಂಧ ಇನ್ನೆಷ್ಟು ಸೊಗಸಾಗಿರಬಹುದು ಎಂದು ನೀವೇ ಊಹಿಸಿ. ನಾಲ್ಕು ಭಾಷೆಗಳಲ್ಲಿ ನಟಿಸಿದ್ದರೂ ಆರು ಭಾಷೆಗಳಲ್ಲಿ ನಿರರ್ಗಳವಾಗಿ ಸುಮಲತಾ ಮಾತನಾಡಬಲ್ಲರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.
ಅಂಬರೀಷ್ ಅವರ ಜೊತೆ ಸುಮಲತಾ ಸಪ್ತಪದಿ ತುಳಿದದ್ದು ಡಿಸೆಂಬರ್ 8, 1991ರಲ್ಲಿ. ಇವರಿಬ್ಬರ ಅನುರೂಪ ದಾಂಪತ್ಯದ ಫಲವೇ ಅವರ ಮುದ್ದಿನ ಮಗ ಅಭಿಷೇಕ್. ಅಂತ, ಆಹುತಿ, ಅವತಾರ ಪುರುಷ ಮತ್ತು ಕಲ್ಲರಳಿ ಹೂವಾಗಿ ಚಿತ್ರಗಳು ಅಂಬಿ ಮತ್ತು ಸುಮಲತಾ ಒಟ್ಟಿಗೆ ಅಭಿನಯಿಸಿದ ಚಿತ್ರಗಳು. ಸೆಟ್‌ನಲ್ಲೇ ಅಂಬಿ ಕಡೆ ಸುಮಲತಾ ಆಕರ್ಷಿತರಾಗಿದ್ದರು. (ಒನ್‌ಇಂಡಿಯಾ ಕನ್ನಡ)


Click it and Unblock the Notifications












