ಆಸ್ಪತ್ರೆಯಲ್ಲಿ 'ವಿಷ್ಣುಸೇನಾ' ಚಿತ್ರದ ಸನ್ನಿವೇಶ ನೆನಪಿಸುವಂತ ದಾರುಣ ಘಟನೆ
ಎಲ್ಲಾ ಸಿನಿಮಾಗಳ ಆರಂಭದಲ್ಲಿ ಇದು ಕಾಲ್ಪನಿಕ ಕಥೆ. ಯಾವುದಾದರೂ ಸನ್ನಿವೇಶ, ಘಟನೆ ಯಾರಿಗಾದರೂ ಸಂಬಂಧಪಟ್ಟಿರುವಂತೆ ಇದ್ದರೆ ಅದು ಕೇವಲ ಕಾಕತಾಳೀಯ ಎನ್ನುವ ಬರಹ ನೋಡಿರುತ್ತೇವೆ. ನಿಜ ಜೀವನದಲ್ಲಿ ನಡೆಯುವುದನ್ನೇ ಸಿನಿಮಾಗಳನ್ನು ತೋರಿಸುತ್ತಾರೆ. ಕೆಲವೊಮ್ಮೆ ಸಿನಿಮಾಗಳಲ್ಲಿ ತೋರಿಸಿದ್ದು ನಿಜ ಜೀವನದಲ್ಲಿ ಜರುಗಿದ ಉದಾಹರಣೆಗಳು ಇವೆ.
ಸದ್ಯ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಒಂದು ದಾರುಣ ಘಟನೆ ನಡೆದಿದೆ. ಲಿವರ್ ಸಮಸ್ಯೆಯಿಂದ 2 ದಿನಗಳ ಹಿಂದೆ ಎಲ್ಲಮ್ಮ(60) ಎಂಬ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆರಂಭದಲ್ಲಿ 2 ಲಕ್ಷ 20 ಸಾವಿರ ರೂ. ಹಣ ಪಾವತಿಸಲಾಗಿತ್ತು. ಆಕೆ ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ವೈದ್ಯರು ಭರವಸೆ ನೀಡಿದ್ದರು. ಇನ್ನು 3 ಲಕ್ಷ ರೂ. ಹಣ ಕಟ್ಟಬೇಕು ಎಂದು ಸಿಬ್ಬಂದಿ ಹೇಳಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದಾಗಿ ತಿಳಿಸಿ 3 ಲಕ್ಷ ರೂ. ಪಾವತಿಸಿ ಶವ ತೆಗೆದುಕೊಂಡು ಹೋಗಿ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಮೊದಲಿಗೆ ತಮ್ಮ ತಾಯಿಯನ್ನು ಐಸಿಯುನಲ್ಲಿ ಇಟ್ಟಿದ್ದರು. ಆಗ ಆಕೆ ಮಾತನಾಡುತ್ತಿದ್ದರು. ಬಳಿಕ 3 ಲಕ್ಷ ರೂ. ಕಟ್ಟಲು ಹೋದಾಗ ಆಕೆ ಮೃತಪಟ್ಟಿರುವುದಾಗಿ ಹೇಳುತ್ತಿದ್ದಾರೆ ಎಂದು ಆಕೆ ಕುಟುಂಬ ಸದಸ್ಯರು ವೀಡಿಯೋ ಮಾಡಿ ತಿಳಿಸಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ವಿಷ್ಣುಸೇನಾ' ಚಿತ್ರದಲ್ಲಿ ಇಂಥದ್ದೇ ಒಂದು ಸನ್ನಿವೇಶ ಇದೆ.
ವೈದ್ಯರನ್ನು ದೇವರು, ಆಸ್ಪತ್ರೆಗಳನ್ನು ದೇವಾಲಯ ಎಂದೇ ಜನ ಇಂದಿಗೂ ಭಾವಿಸುತ್ತಾರೆ. ಆದರೆ ಅಂತಹ ಜಾಗದಲ್ಲಿ ಹಣಕ್ಕಾಗಿ ನಾನಾ ಆನಾಚಾರಗಳು ನಡೆಯುತ್ತದೆ, ಹಣಕ್ಕಾಗಿ ಜನರ ಜೀವದ ಜೊತೆ ಆಟ ಆಟ ಆಡುತ್ತಾರೆ ಎನ್ನುವ ಆರೋಪಗಳು ಪದೇ ಪದೆ ಕೇಳಿಬರುತ್ತದೆ. ಸದ್ಯ ಹೈದರಾಬಾದ್ ಮಾದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿರುವ ಘಟನೆ ಕೂಡ ಇದೇ ರೀತಿಯ ಚರ್ಚೆಗೆ ಕಾರಣವಾಗಿದೆ.
20 ವರ್ಷಗಳ ಹಿಂದೆ ಬಂದಿದ್ದ 'ವಿಷ್ಣುಸೇನಾ' ಸಿನಿಮಾ ಹಿಟ್ ಆಗಿತ್ತು. ತಮಿಳಿನ 'ರಮಣ' ಚಿತ್ರದ ರೀಮೆಕ್ ಅದು. ತಮಿಳಿನಲ್ಲಿ ಎ. ಆರ್ ಮುರುಗದಾಸ್ ಕತೆ, ಚಿತ್ರಕಥ ಬರೆದು ಚಿತ್ರ ನಿರ್ದೇಶನ ಮಾಡಿದ್ದರು. ಮುಂದೆ ತೆಲುಗು(ಠಾಗೂರ್), ಹಿಂದಿ(ಗಬ್ಬರ್ ಈಸ್ ಬ್ಯಾಕ್) ಹಾಗೂ ಬೆಂಗಾಲಿ ಭಾಷೆಗಳಿಗೆ ಸಿನಿಮಾ ರೀಮೆಕ್ ಆಗಿತ್ತು. ಕನ್ನಡದಲ್ಲಿ ನಾಗಣ್ಣ 'ವಿಷ್ಣುಸೇನಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಪ್ರೊಫೆಸರ್ ಜಯಸಿಂಹ ಪಾತ್ರದಲ್ಲಿ ವಿಷ್ಣುದಾದಾ ಅಬ್ಬರಿಸಿದ್ದರು.
ಒಂದ್ಕಡೆ ಪ್ರೊಫೆಸರ್ ಆಗಿದ್ದುಕೊಂಡೇ ಭ್ರಷ್ಟಾಚಾರವನ್ನು ತಡೆಯಲು ತೆರೆಮರೆಯಲ್ಲಿ 'ವಿಷ್ಣುಸೇನಾ' ಎನ್ನುವ ತಂಡ ಕಟ್ಟಿಕೊಂಡು ಹೋರಾಟ ನಡೆಸುವ ನಾಯಕನ ಕಥೆ ಅದು. ದಂಡಂ ದಶಗುಣಂ ಎನ್ನುವಂತೆ ತಪ್ಪು ಮಾಡಿದವರನ್ನು ಭಯ ಹುಟ್ಟಿಸಿ ಸಮಾಜದಲ್ಲಿ ಜನ ಅಧಿಕಾರಿಗಳು ತಪ್ಪು ಮಾಡುವುದನ್ನು ತಡೆಯಲು ಯತ್ನಿಸುವಂತಹ ಕಥೆ ಚಿತ್ರದಲ್ಲಿತ್ತು. ಮುಖ್ಯವಾಗಿ ಆಸ್ಪತ್ರೆಯ ಸನ್ನಿವೇಶ ಹೈಲೆಟ್ ಆಗಿತ್ತು.
ಆಸ್ಪತ್ರೆಗಳಲ್ಲಿ ಹಣಕ್ಕಾಗಿ ಹೇಗೆಲ್ಲಾ ಹೈಡ್ರಾಮಾ ಮಾಡುತ್ತಾರೆ, ಮೋಸ ನಡೆಯುತ್ತದೆ ಎಂದು ನಾಯಕ ತೋರಿಸುವ ಸನ್ನಿವೇಶ ಇದೆ. ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಎಷ್ಟೇ ಖರ್ಚಾದರೂ ಪರವಾಗಿಲ್ಲ ಬದುಕಿಸಿ ಎಂದು ಕೇಳಿದರೆ ಆ ಶವಕ್ಕೂ ಚಿಕಿತ್ಸೆ ನೀಡುವ ನಾಟಕ ಮಾಡುತ್ತಾರೆ. ಹಣಕ್ಕಾಗಿ ಯಾವುದೇ ಹಂತಕ್ಕೂ ಇಳಿಯುತ್ತಾರೆ ಎಂದು ಸೊಗಸಾಗಿ ತೋರಿಸಲಾಗಿತ್ತು.
ಸದ್ಯ ಈ ಘಟನೆ ಬಗ್ಗೆ ತಿಳಿದುಕೊಂಡವರು 'ವಿಷ್ಣುಸೇನಾ' ಚಿತ್ರದ ಸನ್ನಿವೇಶವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಜನವರಿ 1ರಂದು ಎಲ್ಲಮ್ಮ ಅವರನ್ನು ಡಿಸ್ಚಾರ್ಜ್ ಮಾಡುತ್ತೇವೆ ಎಂದು ಸಿಬ್ಬಂದಿ ಹೇಳಿದ್ದರು. ಆದರೆ 3 ಲಕ್ಷ ರೂ. ಹಣ ಕಟ್ಟಲು ಹೋದಾಗಲೇ ಆಕೆ ಕೊನೆಯುಸಿರೆಳೆದ ವಿಚಾರ ತಿಳಿಸಿದ್ದಾರೆ. ಸಾಲದ್ದಕ್ಕೆ ಹಣ ಕಟ್ಟಿ ಶವ ತೆಗೆದುಕೊಂಡು ಹೋಗಿ ಎಂದು ತಾಕೀತು ಮಾಡಿದ್ದಾರೆ ಎಂದು ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿರುವುದಾಗಿ ವರದಿಯಾಗಿದೆ.


Click it and Unblock the Notifications











