Puneeth Rajkumar: ಆಗಸದ ತಾರೆಗೆ ಪುನೀತ್ ಹೆಸರು ನಾಮಕರಣ: 'ಬಿಗ್ ಲಿಟ್ಲ್' ಕಂಪೆನಿ ಜೊತೆ ಸೇರಿ ಅಪ್ಪುಗೆ ವಿಕ್ರಂ ಟ್ರಿಬ್ಯೂಟ್
ಅಣ್ಣಾವ್ರ ಮಗನಾಗಿ ಹುಟ್ಟಿ ಬಾಲನಟನಾಗಿ ಚಿತ್ರರಂಗಕ್ಕೆ ಬಂದು ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಪುನೀತ್ ರಾಜ್‌ಕುಮಾರ್ ಶಾಶ್ವತ ಸ್ಥಾನ ಪಡೆದಿದ್ದಾರೆ. ಅಪ್ಪು ಅನುಪಸ್ಥಿತಿಯಲ್ಲೇ ಮೊನ್ನೆ ಅಭಿಮಾನಿಗಳು ಅವರ ಹುಟ್ಟುಹಬ್ಬ ಆಚರಿಸಿದ್ದಾರೆ. ಅದೇ ದಿನ ಆಕಾಶದಲ್ಲಿರುವ ನಕ್ಷತ್ರ ಒಂದಕ್ಕೆ ಪುನೀತ್ ಹೆಸರು ಇಡಲಾಗಿದೆ. ನಟ ವಿಕ್ರಮ್ ರವಿಚಂದ್ರನ್ ಜೊತೆ ಸೇರಿ ಬಿಗ್ ಲಿಟ್ಲ್ ಕಂಪನಿ ಅಪ್ಪುಗೆ ವಿಶೇಷವಾಗಿ ಗೌರವ ಸಮರ್ಪಣೆ ಮಾಡಿದೆ.
ಶುಕ್ರವಾರ ನಟ ವಿಕ್ರಮ್ ರವಿಚಂದ್ರನ್ ಅವರೊಂದಿಗೆ ಸೇರಿ 'ಬಿಗ್ ಲಿಟ್ಲ್' ಕಂಪನಿ ಅಪ್ಪುಗೆ ವೀಡಿಯೋ ಗೌರವ ಸಲ್ಲಿಸಿದೆ. ವಿಕ್ರಮ್ ಅಪ್ಪುಗೆ ಟ್ರಿಬ್ಯೂಟ್ ಮಾಡಿರುವ ವೀಡಿಯೋ ಬಿಡುಗಡೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ. "ನಮ್ಮ ಕಾಲದ ಅತ್ಯುತ್ತಮ ಸ್ಪೂರ್ತಿಗೆ ಒಂದು ಚಿಕ್ಕ ಗೌರವ ನೀಡುವ ಸಲುವಾಗಿ ಆಕಾಶದಲ್ಲಿರುವ ನಕ್ಷತ್ರವೊಂದಕ್ಕೆ ಪುನೀತ್ ರಾಜ್‌ಕುಮಾರ್ ಹೆಸರಿಡಲು ಹೆಮ್ಮೆಯಾಗಿದೆ" ಎಂದು 'ಬಿಗ್ ಲಿಟ್ಲ್' ಕಂಪನಿ ತಿಳಿಸಿದೆ.

ವಿಕ್ರಮ್ ಮಾತನಾಡಿ "ಪುನೀತ್ ರಾಜ್ ಕುಮಾರ್ ಅವರಿಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ತೊಡಗಿಸಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತೆ. ನಾನು ಚಿಕ್ಕಂದಿನಿಂದಲೂ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ಸಿನಿಮಾದ ಆಚೆಗಿನ ಅವರ ಜೀವನ ಜಗತ್ತಿಗೇ ಸ್ಪೂರ್ತಿ. ಅವರಿಗಾಗಿ ಮಾಡುತ್ತಿರುವ ಒಂದೊಳ್ಳೆ ಕೆಲಸದಲ್ಲಿ ನಾನು ಭಾಗಿಯಾಗಿರೋದು ನನಗೆ ತುಂಬಾ ಖುಷಿ ಕೊಟ್ಟಿದೆ" ಎಂದು ಖುಷಿ ಹಂಚಿಕೊಂಡಿದ್ದಾರೆ.

'ಬಿಗ್ ಲಿಟ್ಲ್' ಕಂಪನಿ ಸಂಸ್ಥಾಪಕಿ ಕಾವ್ಯ ಶಂಕರೇಗೌಡ, "ಅಪ್ಪು ಎಲ್ಲರಿಗೂ ಸ್ಪೂರ್ತಿ. ಬಿಗ್ ಲಿಟ್ಲ್ ಕಂಪನಿ ಅವರಿಂದ ತುಂಬಾ ಕಲಿತಿದೆ. ವೈಯಕ್ತಿಕವಾಗಿ ನಾನು ಅವರನ್ನು ಬಲ್ಲೆ, ನನ್ನಂತ ಸಾಮಾನ್ಯ ವ್ಯಕ್ತಿಗಳು ಸೂಪರ್ ಸ್ಟಾರ್‌ಗಳ ಬಗ್ಗೆ ಹೊಂದಿರುವ ಅಭಿಪ್ರಾಯವನ್ನು ಅವರು ಬದಲಾಯಿಸಿದ್ದಾರೆ. ನಕ್ಷತ್ರಗಳು ನಮ್ಮ ಮಾರ್ಗದರ್ಶಿ ಶಕ್ತಿಯಾಗಿರುತ್ತೆ ಎಂಬ ಕಲ್ಪನೆಯಡಿ ನಾವು ಮಾಡಿರುವ ಕಾನ್ಸೆಪ್ಟ್ ಮೂಡಿ ಬಂದಿದೆ. ನಮ್ಮ ಪ್ರೀತಿ ಪಾತ್ರರು ದೂರವಾದಾಗ ನಕ್ಷತ್ರಗಳಾಗುತ್ತಾರೆ ಎಂದು ನಾವು ನಂಬಿದ್ದೇವೆ. ಅಪ್ಪು ಸರ್ ನಮಗೆಲ್ಲ ಸ್ಟಾರ್ ಆಗಿದ್ದರು, ಅವರ ಹೆಸರಲ್ಲಿ ಒಂದು ನಕ್ಷತ್ರ ಇರಬೇಕೆಂದು ನಾವು ಬಯಸುತ್ತೇವೆ. ನಮ್ಮೆಲ್ಲರ ಅತ್ಯುತ್ತಮ ಸ್ಪೂರ್ತಿಯ ಶಕ್ತಿಗೆ ಇದು ನಮ್ಮ ಚಿಕ್ಕ ಕೊಡುಗೆ" ಎಂದು ಹೇಳಿದ್ದಾರೆ.
ಇನ್ನು 'ಬಿಗ್ ಲಿಟ್ಲ್' ಕಂಪನಿ ಬಿಡುಗಡೆ ಮಾಡಿರುವ ಅಪ್ಪುಗೆ ಗೌರವ ಸಲ್ಲಿಸುವ ಈ ವೀಡಿಯೋ ಸಖತ್ ವೈರಲ್ ಆಗಿದೆ. ಇನ್ನು ಅಪ್ಪು ಹೆಸರನ್ನು ನಕ್ಷತ್ರಕ್ಕೆ ಇಟ್ಟಿರುವ ವಿಚಾರ ಅವರ ಅಭಿಮಾನಿಗಳಿಗೂ ಸಂತಸ ತಂದಿದೆ. ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ. ವಾಟ್ಸಪ್ ಸ್ಟೇಟಸ್‌ಗಳಲ್ಲಿ ಇದು ರಾರಾಜಿಸುತ್ತಿದೆ.


Click it and Unblock the Notifications











