ಸ್ನೇಹಿತರೊಟ್ಟಿಗೆ ದರ್ಶನ್ ವಿರಾಜಪೇಟೆ ಪ್ರವಾಸ ಜಾಲಿ ಮಾಡೋಕ್ಕಲ್ಲ.. ಇದರ ಹಿಂದಿರೋ ಕಾರಣನೇ ಬೇರೆ!
ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿಯೂ ಆಗಿರುವ ನಟ ದರ್ಶನ್ ಇತ್ತೀಚೆಗೆ ಸ್ನೇಹಿತರ ಜೊತೆ ಮಡಿಕೇರಿ ಪ್ರವಾಸ ಕೈಗೊಂಡಿದ್ದರು. ಮೂರ್ನಾಲ್ಕು ಕಾರು, ಜೀಪ್‌ನಲ್ಲಿ ಆಪ್ತ ಬಳಗದ ಜೊತೆ ದರ್ಶನ್ ಸುತ್ತಾಡಿ ಬಂದಿದ್ದರು. ಕೊನೆಗೆ ಮೊದಲ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ದರ್ಶನ ಪಡೆದು ಬಂದಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು.
ದರ್ಶನ್ ಮಡಿಕೇರಿ ಪ್ರವಾಸದ ಎಕ್ಸ್‌ಕ್ಲೂಸಿವ್ ವಿಡಿಯೋ ಈಗ ರಿಲೀಸ್ ಆಗಿದೆ. ನಾಲ್ಕೂವರೆ ನಿಮಿಷದ ವಿಡಿಯೋ ಅಭಿಮಾನಿಗಳ ಮನಗೆದ್ದಿದೆ. ದರ್ಶನ್ ಸ್ವತಃ ಜೀಪ್ ಡ್ರೈವ್ ಮಾಡುತ್ತಾ ಸುತ್ತಾಡಿದ್ದಾರೆ. ಹಾದಿ ಉದ್ದಕ್ಕೂ ಚಾಲೆಂಜಿಂಗ್ ಸ್ಟಾರ್ ಸ್ನೇಹಿತರೊಟ್ಟಿಗೆ ಸುಂದರ ಕ್ಷಣಗಳನ್ನು ಕಳೆದಿರುವುದನ್ನು ನೋಡಬಹುದು. ಎಲ್ಲಾ ಜಂಟಾಟವನ್ನು ಪಕ್ಕಕ್ಕಿಟ್ಟು, ತಮ್ಮದೇ ಲೋಕದಲ್ಲಿ ಕಳೆದು ಹೋಗಿದ್ದಾರೆ. ಶೀಕರ್ ಅಮೋಘ್ ಎಲ್ಲವನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ.

ದರ್ಶನ್ ಈ ಹಿಂದೆ ಕೂಡ ಸಾಕಷ್ಟು ಬಾರಿ ಸ್ನೇಹಿತರ ಜೊತೆ ಪ್ರವಾಸ ಹೋಗಿ ಬಂದಿದ್ದಾರೆ. ಚಿತ್ರರಂಗದ ಸ್ನೇಹಿತರೊಟ್ಟಿಗೂ ಬೈಕ್ ಟ್ರಿಪ್ ಅಂತೆಲ್ಲಾ ಸುತ್ತಾಡಿದ್ದಾರೆ. ತಮ್ಮ ಆಪ್ತ ಬಳಗದೊಂದಿಗೆ ಈ ಬಾರಿ ವಿರಾಜಪೇಟೆ ಸುತ್ತಾಮುತ್ತಾ ಗಜ ಸವಾರಿ ನಡೆದಿದೆ. ತಂಡದಲ್ಲಿ ಒಂದಷ್ಟು ಹೊಸ ಮುಖಗಳು ಈ ಬಾರಿ ಕಾಣಿಸಿಕೊಂಡಿರುವುದು ವಿಶೇಷ.
ಆಫ್ ರೋಡ್ ಟ್ರಿಪ್
ಚಾಲೆಂಜಿಂಗ್ ಸ್ಟಾರ್ ವೈಲ್ಡ್‌ಲೈಫ್ ಫೋಟೊಗ್ರಫಿಗಾಗಿ ದೇಶ, ವಿದೇಶದ ಕಾಡುಗಳಲ್ಲಿ ಸುತ್ತಾಡಿದ್ದಾರೆ. ಸಾಕಷ್ಟು ಬಾರಿ ಕಾಡಿನಲ್ಲಿ ಸಫಾರಿಗೂ ಹೋಗಿ ಬಂದಿದ್ದಾರೆ. ಆದರೆ ಈ ಬಾರಿ ಆಫ್ ರೋಡ್ ಟ್ರಿಪ್ ಟ್ರೈ ಮಾಡಿದ್ದಾರೆ. ವಿರಾಜಪೇಟೆ ಮಾರ್ಗದಲ್ಲಿ ಸಾಕಷ್ಟು ಕಡೆಗಳಲ್ಲಿ ಬೆಟ್ಟ, ಗುಡ್ಡ, ಹಳ್ಳ, ತೊರೆ, ದಿಣ್ಣೆ, ಬಂಡೆಗಳ ಮೇಲೆ ಕಾರು, ಜೀಪ್ ಚಲಾಯಿಸಿದ್ದಾರೆ. ಟೆಂಟ್‌ಗಳನ್ನು ಹಾಕಿಕೊಂಡು ರಾತ್ರಿ ಕಳೆದಿದ್ದಾರೆ. ಅಕ್ಕಿ ರೊಟ್ಟಿ, ಚಿಕನ್ ಸವಿದು ಖುಷಿಪಟ್ಟಿದ್ದಾರೆ.

ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ
ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಟ ದರ್ಶನ್ ಈ ಬಾರಿ ಆಫ್ ರೋಡ್ ಟ್ರಿಪ್ ಹೋಗಿದ್ದಾರೆ. ಕಾಕಬ್ಬೆ ವಿರಾಜಪೇಟೆ ಸುತ್ತಾ ಮುತ್ತಾ ಗಜಪಡೆ ಸುತ್ತಾಡಿ ಬಂದಿದೆ. ನಮ್ಮ ನಾಡಿನ ಪ್ರಕೃತಿ ಸೌಂದರ್ಯದ ಪರಿಚಯ ಮಾಡಿಸಿದ್ದಾರೆ. ದರ್ಶನ್ ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಕೂಡ ಆಗಿದ್ದಾರೆ. ಅರಣ್ಯ ಸಂರಕ್ಷಣೆ, ಪ್ರಾಣಿ ಪಕ್ಷಿ ಸಂರಕ್ಷರಣಗೆ ಬಗ್ಗೆ ಜಾಗೃತಿ ಮೂಡಿಸುತ್ತಿರುತ್ತಾರೆ. ತಮ್ಮದೇ ಫಾರ್ಮ್‌ಹೌಸ್‌ನಲ್ಲಿ ಸಾಕಷ್ಟು ಪ್ರಾಣಿಪಕ್ಷಿ ಸಾಕಿದ್ದಾರೆ. ಮೃಗಾಲಯದಲ್ಲಿರುವ ಒಂದಷ್ಟು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಸ್ನೇಹಿತರಿಗೆ, ಅಭಿಮಾನಿಗಳಿಗೆ ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡುತ್ತಾರೆ.
ದರ್ಶನ್ ಜೊತೆ ವಿನೀಶ್
ಈ ಬಾರಿ ದರ್ಶನ್ ಸ್ನೇಹಿತರ ಬಳಗದ ಜೊತೆ ವಿನೀಶ್ ಕೂಡ ಪ್ರವಾಸಕ್ಕೆ ಹೋಗಿ ಬಂದಿರುವುದನ್ನು ನೋಡಬಹುದು. ಜೊತೆಗೆ 'ಅಪ್ಪು ಪಪ್ಪು' ಚಿತ್ರದ ಬಾಲ ನಟ ಸ್ನೇಹಿತ್, ನಟ ಯಶಸ್ ಸೂರ್ಯ ಕೂಡ ಭಾಗಿ ಆಗಿದ್ದಾರೆ. ಅಭಿಮಾನಿಗಳು ದರ್ಶನ್ ಪ್ರವಾಸದ ವಿಡಿಯೋ ನೋಡಿ ಖುಷಿಯಾಗಿದ್ದಾರೆ. ಈ ವಿಡಿಯೋದ 2, 3ನೇ ಭಾಗ ಇದ್ದರೆ ರಿಲೀಸ್ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
2 ಚಿತ್ರಗಳಲ್ಲಿ ದರ್ಶನ್ ನಟನೆ
ಸದ್ಯ ದರ್ಶನ್ ಹೀರೊ ಆಗಿ 'ಕಾಟೇರ' ಚಿತ್ರದಲ್ಲಿ ನಟಿಸ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದಲ್ಲಿ 70ರ ದಶಕದ ಕಥೆ ಹೇಳಲಾಗುತ್ತಿದೆ. ಸಣ್ಣ ಸಣ್ಣ ಶೆಡ್ಯೂಲ್‌ಗಳಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಇನ್ನು ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದ ವಿಶೇಷ ಪಾತ್ರದಲ್ಲೂ ದರ್ಶನ್ ನಟಿಸಿದ್ದಾರೆ. ಯಶಸ್ ಸೂತ್ಯ ಹೀರೊ ಆಗಿರುವ ಈ ಚಿತ್ರವನ್ನು ಬಿ. ಸಿ ಪಾಟೀಲ್ ನಿರ್ಮಿಸಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕನ ಅಣ್ಣನ ಪಾತ್ರದಲ್ಲಿ ದರ್ಶನ್ ಮಿಂಚಿದ್ದಾರೆ.


Click it and Unblock the Notifications











