'ಆಟೋ ಭಾಸ್ಕರ' : ಒಂದು ಸಿನಿಮಾ, ಒಬ್ಬ ಕಲಾವಿದ, 11 ಪಾತ್ರಗಳು
ಒಂದು ಸಿನಿಮಾದಲ್ಲಿ ಒಬ್ಬ ಕಲಾವಿದ ಒಂದು, ಎರಡು, ಅಬ್ಬಬ್ಬಾ ಅಂದರೆ ಮೂರು ಪಾತ್ರಗಳನ್ನು ನಿರ್ವಹಿಸಬಹುದು. ಆದರೆ, ತಮಿಳಿನಲ್ಲಿ ಕಮಲ್ ಹಾಸನ್ 'ದಶಾವತಾರಂ' ಸಿನಿಮಾದಲ್ಲಿ 10 ಪಾತ್ರಗಳನ್ನು ಮಾಡಿದ್ದರು. ಬಾಲಿವುಡ್ ನಲ್ಲಿ ಪ್ರಿಯಾಂಕ ಚೋಪ್ರಾ 'ವಾಟ್ಸ್ ಯುವರ್ ರಾಶಿ' ಸಿನಿಮಾದಲ್ಲಿ 12 ಪಾತ್ರಗಳನ್ನು ಮಾಡಿ ಅಚ್ಚರಿ ಮೂಡಿಸಿದ್ದರು. ಇವುಗಳ ನಂತರ ಈಗ ಕನ್ನಡದಲ್ಲಿ ಒಂದೇ ಸಿನಿಮಾದ 11 ಪ್ರಮುಖ ಪಾತ್ರಗಳನ್ನು ಒಬ್ಬ ಕಲಾವಿದ ನಿರ್ವಹಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೀತಿಯ ಒಂದು ಪ್ರಯತ್ನ ನಡೆಯುತ್ತಿದೆ. ಅದು 'ಆಟೋ ಭಾಸ್ಕರ' ಎಂಬ ಸಿನಿಮಾದ ಮೂಲಕ. ಈ ಸಿನಿಮಾ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ದಿನೇ ದಿನೇ ಸುದ್ದಿ ಮಾಡುತ್ತಿದೆ. ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲಿಯೇ ಟೀಸರ್ ಬಿಡುಗಡೆಯಾಗಲಿದೆ.
ಅಂದಹಾಗೆ, 'ಆಟೋ ಭಾಸ್ಕರ' ಸಿನಿಮಾದ ಕೆಲವೊಂದು ವಿಶೇಷಗಳು ಮುಂದಿದೆ ಓದಿ...

ನಟ ಆದಿತ್ಯ ಭಾರಧ್ವಜ್
'ಆಟೋ ಭಾಸ್ಕರ' ಸಿನಿಮಾದ ನಿರ್ದೇಶನ ಹಾಗೂ ನಟನೆ ಮಾಡಿರುವುದು ಆದಿತ್ಯ ಭಾರಧ್ವಜ್. ವಿಶೇಷ ಅಂದರೆ ಈ ಚಿತ್ರದ 11 ಪ್ರಮುಖ ಪಾತ್ರದಲ್ಲಿ ಅವರೇ ನಟಿಸಿದ್ದಾರೆ. ಮೂಲತಃ ರಂಗಭೂಮಿ ಹಿನ್ನಲೆಯ ಆದಿತ್ಯ ಎಲ್ಲ ಪಾತ್ರಗಳನ್ನು ನೀರು ಕುಡಿದಷ್ಟು ಸುಲಭವಾಗಿ ಅಭಿನಯಿಸಿದ್ದಾರೆ. ಐದು ವರ್ಷಗಳ ಹಿಂದೆ ಶಿವಮೊಗ್ಗದಿಂದ ಬೆಂಗಳೂರಿಗೆ ನಟನಾಗಬೇಕು ಅಂತ ಬಂದ ಈ ಹುಡುಗ 'ಆಟೋ ಭಾಸ್ಕರ' ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ.

11 ಪ್ರಮುಖ ಪಾತ್ರಗಳು
'ಆಟೋ ಭಾಸ್ಕರ' ಚಿತ್ರದಲ್ಲಿ ಒಟ್ಟು 11 ಪ್ರಮುಖ ಪಾತ್ರಗಳಿವೆ. 'ಆಟೋ ಭಾಸ್ಕರ' ಎಂಬ ವ್ಯಕ್ತಿಯ ಸುತ್ತ ಒಂದು ದಿನದಲ್ಲಿ ನಡೆಯುವ ಕಥೆ ಇದಾಗಿದೆ. ಆಟೋ ಡ್ರೈವರ್, ಮುನ್ನಿ (ಆಟೋ ಭಾಸ್ಕರನ ಗೆಳತಿ), ಒಬ್ಬ ಅಂಧ (ರಾಜ್ ಕುಮಾರ್ ಅಭಿಮಾನಿ), ಹಿರಿಯ ನಾಗರಿಕ, ಲವರ್ ಬಾಯ್, 55 ವರ್ಷದ ಮಹಿಳೆ, ಭಾಸ್ಕರನ ಅಪ್ಪ ಈ ಏಳು ಪಾತ್ರಗಳ ಸದ್ಯಕ್ಕೆ ರಿವೀಲ್ ಆಗಿವೆ. ಉಳಿದ ನಾಲ್ಕು ಪಾತ್ರಗಳನ್ನು ಚಿತ್ರದಲ್ಲಿಯೇ ನೋಡಬೇಕಾಗಿದೆ.

3 ರಿಂದ 11 ಆಯ್ತು
ಮೊದಲು ಚಿತ್ರದ ಮೂರು ಪಾತ್ರಗಳನ್ನು ಆದಿತ್ಯ ಮಾಡಬೇಕು ಅಂತ ಇದ್ದರಂತೆ. ಒಮ್ಮೆ ಒಬ್ಬ ಸ್ನೇಹಿತರಿಗೆ ಕಥೆ ಹೇಳಿದಾಗ 7 ಪಾತ್ರಗಳನ್ನು ಮಾಡು ಎಂದರಂತೆ. ನಂತರ ಮತ್ತೊಬ್ಬ ಗುರುಗಳು ಸಿಕ್ಕು 'ನಟನೆ ಅಂದರೆ ನವರಸ' ನೀನು 9 ಪಾತ್ರ ಮಾಡು ಎಂಬ ಸಲಹೆ ನೀಡಿದರಂತೆ. ಸ್ವಲ್ಪ ದಿನದ ಆದ ಮೇಲೆ ಮತ್ತೆ ಬೇರೆ ಗೆಳೆಯರು ಈ 9 ಪಾತ್ರಗಳು ಗಂಡಸಿನ ಪಾತ್ರಗಳು ಅದನ್ನು ನೀನು ಮಾಡಬಹುದು. ಆದರೆ, ಚಿತ್ರದ ಇನ್ನೂ ಎರಡು ಮಹಿಳಾ ಪಾತ್ರಗಳನ್ನು ಮಾಡಿದರೆ ಅದು ನಿಜವಾದ ಚಾಲೆಂಜ್ ಎಂದರಂತೆ. ಇದು ಆದಿತ್ಯ ಅವರಿಗೂ ಸರಿ ಎನ್ನಿಸಿ 11 ಪಾತ್ರಗಳನ್ನು ನಿಭಾಹಿಸುವ ನಿರ್ಧಾರ ಮಾಡಿದರು.

ಕನ್ಟೆಟ್ ಇರುವ ಕಮರ್ಶಿಯಲ್ ಸಿನಿಮಾ
ಈ ಚಿತ್ರ ಕನ್ಟೆಟ್ ಇರುವ ಕಮರ್ಶಿಯಲ್ ಸಿನಿಮಾವಂತೆ. ಕಮರ್ಶಿಯಲ್ ಕಥೆಯನ್ನು ಕ್ಲಾಸ್ ಆಗಿ ಹೇಳಲಾಗಿದೆಯಂತೆ. ಇನ್ನೂ ದಿನ ಬೆಳ್ಳಗೆ ಐದು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆ ವರೆಗೆ ಚಿತ್ರದ ಶೂಟಿಂಗ್ ಮಾಡಲಾಗಿದೆಯಂತೆ. ಈ ಸಿನಿಮಾಗೆ ಹಣಕ್ಕಿಂತ ವಿಪರೀತ ತಲೆ ಖರ್ಚು ಮಾಡಿದ್ದೇವೆ ಎನ್ನುತ್ತಾರೆ ಆದಿತ್ಯ.

ನನಗೆ ತುಂಬ ನಟರು
ಆದಿತ್ಯ ಅವರ ಈ ರೀತಿಯ ಪ್ರಯತ್ನಕ್ಕೆ ಅನೇಕ ನಟರು ಪ್ರಭಾವ ಬೀರಿದ್ದಾರೆ. ರಾಜ್ ಕುಮಾರ್, ಅನಂತ್ ನಾಗ್, ಸುದೀಪ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಇರ್ಫಾನ್ ಖಾನ್ ಆದಿತ್ಯ ಅವರ ಸ್ಫೂರ್ತಿ ಆಗಿದ್ದಾರೆ. ಅಂದಹಾಗೆ, ಸದ್ಯದಲ್ಲಿಯೇ 'ಆಟೋ ಭಾಸ್ಕರ' ಟೀಸರ್ ಬಿಡುಗಡೆಯಾಗದ್ದು, ಚಿತ್ರದ ಪ್ರತಿ ಪಾತ್ರಗಳು ನೋಡುಗರಿಗೆ ಮಜಾ ಕೊಡುತ್ತದೆ ಎನ್ನುತ್ತಾರೆ ಆದಿತ್ಯ. ಈ ಚಿತ್ರದ ಬಿಡುಗಡೆಯಾದ ಬಳಿಕ ಒಳ್ಳೆಯ ಅವಕಾಶಗಳು ಸಿಗುತ್ತದೆ ಎನ್ನುವ ಆತ್ಮವಿಶ್ವಾಸ ಅವರದ್ದು.


Click it and Unblock the Notifications











