ಟೀಸರ್ ರಿಲೀಸ್ : 11 ಪಾತ್ರಗಳಲ್ಲಿ ಗಮನ ಸೆಳೆದ 'ಆಟೋ ಭಾಸ್ಕರ'
ಈಗಾಗಲೇ 'ಆಟೋ ಭಾಸ್ಕರ' ಚಿತ್ರ ತನ್ನ ವಿಶೇಷತೆಗಳ ಮೂಲಕ ದಿನೇ ದಿನೇ ಸದ್ದು ಮಾಡುತ್ತಿದೆ. ಇದೀಗ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಯೂ ಟ್ಯೂಬ್ ನಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. 'ಆಟೋ ಭಾಸ್ಕರ'ನ ವಿಶೇಷ ಅವತಾರಗಳು ಟೀಸರ್ ನಲ್ಲಿ ಅನಾವರಣಗೊಂಡಿವೆ.
ಈ ಚಿತ್ರದ ಮೂಲಕ ನಟ ಆದಿತ್ಯ ಭಾರಧ್ವಜ್ ಹೊಸ ಸಾಹಸ ಮಾಡಿದ್ದಾರೆ. ಸಿನಿಮಾದ 11 ವಿಭಿನ್ನ ಪಾತ್ರಗಳಲ್ಲಿ ತಾವೇ ನಟಿಸಿದ್ದಾರೆ. ಅಂದಹಾಗೆ, ಕನ್ನಡದಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ನಡೆಯುತ್ತಿದೆ. ಈ ಹಿಂದೆ ತಮಿಳಿನಲ್ಲಿ ಕಮಲ್ ಹಾಸನ್ 'ದಶಾವತಾರಂ' ಸಿನಿಮಾದಲ್ಲಿ 10 ಪಾತ್ರಗಳನ್ನು ಹಾಗೂ ಪ್ರಿಯಾಂಕ ಚೋಪ್ರಾ 'ವಾಟ್ಸ್ ಯುವರ್ ರಾಶಿ' ಸಿನಿಮಾದಲ್ಲಿ 12 ಪಾತ್ರಗಳನ್ನು ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.
ಚಿತ್ರದ ಆಟೋ ಡ್ರೈವರ್ (ಆಟೋ ಭಾಸ್ಕರ), ಮುನ್ನಿ (ಆಟೋ ಭಾಸ್ಕರನ ಗೆಳತಿ), ಒಬ್ಬ ಅಂಧ (ರಾಜ್ ಕುಮಾರ್ ಅಭಿಮಾನಿ), ಹಿರಿಯ ನಾಗರಿಕ, ಲವರ್ ಬಾಯ್, 55 ವರ್ಷದ ಮಹಿಳೆ, ಭಾಸ್ಕರನ ಅಪ್ಪ ಈ ಏಳು ಪಾತ್ರಗಳ ಸದ್ಯಕ್ಕೆ ಟೀಸರ್ ಮೂಲಕ ರಿವೀಲ್ ಆಗಿವೆ. ಉಳಿದ ಪಾತ್ರಗಳನ್ನು ಸಿನಿಮಾದಲ್ಲಿಯೇ ನೋಡಿ ಖುಷಿ ಪಡಬೇಕಿದೆ.

ಮೂಲತಃ ರಂಗಭೂಮಿ ಹಿನ್ನಲೆಯ ಆದಿತ್ಯ ಎಲ್ಲ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಟೀಸರ್ ನೋಡುತ್ತಿದ್ದರೆ ಸಿನಿಮಾದಲ್ಲಿ ಒಂದು ಒಳ್ಳೆಯ ಅಂಶ ಇದೆ ಎನ್ನುವ ಭಾವ ಮೂಡುತ್ತದೆ. ಜೊತೆಗೆ ಸಿನಿಮಾ ನೋಡುವ ಕುತೂಹಲವನ್ನು ಹೆಚ್ಚು ಮಾಡಿದೆ. ಈ ಚಿತ್ರ ಕಂಟೆಂಟ್ ಇರುವ ಕಮರ್ಶಿಯಲ್ ಸಿನಿಮಾವಂತೆ.

ಉಳಿದಂತೆ, ಈ ಚಿತ್ರದ ಸಹ ನಿರ್ದೇಶನವನ್ನು ಭರತ್ ಸ ಜಗನ್ನಾಥ್ ಮಾಡಿದ್ದಾರೆ. ಸಹಾಯಕ ನಿರ್ದೇಶಕರಾಗಿ ನಿಶ್ಚಲ್ ಮೂಧೋಲ್, ಚಿರಾಗ್ ಚಂದ್ರಶೇಖರ್ ಮತ್ತು ಅಪ್ರಮೇಯ ಭಾರಧ್ವಜ್ ಕೆಲಸ ಮಾಡಿದ್ದಾರೆ. ದಯಾನಂದ ಸಾಗರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಶರತ್ ಕ್ಯಾಮರಾ ನಿರ್ವಹಿಸಿದ್ದಾರೆ.


Click it and Unblock the Notifications











