»   » ಲಗಾನ್‌ ಖ್ಯಾತಿಯ ಅಮೀರ್‌ ಖಾನ್‌ರಿಂದ ಕನ್ನಡ ಚಿತ್ರ?

ಲಗಾನ್‌ ಖ್ಯಾತಿಯ ಅಮೀರ್‌ ಖಾನ್‌ರಿಂದ ಕನ್ನಡ ಚಿತ್ರ?

Posted By: Staff
Subscribe to Filmibeat Kannada

ಲಗಾನ್‌ ಎಂಬ ಅನನ್ಯ ಚಿತ್ರದ ರೂವಾರಿ ಹಾಗೂ ಆಸ್ಕರ್‌ಗೆ ಹತ್ತಿರಾಗಿರುವ ಅಮೀರ್‌ ಖಾನ್‌ ಕನ್ನಡ ಚಿತ್ರ ಮಾಡುವರೇ?
ಹೌದು ಅಂತ ಒಂದೇ ಮಾತಲ್ಲಿ ಅವರು ಹೇಳಿಲ್ಲವಾದರೂ, ಸಾರಾಸಗಟಾಗಿ ಇಲ್ಲ ಎಂದಿಲ್ಲ. ಒಳ್ಳೆಯ ಕತೆ, ಬಲವಾದ ಸ್ಕಿೃಪ್ಟ್‌ ಸಿಕ್ಕರೆ ಪ್ರಾದೇಶಿಕ ಭಾಷೆಯಲ್ಲೂ ಚಿತ್ರ ಮಾಡಲು ನಾನು ರೆಡಿ ಅಂದರು. ಅದೂ ಬೆಂಗಳೂರಲ್ಲಿ !

ಮೊನ್ನೆ ಬ್ರಿಟನ್‌ ಪ್ರಧಾನಿ ಟೋನಿ ಬ್ಲೇರ್‌ ಬೆಂಗಳೂರಿಗೆ ಬಂದಾಗ, ಖಾನ್‌ ಕೂಡ ಅವರೊಟ್ಟಿಗೆ ಚಹಾ ಕುಡಿದರು. ಯಂಗ್‌ ಅಚೀವರ್ಸ್‌ ಸಾಲಿನಲ್ಲಿ ನಿಂತಿದ್ದ ಮೂವತ್ತಾರರ ಹರೆಯದ ಅಮೀರ್‌ ನಗುತ್ತಿದ್ದರು. ಅಲ್ಲೆಲ್ಲಾ ತೇಲಿದ್ದು ಲಗಾನ್‌ ಹಾಗೂ ಆಸ್ಕರ್‌ನ ಮಾತು. ಟೋನಿ ಕೂಡ ಲಗಾನ್‌ ಕ್ರಿಕೆಟ್‌ನ ಬಗೆಗೆ ಖಾನ್‌ ಬಳಿ ಪಿಸುಗುಟ್ಟಿದರು. ಈ ಸಂದರ್ಭದಲ್ಲಿ ಕೂಟದಲ್ಲಿ ನೆರೆದಿದ್ದ ಕೆಲವರೊಂದಿಗೆ ಹಮ್ಮು ಬಿಮ್ಮು ಬಿಟ್ಟು ಅಮೀರ್‌ ಹರಟೆ ಕೊಚ್ಚಿದರು...

ಪ್ರಾಯಶಃ ನಾನು ನನ್ನ ಸಿನಿಮಾಗಳ ಬ್ಯಾಡ್‌ ಕ್ರಿಟಿಕ್‌. ಅದರಲ್ಲೂ ನನಗೆ ನನ್ನ ಪಾತ್ರ ಹಿಡಿಸದೇ ಇರುವುದೇ ಹೆಚ್ಚು. ಅದು ನನ್ನ ಪ್ಲಸ್‌ ಪಾಯಿಂಟ್‌ ಕೂಡ ಹೌದು ಅಂತ ನಂಬಿದ್ದೇನೆ. ಲಗಾನ್‌ ಸಿನಿಮಾ ಮಾಡಿ, ಪದೇ ಪದೇ ನೋಡಿ ಅಯ್ಯಯ್ಯೋ ಅಂದುಕೊಂಡಿದ್ದೇನೆ. ಆ ಚಿತ್ರ ಬಿಡುಗಡೆಯಾದ ದಿನವೂ ನನ್ನಲ್ಲಿ ಅದೆಂಥದೋ ಭಯ. ಸಚ್‌ ಔರ್‌ ಸಾಹಸ್‌ ಹೋ ಜಿಸ್ಕೆ ಮನ್‌ ಮೆ ಜೀತ್‌ ಉಸ್ಕಿ ರಹೇ ಅನ್ನುವ ಮಾತು ಲಗಾನ್‌ ಸಿನಿಮಾದಲ್ಲಿದೆ. ಅದು ನನ್ನ ಧ್ಯೇಯ ವಾಕ್ಯವೂ ಹೌದು. ಲಗಾನ್‌ ಗೆದ್ದಾಗ ಹೊರಟ ಮೊದಲ ಮಾತು Gosh, did I do that?!

ನನ್ನ ಪಾತ್ರ 25ರ ಹರೆಯದವನದ್ದಾಗಿರಲೀ, 65ರ ವೃದ್ಧನದ್ದಾಗಿರಲೀ ಅದಕ್ಕೆ ಒಪ್ಪುವ ವಯೋಮಾನದ ಜಾಯಮಾನ ತುಂಬಿಕೊಳ್ಳಬೇಕು. ಅದಕ್ಕೆ ಸದಾ ನಾನು ನನಗೇ ಪಾಠ ಹೇಳಿಕೊಳ್ಳುತ್ತಿರುತ್ತೇನೆ. ಈಗ ಆಸ್ಕರ್‌ನ ಮಾತು. ದೇಶದ ಯಾರ್ಯಾರೋ ಪಂಡಿತರು ಲೆಕ್ಕ ಹಾಕಿ ನನಗೇ ಬರುತ್ತದೆ ಅಂದಿದ್ದಾರೆ. ಹಾಗಂತ ನಾನು ಅದರ ಕನಸಿನಲ್ಲೇ ಕಳೆದು ಹೋಗಬಾರದಲ್ಲವೇ? ಹೊಸ ಚಿತ್ರದ ಕೆಲಸ ಈಗಾಗಲೇ ಶುರುವಾಗಿದೆ. ಒಳ್ಳೆಯ ಬರೆಹಗಾರರು ಸ್ಕಿೃಪ್ಟ್‌ ರಚನೆಯಲ್ಲಿ ತೊಡಗಿದ್ದಾರೆ. ಕಥೆ ಸದ್ಯಕ್ಕೆ ಸಸ್ಪೆನ್ಸ್‌ (ಗಾಳಿಮಾತಿನ ಪ್ರಕಾರ ಇದು ಇತಿಹಾಸದ ಒಂದು ವಿಷಯ ಕುರಿತದ್ದು).

ಬಗಲಲ್ಲಿ ಎಲ್ಲೋ ಸಣ್ಣಗೆ ಕನ್ನಡ ಮಾತು ಕೇಳಿ ಬಂತು. ಐ ಲವ್‌ ದಿಸ್‌ ಲ್ಯಾಂಗ್ವೇಜ್‌ ಅಂತ ಖಾನ್‌ ಹೇಳಿದರು. ಪ್ರಾದೇಶಿಕ ಭಾಷೆಗಳಲ್ಲೂ ಸಿನಿಮಾ ಮಾಡುವ ಇರಾದೆಯಿದೆ ಅಂತ ಖಾನ್‌ ಹೇಳಿದ್ದು ಸ್ಯಾಂಡಲ್‌ವುಡ್‌ ಓಣಿಗಳನ್ನು ಮುಟ್ಟಿತೋ ಇಲ್ಲವೋ ಗೊತ್ತಿಲ್ಲ. ಅಮೀರ್‌ ಖಾನ್‌ ಒಳ್ಳೆಯ ಕನ್ನಡ ಚಿತ್ರವನ್ನು ಮಾಡಲು ಮುಂದೆ ಬಂದರೆ ನಮ್ಮವರು ಅಶೋಕ್‌ ಪಾಟೀಲರನ್ನು ಓಡಿಸಿದಂತೆ ಓಡಿಸದಿದ್ದರೆ ಸಾಕು. ಏನಂತೀರಿ?

English summary
Will Aamir Khan produce Kannada film?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada