For Quick Alerts
  ALLOW NOTIFICATIONS  
  For Daily Alerts

  ಗಲ್ಲದ ಮೇಲಿನ ಹಾಲು ಇನ್ನೂ ಆರಿಲ್ಲ ದ ಆರತಿ ಛಾಪ್ರಿಯಾ

  By Super
  |

  ಕನ್ನಡಕ್ಕೆ ಇನ್ನೊಬ್ಬ ಆರತಿ ಸಿಕ್ಕಿದ್ದಾರೆ. ಈಕೆ ರಂಗನಾಯಕಿಯ ಛಾಪು ಮೂಡಿಸುವುದು ಅನುಮಾನವಾದರೂ, ಎರಡನೇ ನಿಂಬೆ ಹಣ್ಣಿನ ಹುಡುಗಿ ಆಗೋದಂತೂ ನಿಜ ಅನ್ನುತ್ತಿದ್ದಾರೆ ರವಿಚಂದ್ರನ್‌. ಎರಡು ಮೂರು ತಿಂಗಳಿಂದ ಬಾಲಾಜಿ 400- 450 ಫೋಟೋ ತಿರುವಿ ಹಾಕಿ ಹಾಕಿ ಸುಸ್ತಾಗಿದ್ದರು. ಯುಕ್ತಾ, ಸಿಮ್ರನ್‌ ಮೊದಲಾದವರ ಹೆಸರೂ ಕೇಳಿ ಬಂತು. ಯುಕ್ತಾ ಸುಸ್ವಾಗತ ಅಂತ ರವಿ ಕರೆಯನ್ನೂ ಕೊಟ್ಟರು. ಆದರೀಗ ಬಾಲಾಜಿಯ 'ಪ್ರೀತ್ಸೋಣ ಬಾ" ನಾಯಕಿಯಾಗಿ ಆರತಿ ಛಾಪ್ರಿಯಾ ಆಯ್ಕೆಯಾಗಿದ್ದಾರೆ. ಪ್ರೇಮಲೋಕದಲ್ಲಿ ಕಾಲು ತೋರುವ ಮೂಲಕ ಎಂಟ್ರಿ ಕೊಟ್ಟ ಜ್ಯೂಹಿಯನ್ನು ಕೆಮೆರಾ ಹೇಗೆ ತೋರಿಸಿತೋ, ಆರತಿಯನ್ನೂ ಹಾಗೇ ಬಿತ್ತರಿಸಲಿದೆ.

  'ನನ್ನ ಪ್ರೀತಿಯ ಹುಡುಗ" ಧ್ಯಾನ್‌ ಗೊತ್ತಲ್ಲ. ಆತನ ಕ್ಲಾಸಿನಲ್ಲೇ ಓದುತ್ತಿದ್ದ ಆರತಿ ಮೊದಲನೇ ಡಿಗ್ರಿ ಪರೀಕ್ಷೆ ಮುಗಿದಿದ್ದೇ ತಡ, ಓದಿಗೆ ಗುಡ್‌ ಬೈ ಹೇಳಿ, ಸಾಧನೆಯ ಹಾದಿ ಹಿಡಿದಿದ್ದಾರೆ ! 'ನನ್ನ ಪ್ರೀತಿಯ ಹುಡುಗಿ" ಈಕೆಯೇ ಆಗಬೇಕಿತ್ತಂತೆ. ಅಂತಿಮ ಪಟ್ಟಿಯಲ್ಲಿ ನಾಗತಿಹಳ್ಳಿಗೆ ದೀಪಾಲಿ ಮೆಚ್ಚಾದ್ದರಿಂದ ಆರತಿ ಆಯ್ಕೆಯಾಗಲಿಲ್ಲ.

  ಫೆರೆಕ್ಸ್‌ ಬೇಬಿ : ಆರತಿ ಗಲ್ಲದ ಮೇಲಿನ ಹಾಲು ಇನ್ನೂ ಆರಿಲ್ಲ ! ಈಕೆ ಬಾಲ ಮಾಡಲ್‌. ಫೆರೆಕ್ಸ್‌ ನಿಂದ ಹಿಡಿದು ಅಮೂಲ್‌ ಬಟರ್‌, ಸಾಫ್ಟ್‌ಡ್ರಿಂಕ್ಸ್‌- ಐಸ್‌ಕ್ರೀಂ ಜಾಹೀರಾತುಗಳವರೆಗೆ ಮಾಡೆಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಇವತ್ತಷ್ಟೇ(ಆಗಸ್ಟ್‌ 31) ತೆರೆ ಕಂಡಿರುವ ಭಾರೀ ತಾರಾಗಣದ 'ಲಜ್ಜಾ" ಹಿಂದಿ ಚಿತ್ರದಲ್ಲಿ ಈಕೆಯದೊಂದು ಪುಟ್ಟ ಪಾತ್ರವಿದೆ. 'ತುಮ್‌ ಸೆ ಅಚ್ಚಾ ಕೌನ್‌ ಹೆ"ೖ ಪೈಪ್‌ಲೈನ್‌ನಲ್ಲಿರುವ ಆರತಿಯ ಇನ್ನೊಂದು ಚಿತ್ರ.

  ಬಾಲಾಜಿ ಆರತಿಯನ್ನು ನೋಡಿದ್ದೇ ತಡ, ಪ್ರೇಮಲೋಕದ ಜ್ಯೂಹಿ ನೆಪ್ಪಾದರಂತೆ. ಅದೇ ಸಿನಿಮಾದ ಅಪರಾವತಾರದ ಪ್ರೀತ್ಸೋಣ ಬಾಗೆ ಈಕೆಯೇ ಸೈ ಎಂದು ಫೋಟೋ ಸೆಷನ್ನಿಗೂ ಸಮಯ ವ್ಯಯಿಸದೆ, ಆರತಿಯನ್ನು ಏರೋಪ್ಲೇನ್‌ ಹತ್ತಿಸಿ ಬೆಂಗಳೂರಿಗೆ ಕರೆತಂದು, ಅಣ್ಣನ ಮುಂದೆ ನಿಲ್ಲಿಸಿ ಆನಂದತುಂದಿಲ ನಗೆ ಬೀರಿದ್ದಾರೆ. ರವಿ ವಾರೆ ವ್ಹಾ , ಜೂನಿಯರ್‌ ಜ್ಯೂಹಿ ಅಂದರಂತೆ. ಕೊನೆಗೂ ಬಾಲಾಜಿಗೆ ನಾಯಕಿ ಸೆಟ್ಟಾದಂತಾಯಿತು. ಆದರೆ ಪ್ರೀತ್ಸೋಣ ಬಾ ಮತ್ತೆ ಮುಂದಕ್ಕೆ ಹೋದದ್ದೇ ಆದರೆ, ಆರತಿ ಮುಂಬಯಿಗೆ ಹಾರೋದು ಖರೆ. ಯಾಕೆಂದರೆ, ಈಕೆಗೆ ಬಾಲಿವುಡ್‌ನಲ್ಲಿಯೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

  ಬಾಲಾಜಿ ಈಸ್‌ ಕ್ಯೂಟ್‌ : ಮುಂಬಯಿಯ ಕಾನ್ವೆಂಟ್‌ ಹುಡುಗಿ ಆರತಿಗೆ ದುಂಡಗಿರುವ ಬಾಲಾಜಿ ಕುರುಚಲು ಗಡ್ಡ ಇಷ್ಟವಂತೆ. ಮಾಮೂಲಿನಂತೆ ಕಂಡರೂ ಮುಖದಲ್ಲಿ ಮುಗ್ಧತೆ, ಸೆಳಕು ಇದೆ. ಹೀ ಈಸ್‌ ಕ್ಯೂಟ್‌. ಇಂಥಾ ಹೀರೋ ಜೊತೆ ನಟಿಸಲು ಖುಷಿಯಾಗ್ತದೆ ಅಂತ ಆರತಿ ಹೇಳಿದಾಗ, ಅವರಮ್ಮ ಕೂಡ ಹೌದು ಅಂತ ತಲೆಯಾಡಿಸಿದರಂತೆ. ಇನ್ನೂ 20ರ ಹೊಸ್ತಿಲ ಆರತಿ ಕ್ಯಾಡ್‌ಬರೀಸ್‌ ಕೈಲಿ ಹಿಡಿದು, ಅಪ್ಪನ ಕಣ್ತಪ್ಪಿಸಿ ತಿನ್ನೋದು ಈಗಲೂ ಜಾರಿಯಲ್ಲಿದೆ. ಯಾಕೆಂದರೆ, ಅಪ್ಪ ಡೆಂಟಿಸ್ಟ್‌.

  ರವಿಗೂ ದುಡ್ಡು ಮಾಡೋ ಆಸೆ : ಉಪ್ಪಿ ತಮ್ಮ ಜೀವಮಾನದ ಕನಸನ್ನು ನನಸಾಗಿಸಲು ದುಡ್ಡು ಮಾಡುವ ಮಾರ್ಗ ಹಿಡಿದಿದ್ದರೆ, ಮುಪ್ಪು ಅಡರಿಕೊಳ್ಳುತ್ತಿದೆ ಎಂದು ಕೆಲವರು ಹೊರಿಸಿದ್ದ ಗೂಬೆಯನ್ನು ಓಡಿಸಿ, ತಮ್ಮ ಮೂವರು ಮಕ್ಕಳಿಗೆ ಆಸ್ತಿ ಮಾಡಲು ರವಿ ಪಣತೊಟ್ಟಿದ್ದಾರೆ. 'ಶಕುನಿ", 'ಪ್ರೀತ್ಸೋಣ ಬಾ" ಹಾಗೂ 'ಕೋದಂಡ ರಾಮ"ನ ಕೆಲಸಗಳನ್ನೆಲ್ಲಾ ತಲೆ ಮೇಲೆ ಹೊತ್ತು ಕೂತಿದ್ದಾರೆ. ಬರೀ ನಟಿಸೋದಲ್ಲ. ನಿರ್ದೇಶನ, ಸಂಭಾಷಣೆ,ಸಾಹಿತ್ಯ, ಸಂಗೀತ ಎಲ್ಲಾ ಇವರದ್ದೇ.

  ಸೆಟ್ಟು ಪ್ರೀತ್ಸೋಣದ್ದಲ್ಲ, ಏಕಾಂಗೀದು : ಮೊನ್ನೆ ಕಂಠೀರವ ಸ್ಟುಡಿಯೋದಲ್ಲಿ ಲಕ್ಷಾಂತರ ರುಪಾಯಿಯ ಭಾರೀ ಸೆಟ್ಟನ್ನು ಕಂಡು ಬಂದ ಕೆಲವು ಪತ್ರಕರ್ತರು ಬಾಲಾಜಿ ಹೀರೋ ಆಗೋದು ಗ್ಯಾರಂಟಿ. ಸೆಟ್ಟು ಸಿದ್ಧವಾಗಿದೆ. ಪ್ರೀತ್ಸೋಣ ಬಾ ಸೆಟ್ಟೇರೋದಷ್ಟೇ ಬಾಕಿ. ಇನ್ನು ಬಾಲಾಜಿ ಕನಸು ನನಸಾಗೋದರಲ್ಲಿ ಅನುಮಾನವೇ ಇಲ್ಲ ಅಂತ ಬರೆದಿದ್ದರು. ಆದರೆ ರವಿ ಈಗ ತಾನೆ ನಗುನಗುತ್ತಾ ಹೇಳಿದ್ದಾರೆ- 'ಪ್ರೀತ್ಸೋಣ ಬಾ ಶೂಟಿಂಗೂ ಶುರುವಾಗುತ್ತೆ. ಆದರೆ ಈ ಭಾರೀ ಸೆಟ್ಟು ಏಕಾಂಗಿ ಚಿತ್ರದ್ದು. ಅದರಲ್ಲಿ ನಾನೇ ಹೀರೋ !" ರವಿ ಮಾತನ್ನು ಕೇಳಿ ಬಾಲಾಜಿ ಚಿಕ್ಕ ಹುಡುಗನ ಥರ ಗೋಡೆ ಕೆರೆಯುತ್ತಿಲ್ಲವಷ್ಟೆ ?

  English summary
  Ravichandran to make property for his children

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X